PAK vs HKG: 38 ರನ್​ಗಳಿಗೆ ಹಾಂಗ್​ ಕಾಂಗ್ ಆಲೌಟ್; ಸೂಪರ್ ಸಂಡೇಯಲ್ಲಿ ಭಾರತಕ್ಕೆ ಪಾಕ್ ಎದುರಾಳಿ..!

| Updated By: ಪೃಥ್ವಿಶಂಕರ

Updated on: Sep 02, 2022 | 11:42 PM

Asia Cup 2022: ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗಲಿವೆ. ಸೆ.4ರ ಭಾನುವಾರದಂದು ಇಬ್ಬರ ಮುಖಾಮುಖಿಗೆ ವೇಳಾಪಟ್ಟಿ ನಿಗದಿಯಾಗಿದೆ.

PAK vs HKG: 38 ರನ್​ಗಳಿಗೆ ಹಾಂಗ್​ ಕಾಂಗ್ ಆಲೌಟ್; ಸೂಪರ್ ಸಂಡೇಯಲ್ಲಿ ಭಾರತಕ್ಕೆ ಪಾಕ್ ಎದುರಾಳಿ..!
Follow us on

ಏಷ್ಯಾಕಪ್‌ನಲ್ಲಿ (Asia Cup) ಭಾರತ ಮತ್ತು ಪಾಕಿಸ್ತಾನ (India and Pakistan) ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗಲಿವೆ. ಸೆ.4ರ ಭಾನುವಾರದಂದು ಇಬ್ಬರ ಮುಖಾಮುಖಿಗೆ ವೇಳಾಪಟ್ಟಿ ನಿಗದಿಯಾಗಿದೆ. ಪಾಕಿಸ್ತಾನ ತನ್ನ ಕೊನೆಯ ಪಂದ್ಯದಲ್ಲಿ ಹಾಂಗ್ ಕಾಂಗ್ ತಂಡವನ್ನು ಹೀನಾಯವಾಗಿ ಸೋಲಿಸಿ, ಏಷ್ಯಾಕಪ್‌ನ ಸೂಪರ್ ಫೋರ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಇದರೊಂದಿಗೆ ಟೀಮ್ ಇಂಡಿಯಾದೊಂದಿಗೆ ಒಂದು ವಾರದಲ್ಲಿ ಎರಡನೇ ಪಂದ್ಯವನ್ನು ಆಡಲಿದೆ. ಮೊಹಮ್ಮದ್ ರಿಜ್ವಾನ್, ಖುಷ್ದಿಲ್ ಷಾ ಮತ್ತು ಶಾದಾಬ್ ಖಾನ್ (Mohammad Rizwan, Khushdil Shah and Shadab Khan) ಅವರ ಪ್ರಬಲ ಪ್ರದರ್ಶನದ ನೆರವಿನಿಂದ ಪಾಕಿಸ್ತಾನ ಹಾಂಕಾಂಗ್ ತಂಡವನ್ನು 155 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿತು. ಪಾಕಿಸ್ತಾನದ 193 ರನ್‌ಗಳ ಮುಂದೆ ಹಾಂಕಾಂಗ್ ತಂಡ ಕೇವಲ 38 ರನ್‌ಗಳಿಗೆ ಆಲೌಟಾಯಿತು.

ಗ್ರೂಪ್ ಸುತ್ತಿನ ಕೊನೆಯ ಪಂದ್ಯವು ಶುಕ್ರವಾರದಂದು ಶಾರ್ಜಾದಲ್ಲಿ ಸೆಪ್ಟೆಂಬರ್ 2 ರಂದು ನಡೆದಿದ್ದು, ಇಲ್ಲಿ ಗೆಲ್ಲುವ ತಂಡವು ಮುಂದಿನ ಸುತ್ತಿನಲ್ಲಿ ಸ್ಥಾನ ಪಡೆಯಬೇಕಾಗಿತ್ತು. ಪಾಕಿಸ್ತಾನ ಮತ್ತು ಹಾಂಕಾಂಗ್ ತಮ್ಮ ಮೊದಲ ಪಂದ್ಯಗಳಲ್ಲಿ ಭಾರತದ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಈ ಪಂದ್ಯದಲ್ಲಿ ಪಾಕಿಸ್ತಾನ ಆರಂಭದಿಂದಲೂ ಗೆಲುವಿನ ಸ್ಪರ್ಧಿಯಾಗಿದ್ದು, ಮಾಜಿ ಚಾಂಪಿಯನ್ ಎಲ್ಲರ ನಿರೀಕ್ಷೆಯನ್ನು ಸರಿ ಎಂದು ಸಾಬೀತುಪಡಿಸಿತು. ಪಾಕಿಸ್ತಾನ ಮೊದಲು ಬ್ಯಾಟಿಂಗ್​ನಲ್ಲಿ ಅಬ್ಬರಿಸಿದರೆ, ನಂತರ ವೇಗಿಗಳು-ಸ್ಪಿನ್ನರ್‌ಗಳ ಸಮಾನ ಸಹಕಾರದೊಂದಿಗೆ ಅನನುಭವಿ ಹಾಂಗ್ ಕಾಂಗ್ ತಂಡವನ್ನು ಅತ್ಯಂತ ಕಡಿಮೆ ಸ್ಕೋರ್‌ಗೆ ಆಲೌಟ್ ಆಯಿತು. ಇದು ಟಿ20ಯಲ್ಲಿ ಪಾಕಿಸ್ತಾನದ ಅತಿ ದೊಡ್ಡ ಗೆಲುವಾಗಿದೆ.

ಪಾಕಿಸ್ತಾನ್ ಮೊದಲು ಬ್ಯಾಟ್ ಮಾಡಿದರೂ ಸತತ ಎರಡನೇ ಪಂದ್ಯದಲ್ಲಿ ತಂಡದ ನಾಯಕ ಬಾಬರ್ ಅಜಮ್ ವಿಫಲರಾದರು. ಭಾರತದ ವಿರುದ್ಧ ಕೇವಲ 10 ರನ್ ಗಳಿಸಿದ್ದ ಬಾಬರ್ ಈ ಬಾರಿ ಮೂರನೇ ಓವರ್​ನಲ್ಲಿ 9 ರನ್ ಗಳಿಸಿ ಪೆವಿಲಿಯನ್​ಗೆ ಮರಳಿದರು. ಎಹ್ಸಾನ್ ಎರಡನೇ ಬಾರಿಗೆ ಬಾಬರ್ ಅವರ ವಿಕೆಟ್ ಪಡೆದರು. ಇಲ್ಲಿಂದ ರಿಜ್ವಾನ್ ಮತ್ತು ಫಖರ್ ಜಮಾನ್ ಇನ್ನಿಂಗ್ಸ್ ನಿಭಾಯಿಸಿದರು.

ನಿಧಾನಗತಿಯ ಆರಂಭದ ನಂತರ ಇಬ್ಬರೂ ರನ್‌ಗಳ ವೇಗವನ್ನು ಹೆಚ್ಚಿಸಿದರು ಮತ್ತು ಎರಡನೇ ವಿಕೆಟ್‌ಗೆ 80 ಎಸೆತಗಳಲ್ಲಿ 116 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ, ರಿಜ್ವಾನ್ ಮೊದಲು 43 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು ಮತ್ತು ನಂತರ ಫಖರ್ 38 ಎಸೆತಗಳಲ್ಲಿ ಅರ್ಧಶತಕ ದಾಟಿದರು.

53 ರನ್ ಗಳಿಸಿ ಪೆವಿಲಿಯನ್​ಗೆ ವಾಪಸಾದ ಫಖರ್ ಅವರ ವಿಕೆಟ್ ಕೂಡ ಎಹ್ಸಾನ್ ಪಡೆದರು. ಇದಾದ ನಂತರ ರಿಜ್ವಾನ್ ಕೆಲವು ಬೌಂಡರಿಗಳನ್ನು ಬಾರಿಸಿದರು, ಆದರೆ ಖುಶ್ದಿಲ್ ಶಾ ಪಾಕಿಸ್ತಾನದ ಇನ್ನಿಂಗ್ಸ್ ಅನ್ನು ಕೊನೆಯವರೆಗೂ ಕೊಂಡೊಯ್ದರು. ಈ ಎಡಗೈ ಬ್ಯಾಟ್ಸ್‌ಮನ್ ಕೇವಲ 15 ಎಸೆತಗಳಲ್ಲಿ 5 ಸಿಕ್ಸರ್‌ ಸೇರಿದಂತೆ 35 ರನ್ ಗಳಿಸಿದರು. ಇದರಲ್ಲೂ ಖುಶ್ದಿಲ್ ಇನ್ನಿಂಗ್ಸ್‌ನ ಕೊನೆಯ ನಾಲ್ಕು ಎಸೆತಗಳಲ್ಲಿ ಸತತ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರು.

ಪ್ರತಿಕ್ರಿಯೆಯಾಗಿ, ಹಾಂಗ್ ಕಾಂಗ್‌ನ ಇನ್ನಿಂಗ್ಸ್ ಸರಿಯಾಗಿ ಪ್ರಾರಂಭವಾಗಲಿಲ್ಲ ಮತ್ತು ವಿಕೆಟ್‌ಗಳು ಬೀಳುತ್ತಲೇ ಇದ್ದವು. ಆರಂಭಿಕರು ಮೊದಲ ಎರಡು ಓವರ್‌ಗಳಲ್ಲಿ 16 ರನ್ ಸೇರಿಸಿದರು, ಆದರೆ ಮೂರನೇ ಓವರ್‌ನಿಂದ ವಿಕೆಟ್‌ಗಳು ಬೀಳಲು ಪ್ರಾರಂಭಿಸಿದವು. ನಸೀಮ್ ಶಾ ವಿಕೆಟ್ ತೆರೆದರು, ನಂತರ ಶಾದಾಬ್ ಖಾನ್ ಮತ್ತು ಮೊಹಮ್ಮದ್ ನವಾಜ್ ಅವರ ಸ್ಪಿನ್ ಜೋಡಿ ಇಡೀ ಹಾಂಕಾಂಗ್ ಇನ್ನಿಂಗ್ಸ್ ಮುಗಿಸಿತು. ಶಾದಾಬ್ ಕೇವಲ 2.4 ಓವರ್​ಗಳಲ್ಲಿ 8 ರನ್ ನೀಡಿ 4 ವಿಕೆಟ್ ಪಡೆದರೆ, ಮೊಹಮ್ಮದ್ ನವಾಜ್ 2 ಓವರ್​ಗಳಲ್ಲಿ 5 ರನ್ ನೀಡಿ 3 ವಿಕೆಟ್ ಪಡೆದರು. ಹಾಂಗ್‌ಕಾಂಗ್‌ನ ಯಾವುದೇ ಬ್ಯಾಟ್ಸ್‌ಮನ್‌ಗಳು ಎರಡಂಕಿ ಮೊತ್ತವನ್ನು ಮುಟ್ಟಲು ಸಾಧ್ಯವಾಗಲಿಲ್ಲ. ಅಲ್ಲದೆ ಗರಿಷ್ಠ 10 ರನ್‌ಗಳು ಹೆಚ್ಚುವರಿಯಾಗಿ ಬಂದವು. ಹಾಂಕಾಂಗ್ ಕೇವಲ 10.4 ಓವರ್‌ಗಳಲ್ಲಿ 38 ರನ್‌ಗಳಿಗೆ ಆಲೌಟ್ ಆಯಿತು.

Published On - 10:45 pm, Fri, 2 September 22