ನ್ಯೂಝಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲೂ ಪಾಕಿಸ್ತಾನ್ ತಂಡ ಪರಾಜಯಗೊಂಡಿದೆ. ಡ್ಯುನೆಡಿನ್ನ ಯೂನಿವರ್ಸಿಟಿ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ಬೌಲಿಂಗ್ ಆಯ್ದುಕೊಂಡಿದ್ದರು. ಮಳೆಯ ಕಾರಣ 15 ಓವರ್ಗಳಿಗೆ ಸೀಮಿತವಾಗಿದ್ದ ಈ ಮ್ಯಾಚ್ನಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡ 9 ವಿಕೆಟ್ ಕಳೆದುಕೊಂಡು 135 ರನ್ ಕಲೆಹಾಕಿತು.
15 ಓವರ್ಗಳಲ್ಲಿ 136 ರನ್ಗಳ ಗುರಿಯನ್ನು ಬೆನ್ನತ್ತಿದ ನ್ಯೂಝಿಲೆಂಡ್ ತಂಡಕ್ಕೆ ಟಿಮ್ ಸೀಫರ್ಟ್ ಹಾಗೂ ಫಿನ್ ಅಲೆನ್ ಸ್ಪೋಟಕ ಆರಂಭ ಒದಗಿಸಿದ್ದರು. 22 ಎಸೆತಗಳನ್ನು ಎದುರಿಸಿದ ಸೀಫರ್ಟ್ 5 ಭರ್ಜರಿ ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 45 ರನ್ ಚಚ್ಚಿದರು. ಇನ್ನು ಫಿನ್ ಅಲೆನ್ 16 ಎಸೆತಗಳಲ್ಲಿ 5 ಸಿಕ್ಸ್ನೊಂದಿಗೆ 38 ರನ್ ಬಾರಿಸಿದರು. ಈ ಮೂಲಕ ನ್ಯೂಝಿಲೆಂಡ್ ತಂಡವು 13.1 ಓವರ್ಗಳಲ್ಲಿ 137 ರನ್ ಬಾರಿಸಿ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಇದು ಪಾಕಿಸ್ತಾನ್ ತಂಡದ 12ನೇ ಸೋಲು ಎಂಬುದು ವಿಶೇಷ. ಅಂದರೆ ಕಳೆದ 16 ಟಿ20 ಪಂದ್ಯಗಳಲ್ಲಿ ಪಾಕ್ ಪಡೆ ಹನ್ನೆರಡು ಮ್ಯಾಚ್ಗಳಲ್ಲಿ ಸೋಲನುಭವಿಸಿದೆ. ಇನ್ನು ಗೆದ್ದಿರುವುದು ದುರ್ಬಲ ತಂಡಗಳ ವಿರುದ್ಧ ಮಾತ್ರ.
ಅಂದರೆ ಕಳೆದ 16 ಪಂದ್ಯಗಳಲ್ಲಿ ಪಾಕಿಸ್ತಾನ್ ತಂಡ ಝಿಂಬಾಬ್ವೆ, ಐರ್ಲೆಂಡ್ ಮತ್ತು ಕೆನಡಾ ವಿರುದ್ಧ ಮಾತ್ರ ಗೆಲುವು ದಾಖಲಿಸಿದೆ. ಇನ್ನುಳಿದಂತೆ ಆಸ್ಟ್ರೇಲಿಯಾ, ನ್ಯೂಝಿಲೆಂಡ್. ಭಾರತ ಸೇರಿದಂತೆ ಪ್ರಮುಖ ಟೀಮ್ಗಳ ವಿರುದ್ಧ ಮುಗ್ಗರಿಸಿದೆ.
ಇದೀಗ ನ್ಯೂಝಿಲೆಂಡ್ ವಿರುದ್ಧ ಕೂಡ ಸೋಲುವ ಮೂಲಕ ಪಾಕ್ ಪಡೆ ಸರಣಿ ಸೋಲಿನ ಸನಿಹಕ್ಕೆ ಬಂದು ನಿಂತಿದೆ. ಏಕೆಂದರೆ ಐದು ಪಂದ್ಯಗಳ ಈ ಸರಣಿಯ ಮೊದಲ ಮ್ಯಾಚ್ನಲ್ಲಿ ನ್ಯೂಝಿಲೆಂಡ್ 9 ವಿಕೆಟ್ಗಳ ಜಯ ಸಾಧಿಸಿತ್ತು. ಇದೀಗ ದ್ವಿತೀಯ ಟಿ20 ಪಂದ್ಯದಲ್ಲಿ 5 ವಿಕೆಟ್ಗಳ ಗೆಲುವು ದಾಖಲಿಸಿದೆ.
ಇದನ್ನೂ ಓದಿ: IPL 2025: 8 ಆಟಗಾರರು ಎಂಟ್ರಿ: RCB ಅಭಿಮಾನಿಗಳಿಗೆ ಗುಡ್ ನ್ಯೂಸ್
ಇನ್ನುಳಿದ ಮೂರು ಪಂದ್ಯಗಳಲ್ಲಿ ಕಿವೀಸ್ ಪಡೆ ಒಂದು ಜಯ ಸಾಧಿಸಿದರೆ ಸರಣಿ ವಶಪಡಿಸಿಕೊಳ್ಳಬಹುದು. ಅತ್ತ ಪಾಕಿಸ್ತಾನ್ ತಂಡ ಸರಣಿ ಆಸೆಯನ್ನು ಜೀವಂತವಿರಿಸಬೇಕಿದ್ದರೆ ಮುಂದಿನ ಪಂದ್ಯದಲ್ಲಿ ಗೆಲ್ಲಲೇಬೇಕು. ಆದರೆ ಇತ್ತ ಝಿಂಬಾಬ್ವೆ, ಐರ್ಲೆಂಡ್ ಮತ್ತು ಕೆನಡಾ ವಿರುದ್ಧ ಮಾತ್ರ ಗೆದ್ದಿರುವ ಪಾಕಿಸ್ತಾನ್ ಮುಂದಿನ ಪಂದ್ಯದಲ್ಲಿ ಕಿವೀಸ್ ಪಡೆಗೆ ಸವಾಲೊಡ್ಡಲಿದೆಯಾ ಎಂಬುದೇ ಪ್ರಶ್ನೆ.
Published On - 12:30 pm, Tue, 18 March 25