ಐಸಿಸಿ ಟಿ20 ವಿಶ್ವಕಪ್ನಲ್ಲಿ (T20 World Cup) ಭಾನುವಾರ ನಡೆದ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಣ ಪಂದ್ಯ ಇಡೀ ಕ್ರಿಕೆಟ್ ಜಗತ್ತಿನ ಕೇಂದ್ರ ಬಿಂದುವಾಗಿತ್ತು. ಗೆಲ್ಲುವ ಫೆವರಿಟ್ ಎನಿಸಿಕೊಂಡಿದ್ದ ಟೀಮ್ ಇಂಡಿಯಾ (Team India) ಸೋಲಿನೊಂದಿಗೆ ಅಭಿಯಾನ ಆರಂಭಿಸಿತು. ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಭಾಗಗಳೆರಡರಲ್ಲೂ ಪ್ರಚಂಡ ಪ್ರದರ್ಶನ ನೀಡಿದ ಪಾಕಿಸ್ತಾನ ಕೊನೆಗೂ ವಿಶ್ವಕಪ್ ಇತಿಹಾಸದಲ್ಲಿ ಭಾರತದ ಎದುರು ಸೋಲಿನ ಸರಪಣಿಯನ್ನು ಕಡಿದುಕೊಂಡಿತು. ಈ ಮೂಲಕ 29 ವರ್ಷಗಳಿಂದ ಐಸಿಸಿ ವಿಶ್ವಕಪ್ ಟೂರ್ನಿಗಳಲ್ಲಿ ಪಾಕಿಸ್ತಾನ ಎದುರು ಅಜೇಯ ಗೆಲುವಿನ ಸಾಧನೆ ಮಾಡಿದ್ದ ಭಾರತದ ಓಟಕ್ಕೆ ಕೊನೆಗೂ ಬ್ರೇಕ್ ಬಿದ್ದಿತು. ಬಾಬರ್ ಅಜಾಮ್ (Babar Azam) ಹಾಗೂ ಮೊಹಮ್ಮದ್ ರಿಝ್ವಾನ್ (Mohammad Rizwan) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನ ಸೂಪರ್-12ರ ಮೊದಲ ಪಂದ್ಯದಲ್ಲಿ 10 ವಿಕೆಟ್ಗಳ ಅಂತರದ ಐತಿಹಾಸಿಕ ಗೆಲುವು ಸಾಧಿಸಿದೆ. ಈ ಸೋಲಿನೊಂದಿಗೆ ಟಿ20 ವಿಶ್ವಕಪ್ನಲ್ಲಿ ಭಾರತದ ಮುಂದಿನ ಹಾದಿ ಮತ್ತಷ್ಟು ಕಠಿಣವಾಗಿದೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಮೊದಲ ಓವರ್‌ನಲ್ಲೇ ಸಿಡಿಲು ಬಂದು ಅಪ್ಪಿಳಿಸಿತು. ರೋಹಿತ್ ಶರ್ಮಾ ತಾವು ಎದುರಿಸಿದ ಮೊದಲ ಎಸೆತದಲ್ಲೇ ಶಾಹೀನ್ ಅಫ್ರಿದಿ ಬೌಲಿಂಗ್ನಲ್ಲಿ ಎಲ್ಬಿಗೆ ಬಲಿಯಾದರು. ಕೆ. ಎಲ್ ರಾಹುಲ್ 8 ಎಸೆತಗಳಲ್ಲಿ 3 ರನ್ಗೆ ಬೌಲ್ಡ್ ಆದರು. ತನ್ನ ಕಳಪೆ ಆಟವನ್ನು ಮುಂದುವರೆಸಿದ ಸೂರ್ಯಕುಮರ್ ಯಾದವ್ 11 ರನ್ಗೆ ಬ್ಯಾಟ್ ಕೆಳಗಿಟ್ಟರು. ಹೀಗೆ ಭಾರತ 31 ರನ್ಗೆ 3 ವಿಕೆಟ್ ಕಳೆದುಕೊಂಡಿತು.
ಆದರೆ, ಇತ್ತ ನಾಯಕ ವಿರಾಟ್ ಕೊಹ್ಲಿ ಒಳ್ಳೆ ಟಚ್ನಲ್ಲಿ ಕಾಣಿಸಿಕೊಳ್ಳುತ್ತಿದ್ದರಿಂದ ಭಾರತಕ್ಕೆ ಚೇತರಿಕೆಯ ಭರವಸೆ ಇತ್ತು. ಇವರಿಗೆ ರಿಷಭ್ ಪಂತ್ ಬೆಂಬಲವಿತ್ತರು. 10 ಓವರ್ ಮುಕ್ತಾಯಕ್ಕೆ ಹೆಚ್ಚಿನ ಆಘಾತಕ್ಕೆ ಸಿಲುಕದ ಭಾರತ ತನ್ನ ಮೊತ್ತವನ್ನು 60 ರನ್ನಿಗೆ ಏರಿಸಿತು. ಪಂತ್ ತಮ್ಮದೆ ಶೈಲಿಯ ಆಕ್ರಮಣ ಆಟಕ್ಕೆ ಕೈ ಹಾಕಿ ಹಸನ್ ಅಲಿ ಅವರ ಒಂದೇ ಓವರ್‌ನಲ್ಲಿ ಎರಡು ಸಿಕ್ಸರ್ ಸಿಡಿಸಿ ಪಂದ್ಯದ ಕಾವು ಏರಿಸಿದರು. ಈ ಎರಡೂ ಸಿಕ್ಸರ್‌ಗಳನ್ನು ಒಂದೇ ಕೈಯಲ್ಲಿ ಬಾರಿಸುವ ಮೂಲಕ ಪಂತ್ ಬ್ಯಾಟಿಂಗ್ ಆಕರ್ಷಣೆ ಹೆಚ್ಚಿಸಿದರು.
ಈ ಜೋಡಿ ತಂಡದ ಮೊತ್ತವನ್ನು ಇನ್ನಷ್ಟಟು ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಶದಾಬ್ ಖಾನ್ ಓವರ್‌ನಲ್ಲೇ ಪಂತ್ ವಿಕೆಟ್ ಕೈಚೆಲ್ಲಿದರು. ಭರ್ಜರಿ ಹೊಡೆತಕ್ಕೆ ಮುಂದಾದಾಗ ಚೆಂಡು ಆಗಸಕ್ಕೆ ಚಿಮ್ಮಿತು. ಶದಾಬ್ ರಿಟರ್ನ್ ಕ್ಯಾಚ್ ಪಡೆದರು. ಪಂತ್ ಕೊಡುಗೆ 30 ಎಸೆತಗಳಿಂದ 39 ರನ್ (2 ಬೌಂಡರಿ, 2 ಸಿಕ್ಸರ್). ಈ ಜೋಡಿ 53 ರನ್ಗಳ ಕಾಣಿಕೆ ನೀಡಿತು.
ಡೆತ್ ಓವರ್ ವೇಳೆ ಕ್ರೀಸಿನಲ್ಲಿದ್ದ ಜೋಡಿ ಕೊಹ್ಲಿ-ಜಡೇಜ. 45 ಎಸೆತಗಳಿಂದ ಕಪ್ತಾನನ ಅರ್ಧ ಶತಕ ಪೂರ್ತಿಗೊಂಡಿತು. ಆದರೆ, 49 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಬಾರಿಸಿ ಕೊಹ್ಲಿ 57 ರನ್ಗೆ ಬ್ಯಾಟ್ ಕೆಳಗಿಟ್ಟರೆ, ಜಡೇಜಾ ಆಟ 13 ರನ್ಗೆ ಅಂತ್ಯವಾಯಿತು. ಹಾರ್ದಿಕ್ ಪಾಂಡ್ಯ(11) ಮತ್ತೆ ವಿಫಲರಾದರು. ಅಂತಿಮವಾಗಿ ಭಾರತ 20 ಓವರ್‌ನಲ್ಲಿ 7 ವಿಕೆಟ್ ನಷ್ಟಕ್ಕೆ 151 ರನ್ ಬಾರಿಸಿತು.
ಗೆಲ್ಲಲು 152 ರನ್ ಗುರಿ ಪಡೆದ ಪಾಕಿಸ್ತಾನವು 17.5 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 152 ರನ್ ಗಳಿಸಿದೆ. ಬಾಬರ್ ಅಜಾಮ್ ಹಾಗೂ ರಿಝ್ವಾನ್ ಭಾರತ ವಿರುದ್ಧದ ಟ್ವೆಂಟಿ-20ಯಲ್ಲಿ ಗರಿಷ್ಠ ಜೊತೆಯಾಟ ನಡೆಸಿದರು. ಆಝಂ 40 ಎಸೆತಗಳಲ್ಲಿ(4 ಬೌಂಡರಿ, 2 ಸಿಕ್ಸರ್) ಹಾಗೂ ರಿಝ್ವಾನ್ 41 ಎಸೆತಗಳಲ್ಲಿ(3 ಬೌಂ., 2 ಸಿ.) ಅರ್ಧಶತಕಗಳನ್ನು ಪೂರೈಸಿದರು.
KL Rahul: ಕೆಎಲ್ ರಾಹುಲ್ ಐಪಿಎಲ್ನಲ್ಲಿ ಹಿಟ್: ಟೀಮ್ ಇಂಡಿಯಾ ಪರ ಫ್ಲಾಪ್
(Pakistan crushed India by 10 wickets to register their first win over their arch-rivals in Twenty20 World Cup)
Published On - 7:18 am, Mon, 25 October 21