ಹ್ಯಾಮಿಲ್ಟನ್‌ನಲ್ಲಿ ನಡೆದ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ (New Zealand Beat Pakistan ) ನಡುವಿನ ಎರಡನೇ ಟಿ20 ಪಂದ್ಯದಲ್ಲಿಯೂ ಆತಿಥೇಯ ನ್ಯೂಜಿಲೆಂಡ್ 21 ರನ್‌ಗಳ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಿವೀಸ್ ಪಡೆ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 194 ರನ್ ಗಳಿಸಿತು. ತಂಡದ ಪರ ಫಿನ್ ಅಲೆನ್ ಅರ್ಧಶತಕ ಬಾರಿಸಿದನ್ನು ಬಿಟ್ಟರೆ ಬೇರೆ ಯಾವುದೇ ಬ್ಯಾಟ್ಸ್‌ಮನ್ ಹೇಳಿಕೊಳ್ಳುವಂತಹ ಇನ್ನಿಂಗ್ಸ್ ಆಡಲಿಲ್ಲ. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ಪೂರ್ಣ 20 ಓವರ್ಗಳನ್ನೂ ಆಡಲು ಸಾಧ್ಯವಾಗದೆ ಕೊನೆಯ ಓವರ್ನಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 173 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಈ ಗೆಲುವಿನೊಂದಿಗೆ ಕಿವೀಸ್ ಪಡೆ 5 ಪಂದ್ಯಗಳ ಸರಣಿಯಲ್ಲಿ 2-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ಉತ್ತಮ ಆರಂಭ ಪಡೆದಿತ್ತು. ಆರಂಭಿಕರಾದ ಫಿನ್ ಅಲೆನ್ ಮತ್ತು ಡೆವೊನ್ ಕಾನ್ವೆ ಮೊದಲ ವಿಕೆಟ್‌ಗೆ 5.1 ಓವರ್‌ಗಳಲ್ಲಿ 59 ರನ್‌ಗಳ ಜೊತೆಯಾಟ ನೀಡಿದರು. ಕಾನ್ವೆ 20 ರನ್ ಗಳಿಸಿ ಔಟಾದರು. ಇದರ ನಂತರ ಅಲೆನ್ ಮತ್ತು ವಿಲಿಯಮ್ಸನ್ ನಡುವೆ 78 ರನ್‌ಗಳ ಜೊತೆಯಾಟವಿತ್ತು. ಈ ವೇಳೆ ಆರಂಭಿಕ ಫಿನ್ ಅಲೆನ್ 41 ಎಸೆತಗಳಲ್ಲಿ 7 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 74 ರನ್ ಗಳಿಸಿ ಔಟಾದರು.
ಸ್ಫೋಟಕ ಆರಂಭದ ಲಾಭ ಪಡೆದ ನ್ಯೂಜಿಲೆಂಡ್ ಕೇವಲ 13 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 137 ರನ್ ಕಲೆಹಾಕಿತ್ತು. ಆ ಬಳಿಕ ನಾಯಕ ಕೇನ್ ವಿಲಿಯಮ್ಸನ್ ಗಾಯಗೊಂಡು ನಿವೃತ್ತರಾದರೆ, ಮಧ್ಯಮ ಕ್ರಮಾಂಕದಿಂದ ಅಂತಹ ಹೇಳಿಕೊಳ್ಳುವಂತಹ ಇನ್ನಿಂಗ್ಸ್ ಬರಲಿಲ್ಲ. ಇದರ ಲಾಭ ಪಡೆದ ಪಾಕ್ ಬೌಲರ್ಗಳು ಕಿವೀಸ್ ರನ್ ವೇಗಕ್ಕೆ ಕಡಿವಾಣ ಹಾಕಿದರು. ಪಾಕ್ ಪರ ಅದ್ಭುತ ಬೌಲಿಂಗ್ ಮಾಡಿದ ಹ್ಯಾರಿಸ್ ರೌಫ್ 3 ವಿಕೆಟ್ ಪಡೆದರೆ, ಅಬ್ಬಾಸ್ ಅಫ್ರಿದಿ ಕೂಡ ಉತ್ತಮ ಬೌಲಿಂಗ್ ಮಾಡಿ 2 ವಿಕೆಟ್ ಪಡೆದರು. ನಾಯಕ ಶಾಹೀನ್ ಅಫ್ರಿದಿ ಯಾವುದೇ ವಿಕೆಟ್ ಪಡೆಯಲಿಲ್ಲ. ಅಮರ್ ಜಮಾಲ್ ಮತ್ತು ಉಸಾಮಾ ಮಿರ್ ತಲಾ ಒಂದೊಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ನ್ಯೂಜಿಲೆಂಡ್ ನೀಡಿದ ಈ ಬೃಹತ್ ಗುರಿ ಬೆನ್ನಟ್ಟಿದ ಪಾಕಿಸ್ತಾನಕ್ಕೆ ಕಳೆದ ಪಂದ್ಯದಂತೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕರಿಬ್ಬರು ಒಂದಂಕಿಗೆ ಪೆವಿಲಿಯನ್ ಸೇರಿಕೊಂಡರು. ಆಯೂಬ್ 1 ರನ್ಗಳಿಗೆ ವಿಕೆಟ್ ಒಪ್ಪಿಸಿದರೆ, ರಿಜ್ವಾನ್ 7 ರನ್ಗಳಿಗೆ ಸುಸ್ತಾದರು. ಆ ಬಳಿಕ ಜೊತೆಯಾದ ಬಾಬರ್ ಆಝಂ ಹಾಗೂ ಫಾಖರ್ ಜಮಾನ್ ತಲಾ ಅರ್ಧಶತಕ ಸಿಡಿಸಿ ಗೆಲುವಿಗಾಗಿ ಹೋರಾಡಿದರು.
ಮಾಜಿ ನಾಯಕ ಬಾಬರ್ 43 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಾಯದಿಂದ 66 ರನ್ ಕಲೆಹಾಕಿದರೆ, ಜಮಾನ್ ಕೇವಲ 25 ಎಸೆತಗಳಲ್ಲಿ 3 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 50 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು. ಕೊನೆಯ ನಾಯಕ ಶಾಹೀನ್ ಅಫ್ರಿದಿ 22 ರನ್ ಕಲೆಹಾಕಿ ಗೆಲುವಿಗಾಗಿ ಹೋರಾಡಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ನ್ಯೂಜಿಲೆಂಡ್ ಪರ ಆಡಮ್ ಮಿಲ್ನೆ 4, ಟಿಮ್ ಸೌಥಿ 2 ವಿಕೆಟ್ ಪಡೆದರೆ, ಬೆನ್ ಸಿಯರ್ಸ್ ಮತ್ತು ಇಶ್ ಸೋಧಿ ತಲಾ 2 ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:52 pm, Sun, 14 January 24