1800 ಕೋಟಿ ರೂ. ಖರ್ಚು ಮಾಡಿ ನಿರ್ಮಿಸಿದ ಸ್ಟೇಡಿಯಂನಲ್ಲಿ ಪಾಕಿಸ್ತಾನ್ ಒಂದೇ ಒಂದು ಪಂದ್ಯವಾಡಲ್ಲ..!

Champions Trophy 2025: ಈ ಬಾರಿಯ ಚಾಂಪಿಯನ್ಸ್ ಟ್ರೋಫಿಗಾಗಿ ಲಾಹೋರ್​ನ ಗದ್ದಾಫಿ ಸ್ಟೇಡಿಯಂ ಅನ್ನು ನವೀಕರಿಸಲಾಗಿತ್ತು. ಇದಕ್ಕಾಗಿ 117 ದಿನಗಳ ಕಾಲ, 1000 ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡಿದ್ದರು. ಅಲ್ಲದೆ ಈ ಸ್ಟೇಡಿಯಂನ ನವೀಕರಣಕ್ಕಾಗಿ ಖಚ್ಚು ಮಾಡಲಾದ ವೆಚ್ಚ 1800 ಕೋಟಿ ರೂ. ಎನ್ನಲಾಗಿದೆ. ಆದರೆ ಈ ಹೊಸ ಸ್ಟೇಡಿಯಂನಲ್ಲಿ ಪಾಕಿಸ್ತಾನ್ ತಂಡ ಒಂದೇ ಒಂದು ಪಂದ್ಯವಾಡುತ್ತಿಲ್ಲ..!

1800 ಕೋಟಿ ರೂ. ಖರ್ಚು ಮಾಡಿ ನಿರ್ಮಿಸಿದ ಸ್ಟೇಡಿಯಂನಲ್ಲಿ ಪಾಕಿಸ್ತಾನ್ ಒಂದೇ ಒಂದು ಪಂದ್ಯವಾಡಲ್ಲ..!
Pakistan

Updated on: Feb 25, 2025 | 1:03 PM

ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಬೇಕೆಂಬ ಪಾಕಿಸ್ತಾನ್ ತಂಡದ ಕನಸು ನುಚ್ಚುನೂರಾಗಿದೆ. ಅದು ಸಹ ಸತತ ಎರಡು ಸೋಲುಗಳೊಂದಿಗೆ. ಕರಾಚಿಯಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಸೋತು ಸುಣ್ಣವಾಗಿದ್ದ ಪಾಕ್ ಪಡೆಯನ್ನು ದುಬೈನಲ್ಲಿ ಟೀಮ್ ಇಂಡಿಯಾ ಬಗ್ಗು ಬಡಿದಿದೆ.

ಈ ಪರಾಜಯಗಳೊಂದಿಗೆ ಪಾಕಿಸ್ತಾನ್ ತಂಡ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಹೊರಬಿದ್ದಿದೆ. ಇತ್ತ ಟೀಮ್ ಇಂಡಿಯಾ ಹಾಗೂ ನ್ಯೂಝಿಲೆಂಡ್ ತಂಡಗಳು ಸೆಮಿಫೈನಲ್​ಗೆ ಪ್ರವೇಶಿಸಿದೆ. ಇದರೊಂದಿಗೆ ಗದ್ದಾಫಿ ಸ್ಟೇಡಿಯಂನಲ್ಲಿ ಕಣಕ್ಕಿಳಿಯುವ ಪಾಕ್ ಪಡೆಯ ಕನಸು ಕೂಡ ಕಮರಿದೆ.

1800 ಕೋಟಿ ರೂ. ಸ್ಟೇಡಿಯಂ:

ಈ ಬಾರಿಯ ಚಾಂಪಿಯನ್ಸ್ ಟ್ರೋಫಿಗಾಗಿಯೇ ಲಾಹೋರ್​ನ ಗದ್ದಾಫಿ ಸ್ಟೇಡಿಯಂ ಅನ್ನು ನವೀಕರಿಸಲಾಗಿತ್ತು. ಐಸಿಸಿ ನೀಡಿದ ಅನುದಾನದೊಂದಿಗೆ ಒಟ್ಟು 1800 ಕೋಟಿ ರೂ. ಮಾಡಿ ಈ ಸ್ಟೇಡಿಯಂ ಅನ್ನು ನಿರ್ಮಿಸಲಾಗಿದೆ ಎಂದು ವರದಿಯಾಗಿದೆ. ಆದರೆ ಇದೀಗ ಈ ಸ್ಟೇಡಿಯಂನಲ್ಲಿ ಕಣಕ್ಕಿಳಿಯಲು ಪಾಕಿಸ್ತಾನ್ ತಂಡಕ್ಕೆ ಅವಕಾಶವೇ ಇಲ್ಲದಂತಾಗಿದೆ.

ಏಕೆಂದರೆ ಪಾಕಿಸ್ತಾನ್ ತಂಡ ಸೆಮಿಫೈನಲ್​ಗೆ ಪ್ರವೇಶಿಸಲಿದೆ ಎಂಬ ವಿಶ್ವಾಸದಲ್ಲಿ ಈ ಟೂರ್ನಿಯ ಎರಡನೇ ನಾಕೌಟ್​ ಪಂದ್ಯವನ್ನು ಗದ್ದಾಫಿ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ.  ಅಲ್ಲದೆ ತವರಿನಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಪಾಕಿಸ್ತಾನ್ ಭರ್ಜರಿ ಪ್ರದರ್ಶನ ನೀಡಿ ಫೈನಲ್ ತಲುಪಲಿದೆ ಎಂಬ ನಂಬಿಕೆಯೊಂದಿಗೆ ಅಂತಿಮ ಪಂದ್ಯವನ್ನು ಲಾಹೋರ್​ನಲ್ಲೇ ಆಯೋಜಿಸಲು ಪಿಸಿಬಿ ಪ್ಲ್ಯಾನ್ ರೂಪಿಸಿದೆ.

ಆದರೀಗ ಸೆಮಿಫೈನಲ್​ಗೆ ತಲುಪುವ ಮುನ್ನವೇ ಪಾಕಿಸ್ತಾನ್ ತಂಡ ಟೂರ್ನಿಯಿಂದಲೇ ಹೊರಬಿದ್ದಿದೆ. ಹೀಗಾಗಿ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಲಾಹೋರ್​ನ ಗದ್ದಾಫಿ ಸ್ಟೇಡಿಯಂನಲ್ಲಿ ಕಣಕ್ಕಿಳಿಯುವ ಭಾಗ್ಯ ಪಾಕಿಸ್ತಾನ್ ತಂಡಕ್ಕೆ ದೊರೆಯದಂತಾಗಿದೆ.

ಅದರಂತೆ ಗದ್ದಾಫಿ ಸ್ಟೇಡಿಯಂನಲ್ಲಿ ನಡೆಯಲಿರುವ ಎರಡನೇ ಸೆಮಿಫೈನಲ್​ನಲ್ಲಿ ನ್ಯೂಝಿಲೆಂಡ್ ವಿರುದ್ಧ ಆಸ್ಟ್ರೇಲಿಯಾ/ಇಂಗ್ಲೆಂಡ್/ಸೌತ್ ಆಫ್ರಿಕಾ ಅಥವಾ ಅಫ್ಘಾನಿಸ್ತಾನ್ ತಂಡ ಕಣಕ್ಕಿಳಿಯಲಿದೆ.

ಫೈನಲ್ ಪಂದ್ಯ ಎಲ್ಲಿ?

ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯವು ಎಲ್ಲಿ ನಡೆಯಲಿದೆ ಎಂಬುದು ಮಾರ್ಚ್ 4 ರಂದು ನಿರ್ಧಾರವಾಗಲಿದೆ. ಏಕೆಂದರೆ ಟೀಮ್ ಇಂಡಿಯಾ ಮೊದಲ ಸೆಮಿಫೈನಲ್​ನಲ್ಲಿ ಗೆಲುವು ಸಾಧಿಸಿ ಫೈನಲ್​ಗೆ ಪ್ರವೇಶಿಸಿದರೆ ಅಂತಿಮ ಪಂದ್ಯ ದುಬೈನ ಇಂಟರ್​ನ್ಯಾಷನಲ್​ ಸ್ಟೇಡಿಯಂನಲ್ಲಿ ಜರುಗಲಿದೆ.

ಇದನ್ನೂ ಓದಿ: ರಚಿನ್ ಅಬ್ಬರಕ್ಕೆ ಸಚಿನ್ ವಿಶ್ವ ದಾಖಲೆಯೇ ಉಡೀಸ್

ಒಂದು ವೇಳೆ ಭಾರತ ತಂಡ ಸೆಮಿಫೈನಲ್​ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದರೆ, ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯ ಲಾಹೋರ್​ನ ಗದ್ದಾಫಿ ಸ್ಟೇಡಿಯಂನಲ್ಲಿ ನಡೆಯಲಿದೆ.