On This Day: ಚೊಚ್ಚಲ ವಿಶ್ವ ಚಾಂಪಿಯನ್ ಪಟ್ಟಕ್ಕೆ 39 ವರ್ಷ: ಅಮೋಘ ಗೆಲುವಿನ ಬಗ್ಗೆ ಸಚಿನ್ ಹೇಳಿದ್ದೇನು?

| Updated By: ಝಾಹಿರ್ ಯೂಸುಫ್

Updated on: Jun 25, 2022 | 12:04 PM

1983 World Cup: ಕ್ರಿಕೆಟ್ ಕಾಶಿ ಲಾರ್ಡ್ಸ್​​ ಮೈದಾನದಲ್ಲಿ ನಡೆದಿದ್ದ ಈ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಬೌಲಿಂಗ್ ಆಯ್ದುಕೊಂಡಿತ್ತು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಆರಂಭಿಕ ಆಟಗಾರ ಕ್ರಿಸ್ ಶ್ರೀಕಾಂತ್ ಅವರ 38 ರನ್​ಗಳ ನೆರವಿನಿಂದ 54.4 ಓವರ್​ಗಳಲ್ಲಿ 183 ರನ್​ ಮಾತ್ರ ಕಲೆಹಾಕಿತ್ತು.

On This Day: ಚೊಚ್ಚಲ ವಿಶ್ವ ಚಾಂಪಿಯನ್ ಪಟ್ಟಕ್ಕೆ 39 ವರ್ಷ: ಅಮೋಘ ಗೆಲುವಿನ ಬಗ್ಗೆ ಸಚಿನ್ ಹೇಳಿದ್ದೇನು?
World Cup 1983
Follow us on

ಜೂನ್ 25 ಭಾರತೀಯ ಕ್ರಿಕೆಟ್‌ನ ಸುವರ್ಣ ದಿನ. ಏಕೆಂದರೆ 1983 ರಲ್ಲಿ ಇದೇ ದಿನದಂದು ಭಾರತ ತಂಡವು ಮೊದಲ ಬಾರಿಗೆ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದಿತ್ತು. ಕಪಿಲ್ ದೇವ್ ನಾಯಕತ್ವದ ಟೀಮ್ ಇಂಡಿಯಾದ ಈ ಗೆಲುವು ನಿರೀಕ್ಷೆಗೂ ಮೀರಿದ್ದಾಗಿತ್ತು. ಹೀಗಾಗಿಯೇ ಕ್ರಿಕೆಟ್ ಪ್ರೇಮಿಗಳಷ್ಟೇ ಅಲ್ಲ, ಇಡೀ ಭಾರತವೇ ವಿಶ್ವ ಚಾಂಪಿಯನ್ ಪಟ್ಟವನ್ನು ಸಂಭ್ರಮಿಸಿತು. ಈ ವಿಶ್ವಕಪ್ ಗೆಲುವನ್ನು ನೆನಪಿಸಿಕೊಂಡು ಸಚಿನ್ ತೆಂಡೂಲ್ಕರ್ ಅವರು ಇಂದು (ಜೂನ್ 25, ಶನಿವಾರ) ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್​​ನಲ್ಲಿ ಸಚಿನ್ 2 ಫೋಟೋಗಳನ್ನು ಹಂಚಿಕೊಂಡಿದ್ದು, ಮೊದಲ ಚಿತ್ರದಲ್ಲಿ ಕಪಿಲ್ ದೇವ್ ಮತ್ತು ಅವರ ಸಹ ಆಟಗಾರರು ವಿಶ್ವಕಪ್ ಟ್ರೋಫಿಯನ್ನು ಎತ್ತ ಹಿಡಿದಿದ್ದಾರೆ. ಎರಡನೇ ಚಿತ್ರದಲ್ಲಿ ಸಚಿನ್ ತೆಂಡೂಲ್ಕರ್ ಸಹೋದರನ ಭುಜದ ಮೇಲೆ ಕುಳಿತು ವಿಜಯೋತ್ಸವ ಆಚರಿಸುತ್ತಿದ್ದಾರೆ. ಅಂದರೆ ಕ್ರಿಕೆಟ್ ದೇವರು ಸೇರಿದಂತೆ ಬಹುತೇಕ ಭಾರತೀಯ ಆಟಗಾರರಿಗೆ ಕ್ರಿಕೆಟ್​ ಮೇಲೆ ಒಲವು ಮೂಡಲು 1983 ರ ವಿಶ್ವಕಪ್ ಗೆಲುವೇ ಸ್ಪೂರ್ತಿ.

ಜೂನ್ 25, 1983 ರಂದು ಭಾರತ ತಂಡವು ಎರಡು ಬಾರಿ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ಅನ್ನು ಸೋಲಿಸುವ ಮೂಲಕ ವಿಶ್ವ ಚಾಂಪಿಯನ್ ಪಟ್ಟಕ್ಕೇರಿತ್ತು. ಈ ಗೆಲುವು ಎರಡು ಕಾರಣಗಳಿಗಾಗಿ ಭಾರತದ ಪಾಲಿಗೆ ಬಹಳ ಮಹತ್ವದ್ದು. ಮೊದಲನೆಯದಾಗಿ, ಕ್ರಿಕೆಟ್‌ನಲ್ಲಿ ಭಾರತ ತಂಡವು ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಆಗಿತ್ತು. ಎರಡನೆಯದಾಗಿ ಇಡೀ ವಿಶ್ವವೇ ಚಾಂಪಿಯನ್ ಆಗಿ ನೋಡುತ್ತಿದ್ದ ವೆಸ್ಟ್ ಇಂಡೀಸ್ ತಂಡವನ್ನು ಭಾರತ ಫೈನಲ್ ನಲ್ಲಿ ಸೋಲಿಸಿತ್ತು. ಇದೇ ಕಾರಣದಿಂದಾಗಿ 1990 ಮತ್ತು 2000 ರ ದಶಕದಲ್ಲಿ ಆಡಿದ ಹೆಚ್ಚಿನ ಆಟಗಾರರು  ಭಾರತದ ವಿಶ್ವಕಪ್​ ಗೆಲುವು ಅವರ ಕ್ರಿಕೆಟ್ ಬದುಕಿಗೆ ಸ್ಫೂರ್ತಿ ಎಂದು ನಂಬುತ್ತಾರೆ.

ಇದನ್ನೂ ಓದಿ
Irfan Pathan: ಟಿ20 ವಿಶ್ವಕಪ್​ಗೆ ಇರ್ಫಾನ್ ಪಠಾಣ್​ರ ಟೀಮ್ ಇಂಡಿಯಾ ಪ್ಲೇಯಿಂಗ್ 11
Team India: 8 ತಿಂಗಳಲ್ಲಿ 6 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ
ಪೆಟ್ರೋಲ್ ಪಂಪ್​ನಲ್ಲಿ ಚಹಾ ನೀಡುತ್ತಿರುವ ಶ್ರೀಲಂಕಾ ಕ್ರಿಕೆಟಿಗ
Rishabh Pant: ನಾಯಕನಾಗಿ ಅತ್ಯಂತ ಕೆಟ್ಟ ದಾಖಲೆ ಬರೆದ ರಿಷಭ್ ಪಂತ್

‘ಜೀವನದ ಕೆಲವು ಕ್ಷಣಗಳು ನಿಮಗೆ ಸ್ಫೂರ್ತಿ ನೀಡುತ್ತದೆ ಮತ್ತು ಕನಸು ಕಾಣಲು ನಿಮಗೆ ಧೈರ್ಯವನ್ನು ನೀಡುತ್ತದೆ. 1983 ರ ಈ ದಿನ ನಾವು ಮೊದಲ ಬಾರಿಗೆ ವಿಶ್ವಕಪ್ ಗೆದ್ದಿದ್ದೇವೆ. ಭವಿಷ್ಯದಲ್ಲಿ ನಾನು ಏನು ಮಾಡಬೇಕೆಂದು ನನಗೆ ಆಗ ತಿಳಿದಿತ್ತು!’ ಎಂದು ಸಚಿನ್ ತೆಂಡೂಲ್ಕರ್ ಭಾರತದ ಮೊದಲ ವಿಶ್ವಕಪ್ ಗೆಲುವನ್ನು ಸ್ಮರಿಸಿದ್ದಾರೆ. ಅಂದರೆ ಚೊಚ್ಚಲ ವಿಶ್ವಕಪ್​ ಗೆಲುವು ಸಚಿನ್ ತೆಂಡೂಲ್ಕರ್ ಅವರಂತಹ ಆಟಗಾರರ ಹುಟ್ಟಿಗೆ ಪರೋಕ್ಷ ಕಾರಣವಾಗಿತ್ತು.

ಕ್ರಿಕೆಟ್ ಕಾಶಿ ಲಾರ್ಡ್ಸ್​​ ಮೈದಾನದಲ್ಲಿ ನಡೆದಿದ್ದ ಈ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಬೌಲಿಂಗ್ ಆಯ್ದುಕೊಂಡಿತ್ತು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಆರಂಭಿಕ ಆಟಗಾರ ಕ್ರಿಸ್ ಶ್ರೀಕಾಂತ್ ಅವರ 38 ರನ್​ಗಳ ನೆರವಿನಿಂದ 54.4 ಓವರ್​ಗಳಲ್ಲಿ 183 ರನ್​ ಮಾತ್ರ ಕಲೆಹಾಕಿತ್ತು. ಅತ್ತ ಬಲಿಷ್ಠ ಬ್ಯಾಟಿಂಗ್ ಪಡೆಯನ್ನೇ ಹೊಂದಿದ್ದ ವಿಂಡೀಸ್ ಈ ಪಂದ್ಯದಲ್ಲಿ ಸುಲಭ ಜಯ ಸಾಧಿಸಲಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು.

ಆದರೆ ಮದನ್ ಲಾಲ್ ಹಾಗೂ ಮೊಹಿಂದರ್ ಅಮರನಾಥ್ ಅವರ ಕರಾರುವಾಕ್ ದಾಳಿ ಮುಂದೆ ವೆಸ್ಟ್ ಇಂಡೀಸ್​ ಬ್ಯಾಟ್ಸ್​ಮನ್​ಗಳು ಪೆವಿಲಿಯನ್​ ಪರೇಡ್ ನಡೆಸಿದರು. ಪರಿಣಾಮ ವೆಸ್ಟ್ ಇಂಡೀಸ್ ತಂಡವು ಕೇವಲ 140 ರನ್​ಗಳಿಗೆ ಆಲೌಟ್ ಆಯಿತು. ಇತ್ತ 43 ರನ್​ಗಳ ಅಮೋಘ ಜಯ ಸಾಧಿಸುವ ಮೂಲಕ ಟೀಮ್ ಇಂಡಿಯಾ ಚೊಚ್ಚಲ ಬಾರಿಗೆ ವಿಶ್ವಕಪ್ ಕಿರೀಟವನ್ನು ತನ್ನದಾಗಿಸಿಕೊಂಡಿತು.

1983ರ ವಿಶ್ವ ಚಾಂಪಿಯನ್​ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ಸುನಿಲ್ ಗವಾಸ್ಕರ್ , ಕ್ರಿಸ್ ಶ್ರೀಕಾಂತ್ , ಮೊಹಿಂದರ್ ಅಮರನಾಥ್ , ಯಶಪಾಲ್ ಶರ್ಮಾ , ಸಂದೀಪ್ ಪಾಟೀಲ್ , ಕಪಿಲ್ ದೇವ್ (ನಾಯಕ) , ಕೀರ್ತಿ ಆಜಾದ್ , ರೋಜರ್ ಬಿನ್ನಿ , ಮದನ್ ಲಾಲ್ , ಸೈಯದ್ ಕಿರ್ಮಾನಿ ( ವಿಕೆಟ್ ಕೀಪರ್) , ಬಲ್ವಿಂದರ್ ಸಂಧು.

Published On - 12:04 pm, Sat, 25 June 22