ಒಂದು ಆವೃತ್ತಿಯಲ್ಲಿ ಅತ್ಯಧಿಕ ಶತಕ; ಜಂಟಿಯಾಗಿ 2ನೇ ಸ್ಥಾನಕ್ಕೇರಿದ ದೇವದತ್ ಪಡಿಕ್ಕಲ್
Devdutt Padikkal's 4th Century in Vijay Hazare Trophy: ವಿಜಯ್ ಹಜಾರೆ ಟ್ರೋಫಿಯಲ್ಲಿ ದೇವದತ್ ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್ ಮುಂದುವರಿಸಿದ್ದಾರೆ. ತ್ರಿಪುರ ವಿರುದ್ಧ 108 ರನ್ ಗಳಿಸಿ, ಈ ಆವೃತ್ತಿಯ 4ನೇ ಶತಕ ಸಿಡಿಸಿದ್ದಾರೆ. ಐದು ಪಂದ್ಯಗಳಲ್ಲಿ ನಾಲ್ಕು ಶತಕ ಬಾರಿಸುವ ಮೂಲಕ, ಪಡಿಕ್ಕಲ್ ಒಂದು ಆವೃತ್ತಿಯಲ್ಲಿ ಅತಿ ಹೆಚ್ಚು ಶತಕ ಗಳಿಸಿದವರ ಪಟ್ಟಿಯಲ್ಲಿ ಜಂಟಿ ಎರಡನೇ ಸ್ಥಾನಕ್ಕೇರಿದ್ದಾರೆ. ಕರ್ನಾಟಕದ ಈ ಸ್ಟಾರ್ ಆಟಗಾರನ ಪ್ರದರ್ಶನ ಗಮನಾರ್ಹವಾಗಿದೆ.
ವಿಜಯ್ ಹಜಾರೆ ಟ್ರೋಫಿಯ 5ನೇ ಸುತ್ತಿನ ಪಂದ್ಯದಲ್ಲಿ ಕರ್ನಾಟಕ ಹಾಗೂ ತ್ರಿಪುರ ತಂಡಗಳು ಮುಖಾಮುಖಿಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡದ ಪರ ಆರಂಭಿಕ ದೇವದತ್ ಪಡಿಕ್ಕಲ್ ಅಮೋಘ 108 ರನ್ಗಳ ಇನ್ನಿಂಗ್ಸ್ ಆಡಿದರು. ಈ ಆವೃತ್ತಿಯಲ್ಲಿ ದೇವದತ್ ಕಲೆಹಾಕುತ್ತಿರುವ 4ನೇ ಶತಕ ಇದಾಗಿದೆ. ಅಂದರೆ ಈ ಆವೃತ್ತಿಯಲ್ಲಿ ನಡೆದಿರುವ ಐದು ಪಂದ್ಯಗಳ ನಾಲ್ಕು ಇನ್ನಿಂಗ್ಸ್ಗಳಲ್ಲಿ ದೇವದತ್ ಬ್ಯಾಟ್ ಶತಕದ ಇನ್ನಿಂಗ್ಸ್ ಆಡಿದೆ.
ಈ ಟೂರ್ನಿಯಲ್ಲಿ ಅದ್ಭುತ ಫಾರ್ಮ್ನಲ್ಲಿರುವ ದೇವದತ್ ಟೂರ್ನಿಯ ಐದನೇ ಪಂದ್ಯದಲ್ಲೇ 4ನೇ ಶತಕ ಸಿಡಿಸುವ ಮೂಲಕ ಒಂದು ಆವೃತ್ತಿಯ ವಿಜಯ್ ಹಜಾರೆ ಟ್ರೋಫಿಯಲ್ಲಿ ಅತ್ಯಧಿಕ ಶತಕಗಳನ್ನು ಬಾರಿಸಿದ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಜಂಟಿಯಾಗಿ ಎರಡನೇ ಸ್ಥಾನಕ್ಕೇರಿದ್ದಾರೆ. ಮೊದಲನೇ ಸ್ಥಾನದಲ್ಲಿರುವ ತಮಿಳುನಾಡು ಬ್ಯಾಟ್ಸ್‌ಮನ್ ಎನ್ ಜಗದೀಸನ್ ಹಾಗೂ ಕನ್ನಡಿಗ ಕರುಣ್ ನಾಯರ್ ತಲಾ 5 ಶತಕಗಳನ್ನು ಬಾರಿಸಿದ್ದರೆ, ಪಡಿಕ್ಕಲ್ 4 ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಪಡಿಕ್ಕಲ್ ಈ ಹಿಂದೆಯೂ ಅಂದರೆ 2020-21 ರ ಆವೃತ್ತಿಯಲ್ಲಿ 4 ಶತಕ ಬಾರಿಸಿದ್ದರು.

