25 ಸಿಕ್ಸ್, 429 ರನ್ಸ್: ವರ್ಷದ ಮೊದಲ ಪಂದ್ಯದಲ್ಲೇ ರನ್ ಸುರಿಮಳೆ

|

Updated on: Jan 02, 2025 | 2:00 PM

New Zealand vs Sri Lanka: ಶ್ರಿಲಂಕಾ ವಿರುದ್ಧದ 3 ಪಂದ್ಯಗಳ ಸರಣಿಯನ್ನು ನ್ಯೂಝಿಲೆಂಡ್ 2-1 ಅಂತರದಿಂದ ಗೆದ್ದುಕೊಂಡಿದೆ. ಮೊದಲೆರಡು ಪಂದ್ಯಗಳ ಮೂಲಕ ಸರಣಿ ವಶಪಡಿಸಿಕೊಂಡಿದ್ದ ಕಿವೀಸ್ ಪಡೆ ವರ್ಷದ ಮೊದಲ ಮ್ಯಾಚ್​ನಲ್ಲಿ ಲಂಕಾ ವಿರುದ್ಧ ವಿರೋಚಿತವಾಗಿ ಸೋಲೊಪ್ಪಿಕೊಂಡಿದೆ. ಅದು ಕೂಡ ಕೇವಲ 7 ರನ್​ಗಳ ಅಂತರದಿಂದ ಎಂಬುದು ವಿಶೇಷ.

25 ಸಿಕ್ಸ್, 429 ರನ್ಸ್: ವರ್ಷದ ಮೊದಲ ಪಂದ್ಯದಲ್ಲೇ ರನ್ ಸುರಿಮಳೆ
Kusal Perera
Follow us on

2025ರ ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ರನ್​ಗಳ​ ಸುರಿಮಳೆಯಾಗಿದೆ. ಹೀಗೆ ರನ್​ಗಳ ಸುರಿಮಳೆ ಸುರಿಸಿದ್ದು ಶ್ರೀಲಂಕಾ ಮತ್ತು ನ್ಯೂಝಿಲೆಂಡ್ ತಂಡಗಳು. ಸಾಕ್ಷಟನ್ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ಉತ್ತಮ ಆರಂಭ ಪಡೆದಿರಲಿಲ್ಲ.

ಆರಂಭಿಕರಾದ ಪಾತುಮ್ ನಿಸ್ಸಂಕಾ (14) ಹಾಗೂ ಕುಸಾಲ್ ಮೆಂಡಿಸ್ (22) ಬೇಗನೆ ವಿಕೆಟ್ ಒಪ್ಪಿಸಿದ್ದರು. ಆದರೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕುಸಾಲ್ ಪೆರೇರಾ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಸಿಸಿ ಮಿಂಚಿದರು.

ಸಾಕ್ಷಟನ್ ಮೈದಾನದ ಮೂಲೆ ಮೂಲೆಗೂ ಸಿಕ್ಸ್​-ಫೋರ್​​ಗಳನ್ನು ಬಾರಿಸಿ ಕುಸಾಲ್ ಪೆರೇರಾ ಕಿವೀಸ್ ಬೌಲರ್​​ಗಳ ಬೆಂಡೆತ್ತಿದರು. ಪರಿಣಾಮ 46 ಎಸೆತಗಳಲ್ಲಿ ಪೆರೇರಾ ಬ್ಯಾಟ್​ನಿಂದ 4 ಸಿಕ್ಸ್ ಹಾಗೂ 13 ಫೋರ್​ಗಳೊಂದಿಗೆ 101 ರನ್ ಮೂಡಿಬಂತು.

ಈ ಮೂಲಕ ಕುಸಾಲ್ ಪೆರೇರಾ ವರ್ಷದ ಮೊದಲ ಟಿ20 ಶತಕ ಬಾರಿಸಿದ ಹೆಗ್ಗಳಿಕೆಗೆ ಪಾತ್ರರಾದರು. ಇನ್ನು ನಾಯಕ ಚರಿತ್ ಅಸಲಂಕಾ 24 ಎಸೆತಗಳಲ್ಲಿ 5 ಸಿಕ್ಸ್​ಗಳೊಂದಿಗೆ 46 ರನ್ ಬಾರಿಸಿದರು. ಈ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ ತಂಡವು 5 ವಿಕೆಟ್ ಕಳೆದುಕೊಂಡು 218 ರನ್ ಕಲೆಹಾಕಿತು.

ಕುಸಾಲ್ ಪೆರೇರಾ ಭರ್ಜರಿ ಸೆಂಚುರಿ ವಿಡಿಯೋ:

219 ರನ್​ಗಳ ಗುರಿ:

ಶ್ರೀಲಂಕಾ ನೀಡಿದ 219 ರನ್​ಗಳ ಗುರಿ ಪಡೆದ ನ್ಯೂಝಿಲೆಂಡ್ ತಂಡಕ್ಕೆ ಟಿಮ್ ರಾಬಿನ್ಸನ್ (37) ಹಾಗೂ ರಚಿನ್ ರವೀಂದ್ರ (69) ಉತ್ತಮ ಆರಂಭ ಒದಗಿಸಿದ್ದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ಕುಸಿತಕ್ಕೊಳಗಾದ ನ್ಯೂಝಿಲೆಂಡ್ ತಂಡವು ಅಂತಿಮವಾಗಿ 20 ಓವರ್​​ಗಳಲ್ಲಿ 7 ವಿಕೆಟ್ ಕಳೆದುಕೊಂಡು 211 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ವರ್ಷದ ಮೊದಲ ಪಂದ್ಯದಲ್ಲೇ ಶ್ರೀಲಂಕಾ ತಂಡವು 7 ರನ್​​ಗಳ ರೋಚಕ ಜಯ ಸಾಧಿಸಿತು.

25 ಸಿಕ್ಸ್, 429 ರನ್ಸ್:

ಇನ್ನು ಈ ಪಂದ್ಯದಲ್ಲಿ ಉಭಯ ತಂಡಗಳಿಂದ ಮೂಡಿಬಂದ ಒಟ್ಟು ಸ್ಕೋರ್ 429 ರನ್​ಗಳು. ಹಾಗೆಯೇ ಈ ಪಂದ್ಯದಲ್ಲಿ ಶ್ರೀಲಂಕಾ ಬ್ಯಾಟರ್​ಗಳು 12 ಸಿಕ್ಸ್ ಬಾರಿಸಿದರೆ, ನ್ಯೂಝಿಲೆಂಡ್ ದಾಂಡಿಗರು 13 ಸಿಕ್ಸ್​ಗಳನ್ನು ಸಿಡಿಸಿದ್ದರು. ಈ ಮೂಲಕ 2025ರ ಮೊದಲ ಟಿ20 ಪಂದ್ಯದಲ್ಲೇ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಒದಗಿಸಿದ್ದರು.

ನ್ಯೂಝಿಲೆಂಡ್ ಪ್ಲೇಯಿಂಗ್ 11: ಟಿಮ್ ರಾಬಿನ್ಸನ್ , ರಚಿನ್ ರವೀಂದ್ರ , ಮಾರ್ಕ್ ಚಾಪ್ಮನ್ , ಗ್ಲೆನ್ ಫಿಲಿಪ್ಸ್ , ಡೇರಿಲ್ ಮಿಚೆಲ್ , ಮಿಚೆಲ್ ಹೇ (ವಿಕೆಟ್ ಕೀಪರ್) , ಮೈಕೆಲ್ ಬ್ರೇಸ್​ವೆಲ್ , ಮಿಚೆಲ್ ಸ್ಯಾಂಟ್ನರ್ (ನಾಯಕ) , ಜಕಾರಿ ಫೌಲ್ಕ್ಸ್ , ಮ್ಯಾಟ್ ಹೆನ್ರಿ , ಜಾಕೋಬ್ ಡಫಿ.

ಇದನ್ನೂ ಓದಿ: ಟೀಮ್ ಇಂಡಿಯಾ ನಾಯಕತ್ವದ ಮೇಲೆ ಕಣ್ಣು: ಮಿಸ್ಟರ್ ಫಿಕ್ಸ್ ಇಟ್ ಯಾರು?

ಶ್ರೀಲಂಕಾ ಪ್ಲೇಯಿಂಗ್ 11: ಪಾತುಮ್ ನಿಸ್ಸಾಂಕ , ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್) , ಕುಸಾಲ್ ಪೆರೇರಾ , ಅವಿಷ್ಕ ಫೆರ್ನಾಂಡೋ , ಚರಿತ್ ಅಸಲಂಕಾ (ನಾಯಕ) , ಭಾನುಕಾ ರಾಜಪಕ್ಸೆ , ವನಿಂದು ಹಸರಂಗ , ಚಮಿಂದು ವಿಕ್ರಮಸಿಂಘೆ , ಮಹೇಶ್ ತೀಕ್ಷಣ , ಬಿನುರ ಫೆರ್ನಾಂಡೋ , ನುವಾನ್ ತುಷಾರ.