- Kannada News Photo gallery Cricket photos Team india will play 12 odi matches before odi world cup 2023
ವಿಶ್ವಕಪ್ಗೂ ಮುನ್ನ 12 ಏಕದಿನ ಪಂದ್ಯಗಳನ್ನಾಡಲಿದೆ ಭಾರತ; ಯಾವ ತಂಡದೆದುರು ಎಷ್ಟು ಪಂದ್ಯ?
Team India: ಈ 12 ಪಂದ್ಯಗಳಲ್ಲಿ ಭಾರತ ತನ್ನ ಎಲ್ಲಾ ನ್ಯೂನತೆಗಳನ್ನು ನಿವಾರಿಸಿಕೊಳ್ಳಬೇಕು. ಇದರಲ್ಲೇ ಭಾರತ ಬಲಿಷ್ಠ ಆರಂಭಿಕ ಜೋಡಿಯಾಗಿರಲಿ ಅಥವಾ ಬಲಿಷ್ಠ ಮಧ್ಯಮ ಕ್ರಮಾಂಕವನ್ನು ಸಿದ್ಧಪಡಿಸಬೇಕು.
Updated on: Jun 19, 2023 | 8:19 AM

ಭಾರತ ಕ್ರಿಕೆಟ್ ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಗೆದ್ದು ಐಸಿಸಿ ಟ್ರೋಫಿ ಗೆಲ್ಲುವ ಬರವನ್ನು ಕೊನೆಗೊಳಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. 10 ವರ್ಷಗಳಿಂದ ಐಸಿಸಿ ಟ್ರೋಫಿ ಬರವನ್ನು ಎದುರಿಸುತ್ತಿರುವ ಭಾರತಕ್ಕೆ ಈ ವರ್ಷವೇ ಅದರ ಬರವನ್ನು ನೀಗಿಸುವ ಅವಕಾಶ ಸಿಕ್ಕಿದೆ.

ಈ ಬಾರಿಯ ಏಕದಿನ ವಿಶ್ವಕಪ್ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಭಾರತದಲ್ಲಿಯೇ ನಡೆಯಲಿದೆ. ಹೀಗಾಗಿ ತವರಿನ ಲಾಭ ಪಡೆಯಲ್ಲಿರುವ ಭಾರತಕ್ಕೆ ಐಸಿಸಿ ಟ್ರೋಫಿಯ ಬರವನ್ನು ನೀಗಿಸುವ ಅವಕಾಶವಿದೆ. ಆದರೆ ಅದಕ್ಕೂ ಮೊದಲು ಈ ಏಕದಿನ ಸರಣಿಗಾಗಿ ಪೂರ್ವ ತಯಾರಿ ನಡೆಸಿರುವ ಭಾರತ, ಈ 4 ತಿಂಗಳಲ್ಲಿ ಬರೋಬ್ಬರಿ 12 ಏಕದಿನ ಪಂದ್ಯಗಳನ್ನಾಡಲಿದೆ.

ಸದ್ಯಕ್ಕೆ ನಿಗದಿಯಾಗಿರುವಂತೆ ಭಾರತ ಮುಂದಿನ ತಿಂಗಳು ವೆಸ್ಟ್ ಇಂಡೀಸ್ ಪ್ರವಾಸ ಮಾಡಬೇಕಿದೆ. ಈ ಪ್ರವಾಸದಲ್ಲಿ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಬೇಕಿದೆ. ಇದರ ನಂತರ ಭಾರತವು ಆಗಸ್ಟ್ 31 ರಿಂದ ಸೆಪ್ಟೆಂಬರ್ 17 ರವರೆಗೆ ಏಷ್ಯಾಕಪ್ ಆಡಲು ಹೋಗಬೇಕಾಗಿದೆ. ಈ ಬಾರಿಯ ಏಷ್ಯಾಕಪ್ ಏಕದಿನ ಮಾದರಿಯಲ್ಲಿ ನಡೆಯಲಿದ್ದು, ಈ ಬಾರಿಯ ಏಷ್ಯಾಕಪ್ ನಲ್ಲಿ ಭಾರತ ಫೈನಲ್ ತಲುಪಿದರೆ ಇಲ್ಲಿ ಆರು ಪಂದ್ಯಗಳನ್ನು ಆಡಬೇಕಾಗುತ್ತದೆ.

ಗ್ರೂಪ್ ಹಂತದಲ್ಲಿ ಭಾರತ ಎರಡು ಪಂದ್ಯಗಳನ್ನು ಆಡಬೇಕಾಗುತ್ತದೆ. ಇದಾದ ನಂತರ ಭಾರತ ಸೂಪರ್-4 ಗೆ ಎಂಟ್ರಿಕೊಟ್ಟರೆ, ಅಲ್ಲಿ ಮೂರು ತಂಡಗಳೊಂದಿಗೆ ಮೂರು ಪಂದ್ಯಗಳನ್ನು ಆಡುತ್ತದೆ. ನಂತರ ಫೈನಲ್‌ಗೆ ಬಂದರೆ ಅಲ್ಲಿ ಒಂದು ಪಂದ್ಯವನ್ನಾಡಲಿದೆ. ಅಂದರೆ ಏಷ್ಯಾಕಪ್ನಲ್ಲಿ ಭಾರತ ಒಟ್ಟು ಆರು ಪಂದ್ಯಗಳನ್ನಾಡುವ ಅವಕಾಶ ಹೊಂದಿದೆ.

ಇದರ ನಂತರ ಟೀಂ ಇಂಡಿಯಾ ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಆತಿಥ್ಯ ವಹಿಸಬೇಕಾಗಿದೆ. ಈ ಪ್ರವಾಸದಲ್ಲಿ ಭಾರತ-ಆಸ್ಟ್ರೇಲಿಯಾ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಬೇಕಿದೆ. ಇದರ ನಂತರ ಭಾರತ ವಿಶ್ವಕಪ್ ಆಡಲು ಸಿದ್ಧವಾಗಬೇಕಿದೆ. ವೆಸ್ಟ್ ಇಂಡೀಸ್ ಪ್ರವಾಸದಿಂದ ಆಸ್ಟ್ರೇಲಿಯಾ ಸರಣಿಯವರೆಗೆ ಒಟ್ಟು 12 ಏಕದಿನ ಪಂದ್ಯಗಳನ್ನು ಆಡುವ ಅವಕಾಶ ಭಾರತಕ್ಕೆ ಸಿಗಲಿದೆ.

ಈ 12 ಪಂದ್ಯಗಳಲ್ಲಿ ಭಾರತ ತನ್ನ ಎಲ್ಲಾ ನ್ಯೂನತೆಗಳನ್ನು ನಿವಾರಿಸಿಕೊಳ್ಳಬೇಕು. ಇದರಲ್ಲೇ ಭಾರತ ಬಲಿಷ್ಠ ಆರಂಭಿಕ ಜೋಡಿಯಾಗಿರಲಿ ಅಥವಾ ಬಲಿಷ್ಠ ಮಧ್ಯಮ ಕ್ರಮಾಂಕವನ್ನು ಸಿದ್ಧಪಡಿಸಬೇಕು. ತಂಡದ ಮಧ್ಯಮ ಕ್ರಮಾಂಕವನ್ನು ಸಿದ್ಧಪಡಿಸುವುದು ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಮುಂದಿರುವ ಸವಾಲು.

ಶ್ರೇಯಸ್ ಅಯ್ಯರ್ ಈ ಮಧ್ಯಮ ಕ್ರಮಾಂಕವನ್ನು ಕೆಲಕಾಲ ಉತ್ತಮವಾಗಿ ನಿಭಾಯಿಸಿದ್ದಾರೆ. ಆದರೆ ಸದ್ಯಕ್ಕೆ ಅವರು ಗಾಯಗೊಂಡಿದ್ದಾರೆ. ಏಷ್ಯಾಕಪ್ ವೇಳೆಗೆ ಅವರು ಫಿಟ್ ಆಗುತ್ತಾರೆ ಎಂದು ನಿರೀಕ್ಷಿಸಲಾಗಿದ್ದರೂ ಇವರ ಹೊರತಾಗಿ ಮಧ್ಯಮ ಕ್ರಮಾಂಕವನ್ನು ಯಾರು ನಿಭಾಯಿಸುತ್ತಾರೆ ಎಂಬುದರ ಬಗ್ಗೆಯೂ ತಂಡ ಗಮನ ಹರಿಸಬೇಕಿದೆ.

ಏಕೆಂದರೆ ರಿಷಭ್ ಪಂತ್ ಕೂಡ ಗಾಯಗೊಂಡಿದ್ದು ಏಕದಿನ ವಿಶ್ವಕಪ್ನಲ್ಲಿ ಆಡುವುದು ಬಹುತೇಕ ಅನುಮಾನವಾಗಿದೆ . ಇಂತಹ ಪರಿಸ್ಥಿತಿಯಲ್ಲಿ ಭಾರತವೂ ಅವರಿಗೆ ಪರ್ಯಾಯವನ್ನು ಹುಡುಕಬೇಕಾಗಿದೆ. ಇಲ್ಲಿಯವರೆಗೆ ಭಾರತವು ಕೆಎಲ್ ರಾಹುಲ್ ಅವರನ್ನು ಏಕದಿನದಲ್ಲಿ ವಿಕೆಟ್ ಕೀಪರ್ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಆಡಿಸುತ್ತಿತ್ತು.

ಆದರೆ ರಾಹುಲ್ ಅವರ ಫಾರ್ಮ್ ಉತ್ತಮವಾಗಿಲ್ಲ. ಅಲ್ಲದೆ ಅವರು ಕೂಡ ಗಾಯಗೊಂಡಿದ್ದಾರೆ. ಏಷ್ಯಾಕಪ್ ವೇಳೆಗೆ ಅವರು ಫಿಟ್ ಆಗುವ ನಿರೀಕ್ಷೆಯಿದೆಯಾದರೂ, ತಂಡಕ್ಕೆ ಮರಳಿದ ನಂತರ, ರಾಹುಲ್ ಲಯದಲ್ಲಿ ಕಾಣಿಸಿಕೊಳ್ಳದಿದ್ದರೆ, ಭಾರತವು ಅವರ ಬದಲಿ ಆಟಗಾರನನ್ನು ಸಿದ್ಧಪಡಿಸಬೇಕಾಗುತ್ತದೆ. ರೋಹಿತ್ ಮತ್ತು ರಾಹುಲ್ ಈ 12 ಪಂದ್ಯಗಳಲ್ಲಿ ಸರಿಯಾದ ತಂಡ ಕಟ್ಟಲು ಸಾಕಷ್ಟು ಶ್ರಮಿಸಬೇಕಿದೆ.



















