1 ರನ್​ಗೆ 8 ವಿಕೆಟ್ ಪತನ; 6 ಆಸೀಸ್ ಬ್ಯಾಟರ್ಸ್​ ಶೂನ್ಯಕ್ಕೆ ಔಟ್..!

|

Updated on: Oct 25, 2024 | 1:52 PM

ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಏಕದಿನ ಕಪ್ ಪಂದ್ಯಾವಳಿಯಲ್ಲಿ, ಟ್ಯಾಸ್ಮೆನಿಯಾ ತಂಡವು ಪಶ್ಚಿಮ ಆಸ್ಟ್ರೇಲಿಯಾವನ್ನು 7 ವಿಕೆಟ್‌ಗಳಿಂದ ಸೋಲಿಸಿದೆ. ಪಶ್ಚಿಮ ಆಸ್ಟ್ರೇಲಿಯಾ ತಂಡ ಕೇವಲ 53 ರನ್ ಗಳಿಸಿತ್ತು, ಬ್ಯೂ ವೆಬ್‌ಸ್ಟರ್ ಅವರ 6 ವಿಕೆಟ್‌ಗಳ ಅದ್ಭುತ ಬೌಲಿಂಗ್‌ನಿಂದಾಗಿ ಟ್ಯಾಸ್ಮೆನಿಯಾ ತಂಡ ಸುಲಭವಾಗಿ ಗುರಿ ಮುಟ್ಟಿತು.

1 ರನ್​ಗೆ 8 ವಿಕೆಟ್ ಪತನ; 6 ಆಸೀಸ್ ಬ್ಯಾಟರ್ಸ್​ ಶೂನ್ಯಕ್ಕೆ ಔಟ್..!
ಪಶ್ಚಿಮ ಆಸ್ಟ್ರೇಲಿಯಾ ಮತ್ತು ಟ್ಯಾಸ್ಮೆನಿಯಾ ತಂಡ
Follow us on

ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಏಕದಿನ ಕಪ್ ಪಂದ್ಯಾವಳಿ ನಡೆಯುತ್ತಿದೆ. ದೇಶೀ ತಂಡಗಳ ನಡುವೆ ನಡೆಯುತ್ತಿರುವ ಈ ಪಂದ್ಯಾವಳಿಯ 10ನೇ ಪಂದ್ಯದಲ್ಲಿ ಪಶ್ಚಿಮ ಆಸ್ಟ್ರೇಲಿಯಾ ಮತ್ತು ಟ್ಯಾಸ್ಮೆನಿಯಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಪಶ್ಚಿಮ ಆಸ್ಟ್ರೇಲಿಯಾ ತಂಡವನ್ನು ಟ್ಯಾಸ್ಮೆನಿಯಾ ತಂಡ 7 ವಿಕೆಟ್​ಗಳಿಂದ ಮಣಿಸುವಲ್ಲಿ ಯಶಸ್ವಿಯಾಗಿದೆ. ಪಂದ್ಯದಲ್ಲಿ ಟ್ಯಾಸ್ಮೆನಿಯಾ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್‌ ಮಾಡಿದ ಪಶ್ಚಿಮ ಆಸ್ಟ್ರೇಲಿಯಾ ತಂಡ 20.1 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 53 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಟ್ಯಾಸ್ಮೆನಿಯಾ ತಂಡ ಕೇವಲ 3 ವಿಕೆಟ್ ಕಳೆದುಕೊಂಡು 8.3 ಓವರ್​ಗಳಲ್ಲಿ ಗೆಲುವಿನ ದಡ ಮುಟ್ಟಿತು.

52 ರನ್​ಗೆ 2 ವಿಕೆಟ್ ಪತನ

ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಶ್ಚಿಮ ಆಸ್ಟ್ರೇಲಿಯಾ ತಂಡಕ್ಕೆ ಆರನ್ ಹಾರ್ಡಿ (7) ಮತ್ತು ಡಾರ್ಸಿ ಶಾರ್ಟ್ (22) ಮೊದಲ ವಿಕೆಟ್‌ಗೆ 11 ರನ್‌ಗಳ ಜೊತೆಯಾಟ ನೀಡಿದರು. ಇದಾದ ಬಳಿಕ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಮತ್ತು ಶಾರ್ಟ್ ಎರಡನೇ ವಿಕೆಟ್‌ಗೆ 33 ರನ್‌ಗಳ ಜೊತೆಯಾಟವಾಡಿದರು. 14 ರನ್​ಗಳ ಇನಿಂಗ್ಸ್ ಆಡಿದ ಕ್ಯಾಮರೂನ್, ಶಾರ್ಟ್ ಹೊರತುಪಡಿಸಿ, ಎರಡಂಕಿ ದಾಟಿದ ತಂಡದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು.

53 ರನ್​ಗೆ ಆಲೌಟ್

ಆದರೆ ತಂಡದ ಮೊತ್ತ 52 ರನ್ ಆಗುವಷ್ಟರಲ್ಲಿ ಕ್ಯಾಮರೂನ್ ಬ್ಯಾಂಕ್ರಾಫ್ಟ್ ರೂಪದಲ್ಲಿ ತಂಡದ ಮೂರನೇ ವಿಕೆಟ್ ಪತನವಾಯಿತು. ಇದಾದ ನಂತರ ತಂಡದ ಪೆವಿಲಿಯನ್ ಪರೇಡ್ ಆರಂಭವಾಯಿತು. ಅದು ಹೇಗಿತ್ತೆಂದರೆ ಬ್ಯಾಂಕ್ರಾಫ್ಟ್ ಬಳಿಕ ಬಂದ ತಂಡದ ಯಾವ ಬ್ಯಾಟ್ಸ್​ಮನ್​ಗೂ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಜೋಶ್ ಇಂಗ್ಲಿಷ್ ಒಂದು ರನ್ ಗಳಿಸಿದನ್ನು ಬಿಟ್ಟರೆ, ನಾಯಕ ಆಷ್ಟನ್ ಟರ್ನರ್, ಕೂಪರ್ ಕೊನೊಲಿ, ಹಿಲ್ಟನ್ ಕಾರ್ಟ್ ರೈಟ್, ಆಶ್ಟನ್ ಅಗರ್, ಜೆ. ರಿಚರ್ಡ್‌ಸನ್, ಜೋಯಲ್ ಪ್ಯಾರಿಸ್ ಮತ್ತು ಲ್ಯಾನ್ಸ್ ಮೋರಿಸ್​ಗೆ (ಔಟಾಗದೆ) ಖಾತೆ ತೆರೆಯಲು ಸಾಧ್ಯವಾಗಲಿಲ್ಲ.

ವೆಬ್‌ಸ್ಟರ್ ಮಾರಕ ದಾಳಿ

ಟ್ಯಾಸ್ಮೆನಿಯಾ ಪರ ಬೌಲಿಂಗ್‌ನಲ್ಲಿ ಮಿಂಚಿದ ಬ್ಯೂ ವೆಬ್‌ಸ್ಟರ್ 17 ರನ್ ನೀಡಿ 6 ವಿಕೆಟ್ ಪಡೆದರೆ, ಬಿಲ್ಲಿ ಸ್ಟಾನ್‌ಲೇಕ್ 3 ವಿಕೆಟ್ ಪಡೆದರು. ಉಳಿದ ಒಂದು ವಿಕೆಟ್ ಟಾಮ್ ರಾಡ್ಜರ್ಸ್ ಪಾಲಾಯಿತು. ಆದರೆ ಒಂದು ರನ್ ಅಂತರದಲ್ಲಿ 8 ವಿಕೆಟ್‌ಗಳು ಉರುಳಿದರೂ ಸಹ ಟ್ಯಾಸ್ಮೆನಿಯಾ ತಂಡದ ಯಾವ ಬೌಲರ್‌ಗೂ ಹ್ಯಾಟ್ರಿಕ್‌ ಪೂರೈಸಲು ಸಾಧ್ಯವಾಗಲಿಲ್ಲ ಎಂಬುದು ಕುತೂಹಲಕಾರಿ ಸಂಗತಿಯಾಗಿದೆ.

ಟ್ಯಾಸ್ಮೆನಿಯಾಗೆ ಸುಲಭ ಜಯ

ಇನ್ನು 53 ರನ್​ಗಳ ಗುರಿ ಬೆನ್ನಟ್ಟಿದ ಟ್ಯಾಸ್ಮೆನಿಯಾ ತಂಡ ಸುಲಭವಾಗಿ ಪಂದ್ಯವನ್ನು ಗೆದ್ದುಕೊಂಡಿತು. ತಂಡದ ಪರವಾಗಿ ಮಿಚೆಲ್ ಓವನ್ 29 ರನ್​ಗಳ ಗೆಲುವಿನ ಇನ್ನಿಂಗ್ಸ್ ಆಡಿದರೆ, ಮ್ಯಾಥ್ಯೂ ವೇಡ್ ಔಟಾಗದೆ 21 ರನ್ ಗಳಿಸಿದರು. ಟಾಸ್ಮೇನಿಯಾ ಕೂಡ 3 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ