
ಅಂಡರ್ 19 ವಿಶ್ವಕಪ್‌ನಲ್ಲಿ (U19 World Cup 2026) ತನ್ನ ಮೊದಲ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಆಡಿದ್ದ ಪಾಕಿಸ್ತಾನ (Pakistan U19 vs England U19) ತಂಡ ಹೀನಾಯ ಸೋಲು ಅನುಭವಿಸಿದೆ. ಹರಾರೆಯಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 210 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ ಈ ಸಣ್ಣ ಗುರಿಯನ್ನು ಬೆನ್ನಟ್ಟಲು ಸಾಧ್ಯವಾಗಲಿದೆ 173 ರನ್‌ಗಳಿಗೆ ಆಲೌಟ್ ಆಗಿ 37 ರನ್‌ಗಳ ಅಂತರದಿಂದ ಸೋಲನುಭವಿಸಿತು. ಪಾಕಿಸ್ತಾನದ ಸೋಲಿಗೆ ತಂಡದ ಬ್ಯಾಟ್ಸ್‌ಮನ್‌ಗಳು ಪ್ರಮುಖ ಕಾರಣ ಎಂದರೆ ತಪ್ಪಾಗಲಾರದು. ವಿಶೇಷವಾಗಿ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಪರಿಣಾಮಕಾರಿಯಾಗಲಿಲ್ಲ. ಸಮೀರ್ ಮಿನ್ಹಾಸ್, ಮೊಹಮ್ಮದ್ ಶಯಾನ್, ಉಸ್ಮಾನ್ ಖಾನ್, ಅಹ್ಮದ್ ಹುಸೇನ್ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡಿದ್ದು ತಂಡದ ಸೋಲಿಗೆ ಕಾರಣವಾಯಿತು.
ಇಂಗ್ಲೆಂಡ್ ನೀಡಿದ 210 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನಕ್ಕೆ ಅತ್ಯಂತ ಕಳಪೆ ಆರಂಭ ಸಿಕ್ಕಿತು. ತಂಡದ ಅತ್ಯುತ್ತಮ ಬ್ಯಾಟ್ಸ್‌ಮನ್ ಸಮೀರ್ ಮಿನ್ಹಾಸ್ ನಾಲ್ಕನೇ ಓವರ್‌ನಲ್ಲಿಯೇ ಔಟಾದರು. ಸಮೀರ್ ಮಿನ್ಹಾಸ್ ಕೇವಲ 10 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದು ತಂಡದ ಇನ್ನಿಂಗ್ಸ್ ಕುಸಿಯುವಂತೆ ಮಾಡಿತು. ಮೊಹಮ್ಮದ್ ಶಯಾನ್ 7 ರನ್‌ಗಳಿಗೆ ಔಟಾದರೆ, ಉಸ್ಮಾನ್ ಖಾನ್ 6 ರನ್, ಅಹ್ಮದ್ ಹುಸೇನ್ 12 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ತಂಡದ ನಾಯಕ ಫರ್ಹಾನ್ ಯೂಸುಫ್ 65 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ವಿಫಲರಾದರು. ಇತ್ತ ಇಂಗ್ಲೆಂಡ್‌ನ ವೇಗಿಗಳಾದ ಅಲೆಕ್ಸ್ ಗ್ರೀನ್, ಜೇಮ್ಸ್ ಮಿಂಟೊ ಮತ್ತು ರಾಲ್ಫಿ ಆಲ್ಬರ್ಟ್ ತಲಾ 2 ವಿಕೆಟ್ ಪಡೆದು, ಪಾಕಿಸ್ತಾನವನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್‌ನ ಬ್ಯಾಟಿಂಗ್ ಕೂಡ ಕಳಪೆಯಾಗಿತ್ತು. ಆದರೆ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಕ್ಯಾಲೆಬ್ ಫಾಕ್ನರ್ ಪಾಕಿಸ್ತಾನಿ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿ 73 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 66 ರನ್ ಗಳಿಸಿದರು. ಆರಂಭಿಕ ಬೆನ್ ಡಾಕಿನ್ಸ್ ಕೂಡ 33 ರನ್ ಗಳಿಸುವ ಮೂಲಕ ತಂಡದ ಇನ್ನಿಂಗ್ಸ್ಗೆ ಜೀವ ತುಂಬಿದರು.
U19 ವಿಶ್ವಕಪ್‌ನಲ್ಲಿ ಗೆಲುವಿನ ಶುಭಾರಂಭ ಮಾಡಿದ ಯಂಗ್ ಇಂಡಿಯಾ
ತನ್ನ ಮೊದಲ ಪಂದ್ಯದಲ್ಲಿ ಸೋತಿರುವ ಪಾಕಿಸ್ತಾನ ಮುಂದಿನ ಸುತ್ತಿಗೆ ಅರ್ಹತೆ ಪಡೆಯಬೇಕೆಂದರೆ ಈಗ ಉಳಿದಿರುವ ಎರಡೂ ಗುಂಪು ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಮುಂದಿನ ಪಂದ್ಯ ಜನವರಿ 19 ರಂದು ಸ್ಕಾಟ್ಲೆಂಡ್ ವಿರುದ್ಧ ಆಡಿರುವ ಪಾಕಿಸ್ತಾನ, ತನ್ನ ಕೊನೆಯ ಲೀಗ್ ಪಂದ್ಯವನ್ನು ಜನವರಿ 22 ರಂದು ಜಿಂಬಾಬ್ವೆ ವಿರುದ್ಧ ಆಡಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:58 pm, Sat, 17 January 26