ಐಸಿಸಿ ಏಕದಿನ ವಿಶ್ವಕಪ್-2023 ರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ತೀರಾ ಕಳಪೆ ಪ್ರದರ್ಶನ ತೋರುತ್ತಿದೆ. ಇದರಿಂದ ಪಾಕ್ ತಂಡ ಸಾಕಷ್ಟು ಟೀಕೆಗಳಿಗೆ ಒಳಗಾಗಿದೆ. ಇದರ ನಡುವೆಯೇ ಪಾಕಿಸ್ತಾನದ ಮುಖ್ಯ ಆಯ್ಕೆಗಾರ ಇಂಜಮಾಮ್ ಉಲ್ ಹಕ್ (Inzamam-ul-Haq) ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬಾರಿಯ ವಿಶ್ವಕಪ್‌ನಲ್ಲಿ ಬಾಬರ್ ಅಝಂ ತಂಡದ ಪ್ರದರ್ಶನ ತೀರಾ ಕಳಪೆಯಾಗಿತ್ತು. 6 ಪಂದ್ಯಗಳನ್ನು ಆಡಿರುವ ತಂಡ ಕೇವಲ 2 ಪಂದ್ಯಗಳನ್ನು ಗೆದ್ದಿದೆ. ಕಳೆದ 4 ಪಂದ್ಯಗಳಲ್ಲಿ ಸೋತಿದ್ದಾರೆ. ಪಾಕ್ ತಂಡ ಮಂಗಳವಾರ ಬಾಂಗ್ಲಾದೇಶದೊಂದಿಗೆ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ ಸೋತರೆ ಸೆಮಿಫೈನಲ್ ರೇಸ್‌ನಿಂದ ಹೊರಗುಳಿಯಲಿದ್ದಾರೆ.
ಪಾಕಿಸ್ತಾನದ ಮಾಧ್ಯಮಗಳ ಪ್ರಕಾರ, ತಂಡದ ಕಳಪೆ ಪ್ರದರ್ಶನದಿಂದಾಗಿ ಇಂಜಮಾಮ್ ರಾಜೀನಾಮೆ ನೀಡಿಲ್ಲ. ಬದಲಾಗಿ ಹಿತಾಸಕ್ತಿ ಸಂಘರ್ಷದಿಂದಾಗಿ ಅವರು ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಹಿತಾಸಕ್ತಿ ಸಂಘರ್ಷದ ಪ್ರಕರಣವೊಂದು ಸಾಮಾಜಿಕ ಜಾಲತಾಣಗಳಲ್ಲಿ ಬೆಳಕಿಗೆ ಬಂದಿತ್ತು. ಈ ಕುರಿತು ಇಂಜಮಾಮ್ ತಮ್ಮ ಸ್ಪಷ್ಟೀಕರಣದಲ್ಲಿ, ”ಜನರು ಸಾಕ್ಷಿ ಇಲ್ಲದೆ ಮಾತನಾಡುತ್ತಾರೆ” ಎಂದು ಹೇಳಿದ್ದಾರೆ. ”ನನ್ನ ಮೇಲೆ ಅನೇಕ ಪ್ರಶ್ನೆಗಳು ಎದ್ದಿದ್ದರಿಂದ ನಾನು ರಾಜೀನಾಮೆ ನೀಡುವುದು ಉತ್ತಮ ಎಂದು ನಿರ್ಧರಿಸಿದೆ. ಪಿಸಿಬಿ ನನ್ನನ್ನು ತನಿಖೆ ಮಾಡಲು ಬಯಸಿದರೆ ನಾನು ಇದಕ್ಕೆ ಸಿದ್ಧವಿದ್ದೇನೆ,” ಎಂದು ಇಂಜಮಾಮ್ ಹೇಳಿದ್ದಾರೆ.
AFG vs SL ICC World Cup 2023: ಶ್ರೀಲಂಕಾಗೆ ಸೋಲುಣಿಸಿದ ಅಫ್ಘಾನಿಸ್ತಾನ್
”ಪ್ಲೇಯರ್ ಏಜೆಂಟ್ ಕಂಪನಿಗೂ ನನಗೂ ಯಾವುದೇ ಸಂಬಂಧವಿಲ್ಲ. ಇಂತಹ ಆರೋಪಗಳಿಂದ ನನಗೆ ಬೇಸರವಾಗಿದೆ. ಪರಿಸ್ಥಿತಿ ಸಹಜವಾದ ನಂತರ ನಾನು ಪಿಸಿಬಿ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ. ಐವರು ಸದಸ್ಯರ ಸಮಿತಿ ರಚಿಸಲಾಗಿದೆ ಎಂದು ನನಗೆ ದೂರವಾಣಿ ಕರೆಯಲ್ಲಿ ತಿಳಿಸಲಾಗಿದೆ, ಹಾಗಾಗಿ ತನಿಖೆ ನಡೆಯುತ್ತಿರುವಾಗಲೇ ನಾನು ರಾಜೀನಾಮೆ ನೀಡಿದರೆ ಉತ್ತಮ ಎಂದು ಮಂಡಳಿಗೆ ತಿಳಿಸಿದ್ದೇನೆ. ಎಲ್ಲವೂ ಸರಿಯಾದ ನಂತರ ನಾನು ಪುನಃ ಅಧ್ಯಕ್ಷನಾಗುತ್ತೇನೆ,” ಎಂದು ಹೇಳಿದ್ದಾರೆ.
ಈ ಹಿಂದೆ ಏಷ್ಯಾಕಪ್ 2023 ರ ಮಧ್ಯದಲ್ಲಿ ಮುಖ್ಯ ಆಯ್ಕೆಗಾರ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಇಂಜಮಾಮ್-ಉಲ್-ಹಕ್ ಬೆದರಿಕೆ ಹಾಕಿದ್ದರು. ಆ ಸಮಯದಲ್ಲಿ ಅವರು ಪಿಸಿಬಿಯೊಂದಿಗೆ ವಿವಾದವನ್ನು ಕೂಡ ಮಾಡಿದ್ದರು. ವಿದೇಶಿ T20 ಫ್ರಾಂಚೈಸಿ ಲೀಗ್‌ಗಳಲ್ಲಿ ಭಾಗವಹಿಸಲು ಪಾಕಿಸ್ತಾನಿ ಆಟಗಾರರಿಗೆ ಅವಕಾಶ ನೀಡಬೇಕು ಎಂದು ಇಂಜಮಾಮ್ ಬಯಸಿದ್ದರು. ಆದರೆ, ಅವರ ವಿನಂತಿಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತಿರಸ್ಕರಿಸಿತು. ಹೀಗಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದರು.
ಇಂಜಮಾಮ್ ಅವರ ನಡವಳಿಕೆಯ ನಂತರ, ಪಿಸಿಬಿ ಪಾಕಿಸ್ತಾನದ ಮಾಜಿ ನಾಯಕ ಮಿಸ್ಬಾ-ಉಲ್-ಹಕ್ ಅಥವಾ ನದೀಮ್ ಖಾನ್ ಅವರನ್ನು ಹೊಸ ಮುಖ್ಯ ಆಯ್ಕೆಗಾರರನ್ನಾಗಿ ನೇಮಿಸುವ ಬಗ್ಗೆಯೂ ಯೋಚಿಸುತ್ತಿತ್ತು. ಆದರೆ, ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲಾಯಿತು. ಪಿಸಿಬಿ ಅವರ ಬೇಡಿಕೆಗಳನ್ನು ಪೂರೈಸಿ ಆಗಸ್ಟ್ 31 ರಂದು ಒಪ್ಪಂದಕ್ಕೆ ಸಹಿ ಹಾಕಿತ್ತು. ಇಂಜಮಾಮ್-ಉಲ್-ಹಕ್ ಅವರು ಪಾಕಿಸ್ತಾನದ ಮುಖ್ಯ ಆಯ್ಕೆಗಾರರಾಗಿ ಇದು ಎರಡನೇ ಅವಧಿಯಾಗಿದೆ. ಅವರು ಈ ಹಿಂದೆ 2016 ರಿಂದ 2019 ರವರೆಗೆ ಈ ಹುದ್ದೆಯಲ್ಲಿದ್ದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ