ಭಾರತದಲ್ಲಿ ನಡೆಯಲ್ಲಿರುವ ಏಕದಿನ ವಿಶ್ವಕಪ್‌ನಲ್ಲಿ (ODI World Cup) ಪಾಕ್ ತಂಡ ಭಾಗವಹಿಸಬೇಕೋ ಅಥವಾ ಬೇಡವೋ ಎಂಬ ಚರ್ಚೆಯ ನಡುವೆಯೇ ಪಾಕ್ (Pakistan) ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಇಬ್ಬರು ಆಟಗಾರರು ಏಷ್ಯಾಕಪ್ (Asia Cup) ಹಾಗೂ ವಿಶ್ವಕಪ್ಗೂ (World Cup) ಮುಂಚೆಯೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಅಮೇರಿಕಾದಲ್ಲಿ ಆರಂಭವಾಗುತ್ತಿರುವ ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳುವ ಸಲುವಾಗಿ ಈ ಇಬ್ಬರು ಕ್ರಿಕೆಟಿಗರು ಈ ತೀರ್ಮಾನಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ. ಅಷ್ಟಕ್ಕೂ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಆ ಇಬ್ಬರು ಕ್ರಿಕೆಟಿಗರು ಯಾರು ಎಂಬುದನ್ನು ನೋಡುವುದಾದರೆ, ಎಹ್ಸಾನ್ ಆದಿಲ್ ಮತ್ತು ಆಲ್ ರೌಂಡರ್ ಹಮ್ಮದ್ ಅಜಮ್. ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದು, ಇಬ್ಬರೂ ಆಟಗಾರರಿಗೆ ಮಂಡಳಿ ಕೃತಜ್ಞತೆ ಸಲ್ಲಿಸಿದೆ.
ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ಈ ಇಬ್ಬರು ಆಟಗಾರರು ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಇದರಲ್ಲಿ ಆಲ್ ರೌಂಡರ್ ಹಮ್ಮದ್ ಅಜಮ್ ಮತ್ತು ಎಹ್ಸಾನ್ ಆದಿಲ್ ಐಪಿಎಲ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ಮಾಲೀಕತ್ವದ ಎಂಐ ನ್ಯೂಯಾರ್ಕ್ ಪರ ಆಡಲಿದ್ದಾರೆ. ಪಾಕಿಸ್ತಾನದಲ್ಲಿ ಕ್ರಿಕೆಟ್ ಜೀವನ ಆರಂಭಿಸಿದ ಹಮ್ಮದ್, ತವರು ದೇಶದಲ್ಲಿ ಅವಕಾಶಗಳ ಕೊರತೆಯಿಂದಾಗಿ ಅಮೆರಿಕಕ್ಕೆ ಶಿಫ್ಟ್ ಆಗಿದ್ದರು.
Thank you for your services, Ehsan Adil and Hammad Azam! Wishing you both well for future endeavours.
Read more ➡️ https://t.co/Z4bBthUohx pic.twitter.com/LtjwriU20I
— Pakistan Cricket (@TheRealPCB) July 9, 2023
ಈ ಇಬ್ಬರ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿನ ಬಗ್ಗೆ ಹೇಳುವುದಾದರೆ, ಫೆಬ್ರವರಿ 2013 ರಲ್ಲಿ ಸೆಂಚುರಿಯನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದ ಮೂಲಕ ಎಹ್ಸಾನ್ ಪಾಕ್ ತಂಡಕ್ಕೆ ಪಾದಾರ್ಪಣೆ ಮಾಡಿದರು. 2015 ರವರೆಗೆ ತಂಡದ ಪರ ಆಡಿದ ಎಹ್ಸಾನ್, ಇದರಲ್ಲಿ ಎರಡು ಟೆಸ್ಟ್ ಮತ್ತು ಆರು ಏಕದಿನ ಅಂತರಾಷ್ಟ್ರೀಯ ಪಂದ್ಯಗಳನ್ನಾಡಿ ಎರಡು ಸ್ವರೂಪಗಳಲ್ಲಿ ಕ್ರಮವಾಗಿ ಐದು ಮತ್ತು ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದರು. ಆದಿಲ್ 67 ಪ್ರಥಮ ದರ್ಜೆ ಪಂದ್ಯಗಳಲ್ಲಿ 245 ವಿಕೆಟ್, 67 ಲಿಸ್ಟ್ ಎ ಪಂದ್ಯಗಳಲ್ಲಿ 98 ಮತ್ತು ದೇಶೀಯ ಕ್ರಿಕೆಟ್‌ನಲ್ಲಿ 68 ಟಿ20 ಪಂದ್ಯಗಳಲ್ಲಿ 86 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ODI World Cup: ‘ಅವರು ಬರದಿದ್ದರೆ ನಮ್ಮ ತಂಡವೂ ಹೋಗುವುದಿಲ್ಲ’; ಹೊಸ ಬಾಂಬ್ ಸಿಡಿಸಿದ ಪಾಕ್ ಕ್ರೀಡಾ ಸಚಿವ..!
ಪಾಕಿಸ್ತಾನ ಪರ 11 ಏಕದಿನ ಪಂದ್ಯಗಳನ್ನಾಡಿರುವ ಹಮ್ಮದ್ ಅಜಮ್, ಇದರಲ್ಲಿ ಎರಡು ವಿಕೆಟ್ ಸೇರಿದಂತೆ 80 ರನ್ ಕೂಡ ಕಲೆಹಾಕಿದ್ದಾರೆ. ಹಾಗೆಯೇ ಪಾಕ್ ಪರ 5 ಟಿ20 ಪಂದ್ಯಗಳನ್ನೂ ಆಡಿದ್ದಾರೆ. 107 ಪ್ರಥಮ ದರ್ಜೆ ಪಂದ್ಯಗಳಲ್ಲಿ 4953 ರನ್ ಹಾಗೂ 75 ವಿಕೆಟ್ ಪಡೆದಿದ್ದಾರೆ.
ಇಬ್ಬರೂ ಕ್ರಿಕೆಟಿಗರು ಪಾಕಿಸ್ತಾನದ ಮಾಜಿ ಅಂಡರ್19 ಆಟಗಾರರಾಗಿದ್ದು, ಇದರಲ್ಲಿ ಎಹ್ಸಾನ್ ಆದಿಲ್ 2010 ರ ಅಂಡರ್-19 ವಿಶ್ವಕಪ್‌ನಲ್ಲಿ ಆಡಿದ್ದರೆ, ಅಜಮ್ ಆಸ್ಟ್ರೇಲಿಯಾದಲ್ಲಿ ನಡೆದ 2012ರ ಆವೃತ್ತಿಯಲ್ಲಿ ಪಾಕ್ ತಂಡದ ಪರ ಆಡಿದ್ದರು.
ಏತನ್ಮಧ್ಯೆ ವಿಶ್ವಕಪ್, ಏಷ್ಯಾಕಪ್‌ನಂತಹ ದೊಡ್ಡ ಟೂರ್ನಿಗಳು ನಡೆಯುತ್ತಿರುವಾಗ ಏಕಾಏಕಿ ಇಬ್ಬರು ಆಟಗಾರರು ನಿವೃತ್ತಿ ಘೋಷಿಸಿದ್ದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಈ ಬಾರಿಯ ಏಷ್ಯಾಕಪ್ ಅನ್ನು ಪಾಕಿಸ್ತಾನ ಆಯೋಜಿಸುತ್ತಿದೆ. ಆದರೆ ಬಿಸಿಸಿಐ ಪಾಕಿಸ್ತಾನದಲ್ಲಿ ಆಡಲು ನಿರಾಕರಿಸಿದ್ದರಿಂದ ಟೀಂ ಇಂಡಿಯಾದ ಪಂದ್ಯಗಳು ಬೇರೆಡೆ ನಡೆಯಲಿವೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:19 am, Mon, 10 July 23