U19 ವಿಶ್ವಕಪ್‌ನಲ್ಲಿ ಗೆಲುವಿನ ಶುಭಾರಂಭ ಮಾಡಿದ ಯಂಗ್ ಇಂಡಿಯಾ
India U19 Dominates USA in World Cup Opener: ಇಂದಿನಿಂದ ಆರಂಭವಾದ U19 ಏಕದಿನ ವಿಶ್ವಕಪ್‌ನಲ್ಲಿ ಭಾರತ ಯುವ ತಂಡ ಅಮೆರಿಕವನ್ನು 6 ವಿಕೆಟ್‌ಗಳಿಂದ ಸೋಲಿಸಿ ಶುಭಾರಂಭ ಮಾಡಿದೆ. ಮಳೆ ಪೀಡಿತ ಪಂದ್ಯದಲ್ಲಿ ಅಭಿಗ್ಯಾನ್ ಕುಂಡು (ಅಜೇಯ 42) ಬ್ಯಾಟಿಂಗ್‌ನಲ್ಲಿ, ಹೆನಿಲ್ ಪಟೇಲ್ (5 ವಿಕೆಟ್) ಬೌಲಿಂಗ್‌ನಲ್ಲಿ ಮಿಂಚಿದರು. ಆದಾಗ್ಯೂ, ಅಗ್ರ ಕ್ರಮಾಂಕದ ಬ್ಯಾಟಿಂಗ್ ಕಳವಳ ಮೂಡಿಸಿದ್ದು, ಬಾಂಗ್ಲಾದೇಶ ವಿರುದ್ಧದ ಮುಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನಿರೀಕ್ಷಿಸಲಾಗಿದೆ.

ಇಂದಿನಿಂದ ಆರಂಭವಾಗಿರುವ 19 ವರ್ಷದೊಳಗಿನವರ ಏಕದಿನ ವಿಶ್ವಕಪ್‌ನಲ್ಲಿ ( U19 World Cup 2026) ಭಾರತ ಯುವ ತಂಡ ಗೆಲುವಿನ ಶುಭಾರಂಭ ಮಾಡಿದೆ. ಮಳೆ ಪೀಡಿತ ಈ ಪಂದ್ಯದಲ್ಲಿ ಟೀಂ ಇಂಡಿಯಾ, ಅಮೆರಿಕವನ್ನು (India vs USA) 6 ವಿಕೆಟ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಅಮೆರಿಕ, ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿ 35.2 ಓವರ್‌ಗಳಲ್ಲಿ ಕೇವಲ 107 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಟೀಂ ಇಂಡಿಯಾ 4 ವಿಕೆಟ್‌ಗಳನ್ನು ಕಳೆದುಕೊಂಡು ಜಯದ ನಗೆ ಬೀರಿತು. ಭಾರತದ ಇನ್ನಿಂಗ್ಸ್ ಆರಂಭವಾದ ಬಳಿಕ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದರಿಂದ ಭಾರತ ತಂಡಕ್ಕೆ 96 ರನ್‌ಗಳ ಗುರಿಯನ್ನು ನೀಡಲಾಯಿತು. ಭಾರತದ ಪರ ಅಭಿಗ್ಯಾನ್ ಕುಂಡು ಅಜೇಯ 42 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಅಭಿಗ್ಯಾನ್ ಕುಂಡು ಅದ್ಭುತ ಬ್ಯಾಟಿಂಗ್
ಅಭಿಗ್ಯಾನ್ ಕುಂಡು ಕ್ರೀಸ್‌ಗೆ ಬಂದಾಗ, ಟೀಂ ಇಂಡಿಯಾ 25 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ವೈಭವ್ ಸೂರ್ಯವಂಶಿ, ವೇದಾಂತ್ ತ್ರಿವೇದಿ ಮತ್ತು ಆಯುಷ್ ಮ್ಹಾತ್ರೆ ಪೆವಿಲಿಯನ್ ಸೇರಿಕೊಂಡಿದ್ದರು. ನಂತರ ಕುಂಡು, ವಿಹಾನ್ ಮಲ್ಹೋತ್ರಾ ಮತ್ತು ಕನಿಷ್ಕ್ ಚೌಹಾಣ್ ಅವರೊಂದಿಗೆ ನಿರ್ಣಾಯಕ ಪಾಲುದಾರಿಕೆಯನ್ನು ರೂಪಿಸಿ 17.2 ಓವರ್‌ಗಳಲ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಅಭಿಗ್ಯಾನ್ ಕುಂಡು ಅಜೇಯ 42 ರನ್‌ಗಳೊಂದಿಗೆ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಹೆನಿಲ್ ಪಟೇಲ್ ಮಾರಕ ದಾಳಿ
ಅಭಿಗ್ಯಾನ್ ಕುಂಡು ಅವರಿಗಿಂತ ಮೊದಲು, ವೇಗದ ಬೌಲರ್ ಹೆನಿಲ್ ಪಟೇಲ್ ತಂಡದ ಗೆಲುವಿನ ರೂವಾರಿಯಾಗಿದ್ದರು. ಈ ಬಲಗೈ ವೇಗಿ 7 ಓವರ್‌ಗಳಲ್ಲಿ ಕೇವಲ 16 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಅಮೆರಿಕದ ಬ್ಯಾಟಿಂಗ್ ಬೆನ್ನೇಲುಬು ಮುರಿದರು. ಈ ಪಂದ್ಯದಲ್ಲಿ 5 ವಿಕೆಟ್ಗಳ ಗೊಂಚಲು ಪಡೆದ ಹೆನಿಲ್ ಪಟೇಲ್, ಬರೋಬ್ಬರಿ 8 ವರ್ಷಗಳ ಬಳಿಕ ಭಾರತೀಯ ಬೌಲರ್ವೊಬ್ಬ ಅಂಡರ್-19 ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾದರು.
U19 World Cup: ಮೊದಲ ಪಂದ್ಯದಲ್ಲೇ 16 ರನ್ಗೆ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಭಾರತ vs ಬಾಂಗ್ಲಾದೇಶ
ಮೊದಲೇ ನಿರೀಕ್ಷಿಸಿದ್ದಂತೆ ಟೀಂ ಇಂಡಿಯಾ ಈ ಪಂದ್ಯವನ್ನು ಗೆದ್ದುಕೊಂಡಿತ್ತಾದರೂ, ವೈಭವ್ ಸೂರ್ಯವಂಶಿ ಮತ್ತು ಆಯುಷ್ ಮ್ಹಾತ್ರೆ ವಿಕೆಟ್ ಕಳೆದುಕೊಂಡ ರೀತಿ ಅತ್ಯಂತ ನಿರಾಶಾದಾಯಕವಾಗಿತ್ತು. ಈ ಇಬ್ಬರೂ ಆಟಗಾರರು ಅಮೆರಿಕದಂತಹ ಅನಾನುಭವಿ ತಂಡದ ವಿರುದ್ಧ ರನ್ ಗಳಿಸಲು ವಿಫಲರಾದರು. ವೇದಾಂತ್ ತ್ರಿವೇದಿ 10 ಎಸೆತಗಳಲ್ಲಿ ಕೇವಲ 2 ರನ್ ಗಳಿಸಿದ್ದು ಕೂಡ ಕಳವಳಕ್ಕೆ ಕಾರಣವಾಗಿದೆ. ಮುಂದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಅಗ್ರ ಕ್ರಮಾಂಕವು ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಮುಂದಿನ ಪಂದ್ಯ ಜನವರಿ 17 ರಂದು ಬುಲವಾಯೊದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
