ಏಕದಿನ ವಿಶ್ವಕಪ್​ನಲ್ಲಿ ಕಾಶ್ಮೀರ್ ವಿಲೋ ಬ್ಯಾಟ್​ಗಳಿಗೆ ಹೆಚ್ಚಿದ ಬೇಡಿಕೆ; ಈ ಬ್ಯಾಟ್​ಗಳ ವಿಶೇಷತೆ ಏನು ಗೊತ್ತಾ?

|

Updated on: Jun 19, 2023 | 3:14 PM

ODI World Cup 2023: ಪ್ರತಿ ವರ್ಷ 30 ಲಕ್ಷ ಬ್ಯಾಟ್‌ಗಳನ್ನು ತಯಾರಿಸಲಾಗುತ್ತಿದೆ. ಇದರಿಂದ 2022-2023 ರ ಹಣಕಾಸು ವರ್ಷದಲ್ಲಿ ನಮ್ಮ ಉದ್ಯಮದ ವಾರ್ಷಿಕ ವಹಿವಾಟು ಸುಮಾರು 300 ಕೋಟಿ ರೂಪಾಯಿಯಾಗಿದೆ.

ಏಕದಿನ ವಿಶ್ವಕಪ್​ನಲ್ಲಿ ಕಾಶ್ಮೀರ್ ವಿಲೋ ಬ್ಯಾಟ್​ಗಳಿಗೆ ಹೆಚ್ಚಿದ ಬೇಡಿಕೆ; ಈ ಬ್ಯಾಟ್​ಗಳ ವಿಶೇಷತೆ ಏನು ಗೊತ್ತಾ?
ಕಾಶ್ಮೀರ್ ವಿಲೋ ಬ್ಯಾಟ್
Follow us on

ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ನಡೆಯಲ್ಲಿರುವ ಏಕದಿನ ವಿಶ್ವಕಪ್​ಗೆ (ICC ODI World Cup 2023) ಭಾರತ ಆತಿಥ್ಯವಹಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೆ. ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ, ಇಡೀ ಪಂದ್ಯಾವಳಿಯನ್ನು ಭಾರತ ಆಯೋಜಿಸಲಿದೆ. ಈ ಹಿಂದೆ ಭಾರತದಲ್ಲಿ ವಿಶ್ವಕಪ್ ನಡೆದಿದ್ದರೂ ಭಾರತ ಒಂದೇ ವಿಶ್ವಕಪ್ ಆಯೋಜಿಸುವ ಪ್ರಯತ್ನಕ್ಕೆ ಕೈಹಾಕಿರಲಿಲ್ಲ. ಇದೀಗ ಅಕ್ಟೋಬರ್ ತಿಂಗಳಿದ ಪ್ರಾರಂಭವಾಗಲಿರುವ ವಿಶ್ವಕಪ್​ಗೆ ಭಾರತ ಏಕಾಂಗಿಯಾಗಿ ಆತಿಥ್ಯವಹಿಸುತ್ತಿದೆ. ಇದರೊಂದಿಗೆ ಭರ್ಜರಿ ಲಾಭ ಗಳಿಸುವ ಉದ್ದೇಶವನ್ನು ಬಿಸಿಸಿಐ (BCCI) ಹೊಂದಿದೆ. ಹಾಗೆಯೇ ಏಕದಿನ ವಿಶ್ವಕಪ್ ಆರಂಭದೊಂದಿಗೆ ಜಮ್ಮು ಕಾಶ್ಮೀರಕ್ಕೂ ಕೋಟ್ಯಾಂತರ ರೂಪಾಯಿಗಳ ಆದಾಯ ಹರಿದು ಬರುವ ನಿರೀಕ್ಷೆ ಇದೆ. ವಾಸ್ತವವಾಗಿ ಜಮ್ಮು ಕಾಶ್ಮೀರದಲ್ಲಿ ಯಾವುದೇ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸಲಾಗುತ್ತಿಲ್ಲ. ಹಾಗಿದ್ದರೂ ವಿಶ್ವಕಪ್ ಆರಂಭದಿಂದ ಕಾಶ್ಮೀರಕ್ಕೆ ಯಾವ ರೀತಿಯ ಆದಾಯ ಬರಲಿದೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಅದಕ್ಕೆ ಉತ್ತರ ಇಲ್ಲಿದೆ.

ಭಾರತದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್​ನಲ್ಲಿ ಈ ಬಾರಿ ಕಾಶ್ಮೀರ್ ವಿಲೋ ಕ್ರಿಕೆಟ್ ಬ್ಯಾಟ್​ಗಳು ಹೆಚ್ಚಾಗಿ ಬಳಕೆಯಾಗುವ ನಿರೀಕ್ಷೆ ಇದೆ. ಸಾಮಾನ್ಯವಾಗಿ ಕ್ರಿಕೆಟ್​ ಲೋಕದಲ್ಲಿ ಹೆಚ್ಚಾಗಿ ಬಳಕೆಯಾಗುವ ಬ್ಯಾಟ್​ಗಳೆಂದರೆ ಅದು ಇಂಗ್ಲಿಷ್ ವಿಲೋ ಮತ್ತು ಕಾಶ್ಮೀರ್ ವಿಲೋ (ಕ್ರಿಕೆಟ್ ಬ್ಯಾಟ್‌ಗಳನ್ನು ತಯಾರಿಸಲು ಬಳಸುವ ಮರದ ಅತ್ಯಂತ ಜನಪ್ರಿಯ ಪ್ರಭೇದಗಳಿವು) ಕ್ರಿಕೆಟ್ ಬ್ಯಾಟ್‌ಗಳು. ಇದರಲ್ಲಿ ಇಂಗ್ಲಿಷ್ ವಿಲೋ ಬ್ಯಾಟ್​ಗಳದ್ದೇ ಹೆಚ್ಚಿನ ಪಾರುಪತ್ಯ. ಆದರೇ ಇದೀಗ ಕ್ರಿಕೆಟ್​ ಲೋಕದಲ್ಲಿ ಹೊಸ ಅಲೆ ಆರಂಭವಾಗಿದ್ದು, ಈ ಬಾರಿಯ ವಿಶ್ವಕಪ್​ನಲ್ಲಿ ಕಾಶ್ಮೀರ್ ವಿಲೋ ಬ್ಯಾಟ್​ಗಳನ್ನು ಬಳಸಲು ಕ್ರಿಕೆಟ್ ದೇಶಗಳಾದ ಅಫ್ಘಾನಿಸ್ತಾನ, ವೆಸ್ಟ್ ಇಂಡೀಸ್, ಬಾಂಗ್ಲಾದೇಶ ಯುಎಇ, ಶ್ರೀಲಂಕಾ ತಂಡಗಳು ಕಾಶ್ಮೀರದಲ್ಲಿ ತಯಾರಾದ ಕ್ರಿಕೆಟ್ ಬ್ಯಾಟ್‌ಗಳನ್ನು ಬಳಸಲು ಮುಂದಾಗಿವೆ. ಇದು ಮೇಕ್ ಇನ್ ಇಂಡಿಯಾ ಯೋಜನೆಗೆ ಪ್ರಮುಖ ಉತ್ತೇಜನಕಾರಿಯಾಗಿದೆ.

ವಿಶ್ವಕಪ್​ಗೂ ಮುನ್ನ 12 ಏಕದಿನ ಪಂದ್ಯಗಳನ್ನಾಡಲಿದೆ ಭಾರತ; ಯಾವ ತಂಡದೆದುರು ಎಷ್ಟು ಪಂದ್ಯ?

ಟಿ20 ವಿಶ್ವಕಪ್‌ನಲ್ಲಿ ಅತಿ ಉದ್ದದ ಸಿಕ್ಸರ್

ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಾಶ್ಮೀರ್ ವಿಲೋ ಬ್ಯಾಟ್​ಗಳನ್ನು ಬಳಸಲಾಗುತ್ತಿದೆ. ಇದಕ್ಕೆ ಕಾರಣವೂ ಇದ್ದು, ಈ ಹಿಂದೆ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್​ನಲ್ಲಿ ಮೊದಲ ಬಾರಿಗೆ ಈ ಕಾಶ್ಮೀರ್ ವಿಲೋ ಬ್ಯಾಟ್ ಬಳಸಿದ್ದ ಬ್ಯಾಟರ್, ಟಿ20 ವಿಶ್ವಕಪ್‌ನ ಅತಿ ಉದ್ದದ ಸಿಕ್ಸರ್ ಬಾರಿಸಿದ್ದರು. ಆಗಿನಿಂದ ಈ ಬ್ಯಾಟ್​ಗಳಿಗೆ ಬೇಡಿಕೆ ಹೆಚ್ಚಾಗಿದೆ.

ಅಲ್ಲದೆ ಕಾಶ್ಮೀರ್ ವಿಲೋ ಬ್ಯಾಟ್​ಗಳಿಗೆ ಮತ್ತಷ್ಟು ಬೇಡಿಕೆ ಹೆಚ್ಚಾಗಲು ಕಾರಣ ಇವುಗಳ ಬೆಲೆ. ಇಂಗ್ಲಿಷ್ ವಿಲೋದಿಂದ ಮಾಡಿದ ಬ್ಯಾಟ್‌ಗಳಿಗೆ ಹೋಲಿಸಿದರೆ ಕಾಶ್ಮೀರ್ ವಿಲೋ ಬ್ಯಾಟ್​ಗಳ ಬೆಲೆ ತೀರ ಕಡಿಮೆ. ಹಾಗೆಯೇ ಈ ವಿಲೋ ಬ್ಯಾಟ್​ಗಳ ಗುಣಮಟ್ಟವು ಉತ್ತಮವಾಗಿದೆ. ಕಾಶ್ಮೀರ ವಿಲೋ ಬ್ಯಾಟ್​ಗಳ ಬೆಲೆ ಸುಮಾರು 10,000ರೂ.ಗಳಿಂದ 12,000 ರೂ. ಆದರೆ ಇಂಗ್ಲಿಷ್ ವಿಲೋ ಬ್ಯಾಟ್‌ಗಳ ಬೆಲೆ ಸುಮಾರು 1 ಲಕ್ಷ ರೂ. ಹೀಗಾಗಿ ಹೆಚ್ಚಿನ ಆಟಗಾರರು ಕಾಶ್ಮೀರ್ ವಿಲೋ ಬ್ಯಾಟ್​ಗಳ ಕಡೆ ಹೆಚ್ಚಿನ ಒಲವು ತೋರಿದ್ದಾರೆ.

ಇಂಗ್ಲಿಷ್ ವಿಲೋ ಕ್ರಿಕೆಟ್ ಬ್ಯಾಟ್‌ಗಳಿಗೆ ದೊಡ್ಡ ಪ್ರತಿಸ್ಪರ್ಧಿ

ವಿಶ್ವಕಪ್ ಸನಿಹವಾಗುತ್ತಿದ್ದಂತೆ ಕಾಶ್ಮೀರ್ ವಿಲೋ ಬ್ಯಾಟ್​ಗಳಿಗೆ ಹೆಚ್ಚಿನ ಬೇಡಿಕೆಯನ್ನು ಕಂಡ ಹರ್ಷವ್ಯಕ್ತಡಿಸಿರುವ ಕಾಶ್ಮೀರದ ಕ್ರಿಕೆಟ್ ಬ್ಯಾಟ್ ಮ್ಯಾನುಫ್ಯಾಕ್ಚರಿಂಗ್ ಅಸೋಸಿಯೇಷನ್‌ನ ಉಪಾಧ್ಯಕ್ಷ ಫೌಜಲ್ ಕಬೀರ್, ‘ಕಾಶ್ಮೀರ ಕಣಿವೆಯಲ್ಲಿ 100 ವರ್ಷಕ್ಕೂ ಹೆಚ್ಚು ಹಳೆಯದಾದ ಕ್ರಿಕೆಟ್ ಬ್ಯಾಟ್ ಉದ್ಯಮವು ಈಗ ಪ್ರಸಿದ್ಧ ಇಂಗ್ಲಿಷ್ ವಿಲೋ ಕ್ರಿಕೆಟ್ ಬ್ಯಾಟ್‌ಗಳಿಗೆ ದೊಡ್ಡ ಪ್ರತಿಸ್ಪರ್ಧಿಯಾಗಿದೆ. ಕ್ರಿಕೆಟ್ ಆಡುವ ಬಹುತೇಕ ರಾಷ್ಟ್ರಗಳು ಕಾಶ್ಮೀರದಲ್ಲಿ ತಯಾರಿಸಿದ ಬ್ಯಾಟ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿವೆ ಮತ್ತು ಬೇಡಿಕೆಯು ಅಗಾಧವಾಗಿ ಏರಿದೆ’.

‘ಪ್ರತಿ ವರ್ಷ 30 ಲಕ್ಷ ಬ್ಯಾಟ್‌ಗಳನ್ನು ತಯಾರಿಸಲಾಗುತ್ತಿದೆ. ಇದರಿಂದ 2022-2023 ರ ಹಣಕಾಸು ವರ್ಷದಲ್ಲಿ ನಮ್ಮ ಉದ್ಯಮದ ವಾರ್ಷಿಕ ವಹಿವಾಟು ಸುಮಾರು 300 ಕೋಟಿ ರೂಪಾಯಿಯಾಗಿದೆ. ಇದರಿಂದ​ ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಬಿಜ್ಬೆಹರಾ, ಚಾರ್ಸೂ, ಸೇಥರ್ ಸಂಗಮ್, ಹಲ್ಮುಲಾ, ಸಂಗಮ್, ಪುಜ್ತೆಂಗ್, ಮಿರ್ಜಾಪೋರ್ ಮತ್ತು ಸೆಥಾರ್ ಗ್ರಾಮ ಹಾಗೂ ಪಂಜಾಬ್‌ನ ಜಲಂಧರ್ ಮತ್ತು ಉತ್ತರ ಪ್ರದೇಶದ ಮೀರತ್ ಭಾಗದ ಜನರಿಗೆ ಹೆಚ್ಚಿನ ಉದ್ಯೋಗವಕಾಶ ಸಿಕ್ಕಿದೆ’.

ನಾವು ಐಪಿಎಲ್‌ಗೂ ಬ್ಯಾಟ್‌ಗಳನ್ನು ಪೂರೈಸಿದ್ದೇವೆ

‘ಕಾಶ್ಮೀರ ವಿಲೋ ಬ್ಯಾಟ್​ಗಳನ್ನು ಈ ಮೊದಲೇ ವಿದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು. ಆದರೆ ಅಂತರಾಷ್ಟ್ರೀಯ ಆಟಗಾರರು ಎಂದಿಗೂ ಈ ಬ್ಯಾಟ್ ಖರೀದಿಗೆ ಮುಂದೆ ಬರುತ್ತಿರಲಿಲ್ಲ. ಕಳೆದ ಎರಡು ವರ್ಷಗಳಿಂದ ಕಾಶ್ಮೀರ ವಿಲೋ ಬ್ಯಾಟ್​ಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಹಿಂದೆ ನಾವು ಐಪಿಎಲ್‌ಗೂ ಬ್ಯಾಟ್‌ಗಳನ್ನು ಪೂರೈಸಿದ್ದೇವೆ’.

‘ಕಾಶ್ಮೀರವು 100 ವರ್ಷಗಳಿಂದ ಬ್ಯಾಟ್​ಗಳನ್ನು ಉತ್ಪಾದಿಸುತ್ತಿದೆ. ಆದರೆ ಇಲ್ಲಿಯವರೆಗೆ ಕಾಶ್ಮೀರ ಬ್ರಾಂಡ್‌ನಂತೆ ಅಂತರರಾಷ್ಟ್ರೀಯ ಗ್ರಾಹಕರಿಗೆ ಮಾರಾಟ ಮಾಡಲಾಗಿಲ್ಲ. ಹೊರಗಿನ ಕಂಪನಿಗಳು ಲೇಬಲ್‌ಗಳಿಲ್ಲದ ಕಾಶ್ಮೀರ ಬ್ಯಾಟ್​ಗಳನ್ನು ತೆಗೆದುಕೊಂಡು ನಂತರ ಅವುಗಳ ಮೇಲೆ ತಮ್ಮದೇ ಆದ ಬ್ರಾಂಡ್‌ಗಳನ್ನು ಟ್ಯಾಗ್ ಮಾಡುತ್ತವೆ. ಈಗ ಕಾಶ್ಮೀರಿಗಳು ಸ್ವತಃ ತಮ್ಮದೇ ಬ್ರ್ಯಾಂಡಿಂಗ್​ನೊಂದಿಗೆ ಬ್ಯಾಟ್​ಗಳನ್ನು ಮಾರಾಟ ಮಾಡುತ್ತಿದ್ದಾರೆ’.

‘ಸ್ಥಳೀಯ ಆರ್ಥಿಕತೆಯನ್ನು ಹೆಚ್ಚಿಸಲು ಕಾಶ್ಮೀರ ವಿಲೋ ಬ್ಯಾಟ್​ಗಳನ್ನು ಜಗತ್ತಿನಾದ್ಯಂತ ಕೊಂಡೊಯ್ಯುವ ಉದ್ದೇಶವಿದೆ. ನಾನು ಕಳೆದ 13 ವರ್ಷಗಳಿಂದ ಅದರ ಪ್ರಚಾರ, ಅಭಿವೃದ್ಧಿ ಮತ್ತು ತಾಂತ್ರಿಕ ಪ್ರಗತಿಯಲ್ಲಿ ಕೆಲಸ ಮಾಡಿದ್ದೇನೆ ಮತ್ತು ಐಸಿಸಿಯ ಅನುಮೋದನೆಯನ್ನು ಸಹ ಪಡೆದುಕೊಂಡಿದ್ದೇನೆ. ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ನಮ್ಮ ಒಂದು ಬ್ಯಾಟ್​ನಿಂದ ಅತಿ ಉದ್ದದ ಸಿಕ್ಸರ್‌ ಬಾರಿಸಲಾಗಿತ್ತು. ಕಾಶ್ಮೀರ ವಿಲೋ ರೂಪದಲ್ಲಿ ಇಂಗ್ಲಿಷ್ ವಿಲೋಗೆ ಪರ್ಯಾಯವಿದೆ ಎಂದು ನಾವು ಜಗತ್ತಿಗೆ ಸಾಬೀತುಪಡಿಸಿದ್ದೇವೆ’ ಎಂದು ಫೌಜಲ್ ಕಬೀರ್ ಹೇಳಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:12 pm, Mon, 19 June 23