
ಟಿ20 ವಿಶ್ವಕಪ್ನಲ್ಲಿ ಬಾಂಗ್ಲಾದೇಶ್ ತಂಡದ ಭಾಗವಹಿಸುವಿಕೆ ತೂಗುಯ್ಯಾಲೆಯಲ್ಲಿರುವಾಗಲೇ ಟೂರ್ನಿಯಿಂದ ಹಿಂದೆ ಸರಿಯಲು ಪಾಕಿಸ್ತಾನ್ ತಂಡ ಚಿಂತನೆ ನಡೆಸಿದೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ. ಇದಕ್ಕೆ ಮುಖ್ಯ ಕಾರಣ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ನ ಮನವಿಗೆ ಐಸಿಸಿ ಪ್ರಾಮುಖ್ಯತೆ ನೀಡದಿರುವುದು. ಅಂದರೆ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ತನ್ನ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಮನವಿ ಮಾಡಿದೆ. ಈ ಮನವಿಯ ಹೊರತಾಗಿಯೂ ಪಂದ್ಯಗಳ ಸ್ಥಳಾಂತರಕ್ಕೆ ಐಸಿಸಿ ಒಪ್ಪಿಗೆ ಸೂಚಿಸಿಲ್ಲ.
ಅತ್ತ ಐಸಿಸಿ ಕಡೆಯಿಂದ ಸಕರಾತ್ಮಕ ಸ್ಪಂದನೆ ದೊರೆಯದ ಹಿನ್ನಲೆ ಬಾಂಗ್ಲಾದೇಶ್ ಕ್ರಿಕೆಟ್ ಮಂಡಳಿ, ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ನ ಬೆಂಬಲ ಪಡೆಯಲು ಮುಂದಾಗಿದೆ. ಅದರ ಮೊದಲ ಹೆಜ್ಜೆಯಾಗಿ ಈಗಾಗಲೇ ಬಿಸಿಬಿ ಅಧಿಕಾರಿಗಳು ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.
ಈ ಚರ್ಚೆಯ ವೇಳೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ನಿಂದ ಸಕರಾತ್ಮಕ ಸ್ಪಂದನೆ ದೊರೆತಿದೆ. ಅಲ್ಲದೆ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ನ ಸಮಸ್ಯೆಯನ್ನು ಬಗೆಹರಿಸದಿದ್ದರೆ, ಪಾಕಿಸ್ತಾನವು ಟಿ20 ವಿಶ್ವಕಪ್ನಲ್ಲಿ ತನ್ನ ಭಾಗವಹಿಸುವಿಕೆಯನ್ನು ಮರುಪರಿಶೀಲಿಸಲಿದೆ ಎಂದು ಪಾಕ್ ಸರ್ಕಾರದ ಮೂಲಗಳು ತಿಳಿಸಿದೆ.
ಅಂದರೆ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ನ ಬೇಡಿಕೆಯನ್ನು ಈಡೇರಿಸದೇ ಇದ್ದರೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಕೂಡ ಟಿ20 ವಿಶ್ವಕಪ್ನಿಂದ ಹಿಂದೆ ಸರಿಯುವುದಾಗಿ ಪರೋಕ್ಷವಾಗಿ ತಿಳಿಸಿದೆ. ಈ ಮೂಲಕ ಐಸಿಸಿ ಮೇಲೆ ಒತ್ತಡ ಹೇರಲು ಎರಡು ಕ್ರಿಕೆಟ್ ಬೋರ್ಡ್ ಮುಂದಾಗಿದೆ.
ಇತ್ತ ಐಸಿಸಿಯು ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ಗೆ ತನ್ನ ನಿಲುವು ತಿಳಿಸಲು ಗಡುವು ವಿಧಿಸಿದೆ. ಅದರಂತೆ ಜನವರಿ 21 ರೊಳಗೆ ಟಿ20 ವಿಶ್ವಕಪ್ ಆಡುತ್ತೀರಾ ಅಥವಾ ಇಲ್ಲವಾ ಎಂಬುದನ್ನು ತಿಳಿಸುವಂತೆ ಸೂಚಿಸಲಾಗಿದೆ. ಐಸಿಸಿಯ ಈ ಗಡುವಿನ ಬೆನ್ನಲ್ಲೇ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಕೂಡ ಎಂಟ್ರಿ ಕೊಟ್ಟಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಟಿ20 ವಿಶ್ವಕಪ್ನ ತನ್ನೆಲ್ಲಾ ಪಂದ್ಯಗಳನ್ನು ಭಾರತದಿಂದ ಸ್ಥಳಾಂತರಿಸಬೇಕೆಂದು ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ಪಟ್ಟು ಹಿಡಿದಿದೆ. ಬಾಂಗ್ಲಾ ಆಟಗಾರರ ಸುರಕ್ಷತೆಯ ದೃಷ್ಟಿಯಿಂದಾಗಿ ಭಾರತದಲ್ಲಿ ವಿಶ್ವಕಪ್ ಆಡಲು ಬಿಸಿಬಿ ಹಿಂದೇಟು ಹಾಕುತ್ತಿದ್ದು, ಹೀಗಾಗಿ ತನ್ನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಯೋಜಿಸುವಂತೆ ಕೋರಲಾಗಿದೆ. ಇದಾಗ್ಯೂ ಐಸಿಸಿ, ಭಾರತದಲ್ಲೇ ಟೂರ್ನಿ ಆಡಬೇಕೆಂದು ತಿಳಿಸಿದೆ. ಹೀಗಾಗಿಯೇ ಇದೀಗ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ಪಾಕ್ ಕ್ರಿಕೆಟ್ ಮಂಡಳಿಯ ನೆರವು ಪಡೆಯಲು ಮುಂದಾಗಿದೆ.
ಮುಂಬರುವ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ್ ತಂಡವು ತನ್ನೆಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ. ಕಳೆದ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್ಗೆ ತೆರಳಲು ಭಾರತ ಹಿಂದೇಟು ಹಾಕಿದ್ದರಿಂದ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಐಸಿಸಿ ಟೂರ್ನಿಯಲ್ಲಿ ತಮ್ಮ ಪಂದ್ಯಗಳನ್ನು ಕೂಡ ತಟಸ್ಥ ಸ್ಥಳದಲ್ಲಿ ಆಯೋಜಿಸಬೇಕೆಂದು ಬೇಡಿಕೆಯಿಟ್ಟಿದ್ದರು.
ಇದನ್ನೂ ಓದಿ: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ 5 ತಿಂಗಳು ಕಣಕ್ಕಿಳಿಯಲ್ಲ!
ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ನ ಈ ಬೇಡಿಕೆಗೆ ಐಸಿಸಿ ಸಮ್ಮತಿ ಸೂಚಿಸಿತ್ತು. ಅದರಂತೆ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ್ ತಂಡವು ತನ್ನೆಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ. ಇತ್ತ ಬಾಂಗ್ಲಾದೇಶ್ ಕೂಡ ಶ್ರೀಲಂಕಾದಲ್ಲಿ ತನ್ನ ಪಂದ್ಯಗಳನ್ನು ಆಯೋಜಿಸುವಂತೆ ಮನವಿ ಮಾಡಿರುವುದು ಐಸಿಸಿಗೆ ತಲೆನೋವಾಗಿ ಪರಿಣಮಿಸಿದೆ.