PSL 2025: ಪ್ರೇಕ್ಷಕರಿಗಿಂತ ಭದ್ರತಾ ಸಿಬ್ಬಂದಿಗಳೇ ಹೆಚ್ಚು; ಖಾಲಿ ಹೊಡೆಯುತ್ತಿದೆ ಪಾಕ್ ಸೂಪರ್​ ಲೀಗ್

|

Updated on: Apr 13, 2025 | 5:43 PM

Pakistan Super League's Poor Attendance: ಪಾಕಿಸ್ತಾನ ಸೂಪರ್ ಲೀಗ್ನ 10ನೇ ಸೀಸನ್ ಕಡಿಮೆ ಪ್ರೇಕ್ಷಕರ ಸಮಸ್ಯೆಯನ್ನು ಎದುರಿಸುತ್ತಿದೆ. ಐಪಿಎಲ್ ಜೊತೆ ಹೋಲಿಸಿದಾಗ, ಪಿಎಸ್ಎಲ್ ಪಂದ್ಯಗಳಿಗೆ ಬರುವ ಪ್ರೇಕ್ಷಕರ ಸಂಖ್ಯೆ ಅತ್ಯಂತ ಕಡಿಮೆ ಇದೆ. ಕರಾಚಿಯಲ್ಲಿ ನಡೆದ ಪಂದ್ಯಕ್ಕೆ 5000 ಪ್ರೇಕ್ಷಕರು ಮಾತ್ರ ಬಂದಿದ್ದರೆ, ಭದ್ರತಾ ಸಿಬ್ಬಂದಿ 6700 ಇದ್ದರು ಎಂಬುದು ಆತಂಕಕಾರಿ. ಇದು ಪಾಕಿಸ್ತಾನ ಕ್ರಿಕೆಟ್‌ಗೆ ದೊಡ್ಡ ಸವಾಲಾಗಿದೆ.

PSL 2025: ಪ್ರೇಕ್ಷಕರಿಗಿಂತ ಭದ್ರತಾ ಸಿಬ್ಬಂದಿಗಳೇ ಹೆಚ್ಚು; ಖಾಲಿ ಹೊಡೆಯುತ್ತಿದೆ ಪಾಕ್ ಸೂಪರ್​ ಲೀಗ್
Psl
Follow us on

ಪಾಕಿಸ್ತಾನ ಸೂಪರ್ ಲೀಗ್‌ನ (Pakistan Super League) 10 ನೇ ಸೀಸನ್ ಪ್ರಾರಂಭವಾಗಿದ್ದು, ಎರಡು ದಿನಗಳಲ್ಲಿ 3 ಪಂದ್ಯಗಳು ನಡೆದಿವೆ. ಪಿಎಸ್ಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಶ್ವದ ಅತ್ಯಂತ ಜನಪ್ರಿಯ ಟಿ20 ಲೀಗ್ ಐಪಿಎಲ್ (IPL) ಎದುರಲ್ಲಿ ಈ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದ್ದು, ಮತ್ತೊಮ್ಮೆ ಎರಡೂ ಲೀಗ್‌ಗಳ ನಡುವಿನ ವ್ಯತ್ಯಾಸ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದು ಕೇವಲ ಆಟ ಅಥವಾ ಲೀಗ್‌ಗೆ ಹರಿದುಬರುವ ಹಣದ ಬಗ್ಗೆ ಮಾತ್ರವಲ್ಲ. ಬದಲಿಗೆ ಪ್ರೇಕ್ಷಕರಿಲ್ಲದೆ ಖಾಲಿ ಖಾಲಿ ಮೈದಾನದಲ್ಲಿ ನಡೆಯುತ್ತಿದೆ ಪಾಕಿಸ್ತಾನ ಸೂಪರ್ ಲೀಗ್.

ಪಿಎಸ್‌ಎಲ್‌ನ 10 ನೇ ಸೀಸನ್ ರಾವಲ್ಪಿಂಡಿಯಲ್ಲಿ ಏಪ್ರಿಲ್ 11 ಶುಕ್ರವಾರದಿಂದ ಪ್ರಾರಂಭವಾಯಿತು. ಶನಿವಾರ, ಲೀಗ್‌ನ ಮೂರನೇ ಪಂದ್ಯವು ಕರಾಚಿ ಕಿಂಗ್ಸ್ ಮತ್ತು ಮುಲ್ತಾನ್ ಸುಲ್ತಾನ್ಸ್ ನಡುವೆ ನಡೆಯಿತು. ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಎರಡೂ ತಂಡಗಳಿಂದ ರನ್‌ಗಳ ಮಳೆ ಸುರಿಸಿದರು. 450 ಕ್ಕೂ ಹೆಚ್ಚು ರನ್‌ಗಳು ದಾಖಲಾಗಿದ್ದವು. ಆದರೆ ಈ ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಕೇವಲ 5000 ಅಭಿಮಾನಿಗಳ ಆಗಮನವಾಗಿತ್ತು ಎಂಬುದು ಲೀಗ್​ನ ಜನಪ್ರಿಯತೆ ಎಷ್ಟಿದೆ ಎಂಬುದನ್ನು ಸಾಬೀತುಪಡಿಸುತ್ತಿದೆ.

ಅಭಿಮಾನಿಗಳಿಗಿಂತ ಹೆಚ್ಚಿನ ಭದ್ರತೆ

ಮೊಹಮ್ಮದ್ ರಿಜ್ವಾನ್, ಡೇವಿಡ್ ವಾರ್ನರ್, ಹಸನ್ ಅಲಿ, ಟಿಮ್ ಸೀಫರ್ಟ್ ಮತ್ತು ಜೇಮ್ಸ್ ವಿನ್ಸ್ ಅವರಂತಹ ಅನೇಕ ಪಾಕಿಸ್ತಾನಿ ಮತ್ತು ಅಂತರರಾಷ್ಟ್ರೀಯ ತಾರೆಯರು ಇದ್ದರೂ, ಪಂದ್ಯವನ್ನು ವೀಕ್ಷಿಸಲು ಬಹಳ ಕಡಿಮೆ ಪ್ರೇಕ್ಷಕರು ಬಂದಿದ್ದರು. ಪರಿಸ್ಥಿತಿ ಹೇಗಿತ್ತೆಂದರೆ, ಈ ಪಂದ್ಯಕ್ಕಾಗಿ ಕ್ರೀಡಾಂಗಣಕ್ಕೆ ಬಂದಿದ್ದ ಪ್ರೇಕ್ಷಕರಿಗಿಂತ, ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಪಾಕಿಸ್ತಾನಿ ಪತ್ರಕರ್ತರೊಬ್ಬರು ಈ ಸತ್ಯವನ್ನು ಜಗತ್ತಿನ ಮುಂದೆ ತೆರೆದಿಟ್ಟು, ಪಂದ್ಯ ವೀಕ್ಷಿಸಲು ಕೇವಲ 5 ಸಾವಿರ ಪ್ರೇಕ್ಷಕರು ಮಾತ್ರ ಬಂದಿದ್ದರೆ ಈ ಪಂದ್ಯಕ್ಕಾಗಿ 6700 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಎಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

PSL 2025: ಮೊದಲ ಪಂದ್ಯದಲ್ಲೇ ಸೊನ್ನೆ ಸುತ್ತಿದ ನಾಯಕ ಬಾಬರ್; ವಿಡಿಯೋ ನೋಡಿ

ಅಭಿಮಾನಿಗಳ ಕೊರತೆ ಇದೇ ಮೊದಲಲ್ಲ

ಪಿಎಸ್ಎಲ್ ಪಂದ್ಯಗಳಲ್ಲಿ ಪ್ರೇಕ್ಷಕರ ಕೊರತೆ ಉಂಟಾಗಿರುವುದು ಇದೇ ಮೊದಲಲ್ಲ. ವಿಶೇಷವಾಗಿ ಕರಾಚಿಯಲ್ಲಿ, ಕಳೆದ ಕೆಲವು ಸೀಸನ್​ಗಳಿಂದ ಅಭಿಮಾನಿಗಳ ಕೊರತೆಯ ಬಗ್ಗೆ ನಿರಂತರ ದೂರುಗಳು ಬರುತ್ತಿವೆ. ಪಿಎಸ್‌ಎಲ್ ಮಾತ್ರವಲ್ಲ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಕಳೆದ ಕೆಲವು ವರ್ಷಗಳಿಂದ ಅಭಿಮಾನಿಗಳು ಕ್ರೀಡಾಂಗಣಕ್ಕೆ ಬರುತ್ತಿರುವ ಪ್ರಮಾಣ ತೀರ ಕಡಿಮೆಯಾಗಿದೆ. ಸೀಸನ್ ಮುಂದುವರೆದಂತೆ ಈ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಬಹುದು ಎಂಬುದು ಸ್ಪಷ್ಟ. ಇದು ಈ ಪಂದ್ಯಾವಳಿ ಮತ್ತು ಪಾಕಿಸ್ತಾನ ಕ್ರಿಕೆಟ್‌ಗೆ ಕಳವಳಕಾರಿ ವಿಷಯವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:40 pm, Sun, 13 April 25