ಹುಟ್ಟಿದ ದಿನದಂದು ಗೇಲ್ ರನ್ನು ಪಂದ್ಯದಲ್ಲಿ ಆಡಿಸದಿರುವುದು ವಿವೇಕಶೂನ್ಯ ನಡೆ: ಗಾವಸ್ಕರ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 22, 2021 | 1:47 AM

ಮಾರ್ಕ್ರಮ್ ಮೂರನೇ ಕ್ರಮಾಂಕದಲ್ಲಿ ಆಡುತ್ತಾರೆ ಎಂದು ಅವರು ಹೇಳಿದಾಗಲೇ ಗೇಲ್ ಆಡುತ್ತಿಲ್ಲ ಅನ್ನೋದು ಟಿವಿ ಮುಂದೆ ಕೂತಿದ್ದವರಿಗೆ ಅರ್ಥವಾಗಿ ಹೋಗಿತ್ತು. ಯಾಕೆಂದರೆ ಗೇಲ್ ಈಗ ಅದೇ ಕ್ರಮಾಂಕನಲ್ಲಿ ಆಡುತ್ತಿದ್ದಾರೆ.

ಹುಟ್ಟಿದ ದಿನದಂದು ಗೇಲ್ ರನ್ನು ಪಂದ್ಯದಲ್ಲಿ ಆಡಿಸದಿರುವುದು ವಿವೇಕಶೂನ್ಯ ನಡೆ: ಗಾವಸ್ಕರ್
ಕ್ರಿಸ್​ ಗೇಲ್
Follow us on

ರಾಜಸ್ತಾನ ರಾಯಲ್ಸ್ ವಿರುದ್ಧ ದುಬೈನಲ್ಲಿ ನಡೆದ ಪಂದ್ಯದಲ್ಲಿ ಕನ್ನಡಿಗ ಕೆ ಎಲ್ ರಾಹುಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ವಿಧ್ವಂಸಕ ಬ್ಯಾಟ್ಸ್ಮನ್ ಮತ್ತು ಮಂಗಳವಾರದಂದೇ ತನ್ನ 42 ನೇ ಹುಟ್ಟು ಹಬ್ಬ ಆಚರಿಸಿಕೊಂಡ ಕ್ರಿಸ್ ಗೇಲ್ ಅವರಿಗೆ ಆಡುವ ಇಲೆವೆನ್ ನಲ್ಲಿ ಆಯ್ಕೆ ಮಾಡದಿರುವುದು ವ್ಯಾಪಕ ಖಂಡನೆಗೆ ಗುರಿಯಾಗಿದೆ. ಹುಟ್ಟು ಹಬ್ಬ ಯಾರದ್ದೇ ಆಗಿರಲಿ, ಅವರಿಗದು ವಿಶೇಷ ದಿನ. ಕ್ರಿಕೆಟ್ ಆಟಗಾರರರು ತಮ್ಮ ಹುಟ್ಟಿದ ದಿನದಂದು ಮ್ಯಾಚ್ ಆಡುತ್ತಿದ್ದರೆ ಸಾಮರ್ಥ್ಯಕ್ಕೆ ಮೀರಿದ ಪ್ರದರ್ಶನ ನೀಡಿ ದಿನವನ್ನು ಸ್ಮರಣೀಯವಾಗಿಸುವ ತವಕದಲ್ಲಿರುತ್ತಾರೆ. ಹಾಗಾಗಿ, ತಮ್ಮ ಕ್ರಿಕೆಟ್ ಬದುಕಿನ ಮುಸ್ಸಂಜೆಯಲ್ಲಿರುವ ಗೇಲ್ ತೀವ್ರ ಸ್ವರೂಪದ ನಿರಾಶೆಗೊಳಗಾಗಿರುತ್ತಾರೆ.

ರಾಜಸ್ತಾನ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್ ಆದ ನಂತರ ಟೀಮಿನ ಕಂಪೋಸಿಶನ್ ಕುರಿತು ವಿವರಣೆ ನೀಡಿದ ರಾಹುಲ್, ‘ಮೂರನೇ ಕ್ರಮಾಂಕದಲ್ಲಿ ಐಡೆನ್ ಮಾರ್ಕ್ರಮ್ ಅಡಲಿದ್ದಾರೆ,’ ಎಂದು ಹೇಳಿದಾಗ ಬಹಳಷ್ಟು ಕ್ರಿಕೆಟ್ ಪ್ರೇಮಿಗಳು ಶಾಕ್ಗೊಳಗಾದರು. ಬರ್ತ್ ಡೇಗೆ ಒಂದು ಸೆಂಟಿಮೆಂಟ್ ಇರುತ್ತದೆ, ಅದನ್ನು ಗೌರವಿಸಿಯಾದರೂ ಪಿಬಿಕೆಎಸ್ ಮ್ಯಾನೇಜ್ಮೆಂಟ್ ಗೇಲ್ ಅವರನ್ನು ಆಡಿಸಬೇಕಿತ್ತು. ನಿಕೊಲಾಸ್ ಪೂರಣ್, ಫೇಬಿಯನ್ ಆಲೆನ್, ಆದಿಲ್ ರಶೀದ್ ಮತ್ತು ಮಾರ್ಕ್ರಮ್ ಅವರು ಪಂಜಾಬ ಪರ ಮಂಗಳವಾರದ ಪಂದ್ಯಕ್ಕೆ ನಾಲ್ವರು ವಿದೇಶೀ ಆಟಗಾರರಾಗಿ ಆಡಿದರು.

‘ದುರದೃಷ್ಟವಶಾತ್ ಇವತ್ತಿನ ಪಂದ್ಯದಲ್ಲಿ ಗೇಲ್ ಆಡುತ್ತಿಲ್ಲ,’ ಎಂದು ರಾಹುಲ್ ಹೇಳಿದರಾದರೂ ಅವರನ್ನು ಕೈಬಿಟ್ದಿದಕ್ಕೆ ಸೂಕ್ತ ಕಾರಣ ಹೇಳಲಿಲ್ಲ. ಮಾರ್ಕ್ರಮ್ ಮೂರನೇ ಕ್ರಮಾಂಕದಲ್ಲಿ ಆಡುತ್ತಾರೆ ಎಂದು ಅವರು ಹೇಳಿದಾಗಲೇ ಗೇಲ್ ಆಡುತ್ತಿಲ್ಲ ಅನ್ನೋದು ಟಿವಿ ಮುಂದೆ ಕೂತಿದ್ದವರಿಗೆ ಅರ್ಥವಾಗಿ ಹೋಗಿತ್ತು. ಯಾಕೆಂದರೆ ಗೇಲ್ ಈಗ ಅದೇ ಕ್ರಮಾಂಕನಲ್ಲಿ ಆಡುತ್ತಿದ್ದಾರೆ.

ಐಪಿಎಲ್ 14ನೇ ಸೀಸನಲ್ಲಿ ಪಿಬಿಕೆಎಸ್ ಪರ 8 ಪಂದ್ಯಗಳನ್ನಾಡಿರುವ ಗೇಲ್ 178 ರನ್ ಬಾರಿಸಿದ್ದಾರೆ. ಇಂಗ್ಲೆಂಡ್ ಮಾಜಿ ಅಟಗಾರ ಮತ್ತು ಹಾಲಿ ವೀಕ್ಷಕ ವಿವರಣೆಕಾರ ಕೆವಿನ್ ಪೀಟರ್ಸನ್ ಅವರು ಗೇಲ್ ಅವರನ್ನು ಆಯ್ಕೆ ಮಾಡದ ಬಗ್ಗೆ ಸೋಜಿಗ ವ್ಯಕ್ತಪಡಿಸಿದ್ದಾರೆ.

‘ನಮಗಿಂತ ಜಾಸ್ತಿ ಗೇಲ್ಗೆ ನಿರಾಶೆಯಾಗಿರುತ್ತದೆ. ನಾವು ಅದರ ಬಗ್ಗೆ ಮಾತಾಡಬಹುದು. ಅದರೆ ಕೆಲ ಪ್ರಶ್ನೆಗಳು ಖಂಡಿತವಾಗಿಯೂ ಉದ್ಭವಿಸುತ್ತವೆ. ಗೇಲ್ ಅವರ ಬರ್ತ್ಡೇ ಅಂದು ಅವರನ್ನು ಯಾಕೆ ಆಡಿಸಲಿಲ್ಲ ಅನ್ನೋದು ನನಗೆ ಅರ್ಥವಾಗಲಿಲ್ಲ. ಪಂದ್ಯದ ಬಗ್ಗೆ ಅವರೆಷ್ಟು ಭಾವುಕ ಮತ್ತು ಉತ್ಸುಕರಾಗಿದ್ದರು ಅಂತ ನಾನು ಆಗಲೇ ಹೇಳಿದ್ದೆ. ಅವರ ಮುಖದ ಮೇಲೆ ದೊಡ್ಡ ನಗುವಿತ್ತು. ಅವರನ್ನು ಯಾವುದಾದರೂ ಒಂದು ಪಂದ್ಯದಲ್ಲಿ ಆಡಿಸಬೇಕು ಅಂತಿದ್ದರೆ ಅದು ಇವತ್ತಿನ ಪಂದ್ಯವಾಗಿತ್ತು. ಟೀಮ್ ಮ್ಯಾನೇಜ್ಮೆಂಟ್ನ ಲಾಜಿಕ್ ನನಗೆ ಅರ್ಥವಾಗುತ್ತಿಲ್ಲ,’ ಎಂದು ಪಂದ್ಯಕ್ಕೆ ಮೊದಲು ಬ್ರಾಡ್ಕಾಸ್ಟರ್ ಸ್ಟಾರ್ ಸ್ಪೋರ್ಟ್ಸ್ ಟಿವಿ ಅಯೋಜಿಸುವ ಕಾರ್ಯಕ್ರಮದಲ್ಲಿ ಪೀಟರ್ಸನ್ ಹೇಳಿದರು.

ಭಾರತದ ಮಾಜಿ ಆಟಗಾರ ಮತ್ತು ಕಾಮೆಂಟೇಟರ್ ಸುನಿಲ್ ಗಾವಸ್ಕರ್ ಅವರು ಗೇಲ್ ರನ್ನು ಆಡಿಸದ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

‘ಗೇಲ್ ಇವತ್ತಿನ ಪಂದ್ಯದಲ್ಲಿ ಆಡದಿರುವುದು ಕೆಪಿಯಂತೆ ನನಗೂ ವಿಪರೀತ ಆಶ್ವರ್ಯವಾಗುತ್ತಿದೆ; ಇಂದಿನ ಪಂದ್ಯಕ್ಕೆ ಆಯ್ಕೆಯಾಗಿರುವ ನಾಲ್ವರು ವಿದೇಶೀ ಮೂಲದವರು ಉತ್ತಮ ಅಟಗಾರರೇ. ಅವರೆಲ್ಲ ಸೇರಿ ಆರ್ ಆರ್ ವಿರುದ್ಧ ನಡೆಯುವ ಪಂದ್ಯವನ್ನು ಗೆಲ್ಲಿಸಲ್ಲರು.

ಆದರೆ ವಾಸ್ತವ ಸಂಗತಿಯೇನೆಂದರೆ, ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಟಿ20 ಆವೃತ್ತಿಯ ಒಬ್ಬ ಅಪ್ರತಿಮ ಅಟಗಾರನನ್ನು ಟೀಮಿನಿಂದ ಹೊರಗಿಡಲಾಗಿದೆ. ಅವರು ಕೇವಲ ಐಪಿಎಲ್ ಮಾತ್ರವಲ್ಲ, ಸಿಪಿಎಲ್, ದಿ ಬಿಗ್ ಬ್ಯಾಶ್ ಟೂರ್ನಿಗಳಲ್ಲೂ ಅಮೋಘ ಪ್ರದರ್ಶನಗಳನ್ನು ನೀಡಿದ್ದಾರೆ. ತಾನಾಡಿರುವ ಪ್ರತಿಯೊಂದು ಟಿ20 ಟೂರ್ನಿಯಲ್ಲಿ ಗೇಲ್ ಅಸಾಧಾರಣ ರೀತಿಯ ಬ್ಯಾಟಿಂಗ್ ಪ್ರದರ್ಶನಗಳನ್ನು ನೀಡಿದ್ದಾರೆ. ಇಂಥ ಆಟಗಾರನನ್ನು ಅವರ ಹುಟ್ಟಿದ ಹಬ್ಬದಂದು ಡ್ರಾಪ್ ಮಾಡುವುದು ವಿವೇಕಶೂನ್ಯ ನಡೆಯಾಗಿದೆ,’ ಎಂದು ಗಾವಸ್ಕರ್ ಹೇಳಿದ್ದಾರೆ.

ಯುಎಈಗೆ ಬರುವ ಮೊದಲು ಕೆರೀಬಿಯನ್ ಪ್ರಿಮೀಯರ್ ಲೀಗ್ ನಲ್ಲಿ 9 ಪಂದ್ಯಗಳನ್ನು ಆಡಿದ್ದ ಗೇಲ್ 165 ರನ್ ಬಾರಿಸಿದ್ದರು. ಅವರ ಸ್ಟ್ರೈಕ್ ರೇಟ್ 130 ಮತ್ತು 42 ಅವರ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿತ್ತು.

ಇದನ್ನೂ ಓದಿ:  IPL 2021, PBKS vs RR: ಕಾರ್ತಿಕ್ ತ್ಯಾಗಿ ಮ್ಯಾಜಿಕ್: ರಾಜಸ್ಥಾನ್ ರಾಯಲ್ಸ್​ಗೆ ರೋಚಕ ಜಯ