AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆದಾಯ ಕೊರತೆ ನೀಗಿಸಲು ಫ್ರೀಡಂ ಪಾರ್ಕ್ ಆವರಣ ಬಾಡಿಗೆಗೆ ನೀಡಲು ಮುಂದಾದ ಜಿಬಿಎ

ಬೆಂಗಳೂರಿನ ಐತಿಹಾಸಿಕ ಫ್ರೀಡಂ ಪಾರ್ಕ್ ಅನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಾಡಿಗೆಗೆ ನೀಡಲು ಜಿಬಿಎ (GBA) ಮುಂದಾಗಿದೆ. ನಗರ ಪಾಲಿಕೆಗಳ ಆದಾಯ ಕೊರತೆ ನೀಗಿಸಲು ಈ ನಿರ್ಧಾರ ಕೈಗೊಂಡಿದ್ದು, ಪ್ರತಿಭಟನೆಗಳಿಗೆ ಮೀಸಲಾದ ಈ ಜಾಗವನ್ನು ವಾಣಿಜ್ಯೀಕರಣಗೊಳಿಸುವುದು ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ. ಪ್ರತಿಭಟನಾಕಾರರಿಗೆ ಮೂಲ ಸೌಕರ್ಯಗಳ ಕೊರತೆ ಆರೋಪದ ನಡುವೆಯೇ ಜಿಬಿಎ ಈ ನಡೆ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.

ಆದಾಯ ಕೊರತೆ ನೀಗಿಸಲು ಫ್ರೀಡಂ ಪಾರ್ಕ್ ಆವರಣ ಬಾಡಿಗೆಗೆ ನೀಡಲು ಮುಂದಾದ ಜಿಬಿಎ
ಫ್ರೀಡಂ ಪಾರ್ಕ್ Image Credit source: Google
ಪ್ರಸನ್ನ ಹೆಗಡೆ
|

Updated on:Feb 24, 2026 | 7:08 PM

Share

ಬೆಂಗಳೂರು, ಫೆಬ್ರವರಿ 24: ಸಿಲಿಕಾನ್​​ ಸಿಟಿ ಬೆಂಗಳೂರಲ್ಲಿ ಪ್ರತಿಭಟನೆ ಅಂದ್ರೆ ಮೊದಲಿಗೆ ನೆನಪಾಗೋದೇ ಫ್ರೀಡಂ ಪಾರ್ಕ್​​. ರಾಜಕೀಯ ಪಕ್ಷಗಳಿಂದ ಹಿಡಿದು, ಸಂಘ ಸಂಸ್ಥೆಗಳು ಕೂಡ ಇದೇ ಜಾಗದಲ್ಲಿ ಪ್ರತಿಭಟನೆ ನಡೆಸುತ್ತವೆ. ಹೀಗಾಗಿ ಯಾವಾಗ ನೋಡಿದರೂ ಫ್ರೀಡಂ ಪಾರ್ಕ್​​ನಲ್ಲಿ ಒಂದಿಲ್ಲೊಂದು ಪ್ರೊಟೆಸ್ಟ್​​ ಇದ್ದೇ ಇರುತ್ತೆ. ಆದರೆ ಸದ್ಯದ ಮಾಹಿತಿಯ ಪ್ರಕಾರ ಇಡೀ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡೋದಕ್ಕೆ ಇರುವ ಏಕೈಕ ಈ ಜಾಗವನ್ನೂ ಹಣ ಸಂಪಾದನೆಗೆ ಬಳಕೆ ಮಾಡಿಕೊಳ್ಳಲು ತಯಾರಿ ನಡೆದಿದ್ದು, ಫ್ರೀಡಂ ಪಾರ್ಕ್​​ನ ಬಾಡಿಗೆ ನೀಡಲು ಜಿಬಿಎ ಮುಂದಾಗಿದೆ.

ಜಿಬಿಎ ಅಡಿಯ 5 ನಗರ ಪಾಲಿಕೆಗಳಿಗೆ ಆದಾಯ ಕೊರತೆ ನೀಗಿಸಲು ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದ್ದು, ಅದರಲ್ಲಿ ಇದೂ ಒಂದು ಎನ್ನಲಾಗಿದೆ. ಮಲ್ಟಿ ಲೆವೆಲ್ ಪಾರ್ಕಿಂಗ್ ನಿರ್ಮಾಣಕ್ಕೂ ಮೊದಲೇ ಈ ಭಾಗ ಪ್ರತಿಭಟನೆಗೆ ಮಾತ್ರ ಸೀಮಿತ ಮಾಡಬೇಕು ಎಂಬ ಒಪ್ಪಂದವಾಗಿತ್ತು. ಹೀಗಾಗಿ 10 ಸಾವಿರ ಮಂದಿ ಕೂರಬಹುದಾದ ಸಭಾಂಗಣವೂ ನಿರ್ಮಾಣವಾಗಿತ್ತು. ಆದರೀಗ ಇದೇ ಜಾಗವನ್ನು ವಾಣಿಜ್ಯ ಬಳಕೆಗೆ ನೀಡಲು ಜಿಬಿಎ ಮುಂದಾಗಿರೋದು ಪ್ರತಿಭಟನಾಕಾರರನ್ನು ಕೆರಳಿಸಿದೆ. ಈಗಾಗಲೇ ಫ್ರೀಡಂ ಪಾರ್ಕ್ ಆವರಣದಲ್ಲಿ ಪ್ರತಿಭಟನಾಕಾರರಿಗೆ ಕುಡಿಯುವ ನೀರು, ಶೌಚಾಲಯ ಸೇರಿ ಮೂಲಸೌಕರ್ಯಗಳಿಲ್ಲ. ಆದರೆ ಈ ಹೊಸ ಸಭಾಂಗಣ ಸುಸಜ್ಜಿತವಾಗಿದೆ. ಈಗ ಇದನ್ನೂ ದೂರ ಮಾಡಲು ಹೊರಟಿರುವ ಜಿಬಿಎ ನಡೆಗೆ ವ್ಯಾಪಕ ವಿರೋಧ ಕೇಳಿಬಂದಿದೆ.

ಇದನ್ನೂ ಓದಿ: ಬೆಂಗಳೂರು ಫ್ರೀಡಂ ಪಾರ್ಕ್ ಕ್ಲೋಸ್, ಹೋರಾಟಗಾರರ ಪರದಾಟ; ಕಾರಣ ಏನು ಗೊತ್ತೇ?

ಫ್ರೀಡಂ ಪಾರ್ಕ್ ಆವರಣದಲ್ಲಿನ ಪಾರ್ಕಿಂಗ್ ಮೇಲ್ಭಾಗದ ಜಾಗ ಬಾಡಿಗೆಗೆ ನೀಡಲು ಚಿಂತನೆ ನಡೆದಿದೆ. ಆದರೆ ಈಗಾಗಲೇ ಪ್ರತಿಭಟನೆ ಮಾಡಲು ಫ್ರೀಡಂ ಪಾರ್ಕ್ ಆವರಣದ ಕಿರಿದಾಗಿದ್ದು, ಹಲವು ಪ್ರತಿಭಟನೆಗಳ ವೇಳೆ ಸ್ಥಳಾವಕಾಶ ಕೊರತೆ ಉಂಟಾಗಿ ಪ್ರತಿಭಟನಾಕಾರರು ಪರದಾಟ ನಡೆಸಿದ ಉದಾಹರಣೆಗಳಿವೆ. ಹೀಗಿರುವಾಗ ಆದಾಯದ ಕೊರತೆ ನೆಪವೊಡ್ಡಿ ಪ್ರತಿಭಟನೆಗೆಂದೇ ಇರುವ ಜಾಗ ಬಾಡಿಗೆಗೆ ಕೊಡಲು ಹೊರಟ ಜಿಬಿಎ ನಿರ್ಧಾರದ ವಿರುದ್ಧ ಫ್ರೀಡಂ ಪಾರ್ಕ್ ಹೋರಾಟ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. ಪ್ರತಿಭಟನಾ ಸ್ಥಳವನ್ನು ವಾಣಿಜ್ಯ ಉದ್ದೇಶಕ್ಕೆ ಬಿಟ್ಟು ಕೊಡುವುದಕ್ಕೆ ನಾವು ಒಪ್ಪಲ್ಲ ಎಂದು ಸಮಿತಿ ಅಧ್ಯಕ್ಷ ಗಂಡಸಿ ಸದಾನಂದಸ್ವಾಮಿ ಹೇಳಿದ್ದಾರೆ.

ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:26 pm, Tue, 24 February 26

Follow Us