ಏಕದಿನ ವಿಶ್ವಕಪ್ನಲ್ಲಿ (ICC World Cup 2023) ಸತತ ನಾಲ್ಕು ಪಂದ್ಯಗಳ ಗೆಲುವಿನೊಂದಿಗೆ ಬೀಗುತ್ತಿರುವ ಟೀಂ ಇಂಡಿಯಾ ಮತ್ತೊಂದು ಮಹತ್ವದ ಕದನಕ್ಕೆ ಸಜ್ಜಾಗಿದೆ. ರೋಹಿತ್ ಪಡೆ ಅಕ್ಟೋಬರ್ 20 ರಂದು ಧರ್ಮಶಾಲಾದಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ನ್ಯೂಜಿಲೆಂಡ್ (India vs New zealand) ತಂಡವನ್ನು ಎದುರಿಸಲಿದೆ. ವಿಶ್ವಕಪ್ ಇತಿಹಾಸದಲ್ಲಿ ಟೀಂ ಇಂಡಿಯಾ (Team India) ವಿರುದ್ಧ ನ್ಯೂಜಿಲೆಂಡ್ ಮೇಲುಗೈ ಸಾಧಿಸಿದೆ. ಹೀಗಾಗಿ ಕಿವೀಸ್ ಮಣಿಸಿ ಹೊಸ ಇತಿಹಾಸವನ್ನು ಬರೆಯುವ ಹೊಸ್ತಿಲಿನಲ್ಲಿರುವ ಟೀಂ ಇಂಡಿಯಾಕ್ಕೆ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಅಲಭ್ಯತೆ ಕೊಂಚ ಹಿನ್ನಡೆಯನ್ನುಂಟು ಮಾಡಿದೆ.
ಗುರುವಾರ ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ಪಾಂಡ್ಯ ಅವರಿಗೆ ಗಾಯವಾಗಿತ್ತು. ಅವರು ಚೇತರಿಸಿಕೊಳ್ಳಲು ಕನಿಷ್ಠ ಒಂದು ವಾರ ಬೇಕು ಎಂದು ವರದಿಯಾಗಿದೆ. ಹೀಗಾಗಿ ಹಾರ್ದಿಕ್ ಕಿವೀಸ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದು, ಇಂಗ್ಲೆಂಡ್ ವಿರುದ್ಧದ ಪಂದ್ಯದೊಂದಿಗೆ ತಂಡವನ್ನು ಸೇರಿಕೊಳ್ಳಲಿದ್ದಾರೆ. ಹೀಗಾಗಿ ಹಾರ್ದಿಕ್ ಅನುಪಸ್ಥಿತಿಯಲ್ಲಿ ತಂಡದಲ್ಲಿ ಯಾರಿಗೆ ಸಿಗಲಿದೆ ಅವಕಾಶ? ಕಿವೀಸ್ ವಿರುದ್ಧ ಟೀಂ ಇಂಡಿಯಾ ಯಾವ 11 ಆಟಗಾರರೊಂದಿಗೆ ಕಣಕ್ಕಿಳಿಯಲ್ಲಿದೆ ಎಂಬುದರ ವಿವರ ಇಲ್ಲಿದೆ.
ಕಿವೀಸ್ ವಿರುದ್ಧ ಈ ಅಸ್ತ್ರ ಬಳಸಿದರೆ ಭಾರತಕ್ಕೆ ಗೆಲುವು ಖಚಿತ! ಧರ್ಮಶಾಲಾದ ಪಿಚ್ ಯಾರಿಗೆ ಹೆಚ್ಚು ಸಹಕಾರಿ ಗೊತ್ತಾ?
ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಹಾರ್ದಿಕ್ ಜಾಗದಲ್ಲಿ ಸೂರ್ಯಕುಮಾರ್ ಯಾದವ್ ಬರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಧರ್ಮಶಾಲಾ ಪಿಚ್ ಬ್ಯಾಟಿಂಗ್‌ಗೆ ಸೂಕ್ತವಾಗಿರುವುದರಿಂದ ಸೂರ್ಯ ಅವರನ್ನು ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಡಿಸಲು ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಚಿಂತನೆ ನಡೆಸುತ್ತಿದೆ ಎಂದು ಹಲವು ವರದಿಗಳು ಹೇಳುತ್ತವೆ.
ಕೆಲ ದಿನಗಳಿಂದ ಏಕದಿನದಲ್ಲಿ ಫಾರ್ಮ್ ಕಳೆದುಕೊಂಡಿದ್ದ ಸೂರ್ಯ, ಈ ಮೆಗಾ ಟೂರ್ನಿಗೂ ಮುನ್ನ ಆಸೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಲಯವನ್ನು ಮರಳಿ ಪಡೆದಿದ್ದರು. ಸೂರ್ಯ ಅವರಲ್ಲದೆ ಬೌಲಿಂಗ್ ವಿಭಾಗದಲ್ಲೂ ಬದಲಾವಣೆಯಾಗುವ ಸಾಧ್ಯತೆ ಇದ್ದು, ಆಲ್ ರೌಂಡರ್ ಶಾರ್ದೂಲ್ ಠಾಕೂರ್ ಬದಲಿಗೆ ವೇಗಿ ಮೊಹಮ್ಮದ್ ಶಮಿ ಅಂತಿಮ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.
ಕಿವೀಸ್ ವಿರುದ್ಧ ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ,ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ