ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ (New Zealand Beat Pakistan) ನಡುವೆ ನಡೆಯುತ್ತಿರುವ ಟಿ20 ಸರಣಿಯಲ್ಲಿ ಕಿವೀಸ್ ತಂಡ ಸತತ ಎರಡನೇ ಗೆಲುವು ದಾಖಲಿಸಿದೆ. ಹ್ಯಾಮಿಲ್ಟನ್‌ನಲ್ಲಿ ನಡೆದ ಎರಡನೇ ಪಂದ್ಯವನ್ನು 21 ರನ್‌ಗಳಿಂದ ಗೆದ್ದುಕೊಳ್ಳುವ ಮೂಲಕ ಆತಿಥೇಯರು ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದ್ದಾರೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಿವೀಸ್ 194 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ 173 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಪಾಕ್ ಪರ ಬಾಬರ್ (Babar Azam) ಹಾಗೂ ಫಖರ್ ಜಮಾನ್ (Fakhar Zaman) ತಲಾ ಅರ್ಧಶತಕ ಸಿಡಿಸಿ ಗೆಲುವಿಗಾಗಿ ಹೋರಾಡಿದರಾದರೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಆದರೆ ಈ ಇಬ್ಬರು ಬೌಂಡರಿ ಸಿಕ್ಸರ್ಗಳ ಸುರಿಮಳೆಗೈಯುವ ಮೂಲಕ ಮೈದಾನದಲ್ಲಿ ನೆರೆದಿದ್ದವರಿಗೆ ಮನರಂಜನೆ ನೀಡುವಲ್ಲಿ ಯಶಸ್ವಿಯಾದರು. ಇದೇ ವೇಳೆ ಪಂದ್ಯಕ್ಕೆ ಬಳಸಿದ್ದ ಬಾಲ್ ಕಳತ್ತನವಾದ ಪ್ರಸಂಗವೂ ನಡೆಯಿತು. ಇದರಿಂದ ಆಟ ಕೊಂಚ ಸಮಯ ಸ್ಥಗಿತ ಕೂಡ ಆಯಿತು.
ವಾಸ್ತವವಾಗಿ ನ್ಯೂಜಿಲೆಂಡ್‌ನ ಹ್ಯಾಮಿಲ್ಟನ್‌ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲೂ ಮೊದಲ ಪಂದ್ಯದಂತೆ ರನ್ ಮಳೆಯೇ ಹರಿಯಿತು. ಹೀಗಾಗಿ ನ್ಯೂಜಿಲೆಂಡ್ ತಂಡ ಫಿನ್ ಅಲೆನ್ ಅವರ 74 ರನ್‌ಗಳ ಕೊಡುಗೆಯಿಂದಾಗಿ 20 ಓವರ್‌ಗಳಲ್ಲಿ 194 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಪಾಕ್ ತಂಡಕ್ಕೆ ಆರಂಭದಲ್ಲೇ ಎರಡು ವಿಕೆಟ್ಗಳ ಆಘಾತ ಎದುರಾಯಿತು. ನಂತರ ಇನ್ನಿಂಗ್ಸ್ ಜವಬ್ದಾರಿ ಹೊತ್ತ ಬಾಬರ್ ಮತ್ತು ಫಖರ್ ಜಮಾನ್ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಬ್ಯಾಟ್ ಬೀಸಿದರು. ಒಂದೆಡೆ ಬಾಬರ್ ಬೌಂಡರಿ ಬಾರಿಸುತ್ತಿದ್ದರೆ, ಮತ್ತೊಂದೆಡೆ ಫಖರ್ ಬಿಗ್ ಬಿಗ್ ಸಿಕ್ಸರ್ ಬಾರಿಸುತ್ತಿದ್ದರು.
ಇದೇ ವೇಳೆ ಪಾಕ್ ಇನ್ನಿಂಗ್ಸ್ ನಡೆಯುತ್ತಿದ್ದ ಸಮಯದಲ್ಲಿ ಆಟ ನೋಡಲು ಮೈದಾನಕ್ಕೆ ಬಂದಿದ್ದ ಪ್ರೇಕ್ಷಕನೊಬ್ಬ ಬಾಲ್ ಕದ್ದು ಪರಾರಿಯಾದ ಪ್ರಸಂಗವೂ ನಡೆಯಿತು. ವಾಸ್ತವವಾಗಿ ನ್ಯೂಜಿಲೆಂಡ್ ವೇಗಿ ಬೆನ್ ಸಿಯರ್ಸ್ ಬೌಲ್ ಮಾಡಿದ 6ನೇ ಓವರ್ನಲ್ಲಿ ಫಖರ್ ಜಮಾನ್ ಬಿಗ್ ಸಿಕ್ಸರ್ ಬಾರಿಸಿದರು. ಫಖರ್ ಶಕ್ತಿಯ ಮುಂದೆ ತಲೆಬಾಗಿದ ಚೆಂಡು ನೇರವಾಗಿ ಕ್ರೀಡಾಂಗಣದ ಹೊರಗೆ ಹೋಗಿ ರಸ್ತೆಯಲ್ಲಿ ಬಿದ್ದಿತು. ಇದನ್ನು ನೋಡಿದ್ದ ಅಲ್ಲಿದ್ದ ಕೆಲವು ಅಭಿಮಾನಿಗಳು ಚೆಂಡನ್ನು ಹಿಡಿಯಲು ಓಡಿದರು.
Six of the day 🙌🔥#FakharZaman
#木村拓哉 #佐々木久美 #ワイドナ pic.twitter.com/GfNDtDhsMn
— ᵂᵃˢᵉᵉᵐ ᴿᵃʰⁱᵐᵒᵒⁿ 🇵🇰 (@WaseemRahim00n) January 14, 2024
ಈ ವೇಳೆ ಒಬ್ಬ ಪ್ರೇಕ್ಷಕ ಆ ಚೆಂಡನ್ನು ಎತ್ತಿಕೊಂಡು ಮೈದಾನದೊಳಕ್ಕೆ ಎಸೆಯದೆ, ರಸ್ತೆಯಲ್ಲಿ ಓಡಲಾರಂಭಿಸಿದನು. ಎಲ್ಲರೂ ಆತ ವಾಪಸ್ ಬರುತ್ತಾನೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಬಾಲನ್ನು ಎತ್ತಿಕೊಂಡ ಆ ವ್ಯಕ್ತಿ ಮತ್ತೆ ಮೈದಾನಕ್ಕೆ ಬರಲೇ ಇಲ್ಲ. ಹೀಗಾಗಿ ಮೈದಾನದಲ್ಲಿದ್ದ ಅಂಪೈರ್ ಮತ್ತೊಂದು ಬಾಲ್ ತರಿಸಿಕೊಂಡು ಪಂದ್ಯವನ್ನು ಮತ್ತೆ ಪ್ರಾರಂಭಿಸಿದರು. ಇದೀಗ ಪ್ರೇಕ್ಷಕ ಬಾಲ್ ಕದ್ದು ಓಡಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
نیوزی لینڈ کے خلاف دوسرے ٹی ٹوئینٹی میں فخر زمان کے چھکے پر گراؤنڈ سے باہر جانے والی گیند فین لے کر بھاگ گیا۔۔#PAKvsNZ #FakharZaman #sixer pic.twitter.com/6wlYAEkCLQ
— Baber khan (@Baberkhansr) January 14, 2024
ಪಂದ್ಯದ ಮಟ್ಟಿಗೆ ಹೇಳುವುದಾದರೆ, ಪಾಕಿಸ್ತಾನ ಸತತ ಎರಡನೇ ಸೋಲನ್ನು ಎದುರಿಸಬೇಕಾಯಿತು. ನ್ಯೂಜಿಲೆಂಡ್ ನೀಡಿದ 195 ರನ್‌ಗಳ ಗುರಿಯನ್ನು ಸಾಧಿಸುವ ಯತ್ನದಲ್ಲಿ ಇಡೀ ತಂಡವು 19.3 ಓವರ್‌ಗಳಲ್ಲಿ ಕೇವಲ 173 ರನ್‌ಗಳಿಗೆ ಕುಸಿದು 21 ರನ್‌ಗಳಿಂದ ಪಂದ್ಯವನ್ನು ಕಳೆದುಕೊಂಡಿತು. ಪಾಕಿಸ್ತಾನ ಪರ ಬಾಬರ್ ಆಝಂ (66) ಮತ್ತು ಫಖರ್ ಜಮಾನ್ (50) ಅರ್ಧಶತಕ ಸಿಡಿಸಿದರು. ಆದರೆ ಅವರನ್ನು ಹೊರತುಪಡಿಸಿ ಇತರ ಬ್ಯಾಟ್ಸ್‌ಮನ್‌ಗಳು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:53 pm, Sun, 14 January 24