ಏಕದಿನ ವಿಶ್ವಕಪ್​ಗೆ 10 ತಂಡಗಳು ಫೈನಲ್​: 4 ಸ್ಥಾನಕ್ಕಾಗಿ ಮುಂದಿನ ಪೈಪೋಟಿ!

ODI World Cup 2027: ಐರ್ಲೆಂಡ್ ವಿರುದ್ಧದ 2ನೇ ಮತ್ತು 3ನೇ ಏಕದಿನ ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿರುವ ಅಫ್ಘಾನಿಸ್ತಾನ್ ತಂಡ, 2027ರ ಏಕದಿನ ವಿಶ್ವಕಪ್‌ ಟೂರ್ನಿಗೆ ನೇರವಾಗಿ ಅರ್ಹತೆ ಗಿಟ್ಟಿಸಿಕೊಂಡಿದೆ. ಈ ಐತಿಹಾಸಿಕ ಗೆಲುವಿನೊಂದಿಗೆ ಮುಂಬರುವ ಜಂಟಿ ಆತಿಥ್ಯದ ಮಹಾ ಸಮರದಲ್ಲಿ ಕಣಕ್ಕಿಳಿಯಲಿರುವ ಒಟ್ಟು 10 ತಂಡಗಳು ಅಧಿಕೃತವಾಗಿ ಫೈನಲ್ ಆಗಿವೆ.

ಏಕದಿನ ವಿಶ್ವಕಪ್​ಗೆ 10 ತಂಡಗಳು ಫೈನಲ್​: 4 ಸ್ಥಾನಕ್ಕಾಗಿ ಮುಂದಿನ ಪೈಪೋಟಿ!
Odi World Cup 2027

Updated on: Aug 11, 2026 | 8:07 AM

ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆಯೋಜಿಸಲಿರುವ 2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್‌ಗೆ ಈಗಾಗಲೇ 10 ತಂಡಗಳು ಅಧಿಕೃತವಾಗಿ ಫೈನಲ್ ಆಗಿವೆ. ಈ ಹತ್ತು ತಂಡಗಳು ಐಸಿಸಿ ನಿಯಮಾವಳಿಗಳ ಅನ್ವಯ ನೇರ ಅರ್ಹತೆಯ ಮೂಲಕ ಟೂರ್ನಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ. ಆತಿಥೇಯ ರಾಷ್ಟ್ರಗಳ ಪೈಕಿ ಐಸಿಸಿ ಪೂರ್ಣ ಸದಸ್ಯತ್ವ ಹೊಂದಿರುವ ಸೌತ್ ಆಫ್ರಿಕಾ ಮತ್ತು ಝಿಂಬಾಬ್ವೆ ತಂಡಗಳು ಆಟೋಮ್ಯಾಟಿಕ್ ಆಗಿ ಅರ್ಹತೆ ಪಡೆದರೆ, ಉಳಿದ 8 ತಂಡಗಳು ಐಸಿಸಿ ಏಕದಿನ ಶ್ರೇಯಾಂಕದ (Rankings) ಆಧಾರದ ಮೇಲೆ ಆಯ್ಕೆಯಾಗಿವೆ.

10+4= 14 ತಂಡಗಳು:

ಮುಂಬರುವ 2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಒಟ್ಟು 14 ತಂಡಗಳು ಭಾಗವಹಿಸಲಿವೆ. ಐಸಿಸಿ ನಿಯಮಾವಳಿಗಳ ಪ್ರಕಾರ ಈಗಾಗಲೇ 10 ತಂಡಗಳು ವಿಶ್ವಕಪ್‌ಗೆ ನೇರ ಅರ್ಹತೆ ಪಡೆದುಕೊಂಡಿವೆ. ಹೀಗಾಗಿ ಟೂರ್ನಿಯಲ್ಲಿ ಖಾಲಿ ಇರುವ ಇನ್ನುಳಿದ 4 ಸ್ಥಾನಗಳಿಗಾಗಿ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ.

ಅರ್ಹತಾ ಸುತ್ತಿನಲ್ಲಿ ವೆಸ್ಟ್ ಇಂಡೀಸ್!

ಉಳಿದಿರುವ 4 ಸ್ಥಾನಗಳಿಗಾಗಿ 2027ರ ಫೆಬ್ರವರಿ 22 ರಿಂದ ಮಾರ್ಚ್ 23 ರವರೆಗೆ ‘ಕ್ರಿಕೆಟ್ ವಿಶ್ವಕಪ್ ಕ್ವಾಲಿಫೈಯರ್’ ಟೂರ್ನಿ ನಡೆಯಲಿದೆ. ಶ್ರೇಯಾಂಕದಲ್ಲಿ ಹಿಂದೆ ಬಿದ್ದಿರುವ ಮಾಜಿ ಚಾಂಪಿಯನ್ ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್‌ನಂತಹ ಬಲಿಷ್ಠ ಪೂರ್ಣ ಪ್ರಮಾಣದ ಸದಸ್ಯ ರಾಷ್ಟ್ರಗಳು ಈ ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಬೇಕಾದ ಅನಿವಾರ್ಯತೆಗೆ ಸಿಲುಕಿವೆ. ಇವುಗಳೊಂದಿಗೆ ‘CWC ಲೀಗ್ 2’ ಮೂಲಕ ಈಗಾಗಲೇ ಅರ್ಹತೆ ಪಡೆದಿರುವ ಸ್ಕಾಟ್‌ಲ್ಯಾಂಡ್, ನೆದರ್ಲ್ಯಾಂಡ್ಸ್ ಮತ್ತು ಯುಎಸ್ಎ ತಂಡಗಳು ಕಠಿಣ ಪೈಪೋಟಿ ನೀಡಲಿವೆ.

ನೇರ ಅರ್ಹತೆ ಪಡೆದ 10 ತಂಡಗಳು:

  1. ಭಾರತ
  2. ಆಸ್ಟ್ರೇಲಿಯಾ
  3. ನ್ಯೂಝಿಲೆಂಡ್
  4. ಪಾಕಿಸ್ತಾನ್
  5. ಇಂಗ್ಲೆಂಡ್
  6. ಶ್ರೀಲಂಕಾ
  7. ಬಾಂಗ್ಲಾದೇಶ್
  8. ಅಫ್ಘಾನಿಸ್ತಾನ್
  9. ಸೌತ್ ಆಫ್ರಿಕಾ
  10. ಝಿಂಬಾಬ್ವೆ.

ಏಕದಿನ ವಿಶ್ವಕಪ್ ಯಾವಾಗ?

ಮುಂಬರುವ 2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯು 2027ರ ಅಕ್ಟೋಬರ್ 4 ರಿಂದ ನವೆಂಬರ್ 21 ರವರೆಗೆ ನಡೆಯಲಿದೆ. ಐಸಿಸಿ  ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಈ ಟೂರ್ನಿಯ ಪ್ರಮುಖ ವಿವರಗಳು ಕೆಳಗಿನಂತಿವೆ:

  • ಆತಿಥೇಯ ರಾಷ್ಟ್ರಗಳು: ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾ.
  • ಪಂದ್ಯಗಳ ಸಂಖ್ಯೆ: 14 ತಂಡಗಳ ನಡುವೆ ಒಟ್ಟು 54 ಪಂದ್ಯಗಳು ಜರುಗಲಿವೆ.
  • ಕ್ರೀಡಾಂಗಣ: ಸೌತ್ ಆಫ್ರಿಕಾದ 8 ಕ್ರೀಡಾಂಗಣಗಳು ಸೇರಿದಂತೆ ಒಟ್ಟು 12 ನಗರಗಳಲ್ಲಿ ಪಂದ್ಯಗಳನ್ನು ನಡೆಸಲು ಐಸಿಸಿ ಮೈದಾನಗಳನ್ನು ಖಚಿತಪಡಿಸಿದೆ.

ಇದನ್ನೂ ಓದಿ: 11+3 ತಂಡಗಳು, ಸೂಪರ್-7: ಏಕದಿನ ವಿಶ್ವಕಪ್ ಸ್ವರೂಪ ಬದಲು

ಒಟ್ಟಾರೆಯಾಗಿ ಹೇಳುವುದಾದರೆ, 2027ರ ಏಕದಿನ ವಿಶ್ವಕಪ್ ಹೊಸ ಸ್ವರೂಪ, ಹೆಚ್ಚಿನ ತಂಡಗಳು ಮತ್ತು ಆಫ್ರಿಕಾ ಖಂಡದ ಆತಿಥ್ಯದೊಂದಿಗೆ ಕ್ರಿಕೆಟ್ ಇತಿಹಾಸದಲ್ಲೇ ಒಂದು ಮೈಲಿಗಲ್ಲಾಗಲು ಸಜ್ಜಾಗಿದೆ. ಈ ಮಹಾ ಸಮರಕ್ಕಾಗಿ ಈಗಾಗಲೇ 10 ಪ್ರಮುಖ ತಂಡಗಳು ನೇರ ಅರ್ಹತೆ ಪಡೆದು ಸಿದ್ಧವಾಗಿದ್ದು, ಅರ್ಹತಾ ಸುತ್ತಿನ ಮೂಲಕ ಲಗ್ಗೆಯಿಡಲಿರುವ ಇನ್ನುಳಿದ ನಾಲ್ಕು ತಂಡಗಳು ಯಾವುವು ಎಂಬುದನ್ನು ಕಾದು ನೋಡಬೇಕಿದೆ.

 

Loading...
Unable to load recommendations.
Follow Us