Kuldeep Yadav 2.0: ಚೈನಾಮನ್ ಸ್ಪಿನ್ನರ್ನ ಕಮಾಲ್ ಹಿಂದಿದೆ ಕನ್ನಡಿಗನ ಕರಾಮತ್ತು..!
Kuldeep Yadav 2.0: ಈ ಬಾರಿಯ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಪ್ರಮುಖ ಸ್ಪಿನ್ನರ್ ಆಗಿ ಕಣಕ್ಕಿಳಿಯುತ್ತಿರುವ ಕುಲ್ದೀಪ್ ಯಾದವ್ 6 ಪಂದ್ಯಗಳಿಂದ 10 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಭಾರತ ತಂಡದ ಗೆಲುವಿಗೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ.
ಅದು 2017…ಟೀಮ್ ಇಂಡಿಯಾಗೆ 22ರ ಹರೆಯದ ಯುವ ಸ್ಪಿನ್ನರ್ ಕುಲ್ದೀಪ್ ಯಾದವ್ ಆಯ್ಕೆಯಾಗಿದ್ದರು. ಅಂದು ಈ ಎಡಗೈ ಸ್ಪಿನ್ನರ್ ಎಲ್ಲರಂತೆ ಬೌಲಿಂಗ್ ಮಾಡಿರಲಿಲ್ಲ. ಬದಲಾಗಿ ತಮ್ಮ ಚೊಚ್ಚಲ ಪಂದ್ಯದಲ್ಲೇ ಪಂದ್ಯದಲ್ಲೇ ಚೈನಾಮನ್ ಸ್ಪಿನ್ ಮೋಡಿ ಮಾಡಿದ್ದರು. ಈ ಮೂಲಕ ಮೊದಲ ಪಂದ್ಯದಲ್ಲೇ ಯುವ ಸ್ಪಿನ್ನರ್ ಎಲ್ಲರ ಗಮನ ಸೆಳೆದಿದ್ದರು. ಕ್ರಿಕೆಟ್ ಜಗತ್ತಿನಲ್ಲಿ ಅತ್ಯಂತ ವಿರಳವಾಗಿರುವ ಚೈನಾಮನ್ ಶೈಲಿಯಲ್ಲಿ ಕಮಾಲ್ ಮಾಡಿದ್ದ ಕುಲ್ದೀಪ್ 2017 ರಲ್ಲಿ 24 ಪಂದ್ಯಗಳಿಂದ ಕಬಳಿಸಿದ್ದು ಬರೋಬ್ಬರಿ 43 ವಿಕೆಟ್ಗಳು.
ಇದರೊಂದಿಗೆ ಚೈನಾಮನ್ ಸ್ಪಿನ್ನರ್ ಟೀಮ್ ಇಂಡಿಯಾದ ಖಾಯಂ ಸದಸ್ಯರಾದರು. ಇನ್ನು 2018 ರಲ್ಲಿ 31 ಪಂದ್ಯಗಳಿಂದ 76 ವಿಕೆಟ್ ಉರುಳಿಸಿ ಸಂಚಲನ ಸೃಷ್ಟಿಸಿದರು. ಕುಲ್ದೀಪ್ ಮಿಂಚಿಂಗ್ನೊಂದಿಗೆ ಇತರೆ ಸ್ಪಿನ್ನರ್ಗಳು ಸೈಡ್ ಲೈನಾದರು. ಪರಿಣಾಮ 2019 ರ ಏಕದಿನ ವಿಶ್ವಕಪ್ಗೆ ಪ್ರಮುಖ ಸ್ಪಿನ್ನರ್ ಆಗಿ ಕುಲ್ದೀಪ್ ಯಾದವ್ ಆಯ್ಕೆಯಾದರು.
2019 ರಲ್ಲಿ ಒಟ್ಟು 26 ಪಂದ್ಯಗಳಲ್ಲಿ ಸ್ಪಿನ್ ಮೋಡಿ ಮಾಡಿದ್ದ ಕುಲ್ದೀಪ್ ಯಾದವ್ ಕಬಳಿಸಿದ್ದು ಬರೋಬ್ಬರಿ 41 ವಿಕೆಟ್ಗಳು. ಆದರೆ ಮಹೇಂದ್ರ ಸಿಂಗ್ ಧೋನಿಯ ನಿವೃತ್ತಿಯೊಂದಿಗೆ ಕುಲ್ದೀಪ್ ಸ್ಪಿನ್ ಮೋಡಿ ಮಂಕಾಯಿತು. ಏಕೆಂದರೆ ಅಂದಿನ ಭಾರತದ ವಿಕೆಟ್ ಕೀಪರ್ ಧೋನಿ ಯುವ ಸ್ಪಿನ್ನರ್ಗೆ ಯಾವ ರೀತಿಯಾಗಿ ಬೌಲಿಂಗ್ ಮಾಡಬೇಕೆಂದು ಮಾರ್ಗದರ್ಶನ ನೀಡುತ್ತಿದ್ದರು. ಅದರಂತೆ ಬೌಲಿಂಗ್ ದಾಳಿ ಸಂಘಟಿಸುತ್ತಿದ್ದರು. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಧೋನಿಯ ವಿದಾಯ ಹೇಳುತ್ತಿದ್ದಂತೆ ಇತ್ತ ಕುಲ್ದೀಪ್ ಲಯ ತಪ್ಪಿದರು.
ಪರಿಣಾಮ 2020 ರಲ್ಲಿ ಕುಲ್ದೀಪ್ ಯಾದವ್ 8 ಪಂದ್ಯಗಳಲ್ಲಿ ಕೇವಲ 7 ವಿಕೆಟ್ ಕಬಳಿಸಲಷ್ಟೇ ಶಕ್ತರಾದರು. ಇದಾಗ್ಯೂ 2021 ರಲ್ಲಿ ಮತ್ತೆ 7 ಪಂದ್ಯಗಳಲ್ಲಿ ಅವಕಾಶ ಲಭಿಸಿತು. ಆದರೆ ಈ ಬಾರಿ ಕೂಡ ಪಡೆದಿದ್ದು ಕೇವಲ 6 ವಿಕೆಟ್ಗಳು ಮಾತ್ರ. ಅಷ್ಟೇ ಅಲ್ಲದೆ 2021 ರ ಐಪಿಎಲ್ನಲ್ಲಿ ಕೆಕೆಆರ್ ತಂಡದಲ್ಲಿ ಸ್ಥಾನ ಪಡೆದಿದ್ದ ಕುಲ್ದೀಪ್ ಯಾದವ್ ಅವರನ್ನು ಒಂದೇ ಒಂದು ಪಂದ್ಯದಲ್ಲಿ ಕಣಕ್ಕಿಳಿಸಿರಲಿಲ್ಲ. ಅಲ್ಲಿಗೆ ಕುಲ್ದೀಪ್ ಕಮಾಲ್ ಮರೆಯಾಗಿದೆ ಎಂದು ಷರಾ ಬರೆಯಲಾಯಿತು.
2021 ರಲ್ಲಿ ಟೀಮ್ ಇಂಡಿಯಾದಿಂದ ಹೊರಬಿದ್ದ ಕುಲ್ದೀಪ್ ಯಾದವ್ ಸುಮ್ಮನೆ ಕೂತಿರಲಿಲ್ಲ. ದೇಶೀಯ ಅಂಗಳದಲ್ಲಿ ಕಣಕ್ಕಿಳಿದರು. ಆದರೆ ತಮ್ಮ ಹಿಂದಿನ ಲಯಕ್ಕೆ ಮರಳಲು ಮಾತ್ರ ಸಾಧ್ಯವಾಗಿರಲಿಲ್ಲ. ಹೀಗಾಗಿಯೇ ಕುಲ್ದೀಪ್ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯತ್ತ ಮುಖ ಮಾಡಿದ್ದರು.
ಕುಲ್ದೀಪ್ ಕೈ ಹಿಡಿದ ಕನ್ನಡಿಗ:
ಸತತ ವೈಫಲ್ಯದಿಂದ ಹತಾಶರಾಗಿದ್ದ ಕುಲ್ದೀಪ್ ಯಾದವ್ ಅವರಿಗೆ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ನೆರವಿಗೆ ನಿಂತದ್ದು ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್, ಕನ್ನಡಿಗ ಸುನಿಲ್ ಜೋಶಿ. ಅಂದು ಭಾರತ ತಂಡದ ಆಯ್ಕೆ ಸಮಿತಿ ಸದಸ್ಯರಾಗಿದ್ದ ಜೋಶಿ ಕುಲ್ದೀಪ್ ಯಾದವ್ ಅವರ ವೃತ್ತಿಜೀವನದ ಏರಿಳಿತವನ್ನು ಹತ್ತಿರದಿಂದ ಕಂಡಿದ್ದರು.
ಇತ್ತ ಕುಲ್ದೀಪ್ ಯಾದವ್ಗೂ ಉತ್ತಮ ಮಾರ್ಗದರ್ಶಕರ ಅಗತ್ಯವಿತ್ತು. ಈ ಮೆಂಟರ್ ಸ್ಥಾನವನ್ನು ಸುನಿಲ್ ಜೋಶಿ ಅಚ್ಚುಕಟ್ಟಾಗಿ ನಿಭಾಯಿಸಿದರು. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಅವರ ಕೌಶಲ್ಯವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಿದರು.
ಈ ಹಿಂದೆ ಸುನಿಲ್ ಜೋಶಿ ಅವರೇ ಹೇಳಿಕೊಂಡಂತೆ, ಅಂದಿನ ಪರಿಸ್ಥಿತಿಯಲ್ಲಿ ಕುಲ್ದೀಪ್ ಯಾದವ್ಗೆ ಬೌಲಿಂಗ್ ತಾಂತ್ರಿಕ ವಿಷಯಗಳನ್ನು ಬದಲಾಯಿಸುವ ಅಗತ್ಯವಿರಲಿಲ್ಲ. ಆತನನ್ನು ಮಾನಸಿಕವಾಗಿ ಮೇಲಕ್ಕೆತ್ತಬೇಕಿತ್ತು. ಹೀಗೆ ಕುಗ್ಗಿ ಹೋಗಿದ್ದ ಕುಲ್ದೀಪ್ ಅವರಲ್ಲಿ ಆತ್ಮ ವಿಶ್ವಾಸ ಮೂಡಿಸುವಲ್ಲಿ ಜೋಶಿ ಯಶಸ್ವಿಯಾದರು.
ಇದಾದ ಬಳಿಕ ಆತನ ಬೌಲಿಂಗ್ನಲ್ಲಿದ್ದ ಕೆಲ ವಿಷಯಗಳನ್ನು ಬದಲಿಸಲು ಮುಂದಾದರು. ಜೋಶಿ ಅವರೊಂದಿಗೆ ಕುಲ್ದೀಪ್ ಎನ್‌ಸಿಎ ನೆಟ್ಸ್ನಲ್ಲಿ ಬೌಲಿಂಗ್ ಅಭ್ಯಾಸ ಮಾಡಲಾರಂಭಿಸಿದರು. ಮೊದಲೇ ಎಡಗೈ ಸ್ಪಿನ್ನರ್ ಆಗಿದ್ದ ಸುನಿಲ್ ಜೋಶಿಗೆ ಕುಲ್ದೀಪ್ ಯಾದವ್ ಅವರ ತಪ್ಪುಗಳನ್ನು ಕಂಡು ಹಿಡಿಯುವುದು ಕೂಡ ಕಷ್ಟವಾಗಿರಲಿಲ್ಲ.
ಹೀಗಾಗಿ ಬೌಲಿಂಗ್ ಶೈಲಿಯಲ್ಲಿ ಕೆಲ ಬದಲಾವಣೆಗಳನ್ನು ತರಲು ಮುಂದಾದರು. ಇಲ್ಲಿ ಮುಖ್ಯವಾಗಿ ಕುಲ್ದೀಪ್ ಯಾದವ್ ಅವರ ದಾಪುಗಾಲುಗಳನ್ನು ಕಡಿಮೆಗೊಳಿಸಲು ಸೂಚಿಸಲಾಯಿತು. ಆ ಸಮಸ್ಯೆ ಸರಿದೂಗುತ್ತಿದ್ದಂತೆ ತೋಳಿನ ವೇಗವನ್ನು ಹೆಚ್ಚಿಸುವತ್ತಾ ಗಮನ ಕೇಂದ್ರೀಕರಿಸಲಾಯಿತು.
ಈ ಬದಲಾವಣೆಗಳೊಂದಿಗೆ ಸತತ ಅಭ್ಯಾಸ ನಡೆಸಿದರು. ಪರಿಣಾಮ ಕುಲ್ದೀಪ್ ಮತ್ತೆ ನಿಖರತೆ ಸಾಧಿಸುವಲ್ಲಿ ಯಶಸ್ವಿಯಾದರು. ಆದರೆ ಈ ಬಾರಿ ಈ ಹಿಂದಿಗಿಂತ ಹೆಚ್ಚಿನ ವೇಗದಲ್ಲಿ ಗಾಳಿಯಲ್ಲಿ ಚೆಂಡನ್ನು ತೇಲಿಸಿ ಬಿಡುವ ಸಾಮರ್ಥ್ಯ ಪಡೆದುಕೊಂಡಿದ್ದರು. ಅಲ್ಲಿಗೆ ಕುಲ್ದೀಪ್ ಯಾದವ್ ಬತ್ತಳಿಕೆ ಮೂರು ಅಸ್ತ್ರಗಳು ಸೇರ್ಪಡೆಯಾಗಿದ್ದವು.
ಮೊದಲೇ ಮಣಿಕಟ್ಟಿನ ಮೋಡಿ, ಚೈನಾಮನ್ ಕಮಾಲ್ ಮಾಡಿ ಬ್ಯಾಟರ್ಗಳನ್ನು ಇಕ್ಕಟಿಗೆ ಸಿಲುಕಿಸುತ್ತಿದ್ದ ಕುಲ್ದೀಪ್ ಯಾದವ್ ಈ ಬಾರಿ ವೇಗದೊಂದಿಗೆ ಟರ್ನರ್ ತಂತ್ರಗಳನ್ನು ಕರಗತ ಮಾಡಿಕೊಂಡಿದ್ದರು. ಪರಿಣಾಮ ಈ ಹಿಂದೆಗಿಂತಲೂ ಈ ಬಾರಿ ಕುಲ್ದೀಪ್ ಯಾದವ್ ಅವರನ್ನು ಎದುರಿಸುವುದು ಬ್ಯಾಟರ್ಗಳಿಗೆ ಸುಲಭವಾಗಿರಲಿಲ್ಲ.
ಇತ್ತ ಈ ವೇಗದ ಟರ್ನಿಂಗ್ನೊಂದಿಗೆ ಕಂಬ್ಯಾಕ್ ಮಾಡಿದ್ದ ಕುಲ್ದೀಪ್ ತಮ್ಮ ಕೆರಿಯರ್ನಲ್ಲೇ ಟರ್ನಿಂಗ್ ತೆಗೆದುಕೊಂಡರು. 2022 ರಲ್ಲಿ ಟೀಮ್ ಇಂಡಿಯಾಗೆ ಮರಳಿದ ಎಡಗೈ ಸ್ಪಿನ್ನರ್ 11 ಪಂದ್ಯಗಳಿಂದ 23 ವಿಕೆಟ್ ಉರುಳಿಸಿದ್ದರು. ಈ ಮೂಲಕ ನಾಯಕ ರೋಹಿತ್ ಶರ್ಮಾ ಅವರನ್ನು ಇಂಪ್ರೆಸ್ ಮಾಡುವಲ್ಲಿ ಯಶಸ್ವಿಯಾದರು.
ಅಷ್ಟೇ ಅಲ್ಲದೆ ಯುಜ್ವೇಂದ್ರ ಚಹಾಲ್, ವಾಷಿಂಗ್ಟನ್ ಸುಂದರ್ ಹಾಗೂ ರವಿಚಂದ್ರನ್ ಅಶ್ವಿನ್ ಅವರನ್ನು ಹಿಂದಿಕ್ಕಿ ಏಷ್ಯಾಕಪ್ನಲ್ಲಿ ಸ್ಥಾನ ಪಡೆದರು. ಈ ಟೂರ್ನಿಯಲ್ಲೂ 9 ವಿಕೆಟ್ ಕಬಳಿಸಿ ಮಿಂಚಿದರು. ಇದರೊಂದಿಗೆ ಏಕದಿನ ವಿಶ್ವಕಪ್ನಲ್ಲೂ ಕುಲ್ದೀಪ್ ಸ್ಥಾನ ಭದ್ರವಾಯಿತು.
ಇದನ್ನೂ ಓದಿ: Virat Kohli: ಒಂದೇ ಒಂದು ರನ್ ಗಳಿಸದೇ ದಾಖಲೆ ಬರೆದ ವಿರಾಟ್ ಕೊಹ್ಲಿ..!
ಏಕೆಂದರೆ 2023 ರಲ್ಲಿ ಹೊಸ ಅಸ್ತ್ರಗಳನ್ನು ಪ್ರಯೋಗಿಸಲಾರಂಭಿಸಿದ ಕುಲ್ದೀಪ್ ಯಾದವ್ ಒಟ್ಟು 29 ಇನಿಂಗ್ಸ್ಗಳಲ್ಲಿ ಬರೋಬ್ಬರಿ 51 ವಿಕೆಟ್ಗಳನ್ನು ಕಬಳಿಸಿದ್ದರು. ಅಂದರೆ 2018 ರ ಬಳಿಕ ಮತ್ತೊಮ್ಮೆ ಕುಲ್ದೀಪ್ ಯಾದವ್ ಒಂದೇ ವರ್ಷದೊಳಗೆ 50 ಕ್ಕಿಂತ ಹೆಚ್ಚಿನ ವಿಕೆಟ್ ಪಡೆದರು. ಅದು ಕೂಡ ಪ್ರತಿ ಓವರ್ಗೆ 4.77 ಸರಸಾರಿಯಲ್ಲಿ ರನ್ ನೀಡುವ ಮೂಲಕ ಎಂಬುದು ಇಲ್ಲಿ ಉಲ್ಲೇಖಾರ್ಹ.
ಒಟ್ಟಿನಲ್ಲಿ ಆರಂಭದಲ್ಲಿ ಮಿಂಚಿ ಮರೆಯಾಗಿದ್ದ ಕುಲ್ದೀಪ್ ಯಾದವ್ ಇದೀಗ ಕಂಬ್ಯಾಕ್ ಮಾಡುವ ಮೂಲಕ ಕುಲ್ದೀಪ್ ಯಾದವ್ 2.0 ಆಗಿ ಸಂಚಲನ ಸೃಷ್ಟಿಸುತ್ತಿರುತ್ತಿವುದು ವಿಶೇಷ.