ನ್ಯೂಜಿಲೆಂಡ್ನಲ್ಲಿ ನಡೆಯುತ್ತಿರುವ 12ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ (ICC Women’s World Cup 2022) ಟೂರ್ನಿಯಲ್ಲಿ ಈಗಾಗಲೇ ಭಾರತೀಯ ವನಿತೆಯರು ಪಾಕಿಸ್ತಾನ ವಿರುದ್ಧ 107 ರನ್ಗಳ ಅಮೋಘ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಮಿಥಾಲಿ ಪಡೆ ತನ್ನ ಮುಂದಿನ ಪಂದ್ಯವನ್ನು ಮಾರ್ಚ್ 10 ರಂದು ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಆದರೆ, ಇದಕ್ಕೂ ಮುನ್ನ ಭಾರತಕ್ಕೆ ನಡುಕ ಶುರುವಾಗಿದೆ. ಯಾಕೆಂದರೆ ವಿಶ್ವಕಪ್ನಲ್ಲಿ ಇಂದು ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ಮಹಿಳೆಯರು (New Zealand Women vs Bangladesh Women) ನೀಡಿದ ಅದ್ಭುತ ಪ್ರದರ್ಶನ. ಹೌದು, ಬಾಂಗ್ಲಾ ವನಿತೆಯರ ವಿರುದ್ಧ ಬ್ಯಾಟಿಂಗ್ – ಬೌಲಿಂಗ್ನಲ್ಲಿ ಮಿಂಚಿದ ಕಿವೀಸ್ ವನಿತೆಯರು ಮೊದಲ ಸೋಲಿನಿಂದ ಊಹಿಸಲಾಗದ ರೀತಿಯಲ್ಲಿ ಕಮ್ಬ್ಯಾಕ್ ಮಾಡಿದ್ದಾರೆ. ಮಳೆ ಬಾಧಿತ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ 9 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿ ಭಾರತಕ್ಕೆ (India) ಪೈಪೋಟಿ ನೀಡಲು ಸಜ್ಜಾಗಿದೆ.
ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ನಡುವಣ ಈ ಪಂದ್ಯ ಆರಂಭಕ್ಕೆ ಮಳೆ ಅಡ್ಡಿಸಿತು. ಹೀಗಾಗಿ ಪಂದ್ಯವನ್ನು 27 ರನ್ಗಳಿಗೆ ಕಡಿತಗೊಳಿಸಿ ಆಡಿಸಲಾಯಿತು. ಅದರಂತೆ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಬಾಂಗ್ಲಾ ಮಹಿಳಾ ತಂಡ ಅತ್ಯುತ್ತಮ ಆರಂಭ ಪಡೆದುಕೊಂಡಿದ್ದು ಬಿಟ್ಟರೆ ಬಳಿಕ ದಿಢೀರ್ ಕುಸಿತ ಕಂಡಿತು. ಓಪನರ್ಗಳಾದ ಶಮಿಮಾ ಸುಲ್ತಾನ್ ಮತ್ತು ಫರ್ಗನ ಹಖ್ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್ಗೆ ಈ ಜೋಡಿ 9.2 ಓವರ್ನಲ್ಲೇ 59 ರನ್ಗಳ ಕಾಣಿಕೆ ನೀಡಿದರು.
ಶಮಿಮಾ 36 ಎಸೆತಗಳಲ್ಲಿ 33 ರನ್ಗೆ ಔಟಾದರೆ, ನಾಯಕಿ ನಿಗರ್ ಸುಲ್ತಾನ್ ಆಟ ಕೇವಲ 11 ರನ್ಗೆ ಕೊನೆಗೊಂಡಿತು. ರುಮಾನ ಅಹ್ಮದ್ (1) ಹಾಗೂ ಸೊಭಾನ ಮೊಸ್ಟ್ರಿ (13) ಕೂಡ ಬೇಗನೆ ನಿರ್ಗಮಿಸಿದರು. ಹೀಗೆ ಒಂದುಕಡೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗುತ್ತಿದ್ದರೆ ಇತ್ತ ಫರ್ಗನ್ ಏಕಾಂಗಿ ಹೋರಾಟ ನಡೆಸಿದರು. ಆದರೆ, ಇವರು 63 ಎಸೆತಗಳಲ್ಲಿ 52 ರನ್ ಗಳಿಸಿ ರನೌಟ್ಗೆ ಬಲಿಯಾದರು. ಅಂತಿಮವಾಗಿ ಬಾಂಗ್ಲಾ ನಿಗದಿತ 27 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 140 ರನ್ ಕಲೆಹಾಕಿತು. ನ್ಯೂಜಿಲೆಂಡ್ ಪರ ಸಟ್ಟರ್ವೈಡ್ 3 ವಿಕೆಟ್ ಕಿತ್ತರು.
ಇತ್ತ 141 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ನ್ಯೂಜಿಲೆಂಡ್ 7ನೇ ಓವರ್ನಲ್ಲಿ ನಾಯಕಿ ಸೋಫಿ ಡೆವಿನ್ (14) ವಿಕೆಟ್ ಕಳೆದುಕೊಂಡಿತು. ಆದರೆ, 2ನೇ ವಿಕೆಟ್ಗೆ ಜೊತೆಯಾದ ಸೂಝಿ ಬೇಟ್ಸ್ ಮತ್ತು ಅಮೆಲಿಯಾ ಕೇರ್ ಬೊಂಬಾಟ್ ಆಟವಾಡಿದರು. ಬೌಂಡರಿಗಳ ಮೂಲಕ ಬಾಂಗ್ಲಾ ಬೌಲರ್ಗಳ ಬೆಂಡೆತ್ತಿದ್ದ ಈ ಜೋಡಿ ಶತಕದ ಜೊತೆಯಾಟವಾಡಿ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿತು. ಕೇವಲ 20 ಓವರ್ಗಳಲ್ಲೇ 1 ವಿಕೆಟ್ ಕಳೆದುಕೊಂಡು ನ್ಯೂಜಿಲೆಂಡ್ 144 ರನ್ ಸಿಡಿಸಿ ಜಯ ಸಾಧಿಸಿತು. ಬೇಟ್ಸ್ 68 ಎಸೆತಗಳಲ್ಲಿ 8 ಬೌಂಡರಿಯೊಂದಿಗೆ ಅಜೇಯ 79 ರನ್ ಚಚ್ಚಿದರೆ, ಕೇರ್ 37 ಎಸೆಗಳಲ್ಲಿ 47 ರನ್ ಸಿಡಿಸಿದರು.
ಸದ್ಯ ಐಸಿಸಿ ಮಹಿಳಾ ವಿಶ್ವಕಪ್ನ ಪಾಯಿಂಟ್ ಟೇಬಲ್ನಲ್ಲಿ ಆಡಿದ ಒಂದು ಪಂದ್ಯದಲ್ಲಿ ದೊಡ್ಡ ಅಂತರದ ಗೆಲುವು ಸಾಧಿಸಿರುವ ಭಾರತ ನೆಟ್ ರನ್ರೇಟ್ ಆಧಾರದ ಮೇಲೆ 2 ಅಂಕದೊಂದಿಗೆ ಮೊದಲ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ಕೂಡ 2 ಅಂಕದೊಂದಿಗೆ 2ನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ಒಂದು ಸೋಲು ಒಂದು ಗೆಲುವಿನೊಂದಿಗೆ ಮೂರನೇ ಸ್ಥಾನದಲ್ಲಿದೆ. ಆಡಿದ ಎರಡೂ ಪಂದ್ಯಗಳಲ್ಲಿ ಸೋತ ಬಾಂಗ್ಲಾದೇಶ ವನಿತೆಯರು 7ನೇ ಸ್ಥಾನದಲ್ಲಿದ್ದಾರೆ.
RCB New Captain: ಶಾಕಿಂಗ್: ಇಂದು ಆರ್ಸಿಬಿ ಪ್ರಕಟಿಸಲಿರುವ ಹೊಸ ನಾಯಕ ಯಾರು ಗೊತ್ತೇ?
Rohit Sharma: ನಾಯಕನಾಗಿ ಚೊಚ್ಚಲ ಟೆಸ್ಟ್ ಗೆಲುವು: ಪಂದ್ಯ ಮುಗಿದ ಬಳಿಕ ರೋಹಿತ್ ಶರ್ಮಾ ಹೇಳಿದ್ದೇನು ಗೊತ್ತೇ?