IPL 2026: ಭಾರತದಲ್ಲಿ ಎಲ್‌ಪಿಜಿ ಬಿಕ್ಕಟ್ಟು; ಐಪಿಎಲ್ ಆರಂಭಕ್ಕೆ ವಿಘ್ನ
IPL 2026 Impact: ಇರಾನ್-ಇಸ್ರೇಲ್ ಸಂಘರ್ಷ ಭಾರತದಲ್ಲಿ LPG ಬಿಕ್ಕಟ್ಟು ಮತ್ತು ಇಂಧನ ಬೆಲೆ ಏರಿಕೆಗೆ ಕಾರಣವಾಗಿದೆ. ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಳ ಹೋಟೆಲ್ ಉದ್ಯಮಕ್ಕೆ ಹೊಡೆತ ನೀಡಿದೆ. ಈ ಪರಿಸ್ಥಿತಿ IPL 2026 ಆರಂಭದ ಮೇಲೂ ಪರಿಣಾಮ ಬೀರಬಹುದು ಎಂದು ಐಪಿಎಲ್ ಮಂಡಳಿ ಹೇಳಿದೆ. ಚುನಾವಣೆಗಳೂ ವೇಳಾಪಟ್ಟಿ ವಿಳಂಬಕ್ಕೆ ಕಾರಣ. ಈ ಯುದ್ಧ ಜನಜೀವನ, ಉದ್ಯಮಗಳ ಮೇಲೆ ಗಾಢ ಪರಿಣಾಮ ಬೀರುತ್ತಿದೆ.

ಇರಾನ್ ಹಾಗೂ ಇಸ್ರೇಲ್ ನಡುವಿನ ಸಂಘರ್ಷ (Middle East Conflict) ಭಾರತದ ಮೇಲೆ ಗಾಢ ಪರಿಣಾಮ ಬೀರುತ್ತಿದೆ. ಇಂಧನ ಪೂರೈಕೆ ಮೇಲಿನ ನಿರ್ಬಂಧಗಳಿಂದಾಗಿ ದೇಶದಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಗಗನಕ್ಕೇರುವ ಮುನ್ಸೂಚನೆ ಸಿಕ್ಕಿದೆ. ಇದೆಲ್ಲದರ ನಡುವೆ ಇದ್ದಕ್ಕಿದ್ದಂತೆ ಹುಟ್ಟಿಕೊಂಡಿರುವ ಎಲ್‌ಪಿಜಿ (LPG) ಬಿಕ್ಕಟ್ಟು ಮಧ್ಯಮ ವರ್ಗಕ್ಕೆ ದೊಡ್ಡ ಹೊಡೆತ ನೀಡಿದೆ. ಕಮರ್ಷಿಯಲ್ ಸಿಲಿಂಡರ್ ಬೆಲೆ 115 ರೂ ಏರಿಕೆ ಆಗಿದ್ದು, ಇದು ಹೋಟೆಲ್ ಉದ್ಯಮವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಮಾತ್ರವಲ್ಲದೆ ಬೆಲೆ ಏರಿಕೆ ಜನಜೀವನದ ಮೇಲೂ ಪರಿಣಾಮ ಬೀರುತ್ತಿದೆ. ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಾಸ ಆಗಿರುವುದು ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಬೇಕಿರುವ ಐಪಿಎಲ್ (IPL 2026) ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.
ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ- ಧುಮಾಲ್
ದೇಶದಲ್ಲಿ ಉಂಟಾಗಿರುವ ಎಲ್‌ಪಿಜಿ ಪೂರೈಕೆಯಲ್ಲಿನ ಬಿಕ್ಕಟ್ಟನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಅಧ್ಯಕ್ಷ ಅರುಣ್ ಧುಮಾಲ್ ಹೇಳಿದ್ದಾರೆ. ‘ನಾವು ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದೇವೆ. ಈ ಯುದ್ಧದಲ್ಲಿ ಪ್ರತಿದಿನ ಹೊಸ ಬೆಳವಣಿಗೆಗಳು ನಡೆಯುತ್ತಿವೆ, ಆದ್ದರಿಂದ ಈ ಸಮಯದಲ್ಲಿ ಖಚಿತವಾಗಿ ಏನನ್ನೂ ಹೇಳಲಾಗುವುದಿಲ್ಲ. ಐಪಿಎಲ್ 2026, ಮುಂದಿನ ಕೆಲವು ದಿನಗಳಲ್ಲಿ ಪ್ರಾರಂಭವಾಗಲಿದೆ. ಆ ಸಮಯದಲ್ಲಿ ಪರಿಸ್ಥಿತಿಯ ತೀವ್ರತೆಯನ್ನು ಆಧರಿಸಿ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಧುಮಾಲ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ಐಪಿಎಲ್ ವೇಳಾಪಟ್ಟಿ ವಿಳಂಬಕ್ಕೆ ಕಾರಣ
ಐಪಿಎಲ್ 2026 ಮಾರ್ಚ್ 28 ರಂದು ಪ್ರಾರಂಭವಾಗಲಿದೆ. ಆದಾಗ್ಯೂ, ಅದರ ವೇಳಾಪಟ್ಟಿಯನ್ನು ಇನ್ನೂ ಘೋಷಿಸಲಾಗಿಲ್ಲ. ಹಲವಾರು ರಾಜ್ಯಗಳಲ್ಲಿ ನಡೆಯಬೇಕಾಗಿರುವ ಚುನಾವಣೆಗಳಿಂದಾಗಿ ವೇಳಾಪಟ್ಟಿ ಪ್ರಕಟ ವಿಳಂಬವಾಗುತ್ತಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧ ಹೀಗೆ ಮುಂದುವರಿದರೆ ಐಪಿಎಲ್ ಮಾತ್ರವಲ್ಲದೆ ಕೈಗಾರಿಕೆಗಳು, ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಸೇರಿದಂತೆ ಸಮಾಜದ ಪ್ರತಿಯೊಂದು ವಲಯದ ಮೇಲೂ ಪರಿಣಾಮ ಬೀರುತ್ತದೆ.
ಏತನ್ಮಧ್ಯೆ, ಹಲವಾರು ಫ್ರಾಂಚೈಸಿಗಳು ಈಗಾಗಲೇ ತಮ್ಮ ತಮ್ಮ ನಗರಗಳಲ್ಲಿ ತಮ್ಮ ಅಭ್ಯಾಸ ಶಿಬಿರವನ್ನು ಪ್ರಾರಂಭಿಸಿವೆ. ಚೆನ್ನೈ ಸೂಪರ್ ಕಿಂಗ್ಸ್ ಈಗಾಗಲೇ ತಯಾರಿ ಶುರು ಮಾಡಿದೆ. ರಾಜಸ್ಥಾನ ರಾಯಲ್ಸ್ ಕೂಡ ತಮ್ಮ ತರಬೇತಿ ಶಿಬಿರವನ್ನು ಪ್ರಾರಂಭಿಸಿವೆ. ಪಂಜಾಬ್ ಕಿಂಗ್ಸ್ ಕಳೆದ ಕೆಲವು ದಿನಗಳಿಂದ ಧರ್ಮಶಾಲಾದಲ್ಲಿ ಬೀಡುಬಿಟ್ಟಿದ್ದು, ಸುಮಾರು 10 ಆಟಗಾರರು ಭಾಗವಹಿಸುತ್ತಿದ್ದಾರೆ.
IPL 2026: ಈ ದಿನದಿಂದ 19ನೇ ಆವೃತ್ತಿಯ ಐಪಿಎಲ್ ಆರಂಭ; ಬಿಸಿಸಿಐ ಅಧಿಕೃತ ಮಾಹಿತಿ
ಹೋಟೆಲ್‌ಗಳ ಮೇಲೆ ಪರಿಣಾಮ
ಮಧ್ಯಪ್ರಾಚ್ಯದಲ್ಲಿನ ಯುದ್ಧದಿಂದ ಪೆಟ್ರೋಲಿಯಂ ಮತ್ತು ಎಲ್‌ಪಿಜಿ ಉತ್ಪನ್ನಗಳ ಪೂರೈಕೆಯ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ಬೆಂಗಳೂರು ಮತ್ತು ಚೆನ್ನೈನಲ್ಲಿರುವ ಹೋಟೆಲ್ ಸಂಘಗಳು ತಮ್ಮಲ್ಲಿ ಒಂದು ಅಥವಾ ಎರಡು ದಿನಗಳು ಮಾತ್ರ ಎಲ್‌ಪಿಜಿ ಸರಬರಾಜು ಉಳಿದಿವೆ ಎಂದು ಹೇಳಿವೆ. ಎಲ್‌ಪಿಜಿ ಬಳಕೆಯನ್ನು ಮಿತಗೊಳಿಸಲು ಅನೇಕ ಹೋಟೆಲ್‌ಗಳು ತಮ್ಮ ಮೆನುಗಳನ್ನು ಸೀಮಿತಗೊಳಿಸಲು ಪ್ರಾರಂಭಿಸಿವೆ. ಇದೇ ಪರಿಸ್ಥಿತಿ ಕೆಲವು ದಿನಗಳವರೆಗೆ ಮುಂದುವರೆದರೆ ಜನಜೀವನ ಸಂಕಷ್ಟಕ್ಕೆ ಸಿಲುಕಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
