BAN vs PAK: ಬಾಂಗ್ಲಾದೇಶ ವಿರುದ್ಧ ಪಂದ್ಯ ಗೆದ್ದು ಸರಣಿ ಸೋತ ಪಾಕಿಸ್ತಾನ

Pakistan vs Bangladesh T20: ಪಾಕಿಸ್ತಾನ, ಬಾಂಗ್ಲಾದೇಶದ ವಿರುದ್ಧದ ಮೂರನೇ ಮತ್ತು ಅಂತಿಮ ಟಿ20 ಪಂದ್ಯವನ್ನು 74 ರನ್‌ಗಳಿಂದ ಗೆದ್ದು ವೈಟ್ ವಾಶ್ ತಪ್ಪಿಸಿಕೊಂಡಿತು. ಫರ್ಹಾನ್ ಅವರ 63 ರನ್‌ಗಳ ಅದ್ಭುತ ಇನಿಂಗ್ಸ್ ಪಾಕಿಸ್ತಾನದ ಗೆಲುವಿಗೆ ಪ್ರಮುಖ ಕಾರಣವಾಯಿತು. ಆದರೂ, ಬಾಂಗ್ಲಾದೇಶ 2-1 ಅಂತರದಿಂದ ಸರಣಿಯನ್ನು ಗೆದ್ದುಕೊಂಡಿತು

BAN vs PAK: ಬಾಂಗ್ಲಾದೇಶ ವಿರುದ್ಧ ಪಂದ್ಯ ಗೆದ್ದು ಸರಣಿ ಸೋತ ಪಾಕಿಸ್ತಾನ
Pakistan Team

Updated on: Jul 25, 2025 | 4:32 PM

ಮೂರನೇ ಮತ್ತು ಕೊನೆಯ ಟಿ20 ಪಂದ್ಯವನ್ನು ಗೆಲ್ಲುವ ಮೂಲಕ ಪಾಕಿಸ್ತಾನ ವೈಟ್ ವಾಶ್ ಮುಖಭಂಗದಿಂದ ಪಾರಾಗಿದೆ. ಬಾಂಗ್ಲಾದೇಶ ವಿರುದ್ಧದ ಮೂರನೇ ಟಿ20 ಪಂದ್ಯವನ್ನು ಪಾಕಿಸ್ತಾನ (Pakistan vs Bangladesh) 74 ರನ್‌ಗಳಿಂದ ಗೆದ್ದುಕೊಂಡಿತು. ಇತ್ತ ಈ ಸೋಲಿನ ಹೊರತಾಗಿಯೂ, ಬಾಂಗ್ಲಾದೇಶ ಮೂರು ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಿಂದ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಢಾಕಾದ ಮಿರ್‌ಪುರದಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 178 ರನ್‌ಗಳನ್ನು ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಇಡೀ ಬಾಂಗ್ಲಾದೇಶ ತಂಡ 16.4 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 104 ರನ್‌ ಕಲೆಹಾಕಲಷ್ಟೇ ಶಕ್ತವಾಯಿತು.

ಇದಕ್ಕೂ ಮೊದಲು ನಡೆದ ಎರಡು ಪಂದ್ಯಗಳಲ್ಲಿ, ಬಾಂಗ್ಲಾದೇಶ ಮೊದಲ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದರೆ, ಎರಡನೇ ಪಂದ್ಯದಲ್ಲಿ ಪಾಕಿಸ್ತಾನವನ್ನು 8 ರನ್‌ಗಳಿಂದ ಸೋಲಿಸಿತು. ಆದಾಗ್ಯೂ, ಬಾಂಗ್ಲಾದೇಶ ತಂಡಕ್ಕೆ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಲು ಸಾಧ್ಯವಾಗಲಿಲ್ಲ. ಮೂರನೇ ಪಂದ್ಯದಲ್ಲಿ, ಪಾಕಿಸ್ತಾನದ ಆರಂಭಿಕ ಬ್ಯಾಟ್ಸ್‌ಮನ್ ಸಾಹಿಬ್‌ಜಾದಾ ಫರ್ಹಾನ್ 41 ಎಸೆತಗಳಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಾಯದಿಂದ ಅತ್ಯಧಿಕ 63 ರನ್‌ಗಳನ್ನು ಗಳಿಸಿ ತಂಡವನ್ನು ಸೋಲಿನಿಂದ ಪಾರು ಮಾಡಿದಲ್ಲದೆ, ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.

ಪಾಕಿಸ್ತಾನಕ್ಕೆ ಉತ್ತಮ ಆರಂಭ

ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಮೊದಲ ವಿಕೆಟ್‌ಗೆ 47 ಎಸೆತಗಳಲ್ಲಿ 82 ರನ್‌ಗಳ ಜೊತೆಯಾಟ ಮೂಡಿತು. ಇದಾದ ನಂತರ, ಆರಂಭಿಕ ಆಟಗಾರ ಸ್ಯಾಮ್ ಅಯೂಬ್ 21 ರನ್ ಗಳಿಸಿ ಔಟಾದರು. ಸ್ವಲ್ಪ ಸಮಯದ ನಂತರ ಸಾಹಿಬ್ಜಾದಾ ಫರ್ಹಾನ್ ಕೂಡ ಪೆವಿಲಿಯನ್‌ಗೆ ಮರಳಿದರು. ಮೊಹಮ್ಮದ್ ಹ್ಯಾರಿಸ್ ಕೂಡ ಕೇವಲ 5 ರನ್ ಗಳಿಸಿ ಔಟಾದರು. ಇದಾದ ನಂತರ ತಂಡದ ಇನ್ನಿಂಗ್ಸ್ ವಹಿಸಿಕೊಂಡ ಹಸನ್ ನವಾಜ್ 17 ಎಸೆತಗಳಲ್ಲಿ 33 ರನ್​ಗಳ ಕಾಣಿಕೆ ನೀಡಿದರು. ಮೊಹಮ್ಮದ್ ನವಾಜ್ ಕೂಡ 16 ಎಸೆತಗಳಲ್ಲಿ 27 ರನ್ ಗಳಿಸಿದರು. ಈ ರೀತಿಯಾಗಿ, ಪಾಕಿಸ್ತಾನ 7 ವಿಕೆಟ್‌ಗಳಿಗೆ 178 ರನ್ ಗಳಿಸಿತು. ಬಾಂಗ್ಲಾದೇಶ ಪರ ತಸ್ಕಿನ್ ಅಹ್ಮದ್ ಗರಿಷ್ಠ ಮೂರು ವಿಕೆಟ್‌ಗಳನ್ನು ಪಡೆದರೆ, ನಸುಮ್ ಅಹ್ಮದ್ ಎರಡು ವಿಕೆಟ್‌ಗಳನ್ನು ಪಡೆದರು.

Asia Cup Hockey 2025: ಭಾರತಕ್ಕೆ ನಮ್ಮ ತಂಡವನ್ನು ಕಳುಹಿಸುವುದಿಲ್ಲ ಎಂದ ಪಾಕಿಸ್ತಾನ

ಬಾಂಗ್ಲಾದೇಶಕ್ಕೆ ಕೆಟ್ಟ ಆರಂಭ

179 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ ತಂಡಕ್ಕೆ ತುಂಬಾ ಕೆಟ್ಟ ಆರಂಭ ಸಿಕ್ಕಿತು. ತಂಡದ ಮೊದಲ ಐದು ವಿಕೆಟ್‌ಗಳು ಕೇವಲ 25 ರನ್‌ಗಳಿಗೆ ಪತನಗೊಂಡವು. ಇದಾದ ಬಳಿಕವೂ ಆತಿಥೇಯ ತಂಡಕ್ಕೆ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಇಡೀ ತಂಡ 16.4 ಓವರ್‌ಗಳಲ್ಲಿ ಕೇವಲ 104 ರನ್‌ ಕಲೆಹಾಕಲಷ್ಟೇ ಶಕ್ತವಾಯಿತು. ಮೊಹಮ್ಮದ್ ಸೈಫುದ್ದೀನ್ ತಂಡದ ಪರ ಅತಿ ಹೆಚ್ಚು 35 ರನ್‌ ಬಾರಿಸಿದರು. ಇತ್ತ ಪಾಕಿಸ್ತಾನ ಪರ ಸಲ್ಮಾನ್ ಮಿರ್ಜಾ ಗರಿಷ್ಠ ಮೂರು ವಿಕೆಟ್ ಪಡೆದರೆ, ಫಹೀಮ್ ಅಶ್ರಫ್ ಮತ್ತು ಮೊಹಮ್ಮದ್ ನವಾಜ್ ತಲಾ ಎರಡು ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:27 pm, Fri, 25 July 25