ODI World Cup: ‘ಅವರು ಬರದಿದ್ದರೆ ನಮ್ಮ ತಂಡವೂ ಹೋಗುವುದಿಲ್ಲ’; ಹೊಸ ಬಾಂಬ್ ಸಿಡಿಸಿದ ಪಾಕ್ ಕ್ರೀಡಾ ಸಚಿವ..!
ODI World Cup 2023: ಏಷ್ಯಾಕಪ್ ಆಡಲು ಟೀಂ ಇಂಡಿಯಾ ತನ್ನ ದೇಶಕ್ಕೆ (ಪಾಕಿಸ್ತಾನಕ್ಕೆ) ಬರದಿದ್ದರೆ, ವಿಶ್ವಕಪ್ ಆಡಲು ಪಾಕ್ ತಂಡವನ್ನು ಭಾರತಕ್ಕೆ ಕಳುಹಿಸುವುದಿಲ್ಲ ಎಂದು ಕ್ರೀಡಾ ಸಚಿವರು ಹೇಳಿದ್ದಾರೆ.
ಈ ವರ್ಷ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ (ODI World Cup) ಪಾಕಿಸ್ತಾನ ಭಾಗವಹಿಸುವ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಪಾಕಿಸ್ತಾನದಿಂದ (Pakistan) ಪ್ರತಿದಿನ ಒಂದಲ್ಲ ಒಂದು ಹೇಳಿಕೆ ಹೊರಬರುತ್ತಿದೆ. ಇದೀಗ ಪಾಕಿಸ್ತಾನದ ಕ್ರೀಡಾ ಸಚಿವ ಎಹ್ಸಾನ್ ಮಜಾರಿ ಈ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ್ದು, ಏಷ್ಯಾಕಪ್ (Asia Cup) ಆಡಲು ಟೀಂ ಇಂಡಿಯಾ ತನ್ನ ದೇಶಕ್ಕೆ (ಪಾಕಿಸ್ತಾನಕ್ಕೆ) ಬರದಿದ್ದರೆ, ವಿಶ್ವಕಪ್ (World Cup) ಆಡಲು ಪಾಕ್ ತಂಡವನ್ನು ಭಾರತಕ್ಕೆ ಕಳುಹಿಸುವುದಿಲ್ಲ ಎಂದು ಕ್ರೀಡಾ ಸಚಿವರು ಹೇಳಿದ್ದಾರೆ. ಹೀಗಾಗಿ ಅಂತಿಮ ಹಂತದಲ್ಲಿದ್ದ ವಿಶ್ವಕಪ್ ತಯಾರಿಗೆ ಸಂಕಷ್ಟ ಎದುರಾಗಿದೆ.
ವಾಸ್ತವವಾಗಿ, ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ನಿನ್ನೆ ಅಂದರೆ, ಜುಲೈ 8ರಂದು ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ತಮ್ಮ ಕ್ರಿಕೆಟ್ ತಂಡ ಭಾಗವಹಿಸುವ ಕುರಿತು ನಿರ್ಧಾರ ಕೈಗೊಳ್ಳುವ ಸಲುವಾಗಿ ಸಮಿತಿಯೊಂದನ್ನು ರಚಿಸಿದ್ದಾರೆ. ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ನಡೆಯಲಿರುವ ವಿಶ್ವಕಪ್‌ಗೆ ಪಾಕಿಸ್ತಾನ ತಂಡ ಭಾರತಕ್ಕೆ ಬರಬೇಕೇ ಅಥವಾ ಬೇಡವೇ ಎಂಬುದನ್ನು ಈ ಸಮಿತಿ ನಿರ್ಧರಿಸಲಿದೆ.
ODI World Cup 2023: ವಿಶ್ವಕಪ್‌ನಿಂದ ಪಾಕಿಸ್ತಾನ ಹಿಂದೆ ಸರಿದರೆ ಐಸಿಸಿ ಮುಂದಿರುವ ಆಯ್ಕೆಗಳೇನು? ಇಲ್ಲಿದೆ ವಿವರ
ತಟಸ್ಥ ಸ್ಥಳದಲ್ಲಿ ವಿಶ್ವಕಪ್ ಪಂದ್ಯ ನಡೆಯಬೇಕು
ಷರೀಫ್ ಅವರು ರಚಿಸಿರುವ ಸಮಿತಿಯಲ್ಲಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಮತ್ತು ಎಹ್ಸಾನ್ ಸೇರಿದಂತೆ 11 ಸಚಿವರು ಇದ್ದಾರೆ. ಸಮಿತಿ ರಚನೆಯ ನಂತರ ಈ ಬಗ್ಗೆ ಮಾತನಾಡಿದ ಎಹ್ಸಾನ್, ಭಾರತವು ಏಷ್ಯಾಕಪ್ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ಆಡುವಂತೆ ಒತ್ತಾಯಿಸಿದರೆ, ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಪಾಕಿಸ್ತಾನವೂ ಅದೇ ರೀತಿಯ ಬೇಡಿಕೆಯನ್ನು ಇಡಬೇಕು. ಸಮಿತಿಯು ಸಂಪೂರ್ಣ ವಿಷಯವನ್ನು ಚರ್ಚಿಸಿ ನಂತರ ತನ್ನ ಸಲಹೆಗಳನ್ನು ಪ್ರಧಾನಿಗೆ ನೀಡಲಿದೆ. ಆ ಬಳಿಕ ಪ್ರಧಾನಿಗಳು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಕ್ರೀಡಾ ಸಚಿವರು ಹೇಳಿದರು.
ಭುಟ್ಟೋ ನೇತೃತ್ವದ ಸಮಿತಿಯು ಮುಂದಿನ ವಾರದೊಳಗೆ ತನ್ನ ವರದಿಯನ್ನು ಪ್ರಧಾನಿಗೆ ಸಲ್ಲಿಸಲಿದೆ ಎಂದು ಎಹ್ಸಾನ್ ಹೇಳಿದ್ದಾರೆ. ಏತನ್ಮಧ್ಯೆ, ನೂತನ ಪಿಸಿಬಿ ಅಧ್ಯಕ್ಷ ಝಾಕಾ ಅಶ್ರಫ್ ಅವರು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಮಹತ್ವದ ಐಸಿಸಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ಭಾಗವಹಿಸಲಿದ್ದಾರೆ. ಜೈ ಶಾ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರೂ ಆಗಿದ್ದಾರೆ. ಈ ಸಭೆಯಲ್ಲಿ ಏಷ್ಯಾಕಪ್ ಮತ್ತು ವಿಶ್ವಕಪ್ ಬಗ್ಗೆ ಚರ್ಚೆ ನಡೆಯಲಿದೆ.
ಪೂರ್ಣ ಪಂದ್ಯಾವಳಿ ಪಾಕಿಸ್ತಾನದಲ್ಲೇ ನಡೆಯಬೇಕು
ಏಷ್ಯಾಕಪ್‌ನ ದಿನಾಂಕಗಳನ್ನು ಈಗಾಗಲೇ ಪ್ರಕಟಿಸಲಾಗಿದೆ. ಆದರೆ ಸಂಪೂರ್ಣ ವೇಳಾಪಟ್ಟಿ ಇನ್ನೂ ಅಧಿಕೃತವಾಗಿ ಹೊರಬಿದ್ದಿಲ್ಲ. ಪಿಸಿಬಿ ಜೊತೆಗೆ ಎಸಿಸಿ ತೆಗೆದುಕೊಂಡ ನಿರ್ಧಾರದ ಪ್ರಕಾರ, ಏಷ್ಯಾಕಪ್ ಆಗಸ್ಟ್ 31 ಮತ್ತು ಸೆಪ್ಟೆಂಬರ್ 17 ರ ನಡುವೆ ಪಾಕಿಸ್ತಾನ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯಲಿದೆ. ಇದರ ನಾಲ್ಕು ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿದ್ದು, ಉಳಿದ ಒಂಬತ್ತು ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ. ಪಿಸಿಬಿ ಮಾಜಿ ಅಧ್ಯಕ್ಷ ನಜಾಮ್ ಸೇಥಿ ಅವರ ಅವಧಿಯಲ್ಲಿ ತೆಗೆದುಕೊಂಡ ನಿರ್ಧಾರ ನನಗೆ ಇಷ್ಟವಾಗಲಿಲ್ಲ ಎಂದಿರುವ ಎಹ್ಸಾನ್, ಏಷ್ಯಾಕಪ್ಗೆ ಪಾಕಿಸ್ತಾನ ಆತಿಥೇಯವಾಗಿದೆ. ಹೀಗಾಗಿ ಪೂರ್ಣ ಪಂದ್ಯಾವಳಿ ಪಾಕಿಸ್ತಾನದಲ್ಲೇ ಆಯೋಜಿಸಬೇಕು ಎಂದಿದ್ದಾರೆ.
ನಮ್ಮ ಫುಟ್ಬಾಲ್ ತಂಡ ಭಾರತಕ್ಕೆ ಬಂದಿತ್ತು
ಎಹ್ಸಾನ್ ಭಾರತ ಸರ್ಕಾರದ ವಿರುದ್ಧ ಪ್ರಶ್ನೆಗಳನ್ನು ಎತ್ತಿದ್ದು, ಭಾರತ ಸರ್ಕಾರ ಕ್ರಿಕೆಟ್‌ನಲ್ಲಿ ರಾಜಕೀಯವನ್ನು ತರುತ್ತಿದೆ. ಭಾರತ ಸರ್ಕಾರವು ಟೀಮ್ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಏಕೆ ಒಪ್ಪುತ್ತಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ. ಕೆಲ ದಿನಗಳ ಹಿಂದೆ ಭಾರತದ ಬೇಸ್ ಬಾಲ್ ತಂಡ ಇಸ್ಲಾಮಾಬಾದ್ಗೆ ಬಂದಿತ್ತು. ಅಲ್ಲದೆ ಪಾಕಿಸ್ತಾನದ ಫುಟ್ಬಾಲ್, ಹಾಕಿ, ಚೆಸ್ ತಂಡಗಳೂ ಭಾರತಕ್ಕೆ ಭೇಟಿ ನೀಡಿವೆ. ಹೀಗಾಗಿ ಬಿಸಿಸಿಐ, ಟೀಂ ಇಂಡಿಯಾವನ್ನು ಭಾರತಕ್ಕೆ ಕಳುಹಿಸಬೇಕು ಎಂದಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ