ಇಂದು ಸಿಡ್ನಿ ಮೈದಾನದಲ್ಲಿ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನದ (Pakistan Vs New Zealand) ನಡುವೆ ಟಿ20 ವಿಶ್ವಕಪ್‌ನ (T20 World Cup 2022) ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದವರು ನೇರವಾಗಿ ಫೈನಲ್ಗೆ ಲಗ್ಗೆ ಇಡಲಿದ್ದಾರೆ. ನ್ಯೂಜಿಲೆಂಡ್ ತಂಡವು ಗ್ರೂಪ್ 1 ರಿಂದ ನಂಬರ್ ಒನ್ ಸ್ಥಾನದಲ್ಲಿ ಉಳಿಯುವ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ. ಮತ್ತೊಂದೆಡೆ, ಪಾಕಿಸ್ತಾನ ಗ್ರೂಪ್ 2 ರಿಂದ ಸೆಮಿಫೈನಲ್ ಪ್ರವೇಶಿಸಿದೆ. ಕಳಪೆ ಆರಂಭದ ಹೊರತಾಗಿಯೂ, ಪಾಕಿಸ್ತಾನ ತಂಡ ಸೆಮಿಫೈನಲ್ ತಲುಪುವಲ್ಲಿ ಯಶಸ್ವಿಯಾಗಿದೆ. ಈಗ ಪಾಕಿಸ್ತಾನ-ನ್ಯೂಜಿಲೆಂಡ್ ಮುಖಾಮುಖಿಯಾಗಿದ್ದು, ಈ ಪಂದ್ಯಕ್ಕೂ ಮುನ್ನ ಇಡೀ ಪಾಕಿಸ್ತಾನಕ್ಕೆ ರಜೆ ನೀಡುವ ಮೂಲಕ ಪಾಕ್ ಸರ್ಕಾರ ಈ ಪಂದ್ಯಕ್ಕೆ ಇನ್ನಷ್ಟು ರಂಗು ತಂದಿದೆ.
ನವೆಂಬರ್ 9 ರಂದು ಅಂದರೆ ಟಿ20 ವಿಶ್ವಕಪ್‌ನ ಮೊದಲ ಸೆಮಿಫೈನಲ್ ದಿನದಂದು, ಇಡೀ ಪಾಕಿಸ್ತಾನಕ್ಕೆ ರಜಾದಿನವಾಗಿದೆ. ವಾಸ್ತವವಾಗಿ ಇಂದು ಡಾ. ಅಲ್ಲಾಮ ಮೊಹಮ್ಮದ್ ಇಕ್ಬಾಲ್ ಅವರ 145 ನೇ ಜನ್ಮದಿನವಾಗಿದ್ದು, ಈ ವಿಶೇಷ ದಿನದಂದು ಪಾಕಿಸ್ತಾನದ ಪ್ರಧಾನಿ ಕಾರ್ಯಾಲಯ ಇಡೀ ದೇಶಕ್ಕೆ ರಜೆ ಘೋಷಿಸಿ ಆದೇಶ ಹೊರಡಿಸಿದೆ.
ಇದನ್ನೂ ಓದಿ: T20 World Cup: ಸೆಮಿಫೈನಲ್ ನಡೆಯದಿದ್ದರೆ ನ್ಯೂಜಿಲೆಂಡ್- ಭಾರತಕ್ಕೆ ಲಾಭ; ಇಂಗ್ಲೆಂಡ್- ಪಾಕ್ಗೆ ಸಂಕಷ್ಟ
ಇಂದು ಪಾಕಿಸ್ತಾನದಲ್ಲಿ ರಜಾದಿನ
ಪಾಕಿಸ್ತಾನದಲ್ಲಿ ನವೆಂಬರ್ 9 ರ ರಜೆಯ ಬಗ್ಗೆ ಅಲ್ಲಿನ ಸರ್ಕಾರ ಮಂಗಳವಾರ ಘೋಷಣೆ ಮಾಡಿದೆ. ಇಕ್ಬಾಲ್ ದಿನದ ನಿಮಿತ್ತ ನವೆಂಬರ್ 9 ರಂದು ರಜೆ ನೀಡಲಾಗುವುದು ಎಂದು ಸರ್ಕಾರದಿಂದ ಹೇಳಿಕೆ ಬಿಡುಗಡೆ ಮಾಡಲಾಗಿದೆ.
Public holiday announced in Pakistan tomorrow on Wednesday, 9th November for Allama Iqbal Day. Enjoy the semifinal and keep praying ?#IqbalDay #T20WorldCup
— Farid Khan (@_FaridKhan) November 8, 2022
ಸಿಡ್ನಿಯಲ್ಲಿ ಮುಖಾಮುಖಿ
ನವೆಂಬರ್ 9 ರಂದು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಮುಖಾಮುಖಿಯಾಗಲಿವೆ. ಈ ಮೈದಾನದಲ್ಲಿ ಇದು ಉಭಯ ತಂಡಗಳ ಮೊದಲ ಟಿ20 ಮುಖಾಮುಖಿಯಾಗಿದೆ. ಟಿ20 ಕ್ರಿಕೆಟ್ನಲ್ಲಿ ಎರಡೂ ತಂಡಗಳ ಒಟ್ಟಾರೆ ದಾಖಲೆಯನ್ನು ನಾವು ನೋಡಿದರೆ, ಇದುವರೆಗೆ ಆಡಿರುವ 28 ಪಂದ್ಯಗಳಲ್ಲಿ, ಪಾಕಿಸ್ತಾನ ತಂಡ ನ್ಯೂಜಿಲೆಂಡ್ ವಿರುದ್ಧ ಮೇಲುಗೈ ಸಾಧಿಸಿದ್ದು, 17 ಪಂದ್ಯಗಳಲ್ಲಿ ಗೆಲುವು ಸಾಧಿಸಿ, ಇನ್ನುಳಿದ11 ಪಂದ್ಯಗಳಲ್ಲಿ ಸೋಲುಂಡಿದೆ.
ಆದರೆ, 2022 ರ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ತಂಡದ ವಿಚಾರಕ್ಕೆ ಬಂದರೆ, ಇಲ್ಲಿ ನ್ಯೂಜಿಲೆಂಡ್ ಪಾಕಿಸ್ತಾನಕ್ಕಿಂತ ಮುಂದಿದೆ. ಕಠಿಣ ಪರಿಶ್ರಮಕ್ಕಿಂತ ಹೆಚ್ಚಿನ ಅದೃಷ್ಟದೊಂದಿಗೆ ಪಾಕಿಸ್ತಾನ ತಂಡ ಸೆಮಿಫೈನಲ್ ತಲುಪಿದೆ. ಮತ್ತೊಂದೆಡೆ, ನ್ಯೂಜಿಲೆಂಡ್ ತಂಡ ಎಲ್ಲಾ ಬಲಿಷ್ಠ ತಂಡಗಳನ್ನು ಮಣಿಸಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ. ಅಷ್ಟೇ ಅಲ್ಲದೆ ಸೆಮಿಫೈನಲ್ ಪಂದ್ಯ ನಡೆಯುತ್ತಿರುವ ಸಿಡ್ನಿ ಮೈದಾನದಲ್ಲಿ ಈ ಮೊದಲು ನ್ಯೂಜಿಲೆಂಡ್ ತಂಡ ಆತಿಥೇಯ ಆಸ್ಟ್ರೇಲಿಯಾವನ್ನು 89 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿದ ದಾಖಲೆ ಹೊಂದಿದೆ. ಆದರೆ, ಇದೇ ಮೈದಾನದಲ್ಲಿ ಪಾಕಿಸ್ತಾನ ಕೂಡ ದಕ್ಷಿಣ ಆಫ್ರಿಕಾವನ್ನು ಸೋಲಿಸಿತು. ಅಂದರೆ, ಈ ಉಭಯ ತಂಡಗಳ ನಡುವಿನ ಕದನ ರೋಚಕ ಘಟ್ಟ ತಲುಪುವುದಂತೂ ಖಚಿತವಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ