AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

VHT 2025-26: ಸತತ 5ನೇ ಜಯ; ಕರ್ನಾಟಕಕ್ಕೆ ಸುಲಭ ತುತ್ತಾದ ತ್ರಿಪುರ

Karnataka Dominates Tripura: ಅಹಮದಾಬಾದ್‌ನಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ತಂಡ ತ್ರಿಪುರ ವಿರುದ್ಧ 80 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಇದು ಟೂರ್ನಿಯಲ್ಲಿ ಕರ್ನಾಟಕದ ಸತತ ಐದನೇ ಗೆಲುವು. ಈ ಮೂಲಕ ತಂಡ ಎಲೈಟ್ ಎ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ 332 ರನ್ ಗಳಿಸಿತು, ತ್ರಿಪುರ ತಂಡ 252 ರನ್‌ಗಳಿಗೆ ಆಲೌಟ್ ಆಯಿತು. ಕರ್ನಾಟಕದ ಅಜೇಯ ಓಟ ಮುಂದುವರಿದಿದೆ.

VHT 2025-26: ಸತತ 5ನೇ ಜಯ; ಕರ್ನಾಟಕಕ್ಕೆ ಸುಲಭ ತುತ್ತಾದ ತ್ರಿಪುರ
Karnataka
ಪೃಥ್ವಿಶಂಕರ
|

Updated on:Jan 03, 2026 | 6:38 PM

Share

ಅಹಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ (Vijay Hazare Trophy) ಐದನೇ ಸುತ್ತಿನ ಪಂದ್ಯದಲ್ಲಿ ಕರ್ನಾಟಕ ಹಾಗೂ ತ್ರಿಪುರ ತಂಡಗಳು ಮುಖಾಮುಖಿಯಾಗಿದ್ದವು. ಎಂದಿನಂತೆ ಈ ಪಂದ್ಯದಲ್ಲೂ ತನ್ನ ಸಾಂಘೀಕ ಪ್ರದರ್ಶನ ತೋರಿದ ಕರ್ನಾಟಕ ತಂಡ (Karnataka Cricket Team) ತ್ರಿಪುರ ತಂಡವನ್ನು 80 ರನ್​ಗಳಿಂದ ಸೋಲಿಸಿ ಈ ಟೂರ್ನಿಯಲ್ಲಿ ಸತತ ಐದನೇ ಗೆಲುವು ದಾಖಲಿಸಿದೆ. ಅಂದರೆ ಈ ಟೂರ್ನಿಯಲ್ಲಿ ಕರ್ನಾಟಕ ತಂಡ ಆಡಿರುವ ಐದಕ್ಕೆ ಐದು ಪಂದ್ಯಗಳು ಗೆಲುವು ಸಾಧಿಸಿದೆ. ಈ ಮೂಲಕ ಎಲೈಟ್ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ 332 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ತ್ರಿಪುರ ತಂಡ 252 ರನ್​ಗಳಿಗೆ ಆಲೌಟ್ ಆಯಿತು.

ಕರ್ನಾಟಕಕ್ಕೆ ಆರಂಭಿಕ ಆಘಾತ

ಈ ಪಂದ್ಯದಲ್ಲಿ ಟಾಸ್ ಸೋತ ಕರ್ನಾಟಕ ಮೊದಲು ಬ್ಯಾಟಿಂಗ್‌ ಮಾಡಬೇಕಾಯಿತು. ಆದರೆ ಈ ಬಾರಿ ತಂಡಕ್ಕೆ ಕಳಪೆ ಆರಂಭ ಸಿಕ್ಕಿತು. ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ನಾಯಕ ಮಯಾಂಕ್ ಅಗರ್ವಾಲ್ ಈ ಪಂದ್ಯದಲ್ಲಿ 5 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ಆ ನಂತರ ಬಂದ ಕರುಣ್ ನಾಯರ್ ಕೂಡ ತಮ್ಮ ಕಳಪೆ ಫಾರ್ಮ್​ಗೆ ಬೆಲೆ ತೆತ್ತು ಖಾತೆ ತೆರೆಯದೆ ನಿರ್ಗಮಿಸಿದರು. ಕಳೆದ ಆವೃತ್ತಿಯಲ್ಲಿ ರನ್​ಗಳ ಮಳೆ ಹರಸಿದ್ದ ಕರುಣ್​ಗೆ ಈ ಆವೃತ್ತಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ.

4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್

ಆದಾಗ್ಯೂ ತನ್ನ ವೃತ್ತಿಜೀವನದ ಅತ್ಯುತ್ತಮ ಫಾರ್ಮ್​ನಲ್ಲಿರುವ ದೇವದತ್ ಪಡಿಕ್ಕಲ್ ಈ ಪಂದ್ಯದಲ್ಲೂ ತಂಡದ ಇನ್ನಿಂಗ್ಸ್ ಕಟ್ಟುವ ಕೆಲಸ ಮಾಡಿದರು. ಪಡಿಕ್ಕಲ್​ಗೆ ಸಾಥ್ ನೀಡಿದ ಸ್ಮರಣ್ ರವಿಚಂದ್ರನ್ ಕೂಡ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಶತಕದ ಗಡಿ ದಾಟಿಸಿದರು. ಸ್ಮರಣ್ 60 ರನ್​ಗಳ ಇನ್ನಿಂಗ್ಸ್ ಆಡುವ ಮೂಲಕ ವಿಕೆಟ್ ಒಪ್ಪಿಸಿದರು. ಇತ್ತ ಪಡಿಕ್ಕಲ್ ಈ ಆವೃತ್ತಿಯಲ್ಲಿ ಸತತ ನಾಲ್ಕನೇ ಶತಕ ಸಿಡಿಸಿ ಮಿಂಚಿದರು.

ತಮ್ಮ ಇನ್ನಿಂಗ್ಸ್​ನಲ್ಲಿ 120 ಎಸೆತಗಳನ್ನು ಎದುರಿಸಿದ ಪಡಿಕ್ಕಲ್ 8 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 108 ರನ್ ಬಾರಿಸಿ ಔಟಾದರು. ಇನ್ನು ಈ ಆವೃತ್ತಿಯಲ್ಲಿ ಮೊದಲ ಬಾರಿಗೆ ಕರ್ನಾಟಕ ಪರ ಕಣಕ್ಕಿಳಿದಿದ್ದ ಕೆಎಲ್ ರಾಹುಲ್ ಉತ್ತಮ ಆರಂಭ ಪಡೆದರಾದರೂ ಅದನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸುವಲ್ಲಿ ಎಡವಿದರು. ರಾಹುಲ್ ಇನ್ನಿಂಗ್ಸ್ 35 ರನ್​ಗಳಿಗೆ ಅಂತ್ಯವಾದರೆ, ಅಭಿನವ್ ಮನೋಹರ್ ಸ್ಫೋಟಕ ಬ್ಯಾಟಿಂಗ್‌ ಮೂಲಕ 79 ರನ್​ಗಳ ಇನ್ನಿಂಗ್ಸ್ ಆಡಿದರು. ಶ್ರೇಯಸ್ ಗೋಪಾಲ್ ಕೂಡ 29 ರನ್​ಗಳ ಕಾಣಿಕೆ ನೀಡಿದರು.

ಒಂದು ಆವೃತ್ತಿಯಲ್ಲಿ ಅತ್ಯಧಿಕ ಶತಕ; ಜಂಟಿಯಾಗಿ 2ನೇ ಸ್ಥಾನಕ್ಕೇರಿದ ದೇವದತ್ ಪಡಿಕ್ಕಲ್

80 ರನ್​ಗಳಿಂದ ಸೋತ ತ್ರಿಪುರ

ಈ ಗುರಿ ಬೆನ್ನಟ್ಟಿದ ತ್ರಿಪುರ ತಂಡ 60 ರನ್ ದಾಟುವ ಮುನ್ನವೇ ಪ್ರಮುಖ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದಾಗ್ಯೂ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಆಲ್​ರೌಂಡರ್ ಸ್ವಪ್ನಿಲ್ ಸಿಂಗ್ ಶತಕದ ಇನ್ನಿಂಗ್ಸ್ ಆಡುವ ಮೂಲಕ ಕೊಂಚ ಪ್ರತಿರೋಧ ತೊರಿದರು. ಅವರನ್ನು ಹೊರತುಪಡಿಸಿ ರಜತ್ ಕೂಡ 66 ರನ್​ಗಳ ಇನ್ನಿಂಗ್ಸ್ ಆಡಿದರು. ಉಳಿದಂತೆ ತಂಡದ ಉಳಿದ ಬ್ಯಾಟ್ಸ್‌ಮನ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. ಹೀಗಾಗಿ ತಂಡ 49 ನೇ ಓವರ್​ನಲ್ಲಿ ಆಲೌಟ್ ಆಗಿ 80 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:09 pm, Sat, 3 January 26