T20 World Cup 2022: ಟಿ20 ವಿಶ್ವಕಪ್​ಗೆ ಪಾಕ್ ತಂಡ ಪ್ರಕಟ; ಡೇಂಜರಸ್ ಬೌಲರ್ ಎಂಟ್ರಿ..!

| Updated By: ಪೃಥ್ವಿಶಂಕರ

Updated on: Sep 15, 2022 | 6:16 PM

T20 World Cup 2022: ತಂಡದೊಳಗಿನ ರಾಜಕೀಯ ಹಾಗೂ ಹಲವು ಆಟಗಾರರ ಇಂಜುರಿ ಸಮಸ್ಯೆಯಿಂದ ಪಾಕ್ ಮಂಡಳಿ ಟಿ20 ವಿಶ್ವಕಪ್​ಗೆ ತನ್ನ ತಂಡವನ್ನು ಪ್ರಕಟಿಸುವುದಕ್ಕೆ ಬಹಳಷ್ಟು ಸಮಯ ತೆಗೆದುಕೊಂಡಿತ್ತು.

T20 World Cup 2022: ಟಿ20 ವಿಶ್ವಕಪ್​ಗೆ ಪಾಕ್ ತಂಡ ಪ್ರಕಟ; ಡೇಂಜರಸ್ ಬೌಲರ್ ಎಂಟ್ರಿ..!
ಟಿ20 ವಿಶ್ವಕಪ್​ಗೆ ಪಾಕ್ ತಂಡ
Follow us on

ಅಂತಿಮವಾಗಿ, 2022 ರ ಟಿ20 ವಿಶ್ವಕಪ್‌ಗೆ (T20 World Cup 2022) ಪಾಕ್ ಕ್ರಿಕೆಟ್ ಮಂಡಳಿ ತನ್ನ ತಂಡವನ್ನು ಪ್ರಕಟಿಸಿದೆ. ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದ ನೆಲದಲ್ಲಿ ನಡೆಯಲಿರುವ ಐಸಿಸಿ ಪಂದ್ಯಾವಳಿಗೆ ಪಾಕಿಸ್ತಾನ 15 ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ತಂಡದೊಳಗಿನ ರಾಜಕೀಯ ಹಾಗೂ ಹಲವು ಆಟಗಾರರ ಇಂಜುರಿ ಸಮಸ್ಯೆಯಿಂದ ಪಾಕ್ ಮಂಡಳಿ ಟಿ20 ವಿಶ್ವಕಪ್​ಗೆ ತನ್ನ ತಂಡವನ್ನು ಪ್ರಕಟಿಸುವುದಕ್ಕೆ ಬಹಳಷ್ಟು ಸಮಯ ತೆಗೆದುಕೊಂಡಿತ್ತು. ಅಲ್ಲದೆ ಏಷ್ಯಾಕಪ್ ಆರಂಭದಿಂದಲ್ಲೂ ಉತ್ತಮ ಆಟ ಪ್ರದರ್ಶಿಸಿ ಫೈನಲ್​ಗೇರಿದ್ದ ಪಾಕ್ ಪಡೆ ಅಂತಿಮ ಹಣಾಹಣಿಯಲ್ಲಿ ಲಂಕಾ ಎದುರು ಸೋಲನುಭವಿಸಬೇಕಾಯಿತು. ಹೀಗಾಗಿ​ ಏಷ್ಯಾಕಪ್​ನಲ್ಲಿದ್ದ ಪಾಕ್ ತಂಡಕ್ಕೂ ಈಗ​ ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿರುವ ತಂಡಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಆದರೆ, ತಂಡದ ನಾಯಕತ್ವ ಮಾತ್ರ ಎಂದಿನಂತೆ ಬಾಬರ್ ಆಜಮ್ (Babar Azam) ಕೈಯಲ್ಲಿದೆ.

ಏಷ್ಯಾಕಪ್ ವೈಫಲ್ಯ

ಇದನ್ನೂ ಓದಿ
T20 World Cup 2022: ಟಿ20 ವಿಶ್ವಕಪ್​ಗೆ ಅಫ್ಘಾನಿಸ್ತಾನ ತಂಡ ಪ್ರಕಟ; 5 ಆಟಗಾರರಿಗೆ ಗೇಟ್​ಪಾಸ್..!
T20 World Cup: ಟಿ20 ವಿಶ್ವಕಪ್​ಗೆ ಬಲಿಷ್ಠ ವೆಸ್ಟ್ ಇಂಡೀಸ್ ತಂಡ ಪ್ರಕಟ; ರಸೆಲ್, ನರೇನ್​ಗೆ ಕೋಕ್..!
T20 World Cup: ಇಂಗ್ಲೆಂಡ್ ತಂಡಕ್ಕೆ ಎಂಟ್ರಿಕೊಟ್ಟ ಆಸ್ಟ್ರೇಲಿಯಾದ ಇಬ್ಬರು ಮಾಜಿ ಕ್ರಿಕೆಟಿಗರು..!

ಏಷ್ಯಾಕಪ್‌ನಲ್ಲಿದ ಕೆಲವರಿಗೆ ತಂಡದಿಂದ ಗೇಟ್​ಪಾಸ್ ನೀಡಿದರೆ, ಇನ್ನು ಕೆಲವರು ತಂಡಕ್ಕೆ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಗಾಯದ ಸಮಸ್ಯೆಯಿಂದ ಏಷ್ಯಾಕಪ್​ನಿಂದ ಹೊರಗುಳಿದಿದ್ದ ವೇಗಿ ಶಾಹೀನ್ ಶಾ ಆಫ್ರಿದಿ ಮತ್ತು ಮೊಹಮ್ಮದ್ ವಾಸಿಂ ಜೂನಿಯರ್ ತಂಡಕ್ಕೆ ಮರಳಿದ್ದಾರೆ. ಆದರೆ ಅನುಭವಿ ಸ್ಫೋಟಕ ಬ್ಯಾಟ್ಸ್‌ಮನ್ ಫಖರ್ ಜಮಾನ್ ಅವರನ್ನು ಮಾತ್ರ ಈ ತಂಡದಿಂದ ಕೈಬಿಡಲಾಗಿದೆ. ಏಷ್ಯಾಕಪ್‌ನಲ್ಲಿ ಜಮಾನ್‌ರ ಪ್ರದರ್ಶನ ತೀರಾ ಕಳಪೆಯಾಗಿತ್ತು. ಅಲ್ಲದೆ ಇಡೀ ಟೂರ್ನಿಯಲ್ಲಿ ಅವರು ಹಾಂಗ್‌ ಕಾಂಗ್‌ ವಿರುದ್ಧ ಬಾರಿಸಿದ ಅರ್ಧಶತಕವೇ ಅವರ ವೈಯಕ್ತಿಕ ಅತ್ಯಧಿಕ ಸ್ಕೋರ್ ಆಗಿತ್ತು. ಫಖರ್ ಅವರನ್ನು ತಂಡದಿಂದ ಕೈಬಿಡಲಾಗಿದ್ದರು, ಮೀಸಲು ಆಟಗಾರರಲ್ಲಿ ಪಟ್ಟಿಯಲ್ಲಿ ಅವರಿಗೆ ಸ್ಥಾನ ನೀಡಲಾಗಿದೆ.

ಆಡದೆ ತಂಡದಲ್ಲಿ ಅವಕಾಶ

ಇಷ್ಟೇ ಅಲ್ಲ, ಪಾಕಿಸ್ತಾನದ ಆಯ್ಕೆಗಾರರು ಅಂತಿಮವಾಗಿ ಎಡಗೈ ಬ್ಯಾಟ್ಸ್‌ಮನ್ ಶಾನ್ ಮಸೂದ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿದ್ದಾರೆ. ಮಸೂದ್ ಈ ವರ್ಷ ಪಾಕಿಸ್ತಾನ ಪರ ವಿವಿಧ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ, ಅವರು ಇನ್ನೂ ಒಂದೇ ಒಂದು ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು ಆಡಿಲ್ಲ ಎಂಬುದು ವಿಶೇಷ. ಅಲ್ಲದೆ ಅವರ T20 ಸ್ಟ್ರೈಕ್ ರೇಟ್ ಕೂಡ ಕೇವಲ 126 ಆಗಿದೆ. ಮಸೂದ್ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿದ್ದು, ಈಗಾಗಲೇ ಪಾಕ್ ತಂಡ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಅವರ ನಿಧಾನಗತಿಯ ಬ್ಯಾಟಿಂಗ್‌ನಿಂದ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದೆ. ಹೀಗಿರುವಾಗ ಈ ಇಬ್ಬರ ಜೊತೆಗೆ ಇನ್ನೊಬ್ಬ ನಿಧಾನಗತಿಯ ಆಟಗಾರನನ್ನು ಆಯ್ಕೆ ಮಾಡಿರುವುದು ಆಶ್ಚರ್ಯಕರವಾಗಿದೆ.

ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಅಭಿಯಾನ ಅಕ್ಟೋಬರ್ 23 ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿಯೇ ಪಾಕಿಸ್ತಾನ ತಂಡ ಭಾರತದ ಸವಾಲನ್ನು ಎದುರಿಸಲಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ಮೆಲ್ಬೋರ್ನ್‌ನಲ್ಲಿ ನಡೆಯಲಿದೆ. T20 ವಿಶ್ವಕಪ್‌ಗೆ ತಂಡವನ್ನು ಆಯ್ಕೆ ಮಾಡುವುದರ ಜೊತೆಗೆ, ಪಾಕಿಸ್ತಾನ ತಂಡ ಇಂಗ್ಲೆಂಡ್ ವಿರುದ್ಧದ 7 ಪಂದ್ಯಗಳ T20 ಸರಣಿಗೂ ತಂಡವನ್ನು ಪ್ರಕಟಿಸಿದೆ.

ಪಾಕಿಸ್ತಾನ ತಂಡ

ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಹೈದರಿ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ಹಸ್ನೇನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಮ್ ಜೂನಿಯರ್, ನಸೀಮ್ ಶಾ, ಶಾಹೀನ್ ಶಾಹ್ ಅಫ್ರಿದಿ, ಶಾನ್ ಮಸೂದ್, ಉಸ್ಮಾನ್ ಖಾದಿರ್

ಮೀಸಲು ಆಟಗಾರರು- ಫಖರ್ ಜಮಾನ್, ಶಹನವಾಜ್ ದಹಾನಿ ಮತ್ತು ಮೊಹಮ್ಮದ್ ಹ್ಯಾರಿಸ್

Published On - 5:49 pm, Thu, 15 September 22