ಕರ್ನಾಟಕಕ್ಕೆ ಮುಳುವಾದ ಆರ್ಸಿಬಿ ಬಾಯ್ಸ್; ಟೂರ್ನಿಯಲ್ಲಿ ಮೊದಲ ಸೋಲು
Vijay Hazare Trophy: ವಿಜಯ್ ಹಜಾರೆ ಟ್ರೋಫಿಯಲ್ಲಿ ಸತತ 6 ಗೆಲುವುಗಳ ನಂತರ ಕರ್ನಾಟಕ ತಂಡ ಮಧ್ಯಪ್ರದೇಶದ ವಿರುದ್ಧ ಮೊದಲ ಸೋಲು ಕಂಡಿತು. ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ 207 ರನ್‌ಗಳಿಗೆ ಆಲೌಟ್ ಆಗಿ, ಸುಲಭವಾಗಿ ಸೋಲೊಪ್ಪಿಕೊಂಡಿತು. ಮಧ್ಯಪ್ರದೇಶ 7 ವಿಕೆಟ್‌ಗಳ ಅಂತರದಿಂದ ಗೆದ್ದಿತು. ಆರ್ಸಿಬಿ ಆಟಗಾರರಾದ ಪಡಿಕ್ಕಲ್ ವೈಫಲ್ಯ ಮತ್ತು ವೆಂಕಟೇಶ್ ಅಯ್ಯರ್ ಪ್ರದರ್ಶನ ಸೋಲಿಗೆ ಪ್ರಮುಖ ಕಾರಣವಾಯಿತು.

ವಿಜಯ್ ಹಜಾರೆ ಟ್ರೋಫಿಯಲ್ಲಿ (Vijay Hazare Trophy) ಸತತ 6 ಪಂದ್ಯಗಳನ್ನು ಗೆದ್ದು ಎಲೈಟ್ ಎ ಗುಂಪಿನಲ್ಲಿ ಅಜೇಯ ತಂಡ ಎನಿಸಿಕೊಂಡಿದ್ದ ಕರ್ನಾಟಕ ಟೂರ್ನಿಯಲ್ಲಿ ಮೊದಲ ಸೋಲು ಅನುಭವಿಸಿದೆ. ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಟೂರ್ನಿಯ ಎಲೈಟ್ ಎ ಗುಂಪಿನ ಕೊನೆಯ ಪಂದ್ಯದಲ್ಲಿ ಮಧ್ಯಪ್ರದೇಶ ತಂಡವನ್ನು ಎದುರಿಸಿದ್ದ ಕರ್ನಾಟಕ (Karnataka vs Madhya Pradesh) ತಂಡ 7 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಮಧ್ಯಪ್ರದೇಶದ ಬೌಲಿಂಗ್ ಎದುರು ತತ್ತರಿಸಿತು. ಹೀಗಾಗಿ ತಂಡ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಅತಿ ಕಡಿಮೆ ಮೊತ್ತ 207 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಮಧ್ಯಪ್ರದೇಶ ಕೇವಲ 3 ವಿಕೆಟ್ ಕಳೆದುಕೊಂಡು 24ನೇ ಓವರ್ನಲ್ಲಿಯೇ ಗೆಲುವಿನ ದಡ ಮುಟ್ಟಿತು. ಕರ್ನಾಟಕದ ಈ ಸೋಲಿನಲ್ಲಿ ಆರ್ಸಿಬಿ (RCB) ತಂಡದಲ್ಲಿ ಆಡುವ ಆಟಗಾರರು ಪ್ರಮುಖ ಪಾತ್ರವಹಿಸಿದರು.
ಕರ್ನಾಟಕ ತಂಡಕ್ಕೆ ಮೊದಲ ಸೋಲು
ಮೋದಿ ಮೈದಾನದಲ್ಲಿ ಈ ಹಿಂದೆ ಆಡಿದ್ದ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡಿದ್ದ ಕರ್ನಾಟಕಕ್ಕೆ, ಈ ಪಂದ್ಯದಲ್ಲೂ ಸುಲಭ ಜಯ ಧಕ್ಕಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಮಧ್ಯಪ್ರದೇಶದ ಬೌಲರ್ಗಳು ಇದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಎಂದಿನಂತೆ ಕರ್ನಾಟಕ ತಂಡಕ್ಕೆ ಆರಂಭಿಕರಿಬ್ಬರು ಮೊದಲ ವಿಕೆಟ್ಗೆ 77 ರನ್ಗಳ ಜೊತೆಯಾಟವನ್ನು ಒದಗಿಸಿಕೊಟ್ಟರು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ತಂಡದ ಇನ್ನಿಂಗ್ಸ್ ಕುಸಿಯಿತು. ಈ ಟೂರ್ನಿಯಲ್ಲಿ ಅತ್ಯದ್ಭುತ ಫಾರ್ಮ್ನಲ್ಲಿರುವ ದೇವದತ್ ಪಡಿಕ್ಕಲ್ ಈ ಪಂದ್ಯದಲ್ಲೂ ಉತ್ತಮ ಆರಂಭ ಪಡೆದುಕೊಂಡರು. ಆದರೆ ಅದನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸುವಲ್ಲಿ ಎಡವಿದರು.
5 ವಿಕೆಟ್ ಪಡೆದ ಶಿವಾಂಗ್
ಪಡಿಕ್ಕಲ್ 35 ರನ್ ಬಾರಿಸಿ ಔಟಾದ ಬಳಿಕ ತಂಡದ ಇತರೆ ಬ್ಯಾಟ್ಸ್ಮನ್ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಅನುಭವಿ ಕರುಣ್ ನಾಯರ್ ಕಳಪೆ ಪ್ರದರ್ಶನ ಈ ಪಂದ್ಯದಲ್ಲೂ ಮುಂದುವರೆಯಿತು. ಅವರು ಕೇವಲ 10 ರನ್‌ಗಳಿಗೆ ಇನ್ನಿಂಗ್ಸ್ ಮುಗಿಸಿದರು. ಶ್ರೀಜಿತ್, ಸ್ಮರಣ್ ಹಾಗೂ ಅಭಿನವ್ ಕೂಡ ಬೇಗನೆ ವಿಕೆಟ್ ಒಪ್ಪಿಸಿದರು. ಹೀಗಾಗಿ ತಂಡ ಒತ್ತಡಕ್ಕೊಳಗಾಗಿತು. ತಂಡದ ಪರ ನಾಯಕ ಮಯಾಂಕ್ ಅತ್ಯಧಿಕ 49 ರನ್ಗಳ ಇನ್ನಿಂಗ್ಸ್ ಆಡಿದರೆ, ವಿದ್ಯಾದರ್ ಪಾಟೀಲ್ 34 ರನ್ಗಳ ಕಾಣಿಕೆ ನೀಡಿದರು. ಅಂತಿಮವಾಗಿ ತಂಡ 48 ನೇ ಓವರ್ನಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 207 ರನ್‌ಗಳಿಗೆ ತನ್ನ ಇನ್ನಿಂಗ್ಸ್ ಮುಗಿಸಿತು. ಮಧ್ಯಪ್ರದೇಶ ಪರ ಬೌಲಿಂಗ್‌ನಲ್ಲಿ ಮಿಂಚಿದ ಶಿವಾಂಗ್ ಕುಮಾರ್ 5 ವಿಕೆಟ್‌ಗಳ ಗೊಂಚಲು ಪಡೆದರು.
VHT 2025-26: ಮಿಂಚಿದ ಮಯಾಂಕ್, ಪಡಿಕ್ಕಲ್, ಪ್ರಸಿದ್ಧ್; ಕರ್ನಾಟಕಕ್ಕೆ ಸತತ 6ನೇ ಜಯ
ವೆಂಕಟೇಶ್ ಅಯ್ಯರ್ ಅಜೇಯ ಅರ್ಧಶತಕ
ಈ ಗುರಿ ಬೆನ್ನಟ್ಟಿದ ಮಧ್ಯಪ್ರದೇಶಕ್ಕೆ ಉತ್ತಮ ಆರಂಭ ಸಿಕ್ಕಿತು. ಮೊದಲ ವಿಕೆಟ್ಗೆ 78 ರನ್ಗಳ ಜೊತೆಯಾಟ ನಡೆಯಿತು. ಆರಂಭಿಕರಾದ ಯಶ್ ದುಬೆ 48 ರನ್ ಬಾರಿಸಿದರೆ, ಹಿಮಾಂಶು ಮಂತ್ರಿ 34 ರನ್ ಕಲೆಹಾಕಿದರು. ಆ ಬಳಿಕ ಬಂದ ವೆಂಕಟೇಶ್ ಅಯ್ಯರ್ ಅಜೇಯ 65 ರನ್ ಬಾರಿಸಿ ತಂಡದ ಗೆಲುವು ಖಚಿತಪಡಿಸಿದರು. ವೆಂಕಟೇಶ್ ಅಯ್ಯರ್ ಈ ಆವೃತ್ತಿಯ ಐಪಿಎಲ್‌ನಲ್ಲಿ ಆರ್ಸಿಬಿ ಪರ ಕಣಕ್ಕಿಳಿಯುತ್ತಿದ್ದು, ಅವರು ಫಾರ್ಮ್ ಕಂಡುಕೊಂಡಿರುವುದು ತಂಡಕ್ಕೆ ಶುಭ ಸೂಚಕವಾಗಿದೆ. ವೆಂಕಟೇಶ್ ಜೊತೆಗೆ ಆರ್ಸಿಬಿ ನಾಯಕ ರಜತ್ ಪಾಟಿದರ್ ಕೂಡ ಮಧ್ಯಪ್ರದೇಶ ತಂಡದಲ್ಲಿದ್ದರು. ಆದರೆ ಅವರಿಗೆ ಈ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಸಿಗಲಿಲ್ಲ. ಇನ್ನು ಈ ಪಂದ್ಯದಲ್ಲಿ ಸೋಲಿನ ಹೊರತಾಗಿಯೂ ಕರ್ನಾಟಕ ತಂಡ ಈ ಗುಂಪಿನಲ್ಲಿ ಅಗ್ರಸ್ಥಾನದಲ್ಲೇ ಮುಂದುವರೆದಿದ್ದು, ಕರ್ನಾಟಕವನ್ನು ಸೋಲಿಸಿದ ಮಧ್ಯಪ್ರದೇಶ 2ನೇ ಸ್ಥಾನವನ್ನು ಪಡೆದುಕೊಂಡಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:03 pm, Thu, 8 January 26
