ಭಾರತವನ್ನು ಸುಲಭವಾಗಿ ಸೋಲಿಸುತ್ತೇವೆ ಎಂದ ಅಕ್ರಮ್; ಬಾಂಗ್ಲಾ ವಿರುದ್ಧದ ಸೋಲನ್ನ ಮರೆತ್ರಾ ಎಂದ ನೆಟ್ಟಿಗರು

|

Updated on: Nov 04, 2024 | 6:56 PM

Wasim Akram on Team India: ಭಾರತ ತಂಡ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸೋತಿರುವುದು ತೀವ್ರ ಟೀಕೆಗೆ ಕಾರಣವಾಗಿದೆ. ಮಾಜಿ ಆಟಗಾರರು ಮತ್ತು ವಾಸಿಂ ಅಕ್ರಮ್ ಅವರಂತಹ ಪಾಕಿಸ್ತಾನದ ಮಾಜಿ ಆಟಗಾರರು ಕೂಡ ಟೀಂ ಇಂಡಿಯಾವನ್ನು ಟೀಕಿಸಿದ್ದಾರೆ. ಅಕ್ರಮ್ ಅವರು ಸ್ಪಿನ್ ಪಿಚ್‌ನಲ್ಲಿ ಪಾಕಿಸ್ತಾನ, ಭಾರತವನ್ನು ಸೋಲಿಸಬಹುದು ಎಂದು ಹೇಳಿದ್ದಾರೆ. ಆದರೆ ಅವರಿಗೆ ಬಾಂಗ್ಲಾದೇಶದ ವಿರುದ್ಧದ ಪಾಕಿಸ್ತಾನದ ಸೋಲನ್ನು ನೆಟ್ಟಿಗರು ನೆನಪಿಸಿದ್ದಾರೆ.

ಭಾರತವನ್ನು ಸುಲಭವಾಗಿ ಸೋಲಿಸುತ್ತೇವೆ ಎಂದ ಅಕ್ರಮ್; ಬಾಂಗ್ಲಾ ವಿರುದ್ಧದ ಸೋಲನ್ನ ಮರೆತ್ರಾ ಎಂದ ನೆಟ್ಟಿಗರು
ವಾಸಿಂ ಅಕ್ರಮ್
Follow us on

ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಸೋತಿರುವ ಟೀಂ ಇಂಡಿಯಾ ಟೀಕಾಕಾರರ ಬಾಯಿಗೆ ರಸದೌತಣದಂತ್ತಾಗಿದೆ. ಇಷ್ಟು ದಿನ ಟೀಂ ಇಂಡಿಯಾ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡುತ್ತಿದ್ದವರು ಇದೀಗ ಭಾರತ ಟೆಸ್ಟ್ ತಂಡವನ್ನು ಇನ್ನಿಲ್ಲಿದಂತೆ ಟೀಕಿಸುತ್ತಿದ್ದಾರೆ. ಇದಕ್ಕೆ ಟೀಂ ಇಂಡಿಯಾದ ಮಾಜಿ ಆಟಗಾರರು ಸೇರಿಕೊಂಡಿರುವುದು ವಿಪರ್ಯಾಸ. ಈ ನಡುವೆ ಪಾಕಿಸ್ತಾನ ಮಾಜಿ ಆಟಗಾರರು ಕೂಡ ಟೀಂ ಇಂಡಿಯಾವನ್ನು ಗುರಿಯಾಗಿಸಿಕೊಂಡಿದ್ದು, ಸ್ಪಿನ್ ಟ್ರ್ಯಾಕ್‌ನಲ್ಲಿ ಪಾಕಿಸ್ತಾನವು ಕೂಡ ಟೆಸ್ಟ್‌ನಲ್ಲಿ ಭಾರತವನ್ನು ಸೋಲಿಸಬಹುದು ಎಂದು ಪಾಕ್ ತಂಡದ ಮಾಜಿ ವೇಗದ ಬೌಲರ್ ವಾಸಿಂ ಅಕ್ರಮ್ ಹೇಳಿದ್ದಾರೆ.

ಹೌದು ಭಾರತ ತಂಡ ಇದುವರೆಗೆ ತವರಿನಲ್ಲಿ ಕಿವೀಸ್ ವಿರುದ್ಧ ಒಂದೇ ಒಂದು ಟೆಸ್ಟ್ ಸರಣಿಯನ್ನು ಸೋತಿರಲಿಲ್ಲ. ಆದರೀಗ ರೋಹಿತ್ ಪಡೆ ಈ ಅವಮಾನಕರ ಸೋಲಿಗೆ ಇದೀಗ ಕೊರಳ್ಳೊಡಬೇಕಾಗಿದೆ. ಆದಾಗ್ಯೂ ಈ ಒಂದು ಸರಣಿಯ ಸೋಲಿನಿಂದ ಟೀಂ ಇಂಡಿಯಾದ ಅವಿಸ್ಮರಣೀಯ ಗೆಲುವುಗಳನ್ನು ಮುಚ್ಚಿಹಾಕಲು ಸಾಧ್ಯವಿಲ್ಲ. ಇಡೀ ಸರಣಿಯಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್‌ ವಿಭಾಗ ಸಂಪೂರ್ಣವಾಗಿ ಕಳಪೆ ಪ್ರದರ್ಶನ ನೀಡಿತ್ತು. ಇದು ತಂಡದ ಸರಣಿ ಸೋಲಿಗೆ ಪ್ರಮುಖ ಕಾರಣವಾಗಿತ್ತು. ಆದರೆ ಈ ರೀತಿಯ ಸೋಲುಗಳಿಂದ ಮೈಕೊಡವಿ ನಿಲ್ಲುವ ಪಾಠವನ್ನು ಭಾರತ ತಂಡಕ್ಕೆ ಹೊಸದಾಗಿ ಹೇಳಿಕೊಡುವ ಅಗತ್ಯವಿಲ್ಲ. ಇದಕ್ಕೆ ಉದಾಹರಣೆಯಾಗಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಗೆಲುವು ನಮ್ಮ ಕಣ್ಣ ಮುಂದಿದೆ.

ಟೀಂ ಇಂಡಿಯಾವನ್ನ ನಮ್ಮ ತಂಡ ಸೋಲಿಸಲಿದೆ

ಇನ್ನು ಪಾಕಿಸ್ತಾನದ ಮಾಜಿ ವೇಗದ ಬೌಲರ್ ವಾಸಿಂ ಅಕ್ರಮ್ ಅವರ ಹೇಳಿಕೆಗೆ ಬರೋಣ.. ಪ್ರಸ್ತುತ ಆಸ್ಟ್ರೇಲಿಯಾದಲ್ಲಿರುವ ವಾಸಿಂ ಅಕ್ರಮ್, ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದಾರೆ. ಮೆಲ್ಬೋರ್ನ್‌ನಲ್ಲಿ ನಡೆದ ಮೊದಲ ಪಂದ್ಯದ ವೇಳೆ ಅವರು ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್ ವಾನ್ ಅವರೊಂದಿಗೆ ಭಾರತದ ಹೀನಾಯ ಸೋಲಿನ ಬಗ್ಗೆ ಚರ್ಚಿಸಿದರು. ಈ ವೇಳೆ ಭಾರತ ಮತ್ತು ಪಾಕಿಸ್ತಾನ ನಡುವೆ ಟೆಸ್ಟ್ ಸರಣಿ ನಡೆಯಬೇಕು ಎಂದು ವಾನ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಕ್ರಮ್, ಕ್ರಿಕೆಟ್ ಅನ್ನು ಪ್ರೀತಿಸುವ ಎರಡೂ ದೇಶಗಳಿಗೆ ಇದರಿಂದ ಒಳ್ಳೆಯದಾಗಲಿದೆ. ಸ್ಪಿನ್ನಿಂಗ್ ಟ್ರ್ಯಾಕ್‌ನಲ್ಲಿ ಭಾರತವನ್ನು ಟೆಸ್ಟ್ ಪಂದ್ಯಗಳಲ್ಲಿ ಸೋಲಿಸಲು ಪಾಕಿಸ್ತಾನಕ್ಕೆ ಈಗ ಅವಕಾಶವಿದೆ ಎಂದಿದ್ದಾರೆ.

ಬಾಂಗ್ಲಾ ವಿರುದ್ಧದ ಸೋಲನ್ನ ನೆನಪಿಸಿದ ನೆಟ್ಟಿಗರು

ವಾಸಿಂ ಅಕ್ರಮ್ ಈ ರೀತಿಯ ಹೇಳಿಕೆಯನ್ನ ನೀಡಿದ್ದನ್ನು ನೋಡಿದ ನೆಟ್ಟಿಗರು, ಅಕ್ರಮ್​ಗೆ ತಮ್ಮ ಕಾಮೆಂಟ್‌ಗಳ ಮುಖಾಂತರ ತಿರುಗೇಟು ನೀಡುತ್ತಿದ್ದಾರೆ. ಪಾಕಿಸ್ತಾನ ತಂಡ ಇತ್ತೀಚೆಗೆ ಬಾಂಗ್ಲಾದೇಶದ ವಿರುದ್ಧ ಹೀನಾ ಸೋಲನ್ನು ಅನುಭವಿಸಿದ್ದನ್ನು ನೀವು ಮರೆತ್ರಾ ಎಂದು ವಾಸಿಂ ಅಕ್ರಮ್ ಬಳಿ ಪ್ರಶ್ನೆ ಮಾಡಿದ್ದಾರೆ. ವಾಸ್ತವವಾಗಿ 2 ಪಂದ್ಯಗಳ ಟೆಸ್ಟ್ ಸರಣಿಗಾಗಿ ಪಾಕಿಸ್ತಾನ ಪ್ರವಾಸ ಮಾಡಿದ್ದ ಬಾಂಗ್ಲಾದೇಶ ತಂಡ, ಆತಿಥೇಯ ಪಾಕಿಸ್ತಾನವನ್ನು 2-0 ಅಂತರದಿಂದ ಮಣಿಸಿತ್ತು. ಟೆಸ್ಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅವರದ್ದೇ ನೆಲದಲ್ಲಿ ಪಾಕ್ ತಂಡವನ್ನು ಮಣಿಸಿದ ದಾಖಲೆಯನ್ನು ಬಾಂಗ್ಲಾದೇಶ ತಂಡ ಮಾಡಿತ್ತು. ಇದೀಗ ಆ ಸೋಲನ್ನು ನೆನಪಿಸಿರುವ ನೆಟ್ಟಿಗರು ಅಕ್ರಮ್ ಹೇಳಿಕೆಗೆ ಟಾಂಗ್ ನೀಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:54 pm, Mon, 4 November 24