PAK vs ENG: 2 ಇನಿಂಗ್ಸ್​ನಲ್ಲಿ 7 ಶತಕ…ಬೌಲರ್​ಗಳು ಹೈರಾಣ..!

| Updated By: ಝಾಹಿರ್ ಯೂಸುಫ್

Updated on: Dec 03, 2022 | 6:54 PM

PAK vs ENG 1st Test: ಪೋಪ್ ಹಾಗೂ ಹ್ಯಾರಿ ಬ್ರೂಕ್ ಅಬ್ಬರ. ಟೆಸ್ಟ್​ ಕ್ರಿಕೆಟ್​ನಲ್ಲಿ ಏಕದಿನ ಇನಿಂಗ್ಸ್​ ಆಡಿದ ಈ ಜೋಡಿ ಪಾಕಿಸ್ತಾನದ ಪ್ರಮುಖ ಬೌಲರ್​ಗಳ ಬೆಂಡೆತ್ತಿದರು. ಪರಿಣಾಮ 104 ಎಸೆತಗಳಲ್ಲಿ 14 ಫೋರ್​ನೊಂದಿಗೆ ಒಲಿ ಪೋಪ್ 108 ರನ್ ಬಾರಿಸಿದರು.

PAK vs ENG: 2 ಇನಿಂಗ್ಸ್​ನಲ್ಲಿ 7 ಶತಕ...ಬೌಲರ್​ಗಳು ಹೈರಾಣ..!
Pakistan vs England
Follow us on

Pakistan vs England, 1st Test: ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಪಾಕಿಸ್ತಾನ್-ಇಂಗ್ಲೆಂಡ್ (PAK vs ENG) ನಡುವಣ ಮೊದಲ ಟೆಸ್ಟ್​ ಪಂದ್ಯದಲ್ಲಿ ರನ್​ಗಳ ಸುರಿಮಳೆಯಾಗಿದೆ. ಮೊದಲ ಇನಿಂಗ್ಸ್​ನಲ್ಲಿ ಬ್ಯಾಟ್ ಬೀಸಿದ ಇಂಗ್ಲೆಂಡ್ ತಂಡವು  4 ಶತಕದೊಂದಿಗೆ 657 ರನ್​ ಕಲೆಹಾಕಿತು. ಇದಕ್ಕುತ್ತರವಾಗಿ 2ನೇ ದಿನದಾಟದಲ್ಲಿ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ್ ಕೂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಅದರಲ್ಲೂ ಪಾಕ್ ತಂಡ ಮೂವರು ಬ್ಯಾಟರ್​ಗಳು ಶತಕ ಸಿಡಿಸಿ ಬ್ಯಾಟ್ ಮೇಲೆತ್ತಿದ್ದಾರೆ. 657 ರನ್​ಗಳ ಗುರಿಯೊಂದಿಗೆ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ್ ತಂಡಕ್ಕೆ ಅಬ್ದುಲ್ಲಾ ಶಫೀಕ್ ಹಾಗೂ ಇಮಾಮ್-ಉಲ್-ಹಕ್ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 225 ರನ್​ಗಳ ಜೊತೆಯಾಟವಾಡಿದ ಈ ಜೋಡಿ ಶತಕ ಸಿಡಿಸಿ ಮಿಂಚಿದರು.  203 ಎಸೆತಗಳನ್ನು ಎದುರಿಸಿದ ಶಫೀಕ್ 114 ರನ್​ ಬಾರಿಸಿ ವಿಲ್ ಜ್ಯಾಕ್ಸ್​ಗೆ ವಿಕೆಟ್ ಒಪ್ಪಿಸಿದರೆ, ಇಮಾಮ್-ಉಲ್-ಹಕ್ 207 ಎಸೆತಗಳಲ್ಲಿ 121 ರನ್​ಗಳಿಸಿ ಜ್ಯಾಕ್ ಲೀಚ್​ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಆ ಬಳಿಕ ಬಂದ ಅಜರ್ ಅಲಿ (27) ಬೇಗನೆ ಔಟಾದರೂ, ನಾಯಕ ಬಾಬರ್ ಆಜಂ ಬಿರುಸಿನ ಇನಿಂಗ್ಸ್ ಆಡಿದರು.

ಅದರಂತೆ 168 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 19 ಫೋರ್​ನೊಂದಿಗೆ 136 ರನ್​ ಕಲೆಹಾಕಿದ ಬಾಬರ್ ಆಜಂ ಈ ಪಂದ್ಯದಲ್ಲಿ ಶತಕಗಳಿಸಿದ 7ನೇ ಬ್ಯಾಟ್ಸ್​ಮನ್ ಎನಿಸಿಕೊಂಡರು. ಇನ್ನು ಶತಕದ ಬಳಿಕ ವಿಲ್​ ಜ್ಯಾಕ್ ಎಸೆತದಲ್ಲಿ ಔಟಾಗುವ ಮೂಲಕ ಬಾಬರ್ ಆಜಂ ಪೆವಿಲಿಯನ್ ಸೇರಿದ್ದಾರೆ. ಮೂರನೇ ದಿನದಾಟದ ಅಂತ್ಯಕ್ಕೆ ಪಾಕಿಸ್ತಾನ್ ತಂಡವು 7 ವಿಕೆಟ್​ ನಷ್ಟಕ್ಕೆ 499 ರನ್​ ಕಲೆಹಾಕಿದೆ. ಅಂದರೆ ಮೊದಲ ಇನಿಂಗ್ಸ್​ಗಳ ಮೂಲಕ ಉಭಯ ತಂಡಗಳು ಸೇರಿ ಈಗಾಗಲೇ 1156 ರನ್​ ಕಲೆಹಾಕಿದ್ದಾರೆ. ಇತ್ತ ವಿಕೆಟ್ ಪಡೆಯಲು ಹರಸಾಹಸ ಪಡುತ್ತಿರುವ ಬೌಲರ್​ಗಳು ರನ್​ ಸುರಿಮಳೆಯೊಂದಿಗೆ ಹೈರಾಣರಾಗಿದ್ದಾರೆ.

ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಂಗ್ಲ ಪಡೆಯ ನಾಯಕ ಬೆನ್ ಸ್ಟೋಕ್ಸ್ (Ben Stokes) ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್​ ಪಾಕ್ ಬೌಲರ್​ಗಳಿಗೆ ಬಾಝ್ ​ಬಾಲ್ ಅಬ್ಬರ ಹೇಗಿರುತ್ತೆ ಎಂಬುದನ್ನು ತೋರಿಸಿಕೊಟ್ಟಿದ್ದರು. ಮೊದಲ ಓವರ್​ನಲ್ಲೇ 14 ರನ್​ ಬಾರಿಸುವ ಮೂಲಕ ಭರ್ಜರಿಯಾಗಿ ಇನಿಂಗ್ಸ್ ಆರಂಭಿಸಿದ ಝ್ಯಾಕ್ ಕ್ರಾಲಿ ಹಾಗೂ ಬೆನ್ ಡಕೆಟ್ ಮೊದಲ ವಿಕೆಟ್​ಗೆ 233 ರನ್​ಗಳ ಜೊತೆಯಾಟವಾಡಿದರು. ಅದು ಕೂಡ ಕೇವಲ 35.4 ಓವರ್​ಗಳಲ್ಲಿ ಎಂಬುದು ವಿಶೇಷ. ಈ ಭರ್ಜರಿ ಜೊತೆಯಾಟದಲ್ಲಿ ಝ್ಯಾಕ್​ ಕ್ರಾಲಿ 111 ಎಸೆತಗಳಲ್ಲಿ 21 ಫೋರ್​ನೊಂದಿಗೆ 122 ರನ್ ಬಾರಿಸಿದರು. ಮತ್ತೊಂದೆಡೆ ಬೆನ್ ಡಕೆಟ್ 110 ಎಸೆತಗಳಲ್ಲಿ 15 ಫೋರ್​ನೊಂದಿಗೆ 107 ರನ್​ಗಳ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು.

ಈ ಹಂತದಲ್ಲಿ ಝಾಹಿದ್ ಮೆಹಮೂದ್ ಎಸೆತದಲ್ಲಿ ಕ್ರಾಲಿ (107) ಔಟಾದರೆ, ಇದರ ಬೆನ್ನಲ್ಲೇ ಹ್ಯಾರಿಸ್ ರೌಫ್ ಎಸೆತದಲ್ಲಿ ಡಕೆಟ್ (122) ಕೂಡ ವಿಕೆಟ್ ಒಪ್ಪಿಸಿದರು. ಈ ವೇಳೆ ಜೊತೆಯಾದ ಒಲಿ ಪೋಪ್ ಹಾಗೂ ಜೋ ರೂಟ್ ಕೂಡ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದರು. ಆದರೆ 23 ರನ್​ಗಳಿಸಿದ್ದ ರೂಟ್ ಝಾಹಿದ್ ಮೆಹಮೂದ್ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ಹೊರನಡೆದರು.

ಆ ನಂತರ ಶುರುವಾಗಿದ್ದು ಪೋಪ್ ಹಾಗೂ ಹ್ಯಾರಿ ಬ್ರೂಕ್ ಅಬ್ಬರ. ಟೆಸ್ಟ್​ ಕ್ರಿಕೆಟ್​ನಲ್ಲಿ ಏಕದಿನ ಇನಿಂಗ್ಸ್​ ಆಡಿದ ಈ ಜೋಡಿ ಪಾಕಿಸ್ತಾನದ ಪ್ರಮುಖ ಬೌಲರ್​ಗಳ ಬೆಂಡೆತ್ತಿದರು. ಪರಿಣಾಮ 104 ಎಸೆತಗಳಲ್ಲಿ 14 ಫೋರ್​ನೊಂದಿಗೆ ಒಲಿ ಪೋಪ್ 108 ರನ್ ಬಾರಿಸಿದರು. ಇದೇ ವೇಳೆ ಅಲಿ ಎಸೆತವನ್ನು ಗುರುತಿಸುವಲ್ಲಿ ಎಡವಿದ ಪೋಪ್ ಎಲ್​ಬಿ ಆಗಿ ನಿರ್ಗಮಿಸಿದರು. ಆದರೆ ಮತ್ತೊಂದೆಡೆ ಸಿಡಿಲಬ್ಬರ ಮುಂದುವರೆಸಿದ್ದ ಯುವ ಬ್ಯಾಟರ್ ಹ್ಯಾರಿ ಬ್ರೂಕ್ ಸೌದ್ ಶಕೀಲ್ ಎಸೆದ 68ನೇ ಓವರ್​ನ 6 ಎಸೆತಗಳಲ್ಲೂ ಭರ್ಜರಿ ಬೌಂಡರಿ ಬಾರಿಸಿದರು.

ಅಷ್ಟೇ ಅಲ್ಲದೆ ಕೇವಲ 80 ಎಸೆತಗಳಲ್ಲಿ 14 ಫೋರ್, 2 ಸಿಕ್ಸ್​ನೊಂದಿಗೆ ಚೊಚ್ಚಲ ಶತಕ ಪೂರೈಸುವ ಮೂಲಕ ಬ್ಯಾಟ್ ಮೇಲೆಕ್ಕೆತ್ತಿದ್ದರು. ಇನ್ನು ಶತಕದ ಬಳಿಕ ಸಿಡಿಲಬ್ಬರ ಮುಂದುವರೆಸಿದ ಬ್ರೂಕ್ ಅಂತಿಮವಾಗಿ 116 ಎಸೆತಗಳಲ್ಲಿ 19 ಫೋರ್​ ಹಾಗೂ 5 ಸಿಕ್ಸ್​ನೊಂದಿಗೆ 153 ರನ್​ ಕಲೆಹಾಕಿ ನಸೀಮ್ ಶಾ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಬ್ರೂಕ್ ವಿಕೆಟ್ ಬೀಳುತ್ತಿದ್ದಂತೆ ಮೇಲುಗೈ ಸಾಧಿಸಿದ ಪಾಕ್ ಬೌಲರ್​ಗಳು ಅಂತಿಮವಾಗಿ ಇಂಗ್ಲೆಂಡ್ ತಂಡವನ್ನು 657 ರನ್​ಗಳಿಗೆ ಆಲೌಟ್ ಮಾಡಿತು.

ಇದೀಗ ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್​ನಲ್ಲಿ ಪಾಕಿಸ್ತಾನದ ಮೂವರು ಬ್ಯಾಟ್ಸ್​ಮನ್​ಗಳು ಶತಕ ಸಿಡಿಸಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಈ ಮೂಲಕ 3ನೇ ದಿನದಾಟದವರೆಗೆ ಹಿಡಿತ ಸಾಧಿಸುವಲ್ಲಿ ಬಾಬರ್ ಪಡೆ ಯಶಸ್ವಿಯಾಗಿದೆ. ಸದ್ಯ 158 ರನ್​ಗಳ ಹಿನ್ನಡೆ ಹೊಂದಿರುವ ಪಾಕ್ ಪರ ಅಘಾ ಸಲ್ಮಾನ್ ಹಾಗೂ ಝಾಹಿದ್ ಮೆಹಮೂದ್ 4ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಪಾಕಿಸ್ತಾನ್-ಇಂಗ್ಲೆಂಡ್ ಪ್ರಥಮ ಟೆಸ್ಟ್​​ನ ಮೊದಲ ಇನಿಂಗ್ಸ್​ನಲ್ಲಿ ಶತಕ ಸಿಡಿಸಿದವರು:

ಇಂಗ್ಲೆಂಡ್​ ಬ್ಯಾಟರ್​ಗಳು​:-

  • ಝ್ಯಾಕ್ ಕ್ರಾವ್ಲೆ- 122 ರನ್​ (111 ಎಸೆತ)
  • ಬೆನ್​ ಡಕೆಟ್- 107 ರನ್​ (110 ಎಸೆತ)
  • ಒಲಿ ಪೋಪ್- 108 ರನ್​ (104 ಎಸೆತ)
  • ಹ್ಯಾರಿ ಬ್ರೂಕ್- 153 ರನ್ (116 ಎಸೆತ)

ಪಾಕಿಸ್ತಾನ್ ಬ್ಯಾಟರ್​ಗಳು:-

  • ಅಬ್ದುಲ್ಲಾ ಶಫೀಕ್- 114 ರನ್​ (203 ಎಸೆತ)
  • ಇಮಾಮ್ ಉಲ್ ಹಕ್- 121 (207 ಎಸೆತ)
  • ಬಾಬರ್ ಆಜಂ- 136 ರನ್ (168 ಎಸೆತ)