ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರನೇ ಟಿ20 ಪಂದ್ಯದಲ್ಲಿ 121 ರನ್ಗಳ ಸ್ಫೋಟಕ ಬ್ಯಾಟಿಂಗ್ ಮಾಡಿದ ನಾಯಕ ರೋಹಿತ್ ಶರ್ಮಾ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಪಂದ್ಯದಲ್ಲಿ ರೋಹಿಯ್ ಕೇವಲ 69 ಎಸೆತಗಳಲ್ಲಿ 175.36 ಸ್ಟ್ರೈಕ್ ರೇಟ್‌ನಲ್ಲಿ 11 ಬೌಂಡರಿ ಮತ್ತು 8 ಸಿಕ್ಸರ್‌ಗಳನ್ನು ಬಾರಿಸಿದರು.
ಈ ಮೂಲಕ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ನಾಯಕ ಮತ್ತು ಬ್ಯಾಟ್ಸ್‌ಮನ್ ಆಗಿ ಹಲವು ದಾಖಲೆಗಳನ್ನು ಮಾಡಿದರು. ಕಳೆದ ಎರಡು ಪಂದ್ಯಗಳಲ್ಲಿ ಡಕ್ ಔಟ್ ಆಗುವ ಮೂಲಕ ಬೇಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದ್ದ ರೋಹಿತ್ ಈ ಪಂದ್ಯದಲ್ಲಿ ಮಾತ್ರ ಹಲವು ವಿಶೇಷ ದಾಖಲೆಗಳನ್ನು ನಿರ್ಮಿಸಿದರು.
ವಾಸ್ತವವಾಗಿ ಸಿಕ್ಸರ್ ಸಿಡಿಸುವುದಕ್ಕೆ ಹೆಸರುವಾಸಿಯಾಗಿರುವ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಅತ್ಯಧಿಕ ಬೌಂಡರಿ ಬಾರಿಸುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೂರನೇ ಮತ್ತು ವಿಶ್ವದ 10ನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
ಇದೀಗ ರೋಹಿತ್, ಟಿ20 ಕ್ರಿಕೆಟ್‌ನಲ್ಲಿ 1000 ಬೌಂಡರಿಗಳನ್ನು ಪೂರೈಸಿದ್ದು, ಈ ಸಾಧನೆ ಮಾಡಿದ ಮೂರನೇ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ರೋಹಿತ್ ಶರ್ಮಾಗೂ ಮೊದಲು ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಮಾತ್ರ ಭಾರತದ ಪರ ಈ ಸಾಧನೆ ಮಾಡಿದ್ದರು.
ಇದುವರೆಗೆ ಟೀಂ ಇಂಡಿಯಾ ಪರ ಮಾಜಿ ಆರಂಭಿಕ ಶಿಖರ್ ಧವನ್ ಅತ್ಯಧಿಕ 1090 ಬೌಂಡರಿ ಬಾರಿಸಿದ್ದು, ಅತಿ ಹೆಚ್ಚು ಬೌಂಡರಿ ಬಾರಿಸಿದ ಮೊದಲ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಶಿಖರ್ ಧವನ್ ನಂತರ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಇದುವರೆಗೆ ಟಿ20ಯಲ್ಲಿ 1074 ಬೌಂಡರಿ ಬಾರಿಸಿದ್ದಾರೆ.
ಇನ್ನು ವಿಶ್ವ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಬೌಂಡರಿ ಬಾರಿಸಿರುವ ಬ್ಯಾಟರ್ಗಳ ಪಟ್ಟಿಯಲ್ಲಿ 1317 ಬೌಂಡರಿ ಬಾರಿಸಿರುವ ಇಂಗ್ಲೆಂಡ್ನ ಅಲೆಕ್ಸ್ ಹೇಲ್ಸ್ ಮೊದಲ ಸ್ಥಾನದಲ್ಲಿದ್ದಾರೆ.
Published On - 7:44 pm, Thu, 18 January 24