One World One Family Cup: ಯುವರಾಜ್ ತಂಡಕ್ಕೆ 4 ವಿಕೆಟ್​ಗಳ ಸೋಲುಣಿಸಿದ ಸಚಿನ್ ಪಡೆ

|

Updated on: Jan 18, 2024 | 5:56 PM

One World One Family Cup: ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿ ಗ್ರಾಮದ ಸತ್ಯಸಾಯಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಕಪ್ ಏಕೈಕ ಸೌಹಾರ್ದ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ನೇತೃತ್ವದ ಒನ್ ವರ್ಲ್ಡ್ ತಂಡವು ಯುವರಾಜ್ ಸಿಂಗ್ ನಾಯಕತ್ವದ ಒನ್ ಫ್ಯಾಮಿಲಿ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿತು.

One World One Family Cup: ಯುವರಾಜ್ ತಂಡಕ್ಕೆ 4 ವಿಕೆಟ್​ಗಳ ಸೋಲುಣಿಸಿದ ಸಚಿನ್ ಪಡೆ
ಒನ್ ವರ್ಲ್ಡ್ ಒನ್ ಫ್ಯಾಮಿಲಿ ಕಪ್
Follow us on

ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿ ಗ್ರಾಮದ ಸತ್ಯಸಾಯಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಕಪ್ (One World One Family Cup) ಏಕೈಕ ಸೌಹಾರ್ದ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ (Sachin Tendulkar) ನೇತೃತ್ವದ ಒನ್ ವರ್ಲ್ಡ್ ತಂಡವು ಯುವರಾಜ್ ಸಿಂಗ್ (Yuvraj Singh) ನಾಯಕತ್ವದ ಒನ್ ಫ್ಯಾಮಿಲಿ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿತು. ಈ ಚಾರಿಟಿ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುವರಾಜ್ ತಂಡ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 180 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಸಚಿನ್ ಬಳಗ 19.5 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 184 ರನ್‌ ಕಲೆಹಾಕುವ ಮೂಲಕ ಗೆಲುವಿನ ದಡ ಸೇರಿತು.

ಡ್ಯಾರೆನ್ ಮ್ಯಾಡಿ ಅರ್ಧಶತಕ

ಪಂದ್ಯದಲ್ಲಿ ಟಾಸ್ ಗೆದ್ದ ಒನ್ ವರ್ಲ್ಡ್ ತಂಡದ ನಾಯಕ ಸಚಿನ್ ತೆಂಡೂಲ್ಕರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಒನ್ ಫ್ಯಾಮಿಲಿ ಪರ ಡ್ಯಾರೆನ್ ಮ್ಯಾಡಿ ಮತ್ತು ರೋಮೇಶ್ ಆರಂಭಿಕರಾಗಿ ಕಣಕ್ಕಿಳಿದು ಸ್ಫೋಟಕ ಬ್ಯಾಟಿಂಗ್ ಮಾಡಿದರು. ಈ ಇಬ್ಬರು ಮೊದಲ ಐದು ಓವರ್‌ಗಳಲ್ಲಿ 39 ರನ್‌ಗಳ ಜೊತೆಯಾಟವನ್ನಾಡಿದರು. ಆದರೆ ಮಾಂಟಿ ಪನೇಸರ್ ಬೌಲಿಂಗ್​ನಲ್ಲಿ 15 ಎಸೆತಗಳಲ್ಲಿ 22 ರನ್‌ಗಳ ಇನಿಂಗ್ಸ್‌ ಆಡಿದ್ದ ರೋಮೇಶ್ ವಿಕೆಟ್ ಪತನದೊಂದಿಗೆ ಈ ಜೊತೆಯಾಟ ಮುರಿದು ಬಿತ್ತು.

ಹೀಗಾಗಿ ಒನ್ ವರ್ಲ್ಡ್ ತಂಡ ಪವರ್‌ಪ್ಲೇನಲ್ಲಿ ಒಂದು ವಿಕೆಟ್ ನಷ್ಟಕ್ಕೆ 50 ರನ್ ಗಳಿಸಿತು. ಆ ಬಳಿಕ ಮತ್ತಷ್ಟು ಸ್ಫೋಟಕ ಬ್ಯಾಟಿಂಗ್ ನಡೆಸಿದ ಮ್ಯಾಡಿ, ಅಜಂತಾ ಮೆಂಡಿಸ್ ಓವರ್​ನಲ್ಲಿ ಸತತ ಎರಡು ಬೌಂಡರಿಗಳನ್ನು ಬಾರಿಸಿದರೆ ಅದೇ ಓವರ್‌ನಲ್ಲಿ ಕೈಫ್ ಕೂಡ ಸಿಕ್ಸರ್ ಸಿಡಿಸಿದರು. ಈ ಓವರ್​ನಲ್ಲಿ ಮೆಂಡಿಸ್ ಒಟ್ಟು 20 ರನ್ ಬಿಟ್ಟುಕೊಟ್ಟರು. ಈ ವೇಳೆ ಕೈಫ್ ಕೇವಲ 9 ರನ್ ಗಳಿಸಿ ಹರ್ಭಜನ್​ಗೆ ಬಲಿಯಾದರೆ, ಡ್ಯಾರೆನ್ ಮ್ಯಾಡಿ ಮಾತ್ರ 39 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿ ಪೆವಿಲಿಯನ್ ಸೇರಿಕೊಂಡರು.

ಯೂಸುಫ್ ಪಠಾಣ್ ಬಿರುಸಿನ ಬ್ಯಾಟಿಂಗ್‌

ನಂತರ ಬಂದ ನಾಯಕ ಯುವರಾಜ್ ಸಿಂಗ್ 10 ಎಸೆತಗಳಲ್ಲಿ 23 ರನ್​ಗಳ ಇನ್ನಿಂಗ್ಸ್ ಆಡಿದರೆ, ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಿದ ಯೂಸುಫ್‌ ಪಠಾಣ್‌ 28 ಎಸೆತಗಳಲ್ಲಿ 33 ರನ್‌ಗಳ ಬಿರುಸಿನ ಇನಿಂಗ್ಸ್‌ ಆಡಿದರು. ಇದರಲ್ಲಿ ನಾಲ್ಕು ಭರ್ಜರಿ ಸಿಕ್ಸರ್​ಗಳು ಸೇರಿದ್ದವು. ಹೀಗಾಗಿ ತಂಡ 180 ರನ್​ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ಸಾಧ್ಯವಾಯಿತು. ಇತ್ತ ಒನ್ ಫ್ಯಾಮಿಲಿ ತಂಡದ ಪರ ಬೌಲಿಂಗ್​ನಲ್ಲಿ ಮಿಂಚಿದ ಹರ್ಭಜನ್ ಸಿಂಗ್ 4 ಓವರ್ ಗಳಲ್ಲಿ 40 ರನ್ ನೀಡಿ ಎರಡು ವಿಕೆಟ್ ಪಡೆದರೆ, ಸಚಿನ್, ಪನೇಸರ್, ಆರ್‌ಪಿ ಸಿಂಗ್ ಮತ್ತು ಅಶೋಕ್ ದಿಂಡಾ ತಲಾ ಒಂದು ವಿಕೆಟ್ ಪಡೆದರು.

ಈ ಗುರಿ ಬೆನ್ನಟ್ಟಿದ ಒನ್ ವರ್ಲ್ಡ್ ತಂಡದ ಪರ ನಾಯಕ ಸಚಿನ್ ತೆಂಡೂಲ್ಕರ್ ಮತ್ತು ನಮನ್ ಓಜಾ ಇನ್ನಿಂಗ್ಸ್ ಆರಂಭಿಸಿದರು. ಮೊದಲ ವಿಕೆಟ್‌ಗೆ ಸಚಿನ್ ಮತ್ತು ನಮನ್ ನಡುವೆ 23 ಎಸೆತಗಳಲ್ಲಿ 31 ರನ್‌ಗಳ ಜೊತೆಯಾಟವಿತ್ತು. ಈ ವೇಳೆ ಚಮಿಂದಾ ವಾಸ್, 18 ಎಸೆತಗಳಲ್ಲಿ 25 ರನ್‌ಗಳ ಇನಿಂಗ್ಸ್‌ ಆಡಿದ್ದ ನಮನ್ ಓಜಾಗೆ ಪೆವಿಲಿಯನ್ ಹಾದಿ ತೋರಿಸಿದರು. ಬಳಿಕ ಎರಡನೇ ವಿಕೆಟ್‌ಗೆ ಅಲ್ವಿರೋ ಪೀಟರ್ಸನ್, ಸಚಿನ್ ಜೊತೆ 22 ಎಸೆತಗಳಲ್ಲಿ 42 ರನ್ ಜೊತೆಯಾಟ ನಡೆಸಿದರು. 16 ಎಸೆತಗಳಲ್ಲಿ 27 ರನ್ ಗಳಿಸಿದ ಬಳಿಕ ಸಚಿನ್ ಮುರಳೀಧರನ್​ಗೆ ಬಲಿಯಾದರು.

74 ರನ್ ಸಿಡಿಸಿದ ಅಲ್ವಿರೋ ಪೀಟರ್ಸನ್

ಮೂರನೇ ವಿಕೆಟ್‌ಗೆ ಪೀಟರ್ಸನ್ ಮತ್ತು ಉಪುಲ್ ತರಂಗ ನಡುವೆ 44 ಎಸೆತಗಳಲ್ಲಿ 57 ರನ್‌ಗಳ ಜೊತೆಯಾಟ ನಡೆಯಿತು. ಈ ಜೊತೆಯಾಟವನ್ನು ತರಂಗರನ್ನು ಔಟ್ ಮಾಡುವ ಮೂಲಕ ಜೇಸನ್ ಕ್ರೆಜ್ಜಾ ಮುರಿದರು. ತರಂಗ 20 ಎಸೆತಗಳಲ್ಲಿ 29 ರನ್‌ಗಳ ಇನಿಂಗ್ಸ್‌ ಆಡಿದರೆ, ಅಲ್ವಿರೊ ಪೀಟರ್ಸನ್ 38 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಿದರು. ತರಂಗ ಬಳಿಕ ಬಂದ ಬದರಿನಾಥ್ ಕೇವಲ 4 ರನ್ ಗಳಿಸಿದ ಯುವರಾಜ್ ಸಿಂಗ್‌ಗೆ ಬಲಿಯಾದರು. ಬಳಿಕ 19ನೇ ಓವರ್​ನಲ್ಲಿ 74 ರನ್ ಸಿಡಿಸಿ ಮಾರಕವಾಗಿದ್ದ ಅಲ್ವಿರೊ ಪೀಟರ್​ಸನ್​ರನ್ನು ಔಟ್ ಮಾಡುವ ಮೂಲಕ ಚಮಿಂದಾ ವಾಸ್ ಮತ್ತೆ ಪಂದ್ಯಕ್ಕೆ ರೋಚಕ ತಿರುವು ನೀಡಿದರು.

ಗೆಲುವಿನ ಸಿಕ್ಸರ್ ಬಾರಿಸಿದ ಪಠಾಣ್

19ನೇ ಓವರ್ ಬೌಲ್ ಮಾಡಿದ ಚಮಿಂದಾ ವಾಸ್ ಎರಡು ವಿಕೆಟ್ ಪಡೆದರು. ಮೊದಲ ಸೆಟ್ ಬ್ಯಾಟ್ಸ್‌ಮನ್ ಅಲ್ವಿರೊ ಪೀಟರ್ಸನ್​ರನ್ನು ಬಲೆಗೆ ಬೀಳಿಸಿದರೆ, ಆ ಬಳಿಕ ಹರ್ಭಜನ್ ಸಿಂಗ್​ಗೆ ಪೆವಿಲಿಯನ್ ಹಾದಿ ತೋರಿಸಿದರು. ಹೀಗಾಗಿ ಪಂದ್ಯ ಕೊನೆಯ ಓವರ್​ ರೋಚಕತೆಗೆ ಸಾಕ್ಷಿಯಾಯಿತು. ಏಕೆಂದರೆ ಕೊನೆಯ ಓವರ್​ನಲ್ಲಿ ಸಹೋದರರ ನಡುವೆ ಸವಾಲು ಎದುರಾಗಿತ್ತು. ಒನ್ ವರ್ಲ್ಡ್ ತಂಡದ ಪರ ಇರ್ಫಾನ್ ಪಠಾಣ್​ ಸ್ಟ್ರೈಕ್​ನಲ್ಲಿದ್ದರೆ, ಬೌಲಿಂಗ್​ನಲ್ಲಿ ಯೂಸುಫ್ ಪಠಾಣ್ ಇದ್ದರು. ಈ ವೇಳೆ ಯೂಸುಫ್ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಇರ್ಫಾನ್ ಒನ್ ವರ್ಲ್ಡ್ ತಂಡಕ್ಕೆ ಜಯ ತಂದುಕೊಟ್ಟರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ