ಪಾಕ್ ರಾಜಕೀಯ ವಿಶ್ಲೇಷಕನ ಎಡವಟ್ಟಿನ ಟ್ವೀಟ್​ಗೆ ಸೆಹ್ವಾಗ್ ನೀಡಿದ ಖಡಕ್ ರಿಪ್ಲೆ ಹೇಗಿತ್ತು ಗೊತ್ತಾ?

| Updated By: ಪೃಥ್ವಿಶಂಕರ

Updated on: Aug 11, 2022 | 5:14 PM

Virender Sehwag: ಝೈದ್ ಹಮೀದ್ ಅವರನ್ನು ಸಖತ್ತಾಗಿ ಟ್ರೋಲ್ ಮಾಡಿರುವ ವೀರೇಂದ್ರ ಸೆಹ್ವಾಗ್, ಅಂಕಲ್ ಆಶಿಶ್ ನೆಹ್ರಾ ಪ್ರಸ್ತುತ ಯುಕೆ ಪ್ರಧಾನಿ ಚುನಾವಣೆಗೆ ತಯಾರಿ ನಡೆಸುತ್ತಿದ್ದಾರೆ. ಹಾಗಾಗಿ ನೀವು ತಾಳ್ಮೆಯಿಂದಿರಿ ಎಂದು ಮರು ಟ್ವೀಟ್ ಮಾಡಿದ್ದಾರೆ.

ಪಾಕ್ ರಾಜಕೀಯ ವಿಶ್ಲೇಷಕನ ಎಡವಟ್ಟಿನ ಟ್ವೀಟ್​ಗೆ ಸೆಹ್ವಾಗ್ ನೀಡಿದ ಖಡಕ್ ರಿಪ್ಲೆ ಹೇಗಿತ್ತು ಗೊತ್ತಾ?
Follow us on

ಟೀಂ ಇಂಡಿಯಾದ ಭಾಗವಾಗಿದ್ದಾಗ ವೀರೇಂದ್ರ ಸೆಹ್ವಾಗ್ (Virender Sehwag) ಕ್ರಿಕೆಟ್ ಪಿಚ್‌ನಲ್ಲಿ ಪಾಕಿಸ್ತಾನಿ ಬೌಲರ್‌ಗಳ ಸದ್ದಡಗಿಸುತ್ತಿದ್ದರು. ಈಗ ಕ್ರಿಕೆಟ್​ನಿಂದ ನಿವೃತ್ತಿ ಪಡೆದಿರುವ ವೀರೂ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರೀಯರಾಗಿರುತ್ತಾರೆ. ತಮ್ಮ ತಮಾಷೆಯ ಟ್ವಿಟ್​ಗಳಿಂದ ನೆಟ್ಟುಗರಿಗೆ ನಗುವಿನ ರಸದೌತಣ ನೀಡುತ್ತಿರುತ್ತಾರೆ. ಈಗ ಅಂತಹದ್ದೆ ಒಂದು ಘಟನೆ ನಡೆದಿದ್ದು, ಪಾಕಿಸ್ತಾನದ ರಾಜಕೀಯ ವಿಶ್ಲೇಷಕ ಜೈದ್ ಹಮೀದ್ ಅವರನ್ನು ಸೆಹ್ವಾಗ್ ಸಖತ್ತಾಗಿ ಟ್ರೋಲ್ ಮಾಡಿದ್ದಾರೆ. ಸೆಹ್ವಾಗ್ ಹೀಗೆ ಮಾಡಿದ್ದಕ್ಕೆ ಒಂದು ಕುತೂಹಲಕಾರಿ ಕಾರಣವೂ ಇದೆ. ವಾಸ್ತವವಾಗಿ ಪಾಕಿಸ್ತಾನದ ಜೈದ್ ಹಮೀದ್, ಆತುರವಾಗಿ ಭಾರತವನ್ನು ಹೀಯಾಳಿಸುವ ಬರದಲ್ಲಿ ನೀರಜ್ ಚೋಪ್ರಾ ಬದಲಿಗೆ ಆಶಿಶ್ ನೆಹ್ರಾ ಹೆಸರನ್ನು ಬಳಸಿ ಟ್ವೀಟ್ ಮಾಡಿದ್ದರು. ಇದನ್ನು ಗಮನಿಸಿದ ವೀರೇಂದ್ರ ಸೆಹ್ವಾಗ್, ಜೈದ್ ಹಮೀದ್​ರನ್ನು ಸಖತ್ ಟ್ರೋಲ್ ಮಾಡಿದ್ದಾರೆ.

ಜೈದ್ ಹಮೀದ್ ಟ್ವೀಟ್ ಏನಾಗಿತ್ತು?

ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಅರ್ಷದ್ ನದೀಮ್ ಬಗ್ಗೆ ಹಮೀದ್ ಟ್ವೀಟ್ ಮಾಡಿದ್ದು, “ಈ ಗೆಲುವನ್ನು ಇನ್ನಷ್ಟು ಉತ್ತಮಗೊಳಿಸಿದ್ದು ಈ ಪಾಕಿಸ್ತಾನಿ ಅಥ್ಲೀಟ್ ಭಾರತದ ಜಾವೆಲಿನ್ ಎಸೆತಗಾರ ಆಶಿಶ್ ನೆಹ್ರಾ ( ನೀರಜ್ ಚೋಪ್ರಾ ಹೆಸರಿನ ಬದಲಿಗೆ ಆಶಿಶ್ ನೆಹ್ರಾ ಹೆಸರನ್ನು ಬಳಸಿದ್ದರು) ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾಗಿದೆ. ಕಳೆದ ಪಂದ್ಯದಲ್ಲಿ ಆಶಿಶ್, ಅರ್ಷದ್ ನದೀಮ್ ಅವರನ್ನು ಸೋಲಿಸಿದ್ದರು. ಈಗ ಅರ್ಷದ್ ನದೀಮ್, ಆಶಿಶ್ ದಾಖಲೆಯನ್ನು ಮುರಿದಿದ್ದಾರೆ ಎಂದು ಟ್ವೀಟ್​ನಲ್ಲಿ ಬರೆದುಕೊಂಡಿದ್ದರು.

ಸೆಹ್ವಾಗ್ ನೀಡಿದ ರಿಪ್ಲೆ ಇದು

ಝೈದ್ ಹಮೀದ್ ಅವರನ್ನು ಸಖತ್ತಾಗಿ ಟ್ರೋಲ್ ಮಾಡಿರುವ ವೀರೇಂದ್ರ ಸೆಹ್ವಾಗ್, ಅಂಕಲ್ ಆಶಿಶ್ ನೆಹ್ರಾ ಪ್ರಸ್ತುತ ಯುಕೆ ಪ್ರಧಾನಿ ಚುನಾವಣೆಗೆ ತಯಾರಿ ನಡೆಸುತ್ತಿದ್ದಾರೆ. ಹಾಗಾಗಿ ನೀವು ತಾಳ್ಮೆಯಿಂದಿರಿ ಎಂದು ಮರು ಟ್ವೀಟ್ ಮಾಡಿದ್ದಾರೆ.

ನೀರಜ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಆಡಿರಲಿಲ್ಲ

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ನೀರಜ್ ಚೋಪ್ರಾ ಆಡಲಿಲ್ಲ. ಗಾಯದ ಸಮಸ್ಯೆಯಿಂದ ಅವರು ಈ ಟೂರ್ನಿಯಿಂದ ಹೊರಗುಳಿದಿದ್ದರು. ಆದರೆ, ಅವರ ಅನುಪಸ್ಥಿತಿಯಲ್ಲಿ ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್ 90.18 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ದಾಖಲೆಯ ಪ್ರದರ್ಶನ ನೀಡಿ ಚಿನ್ನದ ಪದಕವನ್ನೂ ಗೆದ್ದರು. ಅಂದಿನಿಂದ ಅರ್ಷದ್ ನದೀಮ್ ಬಗ್ಗೆ ಪಾಕಿಸ್ತಾನದಲ್ಲಿ ಮಾತುಕತೆ ಜೋರಾಗಿದೆ. ಅಲ್ಲದೆ ಈ ಹಿಂದೆ ನೀರಜ್ ಚೋಪ್ರಾ ಪಾಕಿಸ್ತಾನಕ್ಕೆ ಬರಬೇಕು ಮತ್ತು ಇಬ್ಬರೂ ಅಥ್ಲೀಟ್‌ಗಳು ಇಲ್ಲಿ ಸ್ಪರ್ಧಿಸಬೇಕು ಎಂದು ಅರ್ಷದ್ ನದೀಮ್ ಕೋಚ್ ಹೇಳಿಕೆ ನೀಡಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದರು.

ನೀರಜ್ ಚೋಪ್ರಾ ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು ಮತ್ತು ಇತ್ತೀಚೆಗೆ ನಡೆದ ಡೈಮಂಡ್ ಲೀಗ್‌ನಲ್ಲಿ ಅವರು ಜಾವೆಲಿನ್ ಅನ್ನು 89.94 ಮೀಟರ್ ದೂರಕ್ಕೆ ಎಸೆದು ದಾಖಲೆ ನಿರ್ಮಿಸಿದ್ದರು. ಜೊತೆಗೆ ಇದು ನೀರಜ್ ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಅರ್ಷದ್ ನದೀಮ್ ಭಾರತ ಉಪಖಂಡದ ಏಕೈಕ ಅಥ್ಲೀಟ್ ಆಗಿದ್ದು, 90 ಮೀಟರ್ಸ್ ಮಾರ್ಕ್ ಅನ್ನು ಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಈ ಇಬ್ಬರು ಅಥ್ಲೀಟ್‌ಗಳು ಯಾವ ಟೂರ್ನಿಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ ಎಂದು ಜನರು ಕಾಯುತ್ತಿದ್ದಾರೆ.