
ಏಷ್ಯಾಕಪ್ಗಾಗಿ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದ ಆಯ್ಕೆ ಬಗ್ಗೆ ಮಾಜಿ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ಅಸಮಾಧಾನ ಹೊರಹಾಕಿದ್ದಾರೆ. ಅದರಲ್ಲೂ ಈ ತಂಡದೊಂದಿಗೆ ಭಾರತ ಟಿ20 ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ. ಏಷ್ಯಾಕಪ್ಗೆ ಆಯ್ಕೆ ಮಾಡಲಾದ ಟೀಮ್ ಇಂಡಿಯಾ ಕುರಿತು ಮಾತನಾಡಿದ ಕೃಷ್ಣಮಾಚಾರಿ ಶ್ರೀಕಾಂತ್, ನನ್ನ ಪ್ರಕಾರ ಈ ತಂಡ ಏಷ್ಯಾಕಪ್ ಗೆಲ್ಲಬಹುದು. ಆದರೆ ಇದೇ ತಂಡದೊಂದಿಗೆ ವಿಶ್ವ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
ಏಷ್ಯಾಕಪ್ ಬಳಿಕ ಟೀಮ್ ಇಂಡಿಯಾ ಮುಂದೆ ಟಿ20 ವಿಶ್ವಕಪ್ ಇದೆ. ನೀವು ಇದೇ ತಂಡವನ್ನು ಟಿ20 ವಿಶ್ವಕಪ್ಗೂ ಮುಂದುವರೆಸುತ್ತೀರಾ ಎಂಬುದೇ ಪ್ರಶ್ನೆ. ಏಕೆಂದರೆ ಟಿ20 ವಿಶ್ವಕಪ್ಗೆ ಈಗಾಗಲೇ ತಯಾರಿ ಆರಂಭಿಸಬೇಕಿದೆ. ಆದರೆ ಇದೀಗ ಆಯ್ಕೆ ಮಾಡಲಾಗಿರುವ ತಂಡವು ಟಿ20 ವಿಶ್ವಕಪ್ ಗೆದ್ದುಕೊಡುವಷ್ಟು ಬಲಿಷ್ಠವಾಗಿಲ್ಲ ಎಂದು ಕ್ರಿಸ್ ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ.
ಏಷ್ಯಾಕಪ್ ತಂಡದ ಘೋಷಣೆಗೂ ಮುನ್ನ ಭಾರತ ಟಿ20 ತಂಡದ ಉಪನಾಯಕನಾಗಿ ಅಕ್ಷರ್ ಪಟೇಲ್ ಕಾಣಿಸಿಕೊಂಡಿದ್ದರು. ಇದೀಗ ಅಕ್ಷರ್ ಪಟೇಲ್ ಅವರನ್ನು ಉಪನಾಯಕತ್ವದಿಂದ ತೆಗೆದುಹಾಕಲಾಗಿದೆ. ರಿಂಕು ಸಿಂಗ್, ಶಿವಂ ದುಬೆ ಮತ್ತು ಹರ್ಷಿತ್ ರಾಣಾ ಅವರನ್ನು ಯಾಕಾಗಿ ಆಯ್ಕೆ ಮಾಡಲಾಗಿದೆ ಎಂಬುದು ತಿಳಿಯುತ್ತಿಲ್ಲ. ಐಪಿಎಲ್ ಅನ್ನು ಆಯ್ಕೆಗೆ ಮುಖ್ಯ ಮಾನದಂಡವೆಂದು ಪರಿಗಣಿಸಲಾಗಿದೆಯಾ? ನನ್ನ ಪ್ರಕಾರ ಆಯ್ಕೆದಾರರು ಅದಕ್ಕೂ ಮೊದಲಿನ ಪ್ರದರ್ಶನವನ್ನು ಮಾನದಂಡವಾಗಿ ಪರಿಗಣಿಸಿದ್ದಾರೆಂದು ತೋರುತ್ತದೆ ಎಂದು ಶ್ರೀಕಾಂತ್ ಹೇಳಿದ್ದಾರೆ.
ಕೃಷ್ಣಮಾಚಾರಿ ಶ್ರೀಕಾಂತ್ ಅವರ ಪ್ರಕಾರ, ಪ್ರಸ್ತುತ ತಂಡದಲ್ಲಿ ಐದನೇ ಕ್ರಮಾಂಕದಲ್ಲಿ ಸಹಜ ಬ್ಯಾಟರ್ನ ಕೊರತೆಯಿದೆ. ಟೀಮ್ ಇಂಡಿಯಾ ಪರ ಕೊನೆಯ ಟಿ20 ಪಂದ್ಯದಲ್ಲಿ ಶಿವಂ ದುಬೆ ಐದನೇ ಕ್ರಮಾಂಕದಲ್ಲಿ ಆಡಿದ್ದರು. ಈ ವೇಳೆ ಅವರು 13 ಎಸೆತಗಳಲ್ಲಿ 30 ರನ್ ಬಾರಿಸಿದ್ದರು. ಆದರೆ ಈಗ ಐದನೇ ಕ್ರಮಾಂಕದಲ್ಲಿ ಆಡುವವರು ಯಾರು ಎಂಬುದು ಪ್ರಶ್ನೆ.
ಏಕೆಂದರೆ ಇಲ್ಲಿ ಸಂಜು ಸ್ಯಾಮ್ಸನ್, ಜಿತೇಶ್ ಶರ್ಮಾ, ಶಿವಂ ದುಬೆ ಮತ್ತು ರಿಂಕು ಸಿಂಗ್ ನಡುವೆ ಪೈಪೋಟಿ ಇದೆ. ಅತ್ತ ಹಾರ್ದಿಕ್ ಪಾಂಡ್ಯ ಸಾಮಾನ್ಯವಾಗಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ಅತ್ತ ಅಕ್ಷರ್ ಪಟೇಲ್ ಕೂಡ ತಂಡದಲ್ಲಿದ್ದಾರೆ. ಹೀಗಾಗಿ ದುಬೆಯನ್ನು ಹೇಗೆ ಆಯ್ಕೆ ಮಾಡಿದ್ದಾರೆಂದು ಎಂಬುದೇ ನನಗೆ ಅರ್ಥವಾಗುತ್ತಿಲ್ಲ.
ಇದನ್ನೂ ಓದಿ: ಬರೋಬ್ಬರಿ 290 ರನ್ಗಳು… ವಿಶ್ವ ದಾಖಲೆ ನಿರ್ಮಿಸಿದ ಮ್ಯಾಥ್ಯೂ ಬ್ರೀಟ್ಝ್ಕೆ
ಮತ್ತೊಂದೆಡೆ ಯಶಸ್ವಿ ಜೈಸ್ವಾಲ್ ಅಂತರರಾಷ್ಟ್ರೀಯ ಕ್ರಿಕೆಟ್ ಮತ್ತು ಐಪಿಎಲ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಇದಕ್ಕೆ ಕಾರಣವೇನು ಎಂಬುದೇ ಅರ್ಥವಾಗುತ್ತಿಲ್ಲ. ಇಂತಹದೊಂದು ತಂಡ ಕಟ್ಟಿಕೊಂಡು ಏಷ್ಯಾಕಪ್ ಗೆಲ್ಲಬಹುದೇ ಹೊರತು ಟಿ20 ವಿಶ್ವಕಪ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಲು ಸಾಧ್ಯವಾಗುವುದಿಲ್ಲ ಎಂದು ಕೃಷ್ಣಮಾಚಾರಿ ಶ್ರೀಕಾಂತ್ ಹೇಳಿದ್ದಾರೆ.
Published On - 11:58 am, Thu, 21 August 25