AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs NZ: ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟ; ಇಬ್ಬರು ಔಟ್, ಮೂವರು ಇನ್..!

India Squad Announced: ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಬಿಸಿಸಿಐ ಟೀಂ ಇಂಡಿಯಾವನ್ನು ಪ್ರಕಟಿಸಿದೆ. ಶುಭ್​ಮನ್ ಗಿಲ್ ನಾಯಕರಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ತಿಲಕ್ ವರ್ಮಾ, ರುತುರಾಜ್ ಗಾಯಕ್ವಾಡ್‌ಗೆ ಸ್ಥಾನವಿಲ್ಲ. ಗಾಯದಿಂದ ಚೇತರಿಸಿಕೊಂಡ ಶ್ರೇಯಸ್ ಅಯ್ಯರ್, ಮೊಹಮ್ಮದ್ ಸಿರಾಜ್ ಹಾಗೂ ರಿಷಭ್ ಪಂತ್‌ಗೆ ತಂಡದಲ್ಲಿ ಸ್ಥಾನ ಸಿಕ್ಕಿದೆ. ಆಲ್​ರೌಂಡರ್ ನಿತೀಶ್ ರೆಡ್ಡಿಗೂ ಅವಕಾಶ ನೀಡಲಾಗಿದೆ.

IND vs NZ: ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟ; ಇಬ್ಬರು ಔಟ್, ಮೂವರು ಇನ್..!
Team India
ಪೃಥ್ವಿಶಂಕರ
|

Updated on:Jan 03, 2026 | 5:20 PM

Share

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾವನ್ನು (India vs New Zealand) ಪ್ರಕಟಿಸಲಾಗಿದೆ. ಶುಭ್​ಮನ್ ಗಿಲ್ (Shubman Gill) ನಾಯಕತ್ವದಲ್ಲಿ 15 ಸದಸ್ಯರ ತಂಡವನ್ನು ಬಿಸಿಸಿಐ (BCCI) ಘೋಷಿಸಿದೆ. ಅಚ್ಚರಿಯ ಸಂಗತಿಯೆಂದರೆ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ತಂಡದ ಭಾಗವಾಗಿದ್ದ ತಿಲಕ್ ವರ್ಮಾ ಮತ್ತು ರುತುರಾಜ್ ಗಾಯಕ್ವಾಡ್ ಅವರನ್ನು ಈ ಸರಣಿಯಿಂದ ಕೈಬಿಡಲಾಗಿದೆ. ಹಾಗೆಯೇ ಗಾಯದಿಂದಾಗಿ ಟೀಂ ಇಂಡಿಯಾದಿಂದ ಹೊರಗುಳಿದಿದ್ದ ಶ್ರೇಯಸ್ ಅಯ್ಯರ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದ್ದು, ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಸಾಧಾರಣ ಪ್ರದರ್ಶನ ನೀಡಿರುವ ರಿಷಭ್ ಪಂತ್​ಗೂ ತಂಡದಲ್ಲಿ ಸ್ಥಾನ ಸಿಕ್ಕಿದ್ದು, ಆಲ್​ರೌಂಡರ್ ನಿತೀಶ್ ರೆಡ್ಡಿ ಕೂಡ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಶ್ರೇಯಸ್ ಅಯ್ಯರ್​ಗೆ ಸ್ಥಾನ, ಆದರೆ?

ಕಳೆದ ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ಗಾಯಗೊಂಡಿದ್ದ ಶ್ರೇಯಸ್ ಅಯ್ಯರ್ ಅಂದಿನಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದರು. ಪ್ರಸ್ತುತ ಎನ್​ಸಿಎನಲ್ಲಿರುವ ಅಯ್ಯರ್ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದು, ತಂಡದಲ್ಲಿ ಆಡಲು ಗ್ರೀನ್ ಸಿಗ್ನಲ್ ಸಿಕ್ಕಿದೆ. ಇದರ ಬೆನ್ನಲ್ಲೇ ಅಯ್ಯರ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಆದಾಗ್ಯೂ ಅಯ್ಯರ್ ಟೀಂ ಇಂಡಿಯಾ ಪರ ಕಣಕ್ಕಿಳಿಯುವ ಮೊದಲು ವಿಜಯ್ ಹಜಾರೆ ಟ್ರೋಪಿಯಲ್ಲಿ ಆಡಬೇಕಾಗುತ್ತದೆ. ಅಲ್ಲಿ ಅವರು ತಮ್ಮ ಫಿಟ್ನೆಸ್ ಸಾಭೀತುಪಡಿಸುವಲ್ಲಿ ವಿಫಲರಾದರೆ, ಅಯ್ಯರ್​ಗೆ ಕಿವೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡುವ ಅವಕಾಶ ಸಿಗುವುದು ಅನುಮಾನ.

ಶ್ರೇಯಸ್ ಇನ್, ರುತುರಾಜ್ ಔಟ್

ಶ್ರೇಯಸ್ ಅಯ್ಯರ್ ತಂಡಕ್ಕೆ ಆಯ್ಕೆಯಾಗಿರುವ ಪರಿಣಾಮದಿಂದಾಗಿ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ಶತಕದ ಇನ್ನಿಂಗ್ಸ್ ಆಡಿದ್ದ ರುತುರಾಜ್ ಗಾಯಕ್ವಾಡ್ ಅವರನ್ನು  ಈ ಸರಣಿಯಿಂದ ಕೈಬಿಡಲಾಗಿದೆ.  ಉಳಿದಂತೆ ರಿಷಭ್ ಪಂತ್ ಕೂಡ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಎರಡನೇ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿರುವ ಪಂತ್​ಗೆ ತಂಡದಲ್ಲಿ ಆಡುವ ಅವಕಾಶ ಸಿಗುವುದು ಅನುಮಾನ. ಏಕೆಂದರೆ ಮೊದಲ ವಿಕೆಟ್ ಕೀಪರ್ ಆಯ್ಕೆಯಾಗಿ ಕೆಎಲ್ ರಾಹುಲ್ ತಂಡದಲಿದ್ದಾರೆ.

IND vs NZ: ರೋ-ಕೊ ಕ್ರೇಜ್.. 480 ಸೆಕೆಂಡ್​ಗಳಲ್ಲಿ ಎಲ್ಲಾ ಟಿಕೆಟ್ಸ್ ಸೋಲ್ಡ್ ಔಟ್

ಪಂತ್, ಸಿರಾಜ್​ಗೆ ಸ್ಥಾನ

ಹಾಗೆಯೇ ಕಳೆದ ಅಕ್ಟೋಬರ್ ತಿಂಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನಾಡಿದ್ದ ಮೊಹಮ್ಮದ್ ಸಿರಾಜ್​ಗೆ ಕಿವೀಸ್ ವಿರುದ್ಧ ಆಡುವ ಅವಕಾಶ ಸಿಕ್ಕಿದೆ. ಆಲ್​ರೌಂಡರ್ ನಿತೀಶ್ ಕುಮಾರ್ ರೆಡ್ಡಿ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಯಶಸ್ವಿ ಜೈಸ್ವಾಲ್ ತಂಡ ಸೇರಿಕೊಂಡಿದ್ದರೂ, ಗಿಲ್ ತಂಡಕ್ಕೆ ಮರಳಿರುವ ಕಾರಣ ಅವರು ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವುದು ಅನುಮಾನವಾಗಿದೆ.

ಏಕದಿನ ಸರಣಿಗೆ ಭಾರತ ತಂಡ : ಶುಭ್​ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ರಿಷಭ್ ಪಂತ್, ನಿತೀಶ್ ಕುಮಾರ್ ರೆಡ್ಡಿ, ಯಶಸ್ವಿ ಜೈಸ್ವಾಲ್.

ಏಕದಿನ ಸರಣಿ ವೇಳಾಪಟ್ಟಿ

  • ಜನವರಿ 11: ಮೊದಲ ಏಕದಿನ ಪಂದ್ಯ, ವಡೋದರಾ
  • ಜನವರಿ 14: ಎರಡನೇ ಏಕದಿನ ಪಂದ್ಯ, ರಾಜ್‌ಕೋಟ್
  • ಜನವರಿ 18: ಮೂರನೇ ಏಕದಿನ ಪಂದ್ಯ, ಇಂದೋರ್

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:02 pm, Sat, 3 January 26