PAK vs SA: ಪಾಕಿಸ್ತಾನಕ್ಕೆ ಸತತ 4ನೇ ಸೋಲು; ಬಾಬರ್ ಪಡೆಗೆ ಸೆಮೀಸ್​ ಹಾದಿ ಇನ್ನಷ್ಟು ಕಠಿಣ..!

|

Updated on: Oct 28, 2023 | 6:08 AM

PAK vs SA, World Cup 2023: ಇದು 2023ರ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾದ 5ನೇ ಗೆಲುವು. ಈ ಐದು ಗೆಲುವುಗಳೊಂದಿಗೆ ದಕ್ಷಿಣ ಆಫ್ರಿಕಾ ತಂಡ 10 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ತಲುಪಿದೆ. ಇತ್ತ 6 ಪಂದ್ಯಗಳಲ್ಲಿ 4 ರಲ್ಲಿ ಸೋತಿರುವ ಪಾಕಿಸ್ತಾನ ತಂಡ ಪ್ರಸ್ತುತ ಆರನೇ ಸ್ಥಾನದಲ್ಲಿದೆ.

PAK vs SA: ಪಾಕಿಸ್ತಾನಕ್ಕೆ ಸತತ 4ನೇ ಸೋಲು; ಬಾಬರ್ ಪಡೆಗೆ ಸೆಮೀಸ್​ ಹಾದಿ ಇನ್ನಷ್ಟು ಕಠಿಣ..!
ದಕ್ಷಿಣ ಆಫ್ರಿಕಾ- ಪಾಕಿಸ್ತಾನ
Follow us on

2023ರ ವಿಶ್ವಕಪ್‌ನಲ್ಲಿ (ICC World Cup 2023) ದಕ್ಷಿಣ ಆಫ್ರಿಕಾ ತಂಡ ತನ್ನ ಐದನೇ ಗೆಲುವು ದಾಖಲಿಸಿದೆ. ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಪಾಕಿಸ್ತಾನವನ್ನು (Pakistan vs South Africa) ಕೇವಲ 1 ವಿಕೆಟ್‌ನಿಂದ ರೋಚಕವಾಗಿ ಸೋಲಿಸಿತು. ವಿಶ್ವಕಪ್‌ನಲ್ಲಿ ಪಾಕಿಸ್ತಾನಕ್ಕೆ ಇದು ಸತತ ನಾಲ್ಕನೇ ಸೋಲಾಗಿದ್ದು, ಈ ಸೋಲಿನೊಂದಿಗೆ ಪಾಕ್ ತಂಡದ ವಿಶ್ವಕಪ್ ಪ್ರಯಾಣವೂ ಬಹುತೇಕ ಅಂತ್ಯಗೊಂಡಂತ್ತಾಗಿದೆ. ಇಲ್ಲಿಂದ ಪಾಕ್ ತಂಡ ಸೆಮಿಫೈನಲ್​ಗೇರಬೇಕೆಂದರೆ ಪವಾಡವೇ ನಡೆಯಬೇಕಿದೆ. ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ 270 ರನ್ ಗಳಿಸಲಷ್ಟೇ ಶಕ್ತವಾಯಿತು. ದಕ್ಷಿಣ ಆಫ್ರಿಕಾ ಪರ ತಬ್ರೇಜ್ ಶಮ್ಸಿ 4 ವಿಕೆಟ್ ಪಡೆದರು. ಈ ಗುರಿ ಬೆನ್ನಟ್ಟಿದ ಆಫ್ರಿಕಾ ಪರ ಏಡೆನ್ ಮಾರ್ಕ್ರಾಮ್ (Aiden Markram) 91 ರನ್​ಗಳ ಅಮೋಘ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದರಾದರೂ, ಕೊನೆಯ ಹಂತದಲ್ಲಿ ಪಾಕಿಸ್ತಾನವು ಬಲವಾದ ಪುನರಾಗಮನವನ್ನು ಮಾಡಿತು. ಹೀಗಾಗಿ ಪಂದ್ಯ ರೋಚಕ ಘಟ್ಟ ತಲುಪಿತು. ಆದರೆ ಅಂತಿಮವಾಗಿ ಕೇಶವ ಮಹಾರಾಜ್ 21 ಎಸೆತಗಳಲ್ಲಿ 7 ರನ್​ಗಳ ಅಜೇಯ ಇನ್ನಿಂಗ್ಸ್ ಆಡುವ ಮೂಲಕ ತಂಡಕ್ಕೆ ಸ್ಮರಣೀಯ ಜಯ ತಂದುಕೊಟ್ಟರು.

ಪ್ರಸ್ತುತ ಆರನೇ ಸ್ಥಾನ

ಇನ್ನು ಮೇಲೆ ಹೇಳಿದಂತೆ ಇದು 2023ರ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾದ 5ನೇ ಗೆಲುವು. ಈ ಐದು ಗೆಲುವುಗಳೊಂದಿಗೆ ದಕ್ಷಿಣ ಆಫ್ರಿಕಾ ತಂಡ 10 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ತಲುಪಿದೆ. ಇತ್ತ 6 ಪಂದ್ಯಗಳಲ್ಲಿ 4 ರಲ್ಲಿ ಸೋತಿರುವ ಪಾಕಿಸ್ತಾನ ತಂಡ ಪ್ರಸ್ತುತ ಆರನೇ ಸ್ಥಾನದಲ್ಲಿದೆ. ಸೆಮಿಫೈನಲ್‌ ರೇಸ್‌ನಲ್ಲಿ ಉಳಿಯಲು ಪಾಕಿಸ್ತಾನ ತಂಡ ಮುಂಬರುವ ಎಲ್ಲಾ ಪಂದ್ಯಗಳನ್ನು ಉತ್ತಮ ಅಂತರದಿಂದ ಗೆಲ್ಲಬೇಕಾಗಿದೆ.

PAK vs SA Highlights: ಗೆದ್ದ ಆಫ್ರಿಕಾ; ಪಾಕ್ ತಂಡದ ವಿಶ್ವಕಪ್ ಪ್ರಯಾಣ ಭಾಗಶಃ ಅಂತ್ಯ

ಪಾಕಿಸ್ತಾನ ಇನ್ನಿಂಗ್ಸ್

ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನಕ್ಕೆ ಉತ್ತಮವಾಗಿ ಆರಂಭ ಸಿಗಲಿಲ್ಲ. ಆರಂಭಿಕರಾದ ಅಬ್ದುಲ್ಲಾ ಶಫೀಕ್ ಮತ್ತು ಇಮಾಮ್-ಉಲ್-ಹಕ್ ಬೇಗನೇ ಪೆವಲಿಯನ್ ಸೇರಿಕೊಡರು. ಆ ಬಳಿಕ ಒಂದಾದ ಬಾಬರ್ ಆಝಂ ಮತ್ತು ಮೊಹಮ್ಮದ್ ರಿಜ್ವಾನ್ ತಂಡದ ಇನ್ನಿಂಗ್ಸ್ ಉಳಿಸಿದರು. ಬಾಬರ್ 65 ಎಸೆತಗಳಲ್ಲಿ 50 ರನ್ ಗಳಿಸಿದರೆ, ರಿಜ್ವಾನ್​ಗೆ ಯಾವುದೇ ಪರಿಣಾಮಕಾರಿ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಆ ನಂತರ ಬಂದ ಸೌದ್ ಶಕೀಲ್ ಮತ್ತು ಶಾದಾಬ್ ಖಾನ್ ಉತ್ತಮ ಬ್ಯಾಟಿಂಗ್ ನಡೆಸಿದರು. ಈ ವೇಳೆ ಸೌದ್ ಶಕೀಲ್ 52 ಎಸೆತಗಳಲ್ಲಿ 52 ರನ್, ಶಾದಾಬ್ ಖಾನ್ 36 ಎಸೆತಗಳಲ್ಲಿ 43 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ ಪರ ತಬ್ರೇಜ್ ಶಮ್ಸಿ 4, ಮಾರ್ಕೊ ಜಾನ್ಸೆನ್ 3, ಜೆರಾಲ್ಡ್ ಕೊಯೆಟ್ಜಿ 2, ಲುಂಗಿ ಎನ್ಗಿಡಿ 1 ವಿಕೆಟ್ ಪಡೆದರು.

ದಕ್ಷಿಣ ಆಫ್ರಿಕಾ ಇನ್ನಿಂಗ್ಸ್

271 ರನ್​ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾಕ್ಕೆ 34 ರನ್​ಗಳಿದಾಗ ಮೊದಲ ಹೊಡೆತ ಬಿದ್ದಿತು. ಕ್ವಿಂಟನ್ ಡಿ ಕಾಕ್ 24 ರನ್ ಗಳಿಸಿ ಔಟಾದರು. ನಂತರ ಟೆಂಬಾ ಬವುಮಾ 28 ರನ್​ಗಳಿಸಿ ಟೆಂಟ್‌ಗೆ ಮರಳಿದರು. ರಾಸ್ಸಿ ವ್ಯಾನ್ ಡೆರ್ ಡ್ಯೂಸೆನ್ ಕೂಡ ವಿಶೇಷವಾದದ್ದನ್ನು ಮಾಡಲು ಸಾಧ್ಯವಾಗಲಿಲ್ಲ. ಅವರು 21 ರನ್ ಗಳಿಸಿ ಔಟಾದರು. ಆದರೆ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಏಡೆನ್ ಮಾರ್ಕ್ರಾಮ್ 93 ಎಸೆತಗಳಲ್ಲಿ 91 ರನ್ ಗಳಿಸಿ 9 ರನ್​ಗಳಿಂದ ಶತಕ ವಂಚಿತರಾದರು. ಈ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್‌ಗಳು ಸೇರಿದ್ದವು. ಡೇವಿಡ್ ಮಿಲ್ಲರ್ ಕೂಡ ಮಾರ್ಕ್ರಾಮ್ ಜೊತೆ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಆದರೆ ಈ ಇಬ್ಬರ ವಿಕೆಟ್ ಪತನದ ಬಳಿಕ ಆಫ್ರಿಕಾ ಸೋಲಿನ ಸುಳಿಗೆ ಸಿಲುಕಿತು. ಆಫ್ರಿಕಾದ ಬಾಲಂಗೋಚಿಗಳನ್ನು ಕಟ್ಟಿಹಾಕುವಲ್ಲಿ ಪಾಕ್ ಬೌಲರ್​ಗಳು ಯಶಸ್ವಿಯಾದರು. ಆದರೆ ಅಂತಿಮ ಹಂತದಲ್ಲಿ ಕೇಶವ್ ಮಹರಾಜ್ ಬೌಂಡರಿ ಬಾರಿಸಿ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:05 am, Sat, 28 October 23