ಟೀಮ್ ಇಂಡಿಯಾ ವೇಗಿಗಳ ಮುಂದೆ ಸೆಟೆದು ನಿಂತ ನಿಕೋಲ್ಸ್-ಫಿಲಿಪ್ಸ್
IND vs NZ 1st Test: ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್ ಮೈದಾನದಲ್ಲಿ ಆರಂಭವಾಗಿದೆ. ಈ ಮ್ಯಾಚ್ನಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ಬೌಲಿಂಗ್ ಆಯ್ದುಕೊಂಡಿದ್ದು, ಆತಿಥೇಯ ನ್ಯೂಝಿಲೆಂಡ್ ತಂಡ ಮೊದಲ ಇನಿಂಗ್ಸ್ ಆಡುತ್ತಿದೆ.

ವೆಲ್ಲಿಂಗ್ಟನ್‌ನ ಐತಿಹಾಸಿಕ ಬೇಸಿನ್ ರಿಸರ್ವ್ ಮೈದಾನದಲ್ಲಿ ಆರಂಭವಾದ ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟ ಅತ್ಯಂತ ರೋಚಕ ತಿರುವುಗಳಿಗೆ ಸಾಕ್ಷಿಯಾಯಿತು. ಆರಂಭದಲ್ಲಿ ಭಾರತದ ವೇಗದ ಬೌಲರ್‌ಗಳ ದಾಳಿಗೆ ತತ್ತರಿಸಿ ಸಂಕಷ್ಟಕ್ಕೆ ಸಿಲುಕಿದ್ದ ಆತಿಥೇಯ ನ್ಯೂಝಿಲೆಂಡ್ ತಂಡ, ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ಹೆನ್ರಿ ನಿಕೋಲ್ಸ್ ಮತ್ತು ಗ್ಲೆನ್ ಫಿಲಿಪ್ಸ್ ಅವರ ಅಮೋಘ ಜೊತೆಯಾಟದ ನೆರವಿನಿಂದ ಭರ್ಜರಿ ಚೇತರಿಕೆ ಕಂಡಿದೆ.
ಬುಮ್ರಾ ಮಾರಕ ದಾಳಿ!
ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಶುಭ್‌ಮನ್ ಗಿಲ್, ಹಸಿರು ಹುಲ್ಲಿನಿಂದ ಕೂಡಿದ್ದ ಪಿಚ್‌ನ ಲಾಭ ಪಡೆಯುವ ಉದ್ದೇಶದಿಂದ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಂಡ ವೇಗಿ ಜಸ್ಪ್ರೀತ್ ಬುಮ್ರಾ, ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲೇ ನ್ಯೂಝಿಲೆಂಡ್ ನಾಯಕ ಟಾಮ್ ಲೇಥಮ್ (0) ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಆಘಾತ ನೀಡಿದರು.
ಬಳಿಕ ಅನ್ಶುಲ್ ಕಂಬೋಜ್ ಅವರು ಡೆವೊನ್ ಕಾನ್ವೇ (4) ವಿಕೆಟ್ ಪಡೆದರೆ, ಆಕಾಶ್ ದೀಪ್ ಅವರು ರಚಿನ್ ರವೀಂದ್ರ (15) ಅವರನ್ನು ಪೆವಿಲಿಯನ್‌ಗೆ ಅಟ್ಟಿದರು. ಬುಮ್ರಾ ತಮ್ಮ ಮಾರಕ ದಾಳಿಯನ್ನು ಮುಂದುವರಿಸಿ ಡ್ಯಾರಿಲ್ ಮಿಚೆಲ್ (1) ಮತ್ತು ಟಾಮ್ ಬ್ಲಂಡೆಲ್ (5) ಅವರನ್ನೂ ಔಟ್ ಮಾಡಿದರು. ಪರಿಣಾಮ ನ್ಯೂಝಿಲೆಂಡ್ ತಂಡವು ಒಂದು ಹಂತದಲ್ಲಿ ಕೇವಲ 70 ರನ್‌ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿತ್ತು.
ನಿಕೋಲ್ಸ್ ಶತಕ ಭರ್ಜರಿ ಶತಕ:
ನ್ಯೂಝಿಲೆಂಡ್ ತಂಡ ತೀವ್ರ ಸಂಕಷ್ಟದಲ್ಲಿದ್ದಾಗ ಜೊತೆಯಾದ ಹೆನ್ರಿ ನಿಕೋಲ್ಸ್ ಮತ್ತು ಗ್ಲೆನ್ ಫಿಲಿಪ್ಸ್ ಭಾರತೀಯ ಬೌಲರ್‌ಗಳ ಯೋಜನೆಗಳನ್ನು ತಲೆಕೆಳಗಾಗಿಸಿದರು. ಆರಂಭದಲ್ಲಿ ಎಚ್ಚರಿಕೆಯ ಆಟವಾಡಿದ ಈ ಜೋಡಿ, ಬಿಸಿಲು ಏರಿದಂತೆ ಪಿಚ್ ಬ್ಯಾಟಿಂಗ್‌ಗೆ ಸಹಕರಿಸಲು ಶುರು ಮಾಡಿದಾಗ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು.
ಒಂದೆಡೆ ತಾಳ್ಮೆಯ ಮೂರ್ತಿಯಂತೆ ಕ್ರೀಸ್‌ನಲ್ಲಿ ನೆಲೆಯೂರಿದ ಹೆನ್ರಿ ನಿಕೋಲ್ಸ್, ಭಾರತೀಯ ವೇಗಿಗಳು ಹಾಗೂ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಅವರ ದಾಳಿಯನ್ನು ಸಮರ್ಥವಾಗಿ ಎದುರಿಸಿ ತಮ್ಮ ಟೆಸ್ಟ್ ವೃತ್ತಿಜೀವನದ 12ನೇ ಶತಕ ಪೂರೈಸಿದರು.
ಮತ್ತೊಂದೆಡೆ ನಿಕೋಲ್ಸ್‌ಗೆ ಉತ್ತಮ ಸಾಥ್ ನೀಡಿದ ಗ್ಲೆನ್ ಫಿಲಿಪ್ಸ್, ಆಕರ್ಷಕ ಬೌಂಡರಿಗಳೊಂದಿಗೆ ಶತಕದತ್ತ ದಾಪುಗಾಲಿಟ್ಟಿದ್ದಾರೆ. ಇವರಿಬ್ಬರು ಮುರಿಯದ ಆರನೇ ವಿಕೆಟ್‌ಗೆ 170ಕ್ಕೂ ಹೆಚ್ಚು ರನ್‌ಗಳ ಬೃಹತ್ ಜೊತೆಯಾಟವಾಡುವ ಮೂಲಕ ತಂಡವನ್ನು 240ರ ಗಡಿ ದಾಟಿಸಿದ್ದಾರೆ.
ಮೊದಲ ದಿನದಾಟ ಅಂತ್ಯ:
ಮೊದಲ ಅವಧಿಯಲ್ಲಿ ಪೂರ್ಣ ಪ್ರಭುತ್ವ ಸಾಧಿಸಿದ್ದ ಭಾರತೀಯ ಬೌಲರ್‌ಗಳು, ಚೆಂಡು ಹಳೆಯದಾದಂತೆ ವಿಕೆಟ್ ಪಡೆಯಲು ಪರದಾಡಿದರು. ಜಸ್ಪ್ರೀತ್ ಬುಮ್ರಾ 3 ವಿಕೆಟ್ ಪಡೆದು ಭಾರತದ ಪರ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರೆ, ಅನ್ಶುಲ್ ಕಂಬೋಜ್ ಮತ್ತು ಆಕಾಶ್ ದೀಪ್ ತಲಾ 1 ವಿಕೆಟ್ ಪಡೆದಿದ್ದಾರೆ. ಅದರಂತೆ ಮೊದಲ ದಿನದಾಟದ ಅಂತ್ಯಕ್ಕೆ ನ್ಯೂಝಿಲೆಂಡ್ 5 ವಿಕೆಟ್ ಕಳೆದುಕೊಂಡು 243 ರನ್ ಕಲೆಹಾಕಿದೆ.
221 ಎಸೆತಗಳಲ್ಲಿ 14 ಫೋರ್‌ಗಳೊಂದಿಗೆ 113 ರನ್ ಬಾರಿಸಿರುವ ಹೆನ್ರಿ ನಿಕೋಲ್ಸ್ ಹಾಗೂ 182 ಎಸೆತಗಳಲ್ಲಿ 13 ಫೋರ್‌ಗಳೊಂದಿಗೆ 94 ರನ್ ಕಲೆಹಾಕಿರುವ ಗ್ಲೆನ್ ಫಿಲಿಪ್ಸ್ ಮೊದಲ ದಿನದಾಟದ ಅಂತ್ಯಕ್ಕೆ ಅಜೇಯರಾಗಿ ಉಳಿದಿದ್ದು, ಎರಡನೇ ದಿನದಾಟದಲ್ಲಿ ಬ್ಯಾಟಿಂಗ್ ಮುಂದುವರಿಸಲಿದ್ದಾರೆ.
ಭಾರತ ಪ್ಲೇಯಿಂಗ್ 11: ಕೆಎಲ್ ರಾಹುಲ್ , ಯಶಸ್ವಿ ಜೈಸ್ವಾಲ್ , ದೇವದತ್ ಪಡಿಕ್ಕಲ್ , ಶುಭ್‌ಮನ್ ಗಿಲ್ (ನಾಯಕ) , ರಿಷಭ್ ಪಂತ್ (ವಿಕೆಟ್ ಕೀಪರ್) , ವಾಷಿಂಗ್ಟನ್ ಸುಂದರ್ , ಧ್ರುವ್ ಜುರೆಲ್ , ಆಕಾಶ್ ದೀಪ್ , ಅನ್ಶುಲ್ ಕಂಬೋಜ್ , ಜಸ್ಪ್ರೀತ್ ಬುಮ್ರಾ , ಪ್ರಸಿದ್ಧ್ ಕೃಷ್ಣ.
ಇದನ್ನೂ ಓದಿ: ಮತ್ತೆ ಸಿಗೋಣ… RCBಗೆ ಜೇಕಬ್ ಬೆಥೆಲ್ ಭಾವನಾತ್ಮಕ ವಿದಾಯ!
ನ್ಯೂಝಿಲೆಂಡ್ ಪ್ಲೇಯಿಂಗ್ 11: ಟಾಮ್ ಲ್ಯಾಥಮ್ (ನಾಯಕ) , ಡೆವೊನ್ ಕಾನ್ವೇ , ಹೆನ್ರಿ ನಿಕೋಲ್ಸ್ , ರಚಿನ್ ರವೀಂದ್ರ , ಡ್ಯಾರಿಲ್ ಮಿಚೆಲ್ , ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್) , ಗ್ಲೆನ್ ಫಿಲಿಪ್ಸ್ , ನಾಥನ್ ಸ್ಮಿತ್ , ಕೈಲ್ ಜೇಮಿಸನ್ , ಮ್ಯಾಟ್ ಹೆನ್ರಿ.




