Jai Shri Ram slogan: ಸಾವಿರ ಸಲ ಜೈ ಶ್ರೀರಾಮ್​​ ಹೇಳುವುದಕ್ಕೆ ಜೈ ಜೈ ಎಂದ ಖ್ಯಾತ ಕ್ರಿಕೆಟಿಗ ಮೊಹಮ್ಮದ್ ಶಮಿ

|

Updated on: Feb 09, 2024 | 4:46 PM

Mohammed Shami Jai Shri Ram Chant: ನನ್ನ ಬೌಲಿಂಗ್ ಅನ್ನು ಹೊಗಳುವ ಬದಲು ಈ ವಿವಾದವನ್ನೇ ಹೈಲೈಟ್ ಮಾಡಿದ್ದಾರೆ. ನಾನು ಅದಾಗಲೇ ಸತತ ಐದು ಓವರ್‌ ಬೌಲ್ ಮಾಡಿದ್ದೆ. ಬಳಲಿ ಬೆಂಡಾಗಿ ಸುಸ್ತಾಗಿ ಮೊಳಕಾಲಿನ ಮೇಲೆ ಕುಳಿತೆ ಅಷ್ಟೆ. ನಾನು ಮುಸ್ಲಿಂ. ಅದೇ ವೇಳೆ ನಾನು ಕೂಡ ಭಾರತೀಯ. ನನ್ನ ದೇಶವೇ ನನ್ನ ಮೊದಲ ಆದ್ಯತೆ’ ಎಂದು ಶಮಿ ಸಂದರ್ಶನದಲ್ಲಿ ಹೇಳಿದ್ದಾರೆ.

ತವರಿನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಭಾರತವನ್ನು ಫೈನಲ್‌ಗೆ ಕೊಂಡೊಯ್ಯುವಲ್ಲಿ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ ನಂತರ ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದರು. ಇತ್ತೀಚೆಗಷ್ಟೇ ಶಮಿ ಖಾಸಗಿ ಸುದ್ದಿವಾಹಿನಿ ಸಂದರ್ಶನವೊಂದರಲ್ಲಿ ಪಾಲ್ಗೊಂಡು ಅಯೋಧ್ಯೆ ರಾಮ ಮಂದಿರದ ಕುರಿತು ಆಶ್ಚರ್ಯ ಮತ್ತು ಕುತೂಹಲಕಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಪಂದ್ಯವೊಂದರಲ್ಲಿ ಶಮಿ ಅವರನ್ನು ನೋಡಿದ ಅಭಿಮಾನಿಗಳು ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಶಮಿ ಅಭಿಮಾನಿಗಳ ಆ ಬೇಡಿಕೆಯಲ್ಲಿ ತಪ್ಪೇನೂ ಇಲ್ಲ ಎನ್ನುವ ಮೂಲಕ ಅವರು ತಮ್ಮ ಧಾರ್ಮಿಕ ಸಾಮರಸ್ಯವನ್ನು ಕಾಯ್ದುಕೊಂಡಿದ್ದಾರೆ.

‘ಪ್ರತಿಯೊಂದು ಧರ್ಮದಲ್ಲಿಯೂ ಇತರ ಧರ್ಮವನ್ನು ಇಷ್ಟಪಡದ ಐದಾರು ಜನರು ಇರುತ್ತಾರೆ. ಅದಕ್ಕೆ ಯಾವುದೇ ರೀತಿ ನನ್ನ ಅಭ್ಯಂತರವಿಲ್ಲ. ಅಯೋಧ್ಯೆಯಲ್ಲಿ ರಾಮಮಂದಿರವನ್ನು ಕಟ್ಟಿರುವಾಗ ಜೈ ಶ್ರೀರಾಮ್ ಹೇಳುವುದರಲ್ಲಿ ಏನು ತೊಂದರೆ? ಸಾವಿರ ಸಲ ಹೇಳಲಿಬಿಡಿ. ಒಂದು ವೇಳೆ ನಾನು ಅಲ್ಲಾಹು ಅಕ್ಬರ್​ ಎಂದು ಹೇಳಲು ಬಯಸಿದರೆ, ನಾನು ಆ ಸಮಯದಲ್ಲಿ ಸಾವಿರ ಸಲ ಅದನ್ನು ಹೇಳುವೆ. ಅದರಲ್ಲಿ ತಪ್ಪೇನಿದೆ. ಒಬ್ಬ ಮುಸ್ಲಿಂ ಅದರಲ್ಲೂ ಒಬ್ಬ ಭಾರತೀಯನಾಗಿರುವುದಕ್ಕೆ ನಾನು ತುಂಬಾ ಹೆಮ್ಮೆಪಡುತ್ತೇನೆ’ ಎಂದು ಶಮಿ ತಮ್ಮ ಧಾರ್ಮಿಕ ಸಾಮರಸ್ಯದ ಬಗ್ಗೆ ಹೆಮ್ಮೆಪಟ್ಟಿದ್ದಾರೆ.

Also Read: ಎರಡನೇ ಬಾರಿ ಅಯೋಧ್ಯೆಗೆ ಭೇಟಿ ನೀಡಿದ ‘ಬಿಗ್​ ಬಿ’ ಅಮಿತಾಭ್​ ಬಚ್ಚನ್​

ಕಳೆದ ವರ್ಷ ಶ್ರೀಲಂಕಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ರಜಿತ್​ನನ್ನು ಔಟ್ ಮಾಡಿದ ಬಳಿಕ ಶಮಿ ಮೊಣಕಾಲೂರಿ ಕುಳಿತರು. ಇದರಿಂದ ನಮಾಜ್ ಮಾಡುವಂತೆ ಅವರು ಕುಳಿತಿದ್ದರು ಎಂದು ಹೇಳಿ ಟೀಕೆಗೆ ಗುರಿಯಾದರು. ಆದರೆ ತಾನು ಭಾರತದಲ್ಲಿ ಇರುವ ಸಂಗತಿಯನ್ನು ಜ್ಞಾಪಿಸಿಕೊಂಡು ಆತ ನಮಾಜ್​ ಮಾಡುವುಕ್ಕೆ ಹೋಗಲಿಲ್ಲ ಎಂದು ಪಾಕಿಸ್ತಾನ ಮಾಧ್ಯಮಗಳು ಕಥೆ ಕಟ್ಟಿದ್ದನ್ನು ಶಮಿ ನೆನಪಿಸಿಕೊಂಡರು. ಇದಕ್ಕೆ ಶಮಿ ಮತ್ತೊಮ್ಮೆ ಪ್ರತಿಕ್ರಿಯಿಸಿದ್ದಾರೆ. ‘ಮೈದಾನದಲ್ಲಿ ನಾನು ಪ್ರಾರ್ಥನೆ ಮಾಡಲು ಹೋಗುವುದಿಲ್ಲ’ ಎಂದಿದ್ದಾರೆ.

ಕೆಲವರು ನನ್ನ ದೇಶದ ಬಗ್ಗೆ, ಇನ್ನು ಕೆಲವರು ನನ್ನ ಧರ್ಮದ ಬಗ್ಗೆ ಮಾತನಾಡಿದರು. ಆದರೆ ಅಲ್ಲಿ ನನ್ನ ಬೌಲಿಂಗ್ ಅನ್ನು ಹೊಗಳುವ ಬದಲು ಈ ವಿವಾದವನ್ನೇ ಹೈಲೈಟ್ ಮಾಡಿದ್ದಾರೆ. ನಾನು ಈಗಾಗಲೇ ಸತತ ಐದು ಓವರ್‌ಗಳನ್ನು ಬೌಲ್ ಮಾಡಿದ್ದೆ. ಬಳಲಿ ಬೆಂಡಾಗಿ ಸುಸ್ತಾಗಿ ಮೊಳಕಾಲಿನ ಮೇಲೆ ಕುಳಿತೆ. ನಾನು ಮುಸ್ಲಿಂ. ಅದೇ ವೇಳೆ ನಾನು ಕೂಡ ಭಾರತೀಯ. ನನ್ನ ದೇಶವೇ ನನ್ನ ಮೊದಲ ಆದ್ಯತೆ’ ಎಂದು ಶಮಿ ಸಂದರ್ಶನದಲ್ಲಿ ಹೇಳಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ