Rohit Sharma: ನಾಯಕನಾಗಿ ಚೊಚ್ಚಲ ಟೆಸ್ಟ್ ಗೆಲುವು: ಪಂದ್ಯ ಮುಗಿದ ಬಳಿಕ ರೋಹಿತ್ ಶರ್ಮಾ ಹೇಳಿದ್ದೇನು ಗೊತ್ತೇ?
IND vs SL 1st Test: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಮತ್ತು 222 ರನ್ಗಳ ಅಮೋಘ ಗೆಲುವು ಕಂಡಿತು. ಈ ಮೂಲಕ ಟೀಮ್ ಇಂಡಿಯಾ, ಕೊಹ್ಲಿಯ 100ನೇ ಟೆಸ್ಟ್ ಮತ್ತು ರೋಹಿತ್ ನಾಯಕತ್ವದ ಚೊಚ್ಚಲ ಟೆಸ್ಟ್ ಪಂದ್ಯವನ್ನು ಸ್ಮರಣೀಯವಾಗಿಸಿತು. ಪಂದ್ಯ ಮುಗಿದ ಬಳಿಕ ತಂಡದ ನಾಯಕ ರೋಹಿತ್ ಶರ್ಮಾ ಮಾತನಾಡಿದ್ದು ಏನು ಹೇಳಿದರು ಎಂಬುದನ್ನು ನೋಡೋಣ.
ಭಾರತದ (India) ಗೆಲುವಿನ ಓಟಕ್ಕೆ ಬ್ರೇಕ್ ಹಾಕುತ್ತೇವೆ, ಈ ನೆಲದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡುತ್ತೇವೆ ಎಂಬ ಮಾತಿನೊಂದಿಗೆ ಕಣಕ್ಕಿಳಿದ ಶ್ರೀಲಂಕಾ ಹೇಳ ಹೆಸರಿಲ್ಲದಂತೆ ಭಾರೀ ಮುಖಭಂಗಕ್ಕೆ ಒಳಗಾಗಿದೆ. ಟೀಮ್ ಇಂಡಿಯಾ ಬೌಲಿಂಗ್ ದಾಳಿಗೆ ತತ್ತರಿಸಿದ ಸಿಂಹಳೀಯರು ಮೂರನೇ ಅತೀ ದೊಡ್ಡ ಅಂತರದ ಸೋಲು ಅನುಭವಿಸಿದರು. ಇತ್ತ ಹೆಸರಿಗೆ ತಕ್ಕಂತೆ ಭರ್ಜರಿ ಆಲ್ರೌಂಡರ್ ಪ್ರದರ್ಶನ ತೋರಿದ ರವೀಂದ್ರ ಜಡೇಜಾ (Ravindra Jadeja) ಲಂಕಾನ್ನರ ಪಾಲಿಗೆ ಕಬ್ಬಿಣದ ಕಡೆಲೆಯಾಗಿದ್ದು ಸುಳ್ಳಲ್ಲ. ಭಾರತ 574 ರನ್ ಕಲೆಹಾಕುವಲ್ಲಿ ಜಡೇಜಾ ಪಾತ್ರ ಮುಖ್ಯವಾಗಿತ್ತು. ಶ್ರೀಲಂಕಾ ಮೇಲೆ ಫಾಲೋ ಆನ್ ಹೇರಿ ಮತ್ತೆ ಆಲೌಟ್ ಮಾಡಲು ಕೂಡ ರಾಕ್ ಸ್ಟಾರ್ ಜಡ್ಡು ಕಾರಣರಾದರು. ಹೀಗೆ ಭಾರತ ಇನ್ನಿಂಗ್ಸ್ ಮತ್ತು 222 ರನ್ಗಳ ಅಮೋಘ ಗೆಲುವು ಕಂಡಿತು. ಈ ಮೂಲಕ ಟೀಮ್ ಇಂಡಿಯಾ, ಕೊಹ್ಲಿ ಅವರ 100ನೇ ಮತ್ತು ರೋಹಿತ್ ಶರ್ಮ (Rohit Sharma) ನಾಯಕತ್ವದ ಚೊಚ್ಚಲ ಟೆಸ್ಟ್ ಪಂದ್ಯವನ್ನು ಸ್ಮರಣೀಯವಾಗಿಸಿತು. ಪಂದ್ಯ ಮುಗಿದ ಬಳಿಕ ತಂಡದ ನಾಯಕ ರೋಹಿತ್ ಶರ್ಮಾ ಮಾತನಾಡಿದ್ದು ಏನು ಹೇಳಿದರು ಎಂಬುದನ್ನು ನೋಡೋಣ.
“ಈ ಗೆಲುವು ಈ ಟೆಸ್ಟ್ ಸರಣಿಯ ಉತ್ತಮ ಆರಂಭ. ನಮ್ಮ ದೃಷ್ಟಿಕೋನದಿಂದ ಇದೊಂದು ಅತ್ಯುತ್ತಮ ಕ್ರಿಕೆಟ್ ಆಟವಾಗಿತ್ತು. ನಮಗೆ ಅಗತ್ಯವಿದ್ದ ಎಲ್ಲ ಪ್ರಶ್ನೆಗಳುಗೆ ಉತ್ತರ ಸಿಕ್ಕಿದೆ. ನಿಜಕ್ಕೂ ಈ ಟೆಸ್ಟ್ ಪಂದ್ಯ ಮೂರು ದಿನಗಳಲ್ಲಿ ಮುಕ್ತಾಯವಾಗುವಂತಹ ಪ್ರಸಂಗಕ್ಕೆ ತಿರುಗುತ್ತದೆ ಎಂಬ ಊಹೆ ಕೂಡ ಇರಲಿಲ್ಲ. ಇದು ಉತ್ತಮ ಬ್ಯಾಟಿಂಗ್ ಪಿಚ್ ಆಗಿದೆ. ಜೊತೆಗೆ ಉತ್ತಮ ಟರ್ನ್ ಕೂಡ ಆಗುತ್ತಿತ್ತು, ವೇಗಿಗಳಿಗೂ ಸಹಕಾರ ನೀಡುತ್ತಿತ್ತು. ಎಲ್ಲ ಶ್ರೇಯಸ್ಸು ನಮ್ಮ ಆಟಗಾರರಿಗೆ ಸಲ್ಲಬೇಕು. ಅವರು ಅದ್ಭತವಾಗಿ ಬೌಲಿಂಗ್ ಮಾಡಿದರು. ಪ್ರೆಶರ್ ಅನ್ನು ಮುಂದುವರೆಸಿಕೊಂಡೇ ಸಾಗಿದರು. ಹಾಗಾಗಿ ಇದು ಶ್ರೀಲಂಕಾ ಬ್ಯಾಟ್ಸ್ಮನ್ಗಳಿಗೆ ಸುಲಭವಾಗಲಿಲ್ಲ. ಎಲ್ಲ ವಿಭಾಗಗಳಿಂದ ನಾವು ಎದುರಾಳಿಗೆ ಒತ್ತಡವನ್ನು ನೀಡುತ್ತಲೇ ಇದ್ದೆವು,” ಎಂದು ಹೇಳಿದ್ದಾರೆ.
“ಇದು ಭಾರತೀಯ ಕ್ರಿಕೆಟ್ನ ಶುಭ ಸೂಚಕವಾಗಿದೆ. ಅತ್ಯುತ್ತಮ ಪ್ರದರ್ಶನ, ಕೊಹ್ಲಿಯ 100ನೇ ಟೆಸ್ಟ್, ಇಲ್ಲಿಗೆ ಬಂದು ಗೆಲುವು ಸಾಧಿಸುವುದು ನಮ್ಮ ಗುರಿಯಾಗಿತ್ತು. ಆಟಗಾರರ ಸಂಘಟಿತ ಪ್ರದರ್ಶನ ನೋಡಲು ತುಂಬಾ ಸಂತಸವಾಗುತ್ತದೆ. ನಾವು ಯೋಚನೆ ಮಾಡಿ ನಿರ್ಧಾರಗಳನ್ನು ತೆಗೆದುಕೊಂಡಿದ್ದಲ್ಲ. ಯಾಕಂದ್ರೆ ನಮ್ಮಲ್ಲಿ ಸಾಕಷ್ಟು ಬೌಲಿಂಗ್ ಆಯ್ಕೆಗಳಿವೆ, ಜೊತೆಗೆ ಇನ್ನೂ ಇತರೆ ಆಯ್ಕೆಗಳು ಕೂಡ. ಜಯಂತ್ ಯಾದವ್ಗೆ ಇನ್ನಷ್ಟು ಓವರ್ ನೀಡಬಹುದಿತ್ತು. ಆದರೆ, ಈ ಪಂದ್ಯದ ಹೈಲೇಟ್ ಜಡೇಜಾ ಆಗಿದ್ದರು. ನಾವು ಡಿಕ್ಲೇರ್ ಘೋಷಿಸಬೇಕೋ ಅಥವಾ ಬೇಡವೋ ಎಂಬ ಪ್ರಶ್ನೆ ಎದ್ದಿತ್ತು. ಇದು ತಂಡದ ನಿರ್ಧಾರ,” ಎಂದು ಹೇಳಿದ್ದಾರೆ.
ಇನ್ನು ಇದೇವೇಳೆ ಬೆಂಗಳೂರಿನಲ್ಲಿ ನಡೆಯಲಿರುವ ದ್ವಿತೀಯ ಟೆಸ್ಟ್ ಪಂದ್ಯ ಬಗ್ಗೆ ಮಾತನಾಡಿದ ರೋಹಿತ್, “ಇದು ನಾವು ತವರಿನಲ್ಲಿ ಆಡಲಿರುವ ಎರಡನೇ ಪಿಂಕ್ ಬಾಲ್ ಟೆಸ್ಟ್. ಅನೇಕ ಆಟಗಾರರು ಹಗಲು-ರಾತ್ರಿ ಟೆಸ್ಟ್ ಆಡಿಲ್ಲ. ಹೀಗಾಗಿ ಇದೊಂದು ದೊಡ್ಡ ಸವಾಲಾಗಿದೆ. ಅಲ್ಲಿ ಯಾವರೀತಿಯ ಪಿಚ್ ಇರಲಿದೆ, ಯಾವರೀತಿ ಪ್ರದರ್ಶನ ನೀಡುತ್ತೇವೆ ಎಂಬುದನ್ನು ನೋಡೋಣ,” ಎಂದು ನುಡಿದರು.
ಈ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡ ರವೀಂದ್ರ ಜಡೇಜಾ ಮಾತನಾಡಿ, “ಇದು ನನ್ನ ಅದೃಷ್ಟದ ಮೈದಾನ. ನಾನು ಯಾವಾಗ ಇಲ್ಲಿ ಆಡಲು ಬರುತ್ತೇನೊ ಆಗ ಧನಾತ್ಮಕ ಭಾವನೆ ನನ್ನಲ್ಲಿ ಮೂಡುತ್ತದೆ. ನಾನು ರಿಷಭ್ ಪಂತ್ ಜೊತೆ ಉತ್ತಮ ಜೊತೆಯಾಟ ಆಡಿದೆ. ತಂಡಕ್ಕಾಗಿ ಉತ್ತಮ ರನ್ ಗಳಿಸಿದ್ದು ಮತ್ತು ವಿಕೆಟ್ ಪಡೆದಿದ್ದು ಸಂತಸ ನೀಡಿದೆ,” ಎಂದು ಹೇಳಿದರು.
IND vs SL 1st Test: ಭಾರತ-ಶ್ರೀಲಂಕಾ ಮೊದಲ ಟೆಸ್ಟ್ನಲ್ಲಿ ಏನೆಲ್ಲ ನಡೆಯಿತು?: ಇಲ್ಲಿದೆ ಪ್ರಮುಖ ಹೈಲೇಟ್ಸ್