PAK vs AFG: ಕೊನೆಯ ಓವರ್ ಡ್ರಾಮಾ; ಅಫ್ಘಾನ್ ವಿರುದ್ಧ ಪಾಕಿಸ್ತಾನಕ್ಕೆ ರೋಚಕ ಜಯ

|

Updated on: Aug 25, 2023 | 7:23 AM

PAK vs AFG: ಏಕದಿನ ಮಾದರಿಯಲ್ಲಿ ಪಾಕಿಸ್ತಾನ ವಿರುದ್ಧ ಮೊದಲ ಸರಣಿ ಗೆಲ್ಲುವ ಅಫ್ಘಾನಿಸ್ತಾನದ ಕನಸು ಮತ್ತೊಮ್ಮೆ ಅತ್ಯಂತ ಸಮೀಪಕ್ಕೆ ಬರುವ ಮೂಲಕ ಭಗ್ನಗೊಂಡಿದೆ. ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ತಂಡ ಅಫ್ಘಾನಿಸ್ತಾನವನ್ನು ಕೇವಲ ಒಂದು ಎಸೆತ ಬಾಕಿ ಇರುವಂತೆಯೇ 1 ವಿಕೆಟ್‌ನಿಂದ ಸೋಲಿಸಿದೆ.

PAK vs AFG: ಕೊನೆಯ ಓವರ್ ಡ್ರಾಮಾ; ಅಫ್ಘಾನ್ ವಿರುದ್ಧ ಪಾಕಿಸ್ತಾನಕ್ಕೆ ರೋಚಕ ಜಯ
ಪಾಕಿಸ್ತಾನ- ಅಫ್ಘಾನಿಸ್ತಾನ
Follow us on

ಏಕದಿನ ಮಾದರಿಯಲ್ಲಿ ಪಾಕಿಸ್ತಾನ ವಿರುದ್ಧ ಮೊದಲ ಸರಣಿ ಗೆಲ್ಲುವ ಅಫ್ಘಾನಿಸ್ತಾನದ (Afghanistan vs Pakistan) ಕನಸು ಮತ್ತೊಮ್ಮೆ ಅತ್ಯಂತ ಸಮೀಪಕ್ಕೆ ಬರುವ ಮೂಲಕ ಭಗ್ನಗೊಂಡಿದೆ. ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ತಂಡ ಅಫ್ಘಾನಿಸ್ತಾನವನ್ನು ಕೇವಲ ಒಂದು ಎಸೆತ ಬಾಕಿ ಇರುವಂತೆಯೇ 1 ವಿಕೆಟ್‌ನಿಂದ ಸೋಲಿಸಿದೆ. ಹಂಬಂಟೋಟಾದಲ್ಲಿ ನಡೆದ ಈ ರೋಚಕ ಪಂದ್ಯದಲ್ಲಿ ಪಾಕಿಸ್ತಾನದ ಯುವ ವೇಗಿ ನಸೀಮ್ ಶಾ (Naseem Shah) ಬ್ಯಾಟ್‌ನಿಂದ ಅದ್ಭುತ ಪ್ರದರ್ಶನ ನೀಡಿ ಕೊನೆಯ ಓವರ್‌ನಲ್ಲಿ 2 ಬೌಂಡರಿ ಬಾರಿಸಿ ತಂಡಕ್ಕೆ ಸರಣಿಯಲ್ಲಿ ಸತತ ಎರಡನೇ ಗೆಲುವು ತಂದುಕೊಟ್ಟರು. ಈ ಮೂಲಕ ಪಾಕಿಸ್ತಾನ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿತು.

ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ಮಾಡಿತು. ಇದೇ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನದ ಬ್ಯಾಟಿಂಗ್ ವಿಭಾಗ ಹೀನಾಯ ಪ್ರದರ್ಶನ ನೀಡಿ ಇಡೀ ತಂಡ ಕೇವಲ 59 ರನ್‌ಗಳಿಗೆ ಆಲೌಟಾಯಿತು. ಆ ಪಂದ್ಯದಲ್ಲಿ ಸ್ಟಾರ್ ಆಗಿದ್ದ ಪಾಕಿಸ್ತಾನದ ವೇಗದ ಬೌಲರ್‌ಗಳಿಗೆ ಈ ಬಾರಿ ಅಫ್ಘಾನಿಸ್ತಾನದ ಆರಂಭಿಕರು ನೀರುಣಿಸಿದರು. ಆರಂಭಿಕರ ಅಬ್ಬರದ ಆಧಾರದ ಮೇಲೆ ಅಫ್ಘಾನಿಸ್ತಾನ ತಂಡ 300 ರನ್ ದಾಖಲಿಸಿತು.

Asia Cup 2023: ಪಾಕಿಸ್ತಾನಕ್ಕೆ ಬರುವಂತೆ ಜಯ್ ಶಾಗೆ ಆಹ್ವಾನ ನೀಡಿದ ಪಾಕ್ ಕ್ರಿಕೆಟ್ ಮಂಡಳಿ

ಗುರ್ಬಾಜ್-ಜದ್ರಾನ್ ಸಿಡಿಲಬ್ಬರದ ಬ್ಯಾಟಿಂಗ್

ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ರಹಮಾನುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ ಝದ್ರಾನ್ ಅವರು ಸ್ಮರಣೀಯ ಮತ್ತು ದಾಖಲೆಯ ಜೊತೆಯಾಟವನ್ನು ಹಂಚಿಕೊಂಡರು. ಇಬ್ಬರು ಒಟ್ಟಾಗಿ 40ನೇ ಓವರ್​ವರೆಗೆ ಬ್ಯಾಟ್ ಬೀಸಿ 227 ರನ್ ಕಲೆಹಾಕಿದರು. ಇನಿಂಗ್ಸ್‌ನ 239ನೇ ಎಸೆತದಲ್ಲಿ ಅಂದರೆ 39.5 ನೇ ಓವರ್‌ನಲ್ಲಿ ಉಸಾಮಾ ಮಿರ್, 80 ರನ್ ಬಾರಿಸಿದ್ದ ಇಬ್ರಾಹಿಂ ಝದ್ರಾನ್ ಅವರನ್ನು ಔಟ್ ಮಾಡುವ ಮೂಲಕ ಪಾಕಿಸ್ತಾನಕ್ಕೆ ಮೊದಲ ಯಶಸ್ಸು ತಂದುಕೊಟ್ಟರು.

ಅಫ್ಘಾನಿಸ್ತಾನದ ದಾಖಲೆಯ ಸ್ಕೋರ್

ಆದರೆ, ಮತ್ತೊಬ್ಬ ಆರಂಭಿಕರಾಗಿ ಕಣಕ್ಕಿಳಿದಿದ್ದ ಗುರ್ಬಾಜ್ ಶತಕ ಸಿಡಿಸಿ ಮಿಂಚಿದರು. ಇದರೊಂದಿಗೆ ಗುರ್ಬಾಜ್ ಪಾಕಿಸ್ತಾನದ ವಿರುದ್ಧ ಏಕದಿನ ಶತಕ ಬಾರಿಸಿದ ಮೊದಲ ಆಫ್ಘನ್ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಇದು ಅವರ ವೃತ್ತಿ ಜೀವನದ ಐದನೇ ಶತಕವಾಗಿದ್ದು, ಅಂತಿಮವಾಗಿ ಗುರ್ಬಾಜ್ 151 ರನ್‌ಗಳ ಇನ್ನಿಂಗ್ಸ್‌ ಆಡಿ ತಮ್ಮ ವಿಕೆಟ್ ಒಪ್ಪಿಸಿದರು. ಇದರ ನಂತರ ಪಾಕಿಸ್ತಾನದ ಬೌಲರ್‌ಗಳು ಪುನರಾಗಮನ ಮಾಡಿದರು. ಆದರೆ ಆರಂಭಿಕರ ಬಲಿಷ್ಠ ಬ್ಯಾಟಿಂಗ್ ನೆರವಿನಿಂದ ಅಫ್ಘಾನಿಸ್ತಾನ ನಿಗದಿತ 50 ಓವರ್​ಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು 300 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.

ಇಮಾಮ್-ಬಾಬರ್ ಜೊತೆಯಾಟ

ಇದಕ್ಕೆ ಪ್ರತ್ಯುತ್ತರವಾಗಿ ಪಾಕಿಸ್ತಾನ ಕೂಡ ಬಲಿಷ್ಠ ಆರಂಭ ಪಡೆಯಿತು. ಫಖರ್ ಜಮಾನ್ ಮತ್ತು ಇಮಾಮ್-ಉಲ್-ಹಕ್ 52 ರನ್ ಜೊತೆಯಾಟವನ್ನು ಹಂಚಿಕೊಂಡರು. ಆದರೆ ಮತ್ತೆ ಫಖರ್ ಅಫ್ಘಾನಿಸ್ತಾನ ವಿರುದ್ಧ ದೊಡ್ಡ ಇನ್ನಿಂಗ್ಸ್ ಆಡಲು ವಿಫಲರಾದರು. ಮತ್ತೊಂದೆಡೆ ಕಳೆದ ಪಂದ್ಯದಲ್ಲಿ ಖಾತೆ ತೆರೆಯಲು ವಿಫಲರಾಗಿದ್ದ ಪಾಕ್ ನಾಯಕ ಬಾಬರ್ ಅಜಮ್ ಇಮಾಮ್ ಜತೆ 118 ರನ್ ಜೊತೆಯಾಟ ನಡೆಸಿ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದರು. ಈ ವೇಳೆ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಅರ್ಧಶತಕ ಪೂರೈಸಿದರು.

9 ಎಸೆತಗಳಲ್ಲಿ ತತ್ತರಿಸಿದ ಪಾಕಿಸ್ತಾನ

ಆರಂಭಿಕ ಫಖಾರ್ ಅವರನ್ನು ಔಟ್ ಮಾಡಿದ ಫಜಲ್ಹಕ್ ಫಾರೂಕಿ 31ನೇ ಓವರ್‌ನಲ್ಲಿ ಬಾಬರ್ ಅವರನ್ನು ಬಲಿಪಶು ಮಾಡಿದರು. ಪಾಕಿಸ್ತಾನದ ಇನ್ನಿಂಗ್ಸ್ ಇಲ್ಲಿಂದ ತತ್ತರಿಸಲಾರಂಭಿಸಿತು. ಶೀಘ್ರದಲ್ಲೇ ಮೊಹಮ್ಮದ್ ರಿಜ್ವಾನ್ ರನೌಟ್ ಆದರು. ಹೀಗಾಗಿ 38ನೇ ಓವರ್‌ನಲ್ಲಿ ಅದರಲ್ಲೂ ಕೇವಲ 9 ಎಸೆತಗಳ ಅಂತರದಲ್ಲಿ 3 ವಿಕೆಟ್ ಕಬಳಿಸುವ ಮೂಲಕ ಅಫ್ಘಾನಿಸ್ತಾನ ತಿರುಗೇಟು ನೀಡಿತು. ಮೊದಲು ಮೊಹಮ್ಮದ್ ನಬಿ ಸಲ್ಮಾನ್ ಮತ್ತು ನಂತರ ಉಸಾಮಾ ಮಿರ್ ಅವರನ್ನು ಪೆವಿಲಿಯನ್​ಗಟ್ಟಿದರೆ, ನಂತರದ ಓವರ್‌ನಲ್ಲಿ ಮುಜೀಬ್ ಉರ್ ರಹಮಾನ್, ಇಮಾಮ್-ಉಲ್-ಹಕ್ ಅವರನ್ನು ಶತಕದಂಚಿನಲ್ಲಿ ತಮ್ಮ ಬಲೆಗೆ ಬೀಳಿಸಿದರು.

ಶಾದಾಬ್-ನಸೀಮ್ ಅಮೋಘ ಆಟ

ಇಫ್ತಿಕರ್ ಅಹ್ಮದ್ ಮತ್ತು ಶಾಹೀನ್ ಶಾ ಆಫ್ರಿದಿ ಕೂಡ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಆದರೆ, ಶಾದಾಬ್ ಖಾನ್ ದೃಢವಾಗಿ ನಿಂತು ತಂಡವನ್ನು ಗುರಿಯ ಸಮೀಪಕ್ಕೆ ತರುವ ಕೆಲಸ ಮಾಡಿದರು. 19ನೇ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಶಾದಾಬ್ ಬೌಂಡರಿ ಹಾಗೂ ಸಿಕ್ಸರ್ ಬಾರಿಸಿದರು. ವಾಸ್ತವವಾಗಿ ಕೊನೆಯ ಓವರ್‌ನಲ್ಲಿ ಪಾಕಿಸ್ತಾನಕ್ಕೆ 11 ರನ್‌ಗಳ ಅಗತ್ಯವಿತ್ತು. ಮೊದಲ ಎಸೆತವನ್ನು ಬೌಲಿಂಗ್ ಮಾಡುವ ಮೊದಲೇ ಪೆಸರ್ ಫಾರೂಕಿ, ಶಾದಾಬ್ ಖಾನ್ ಅವರನ್ನು ನಾನ್ ಸ್ಟ್ರೈಕ್​ನಲ್ಲಿ ರನ್ ಔಟ್ ಮಾಡಿದರು. ಆದರೆ, ಆ ಬಳಿಕ ನಸೀಮ್ ಶಾ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದರೆ, ನಂತರ ಐದನೇ ಎಸೆತದಲ್ಲಿ ಮತ್ತೊಂದು ಬೌಂಡರಿ ಬಾರಿಸುವ ಮೂಲಕ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:20 am, Fri, 25 August 23