VHT 2025-26: ಮಿಂಚಿದ ಮಯಾಂಕ್, ಪಡಿಕ್ಕಲ್, ಪ್ರಸಿದ್ಧ್; ಕರ್ನಾಟಕಕ್ಕೆ ಸತತ 6ನೇ ಜಯ
Vijay Hazare Trophy: ಗುಜರಾತ್‌ನಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿಯ 6ನೇ ಸುತ್ತಿನ ಪಂದ್ಯದಲ್ಲಿ ಕರ್ನಾಟಕ ತಂಡ ರಾಜಸ್ಥಾನ ವಿರುದ್ಧ 151 ರನ್ ಅಂತರದ ಭರ್ಜರಿ ಜಯ ದಾಖಲಿಸಿದೆ. ಮಯಾಂಕ್ ಅಗರ್ವಾಲ್ ಶತಕ, ಪ್ರಸಿದ್ಧ್ ಕೃಷ್ಣ ಅವರ 5 ವಿಕೆಟ್ ನೆರವಿನಿಂದ ಕರ್ನಾಟಕ ತಮ್ಮ ಅಜೇಯ ಓಟವನ್ನು ಮುಂದುವರೆಸಿದೆ. ಆಡಿದ ಎಲ್ಲಾ ಆರು ಪಂದ್ಯಗಳನ್ನು ಗೆದ್ದು ಎಲೈಟ್ 'ಎ' ನಲ್ಲಿ ಅಗ್ರಸ್ಥಾನದಲ್ಲಿದೆ.

ಗುಜರಾತ್‌ನಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿಯ (Vijay Hazare Trophy) 6ನೇ ಸುತ್ತಿನ ಪಂದ್ಯದಲ್ಲೂ ಕರ್ನಾಟಕ ತಂಡ ಅಮೋಘ ಜಯಭೇರಿ ಬಾರಿಸಿದೆ. ರಾಜಸ್ಥಾನ ವಿರುದ್ಧದ ಪಂದ್ಯವನ್ನು 150 ರನ್ಗಳಿಂದ ಗೆದ್ದುಕೊಂಡಿರುವ ಕರ್ನಾಟಕ ತಂಡ ಈ ಟೂರ್ನಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಮಯಾಂಕ್ ಅಗರ್ವಾಲ್ (Mayank Agarwal) ನಾಯಕತ್ವದ ಕರ್ನಾಟಕ ತಂಡ ಈ ಆವೃತ್ತಿಯಲ್ಲಿ ಇದುವರೆಗೆ 6 ಪಂದ್ಯಗಳನ್ನು ಆಡಿದ್ದು, ಆಡಿದ ಎಲ್ಲಾ ಪಂದ್ಯಗಳನ್ನು ಏಕಪಕ್ಷೀಯವಾಗಿ ಗೆದ್ದುಕೊಂಡಿದೆ. ಇದರೊಂದಿಗೆ ಎಲೈಟ್ ಎ ನಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಇಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 324 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡ 174 ರನ್ಗಳಿಗೆ ಆಲೌಟ್ ಆಯಿತು. ಕರ್ನಾಟಕ ಪರ ಬೌಲಿಂಗ್‌ನಲ್ಲಿ ಮಿಂಚಿದ ಪ್ರಸಿದ್ಧ್ ಕೃಷ್ಣ (Prasidh Krishna) 5 ವಿಕೆಟ್ಗಳ ಗೊಂಚಲು ಪಡೆದರೆ, ಬ್ಯಾಟಿಂಗ್ನಲ್ಲಿ ಮಿಂಚಿದ ಮಯಾಂಕ್ ಶತಕದ ಇನ್ನಿಂಗ್ಸ್ ಆಡಿದರು.
ಮಿಂಚಿದ ಆರಂಭಿಕರು
ಈ ಪಂದ್ಯದಲ್ಲಿ ಟಾಸ್ ಸೋತ ಕರ್ನಾಟಕ ಮೊದಲು ಬ್ಯಾಟಿಂಗ್ ಮಾಡಬೇಕಾಯಿತು. ಎಂದಿನಂತೆ ನಾಯಕ ಮಯಾಂಕ್ ಹಾಗೂ ಪಡಿಕ್ಕಲ್ ಇನ್ನಿಂಗ್ಸ್ ಆರಂಭಿಸಿದರು. ಕಳೆದ ಪಂದ್ಯದಲ್ಲಿ ನಾಯಕ ಮಯಾಂಕ್ ಎಡವಿದ್ದರಿಂದ ಈ ಪಂದ್ಯದಲ್ಲಿ ಅವರ ಮೇಲೆ ನಿರೀಕ್ಷೆಗಳಿದ್ದವು. ಅದರಂತೆ ಬ್ಯಾಟ್ ಬೀಸಿದ ಮಯಾಂಕ್, ಪಡಿಕ್ಕಲ್ ಜೊತೆಗೆ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಈ ವೇಳೆ ನಾಯಕ ಮಯಾಂಕ್ ಅಗರ್ವಾಲ್ ಈ ಟೂರ್ನಿಯ ಎರಡನೇ ಶತಕ ಸಿಡಿಸಿ ಮಿಂಚಿದರೆ, ದೇವದತ್ ಪಡಿಕ್ಕಲ್ ಶತಕದಂಚಿನಲ್ಲಿ ಎಡವಿದರು. ಪಡಿಕ್ಕಲ್ ವಿಕೆಟ್ ಪತನದೊಂದಿಗೆ ಇವರಿಬ್ಬರ ಜೊತೆಯಾಟವು ಅಂತ್ಯವಾಯಿತು. ಅದಾಗ್ಯೂ ಈ ಜೋಡಿ ಮೊದಲ ವಿಕೆಟ್ಗೆ 184 ರನ್ಗಳ ಜೊತೆಯಾಟ ನೀಡಿತು.
ಕರುಣ್, ರಾಹುಲ್ ವಿಫಲ
ಪಡಿಕ್ಕಲ್ 82 ಎಸೆತಗಳಲ್ಲಿ 12 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 91 ರನ್ಗಳಿಸಿ ಔಟಾದರು. ಆ ಬಳಿಕ ಬಂದ ಅನುಭವಿ ಕರುಣ್ ನಾಯರ್ ಈ ಪಂದ್ಯದಲ್ಲೂ ಬಿಗ್ ಇನ್ನಿಂಗ್ಸ್ ಆಡುವಲ್ಲಿ ಎಡವಿ 14 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಶತಕ ಸಿಡಿಸಿದ ಬೆನ್ನಲ್ಲೇ ಮಯಾಂಕ್ ಕೂಡ ಪೆವಿಲಿಯನ್ ಸೇರಿಕೊಂಡರು. ಮಯಾಂಕ್ ತಮ್ಮ ಇನ್ನಿಂಗ್ಸ್ನಲ್ಲಿ 107 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 100 ರನ್ ಬಾರಿಸಿದರು. ಈ ಟೂರ್ನಿಯಲ್ಲಿ ಎರಡನೇ ಪಂದ್ಯವನ್ನಾಡಿದ ಕೆಎಲ್ ರಾಹುಲ್ ಇನ್ನಿಂಗ್ಸ್ ಕೂಡ 25 ರನ್ಗಳಿಗೆ ಅಂತ್ಯವಾಯಿತು. ಎಂದಿನಂತೆ ಕೆಳಕ್ರಮಾಂಕದಲ್ಲಿ ಮಿಂಚಿದ ಅಭಿನವ್ ಮನೋಹರ್ 35 ರನ್ಗಳ ಇನ್ನಿಂಗ್ಸ್ ಆಡಿ ತಂಡವನ್ನು 300 ರನ್ಗಳ ಗಡಿ ದಾಟಿಸಿದರು.
VHT 2025-26: ಸತತ 5ನೇ ಜಯ; ಕರ್ನಾಟಕಕ್ಕೆ ಸುಲಭ ತುತ್ತಾದ ತ್ರಿಪುರ
5 ವಿಕೆಟ್ ಉರುಳಿಸಿದ ಪ್ರಸಿದ್ಧ್
ಈ ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡದ ಪರ ಅಗ್ರ ನಾಲ್ವರು ಬ್ಯಾಟ್ಸ್ಮನ್ಗಳು ಎರಡಂಕಿ ಮೊತ್ತ ದಾಟಿದರಾದರೂ ಅದನ್ನು ಬಿಗ್ ಇನ್ನಿಂಗ್ಸ್ ಆಗಿ ಪರಿವರ್ತಿಸಲಿಲ್ಲ. ಹೀಗಾಗಿ ತಂಡ ನೂರು ರನ್ ದಾಟುವ ಮುನ್ನವೇ ಪ್ರಮುಖ 4 ವಿಕೆಟ್ ಕಳೆದುಕೊಂಡಿತು. ಐದನೇ ಕ್ರಮಾಂಕದಲ್ಲಿ ಬಂದ ಕುಮಾರ್ ಲಂಬ ತಂಡದ ಪರ ಅತ್ಯಧಿಕ 55 ರನ್ಗಳ ಇನ್ನಿಂಗ್ಸ್ ಆಡಿ ತಂಡವನ್ನು 100 ರನ್ಗಳ ಗಡಿ ದಾಟಿಸಿದರು. ಉಳಿದಂತೆ ಕೆಳಕ್ರಮಾಂಕದ ಬ್ಯಾಟ್ಸ್ಮನ್ಗಳಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬರಲಿಲ್ಲ. ಹೀಗಾಗಿ ತಂಡ 38ನೇ ಓವರ್ನಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 174 ರನ್ಗಳಿಗೆ ಆಲೌಟ್ ಆಯಿತು. ಕರ್ನಾಟಕ ಪರ ಬೌಲಿಂಗ್‌ನಲ್ಲಿ ಮಿಂಚಿದ ಪ್ರಸಿದ್ಧ್ ಕೃಷ್ಣ 5 ವಿಕೆಟ್ ಪಡೆದರೆ, ಶ್ರೇಯಸ್ ಆಚಾರ್ ಮತ್ತು ಶ್ರೇಯಸ್ ಗೋಪಾಲ್ ತಲಾ 2 ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:44 pm, Tue, 6 January 26
