SA20 ಲೀಗ್ ಇತಿಹಾಸದಲ್ಲೇ ಅತ್ಯಂತ ವೇಗದ ಶತಕ ಸಿಡಿಸಿದ ಆರ್ಸಿಬಿ ಆಟಗಾರ ..!
Will Jacks: ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡದ ಪರ ಕೇವಲ 42 ಎಸೆತಗಳಲ್ಲಿ 101 ರನ್‌ಗಳ ಇನ್ನಿಂಗ್ಸ್ ಆಡಿದ ವಿಲ್ ಜ್ಯಾಕ್ಸ್ ಎಸ್‌ಎ20 ಟೂರ್ನಿಯ ಇತಿಹಾಸದಲ್ಲಿ ಅತಿವೇಗದ ಶತಕ ಬಾರಿಸಿದ ದಾಖಲೆಯನ್ನೂ ನಿರ್ಮಿಸಿದ್ದಾರೆ.
Updated on: Jan 19, 2024 | 2:57 PM

ಪ್ರಸ್ತುತ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಎಸ್‌ಎ20 ಲೀಗ್ನಲ್ಲಿ ಜನವರಿ 18 ರಂದು ಪ್ರಿಟೋರಿಯಾ ಕ್ಯಾಪಿಟಲ್ಸ್ ಹಾಗೂ ಡರ್ಬನ್ ಸೂಪರ್‌ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡ 17 ರನ್‌ಗಳ ರೋಚಕ ಜಯ ಸಾಧಿಸಿತು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡ ವಿಲ್ ಜ್ಯಾಕ್ಸ್ ಅವರ ಸಿಡಿಲಬ್ಬರದ ಶತಕದ ನೆರವಿನಿಂದ 204 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಡರ್ಬನ್ ಸೂಪರ್‌ಜೈಂಟ್ಸ್ ತಂಡ 20 ಓವರ್ಗಳಲ್ಲಿ ಕೇವಲ 187 ರನ್ ಕಲೆಹಾಕಲಷ್ಟೇ ಶಕ್ತವಾಯಿತು.

ಇನ್ನು ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡದ ಪರ ಕೇವಲ 42 ಎಸೆತಗಳಲ್ಲಿ 101 ರನ್‌ಗಳ ಇನ್ನಿಂಗ್ಸ್ ಆಡಿದ ವಿಲ್ ಜ್ಯಾಕ್ಸ್ ಎಸ್‌ಎ20 ಟೂರ್ನಿಯ ಇತಿಹಾಸದಲ್ಲಿ ಅತಿವೇಗದ ಶತಕ ಬಾರಿಸಿದ ದಾಖಲೆಯನ್ನೂ ನಿರ್ಮಿಸಿದ್ದಾರೆ.

ಕೇವಲ 41 ಎಸೆತಗಳಲ್ಲಿ ಶತಕ ಪೂರೈಸಿದ ವಿಲ್ ಜ್ಯಾಕ್ಸ್, 22 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಈ ಇನ್ನಿಂಗ್ಸ್‌ನಲ್ಲಿ ಅವರು 8 ಬೌಂಡರಿ ಮತ್ತು 9 ಸಿಕ್ಸರ್‌ಗಳನ್ನು ಸಹ ಬಾರಿಸಿದರು. ಇದು ಟಿ20ಯಲ್ಲಿ ಅವರ ಎರಡನೇ ಶತಕವಾಗಿದ್ದು, ಈ 25 ವರ್ಷದ ಬ್ಯಾಟ್ಸ್‌ಮನ್ ಕಳೆದ ಪಂದ್ಯದಲ್ಲಿ 58 ರನ್‌ಗಳ ಇನ್ನಿಂಗ್ಸ್ ಆಡಿದ್ದರು.

ಹಾಗೆಯೇ ಇಂಗ್ಲೆಂಡ್ ಪರ, ಇದು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ಆಟಗಾರನ ಜಂಟಿ ಎರಡನೇ ವೇಗದ ಶತಕವಾಗಿದೆ. ಈ ವಿಚಾರದಲ್ಲಿ 2015ರಲ್ಲಿ ನ್ಯಾಟ್ ವೆಸ್ಟ್ ಟಿ20 ಬ್ಲಾಸ್ಟ್ನಲ್ಲಿ ನಾರ್ಥಾಂಪ್ಟನ್ ಶೈರ್ ವಿರುದ್ಧದ ಪಂದ್ಯದಲ್ಲಿ 40 ಎಸೆತಗಳಲ್ಲಿ ಶತಕ ಸಿಡಿಸಿದ ಡೇವಿಡ್ ವಿಲ್ಲಿ ಹೆಸರು ಮೊದಲ ಸ್ಥಾನದಲ್ಲಿದೆ.

2018 ರಲ್ಲಿ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ನಂತರ, ವಿಲ್ ಜ್ಯಾಕ್ಸ್ ಈ ಸ್ವರೂಪದಲ್ಲಿ 146 ಪಂದ್ಯಗಳಲ್ಲಿ 30 ಕ್ಕಿಂತ ಹೆಚ್ಚು ಸರಾಸರಿಯೊಂದಿಗೆ 3800 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕ ಮತ್ತು 30 ಅರ್ಧ ಶತಕಗಳು ಸೇರಿವೆ. ಜ್ಯಾಕ್ಸ್ ಇದುವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 11 ಟಿ20, 7 ಏಕದಿನ ಮತ್ತು 2 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನ ಮುಂಬರುವ ಸೀಸನ್ನಲ್ಲಿ ವಿಲ್ ಜ್ಯಾಕ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡಲಿದ್ದಾರೆ. ಕಳೆದ ಸೀಸನ್ನಲ್ಲಿ RCB ಅವರನ್ನು 3 ಕೋಟಿ 20 ಲಕ್ಷ ರೂಪಾಯಿಗಳಿಗೆ ಖರೀದಿಸಿತು. ಆದರೆ ಪಂದ್ಯಾವಳಿಯ ಆರಂಭದ ಮೊದಲು, ಅವರು ಗಾಯದ ಕಾರಣದಿಂದಾಗಿ ಆಡಲು ಸಾಧ್ಯವಾಗಲಿಲ್ಲ.




