VHT 2026: ಕರ್ನಾಟಕ ತಂಡಕ್ಕೆ ಮುಳುವಾದ ಕನ್ನಡಿಗ; ಸೆಮಿಫೈನಲ್ ಸೋತ ಮಯಾಂಕ್ ಪಡೆ
Vijay Hazare Semi-Final: ವಿಜಯ್ ಹಜಾರೆ ಟ್ರೋಫಿ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡ ವಿದರ್ಭ ವಿರುದ್ಧ ಸೋಲನುಭವಿಸಿದೆ. ಕಳೆದ ಆವೃತ್ತಿಯಲ್ಲಿ ಫೈನಲ್‌ನಲ್ಲಿ ಸೋಲಿಸಿದ್ದ ತಂಡದ ವಿರುದ್ಧವೇ ಈ ಬಾರಿ ಸೋತಿದೆ. ಕರ್ನಾಟಕದ ಆಟಗಾರ ಆರ್. ಸಮರ್ಥ್ ವಿದರ್ಭ ಪರ ಆಡಿ, ಅಜೇಯ 76 ರನ್ ಗಳಿಸಿ ಕರ್ನಾಟಕದ ಸೋಲಿಗೆ ಪ್ರಮುಖ ಕಾರಣರಾದರು.

ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ನಡೆದ ಕರ್ನಾಟಕ ಹಾಗೂ ವಿದರ್ಭ (Karnataka vs Vidarbha) ನಡುವಿನ ವಿಜಯ್ ಹಜಾರೆ ಟ್ರೋಫಿ ಸೆಮಿಫೈನಲ್ (Vijay Hazare Trophy Semi-final) ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಸೋಲನುಭವಿಸಿದೆ. ಗಮನಿಸಬೇಕಾದ ಸಂಗತಿಯೆಂದರೆ ಕಳೆದ ಆವೃತ್ತಿಯ ಫೈನಲ್‌ನಲ್ಲಿ ಕರ್ನಾಟಕ ತಂಡ ಯಾವ ತಂಡವನ್ನು ಸೋಲಿಸಿ ಪ್ರಶಸ್ತಿ ಎತ್ತಿ ಹಿಡಿದಿತ್ತೋ ಅದೇ ತಂಡದ ವಿರುದ್ಧ ಈ ಆವೃತ್ತಿಯ ಸೆಮಿಫೈನಲ್ ಪಂದ್ಯದ ಸೋತಿದೆ. ಇನ್ನೊಂದು ನೋವಿನ ಸಂಗತಿಯೆಂದರೆ ಕರ್ನಾಟಕದ ಈ ಸೋಲಿಗೆ ಕರ್ನಾಟಕದ ಆಟಗಾರನೇ ಕಾರಣನಾಗಿದ್ದು, ವಿದರ್ಭ ತಂಡದಲ್ಲಿರುವ ಆರ್. ಸಮರ್ಥ್ ಕರ್ನಾಟಕದವರಾಗಿದ್ದು, ಈ ಆವೃತ್ತಿಯಲ್ಲಿ ವಿದರ್ಭ ಪರ ಆಡುತ್ತಿದ್ದಾರೆ. ಇಂದು ನಡೆದ ಪಂದ್ಯದಲ್ಲಿ ವಿದರ್ಭ ಪರ ಅಜೇಯ ಅರ್ಧಶತಕದ ಇನ್ನಿಂಗ್ಸ್ ಆಡಿದ ಸಮರ್ಥ್ ಕರ್ನಾಟಕದ ಸೋಲಿನ ಪ್ರಮುಖ ರೂವಾರಿ ಎನಿಸಿಕೊಂಡರು.
ಆರಂಭದಲ್ಲೆ ಎಡವಿದ ಕರ್ನಾಟಕ
ಈ ಪಂದ್ಯದಲ್ಲಿ ಟಾಸ್ ಸೋತ ಕರ್ನಾಟಕ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ನಾಯಕನ ಈ ತೀರ್ಮಾನ ಸಂಪೂರ್ಣ ತಪ್ಪು ಎಂಬುದು ಗೊತ್ತಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಇಡೀ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ನಾಯಕ ಮಯಾಂಕ್ ಅಗರ್ವಾಲ್ ಹಾಗೂ ದೇವದತ್ ಪಡಿಕ್ಕಲ್ ಸೆಮಿಫೈನಲ್ ಪಂದ್ಯದಲ್ಲಿ ಸಂಪೂರ್ಣವಾಗಿ ವಿಫಲರಾದರು. ಮಯಾಂಕ್ 9 ರನ್ಗಳಿಗೆ ವಿಕೆಟ್ ಒಪ್ಪಿಸಿದರೆ, ದೇವದತ್ ಇನ್ನಿಂಗ್ಸ್ ಕೇವಲ 4 ರನ್ಗಳಿಗೆ ಅಂತ್ಯವಾಯಿತು. ಹೀಗಾಗಿ ಕರ್ನಾಟಕ ಕೇವಲ 20 ರನ್ಗಳಿಗೆ ತನ್ನ ಎರಡು ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡಿತು.
281 ರನ್ಗಳ ಗುರಿ
ಕಳೆದ ಆವೃತ್ತಿಯಲ್ಲಿ ವಿದರ್ಭ ಪರ ಆಡಿದ್ದ ಕರುಣ್ ನಾಯರ್, ಈ ಆವೃತ್ತಿಯಲ್ಲಿ ಕರ್ನಾಟಕದ ಇನ್ನಿಂಗ್ಸ್ ನಿಭಾಯಿಸಿದ್ದು ಮಾತ್ರವಲ್ಲದೆ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಆದರೆ ಕರುಣ್ಗೆ ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಕರುಣ್ 76 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದರೆ, ಧೃವ್ 28 ರನ್ಗಳಿಗೆ ಔಟಾದರು. ಕರುಣ್ ಬಳಿಕ ತಂಡದ ಪರ ಎರಡನೇ ಗರಿಷ್ಠ ಸ್ಕೋರ್ ದಾಖಲಿಸಿದ ಶ್ರೀಜಿತ್ 54 ರನ್ ಬಾರಿಸಿದರು. ಶ್ರೇಯಸ್ ಗೋಪಾಲ್ 36 ರನ್ ಬಾರಿಸಿದರೆ, ಮನೋಹರ್ 26 ರನ್ಗಳ ಕಾಣಿಕೆ ನೀಡಿದರು. ಅಂತಿಮವಾಗಿ ಕರ್ನಾಟಕ ತಂಡ ಕೊನೆಯ ಓವರ್ನಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 280 ರನ್ ಕಲೆಹಾಕಿತು.
ಕರ್ನಾಟಕಕ್ಕೆ ಮುಳುವಾದ ಆರ್ಸಿಬಿ ಬಾಯ್ಸ್; ಟೂರ್ನಿಯಲ್ಲಿ ಮೊದಲ ಸೋಲು
ಕರ್ನಾಟಕಕ್ಕೆ ಮುಳುವಾದ ಕನ್ನಡಿಗ
ಈ ಗುರಿ ಬೆನ್ನಟ್ಟಿದ ವಿದರ್ಭ ತಂಡಕ್ಕೂ ಉತ್ತಮ ಆರಂಭ ಸಿಗಲಿಲ್ಲ. 9 ರನ್ಗಳಿಗೆ ತಂಡದ ಮೊದಲ ವಿಕೆಟ್ ಪತನವಾಯಿತು. ಆದರೆ ಆ ಬಳಿಕ ಜೊತೆಯಾದ ಅಮನ್ ಹಾಗೂ ಧೃವ್ ತಂಡವನ್ನು ಶತಕದ ಗಡಿ ದಾಟಿಸಿದರು. ಈ ವೇಳೆ ಧೃವ್ 47 ರನ್ ಬಾರಿಸಿ ಔಟಾದರೆ, ಅಮನ್ 128 ರನ್ಗಳ ಇನ್ನಿಂಗ್ಸ್ ಆಡಿ ತಂಡದ ಗೆಲುವು ಖಚಿತಪಡಿಸಿದರು. ಅಮನ್ ಜೊತೆಗೆ ತಂಡದ ಗೆಲುವಿಗೆ ನೆರವಾದ ಆರ್. ಸಮರ್ಥ್ ಅಜೇಯ 76 ರನ್ಗಳ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:57 pm, Thu, 15 January 26
