ಪಾಕ್ ಕ್ರಿಕೆಟ್ ಮಂಡಳಿಗೆ ಪಾಕಿಸ್ತಾನ್ ತಂಡದಿಂದಲೇ ಬೆದರಿಕೆ..!

Pakistan cricket Team: ಇತರೆ ಕ್ರಿಕೆಟ್ ಮಂಡಳಿಗಳು ಡಿಜಿಟಲ್ ಹಕ್ಕುಗಳಿಂದ ಬರುವ ಆದಾಯದ ಹಂಚಿಕೆಯಲ್ಲಿ ಆಟಗಾರರೊಂದಿಗೆ ಸರಿಯಾದ ಒಪ್ಪಂದವನ್ನು ಹೊಂದಿವೆ. ಆದರೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಮಾತ್ರ ಡಿಜಿಟಲ್ ಆದಾಯವನ್ನು ಆಟಗಾರರಿಗೆ ನೀಡುತ್ತಿಲ್ಲ. ಹೀಗಾಗಿ ಹೊಸ ಒಪ್ಪಂದಕ್ಕೂ ಮುನ್ನ ಈ ಬಗ್ಗೆ ತೀರ್ಮಾನವಾಗಬೇಕೆಂದು ಪಾಕ್ ಆಟಗಾರರು ಪಟ್ಟು ಹಿಡಿದಿದ್ದಾರೆ.

ಪಾಕ್ ಕ್ರಿಕೆಟ್ ಮಂಡಳಿಗೆ ಪಾಕಿಸ್ತಾನ್ ತಂಡದಿಂದಲೇ ಬೆದರಿಕೆ..!
Pakistan Team
Edited By:

Updated on: Sep 25, 2023 | 5:35 PM

ಬಹುನಿರೀಕ್ಷಿತ ಏಕದಿನ ವಿಶ್ವಕಪ್​ ಆರಂಭಕ್ಕೆ ಇನ್ನು ದಿನಗಳು ಮಾತ್ರ ಉಳಿದಿವೆ. ಆದರೆ ಈ ಟೂರ್ನಿ ಆರಂಭಕ್ಕೂ ಮುನ್ನವೇ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಹಾಗೂ ಪಾಕ್ ಆಟಗಾರರು ನಡುವೆ ಭಿನ್ನಾಪ್ರಾಯ ಮೂಡಿದೆ. ಪಾಕಿಸ್ತಾನ್ ಆಟಗಾರರ ಕೇಂದ್ರೀಯ ಒಪ್ಪಂದ ಈಗಾಗಲೇ ಮುಗಿದಿದ್ದು, ಇದಾಗ್ಯೂ ಹೊಸ ಒಪ್ಪಂದಕ್ಕೆ ಸಹಿ ಹಾಕಲು ಆಟಗಾರರು ಹಿಂದೇಟು ಹಾಕಿದ್ದಾರೆ. ಇದಕ್ಕೆ ಮುಖ್ಯ ಕಾರಣ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಡಿಜಿಟಲ್ ಹಕ್ಕುಗಳ ಆದಾಯವನ್ನು ಆಟಗಾರರ ಸಂಭಾವನೆಯಲ್ಲಿ ಪರಿಗಣಿಸದಿರುವುದು.

ಅಂದರೆ ಪಿಸಿಬಿ ಪ್ರಮುಖ ಟೂರ್ನಿಗಳ ಡಿಜಿಟಲ್ ಪ್ರಸಾರ ಹಕ್ಕುಗಳಿಂದ ಉತ್ತಮ ಆದಾಯವನ್ನು ಪಡೆಯುತ್ತಿದೆ. ಆದರೆ ಈ ಆದಾಯದ ಲಾಭಾಂಶಗಳಲ್ಲಿ ಆಟಗಾರರಿಗೆ ಯಾವುದೇ ಪಾಲನ್ನು ನೀಡುತ್ತಿಲ್ಲ. ಇದೇ ಕಾರಣದಿಂದಾಗಿ ಇದೀಗ ಪಾಕಿಸ್ತಾನ್ ತಂಡದ ಆಟಗಾರರು ಹೊಸ ಒಪ್ಪಂದಕ್ಕೆ ಸಹಿ ಹಾಕಲು ಹಿಂದೇಟು ಹಾಕಿದ್ದಾರೆ.

ಏಷ್ಯಾಕಪ್ ಆರಂಭಕ್ಕೂ ಮುನ್ನ ತಲೆದೂರಿದ್ದ ಈ ಸಮಸ್ಯೆಗೆ ಇನ್ನೂ ಕೂಡ ಪರಿಹಾರ ಕಂಡು ಬಂದಿಲ್ಲ. ಇದೇ ಕಾರಣದಿಂದಾಗಿ ಇದೀಗ ಪಾಕಿಸ್ತಾನ್ ತಂಡದ ಆಟಗಾರರು ಏಕದಿನ ವಿಶ್ವಕಪ್​ನಲ್ಲಿ ಪ್ರಾಯೋಕತ್ವದ ಲೋಗೋಗಳನ್ನು ಪ್ರದರ್ಶಿಸಲು ನಿರಾಕರಿಸುವ ಬಗ್ಗೆ ಯೋಚಿಸಿದ್ದಾರೆ ಎಂದು ವರದಿಯಾಗಿದೆ.

ತಂಡದ ಜೆರ್ಸಿ ಮೇಲೆ ಅಥವಾ ಇನ್ನಿತರ ಕಿಟ್​ಗಳ ಮೇಲೆ ಕಾಣಿಸಲಿರುವ ಲೋಗೋಗಳನ್ನು ಮರೆ ಮಾಚುವ ಮೂಲಕ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್​ಗೆ ತಿರುಗೇಟು ನೀಡಲು ಪಾಕ್ ಆಟಗಾರರು ಮುಂದಾಗುತ್ತಿದ್ದಾರೆ. ಇಲ್ಲದಿದ್ದರೆ ಶೀಘ್ರದಲ್ಲೇ ಆಟಗಾರರ ಬೇಡಿಕೆಯನ್ನು ಒಳಗೊಂಡಂತೆ ಹೊಸ ಕೇಂದ್ರೀಯ ಒಪ್ಪಂದವನ್ನು ಪೂರ್ಣಗೊಳಿಸುವಂತೆ ತಿಳಿಸಲಾಗಿದೆ.

ಪಾಕ್ ಆಟಗಾರರ ಡಿಮ್ಯಾಂಡ್ ಏನು?

ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಒಪ್ಪಂದವನ್ನು ಮುಂದುವರೆಸಲು ಆಟಗಾರರು ಹೊಸ ಬೇಡಿಕೆ ಮುಂದಿಟ್ಟಿದ್ದಾರೆ. ಇದೇ ಕಾರಣದಿಂದಾಗಿ ಕಳೆದ ನಾಲ್ಕು ತಿಂಗಳುಗಳಿಂದ ಪಾಕ್ ಆಟಗಾರರು ವೇತನ ಪಡೆದಿಲ್ಲ ಎನ್ನಲಾಗಿದೆ. ಇದೀಗ ಈ ಬೇಡಿಕೆಯಂತೆ ಡಿಜಿಟಲ್ ಹಕ್ಕುಗಳ ಮಾರಾಟದಿಂದ ಸಿಗುವ ಲಾಭವನ್ನು ಕೂಡ ತಮ್ಮ ವೇತನದಲ್ಲಿ ಸೇರಿಸಬೇಕೆಂದು ಪಾಕ್ ಆಟಗಾರರು ಮಂಡಳಿಗೆ ತಿಳಿಸಿದೆ.

ಇತರೆ ಕ್ರಿಕೆಟ್ ಮಂಡಳಿಗಳು ಡಿಜಿಟಲ್ ಹಕ್ಕುಗಳಿಂದ ಬರುವ ಆದಾಯದ ಹಂಚಿಕೆಯಲ್ಲಿ ಆಟಗಾರರೊಂದಿಗೆ ಸರಿಯಾದ ಒಪ್ಪಂದವನ್ನು ಹೊಂದಿವೆ. ಆದರೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಮಾತ್ರ ಡಿಜಿಟಲ್ ಆದಾಯವನ್ನು ಆಟಗಾರರಿಗೆ ನೀಡುತ್ತಿಲ್ಲ. ಹೀಗಾಗಿ ಹೊಸ ಒಪ್ಪಂದಕ್ಕೂ ಮುನ್ನ ಈ ಬಗ್ಗೆ ತೀರ್ಮಾನವಾಗಬೇಕೆಂದು ಪಾಕ್ ಆಟಗಾರರು ಪಟ್ಟು ಹಿಡಿದಿದ್ದಾರೆ.

ನಾವು ಪಾಕಿಸ್ತಾನ್ ಪರ ಉಚಿತವಾಗಿ ಆಡಲು ಸಿದ್ಧರಿದ್ದೇವೆ. ಆದರೆ ನಮ್ಮಿಂದ ಸಿಗುವ ಲಾಭದಿಂದ ಲಾಭಾಂಶವನ್ನು ನೀಡುತ್ತಿಲ್ಲ. ಮತ್ತೆ ನಾವೇಕೆ ಪಿಸಿಬಿಗೆ ಲಾಭ ತಂದು ಕೊಡುವ ಕಂಪೆನಿಗಳ ಲೋಗೋವನ್ನು ಧರಿಸಬೇಕು ಎಂಬ ಪ್ರಶ್ನೆಯನ್ನು ಪಾಕ್ ಕ್ರಿಕೆಟಿಗನೊಬ್ಬ ಮುಂದಿಟ್ಟಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಏನಿದು ಡಿಜಿಟಲ್ ಆದಾಯ:

ಐಸಿಸಿಯಿಂದ ಮಾರಾಟವಾಗುವ ಪಂದ್ಯಗಳ ನೇರ ಪ್ರಸಾರದ ಡಿಜಿಟಲ್ ಹಕ್ಕುಗಳಿಂದ ಪಾಕಿಸ್ತಾನ್ ಕ್ರಿಕೆಟ್​ ಆದಾಯವನ್ನು ಪಡೆಯುತ್ತಿದೆ. ಹಾಗೆಯೇ ಖಾಸಗಿ ಕಂಪೆನಿಗಳಿಗೆ ಪಂದ್ಯಗಳ ಡಿಜಿಟಲ್ ಕ್ಲಿಪ್ಸ್​ ಹಾಗೂ ಫೋಟೋಗಳನ್ನು ಮಾರಾಟ ಮಾಡುವ ಮೂಲಕ ಆದಾಯವನ್ನು ಗಳಿಸುತ್ತಿದೆ. ಇದಲ್ಲದೆ ಸೋಷಿಯಲ್ ಮೀಡಿಯಾದಿಂದಲೂ ಪಿಸಿಬಿ ಉತ್ತಮ ಆದಾಯವನ್ನು ಪಡೆಯುತ್ತಿದೆ.

ಇದನ್ನೂ ಓದಿ: ಟೀಮ್ ಇಂಡಿಯಾ ಪರ ಸತತ 4 ಸಿಕ್ಸ್ ಸಿಡಿಸಿದ್ದು ಮೂವರು ಬ್ಯಾಟರ್​ಗಳು ಮಾತ್ರ..!

ಈ ಆದಾಯಗಳಿಂದ ತಮಗೂ ಪಾಲು ಸಿಗಬೇಕೆಂಬ ಬೇಡಿಕೆಯನ್ನು ಪಾಕಿಸ್ತಾನ್ ಆಟಗಾರರು ಮುಂದಿಟ್ಟಿದ್ದಾರೆ. ಆದರೆ ಈ ಬಗ್ಗೆ ಪಿಸಿಬಿ ಇನ್ನೂ ಕೂಡ ಅಂತಿಮ ನಿರ್ಧಾರ ಪ್ರಕಟಿಸಿಲ್ಲ. ಇದೇ ಕಾರಣದಿಂದಾಗಿ ಇದೀಗ ಏಕದಿನ ವಿಶ್ವಕಪ್​ನಲ್ಲಿ ಜಾಹೀರಾತು ಲೋಗೋಗಳನ್ನು ಪ್ರದರ್ಶಿಸದಿರಲು ಪಾಕ್ ಆಟಗಾರರು ನಿರ್ಧರಿಸಿದ್ದಾರೆ. ಪಾಕಿಸ್ತಾನ್ ತಂಡದ ಆಟಗಾರರ ಈ ಬೆದರಿಕೆಯು ಇದೀಗ ಪಿಸಿಬಿಯನ್ನು ಇಕ್ಕಟ್ಟಿಗೆ ಸಿಲುಕಿರುವುದಂತು ದಿಟ.

 

 

Published On - 5:34 pm, Mon, 25 September 23