IND vs SA: ಜನವರಿ 3 ರಿಂದ ಭಾರತ- ಆಫ್ರಿಕಾ ನಡುವೆ ಏಕದಿನ ಸರಣಿ; ವೈಭವ್‌ಗೆ ನಾಯಕತ್ವ
India vs South Africa U19: ಬಿಸಿಸಿಐ ಭಾರತ U19 ವಿಶ್ವಕಪ್ ತಂಡ ಮತ್ತು ದಕ್ಷಿಣ ಆಫ್ರಿಕಾ ಯೂತ್ ಏಕದಿನ ಸರಣಿಗೆ ತಂಡಗಳನ್ನು ಪ್ರಕಟಿಸಿದೆ. ಗಾಯಗೊಂಡ ಆಯುಷ್ ಮ್ಹಾತ್ರೆ ವಿಶ್ವಕಪ್ ತಂಡವನ್ನು ಮುನ್ನಡೆಸಲಿದ್ದರೆ, 14 ವರ್ಷದ ಯುವ ವೈಭವ್ ಸೂರ್ಯವಂಶಿ ದಕ್ಷಿಣ ಆಫ್ರಿಕಾ ಸರಣಿಗೆ ನಾಯಕರಾಗಿ ಆಯ್ಕೆಯಾಗಿದ್ದಾರೆ. ಮ್ಹಾತ್ರೆ ಗಾಯಗೊಂಡ ಕಾರಣ ವೈಭವ್‌ಗೆ ಈ ಅವಕಾಶ ಸಿಕ್ಕಿದ್ದು, ಮುಂಬರುವ ವಿಶ್ವಕಪ್ ದೃಷ್ಟಿಯಿಂದ ಈ ಸರಣಿ ಭಾರತ ತಂಡಕ್ಕೆ ಮಹತ್ವದ್ದಾಗಿದೆ.

ಬಿಸಿಸಿಐನ (BCCI) ಜೂನಿಯರ್ ಪುರುಷರ ಆಯ್ಕೆ ಸಮಿತಿಯು ಡಿಸೆಂಬರ್ 27 ರ ಶನಿವಾರ 2026 ರ ಅಂಡರ್-19 ವಿಶ್ವಕಪ್‌ಗಾಗಿ (U19 World Cup 2026) ಭಾರತ ತಂಡವನ್ನು ಪ್ರಕಟಿಸಿತ್ತು. ಅಂದೇ ದಕ್ಷಿಣ ಆಫ್ರಿಕಾ ವಿರುದ್ಧದ ಯೂತ್ ಏಕದಿನ ಸರಣಿಗೂ ತಂಡವನ್ನು ಪ್ರಕಟಿಸಲಾಗಿತ್ತು. ಕಳೆದ ಕೆಲವು ತಿಂಗಳುಗಳಿಂದ ಭಾರತ ಯುವ ತಂಡದ ನಾಯಕತ್ವ ವಹಿಸಿಕೊಂಡಿರುವ ಆಯುಷ್ ಮ್ಹಾತ್ರೆ ವಿಶ್ವಕಪ್ ತಂಡವನ್ನು ಮುನ್ನಡೆಸುತ್ತಿದ್ದರೆ, ಯುವ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ (Vaibhav Suryavanshi) ಅವರನ್ನು ದಕ್ಷಿಣ ಆಫ್ರಿಕಾ ಸರಣಿಗೆ ನಾಯಕರನ್ನಾಗಿ ನೇಮಿಸಲಾಗಿದೆ.
2024 ರಲ್ಲಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ ವೈಭವ್ ಸೂರ್ಯವಂಶಿ ಅವರ ಮೊದಲ ನಾಯಕತ್ವದ ಸರಣಿ ಇದಾಗಿದೆ. ಅವರ ನಾಯಕತ್ವದಲ್ಲಿ, ಭಾರತ ಯುವ ಪಡೆ ಜನವರಿ 3 ರಂದು ಪ್ರಾರಂಭವಾಗುವ ಈ ಸರಣಿಯಲ್ಲಿ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಈ ಸರಣಿಯು ಮುಂಬರುವ ವಿಶ್ವಕಪ್ ದೃಷ್ಟಿಯಿಂದ ಟೀಂ ಇಂಡಿಯಾಗೆ ಅತ್ಯಂತ ಮುಖ್ಯವಾಗಿದೆ. ಈ ಸರಣಿ ವೈಭವ್‌ಗೆ ಬಹಳ ವಿಶೇಷವಾಗಿದ್ದು, ಈ 14 ವರ್ಷದ ಹುಡುಗ ತಮ್ಮ ಬ್ಯಾಟಿಂಗ್‌ನಲ್ಲಿ ಮಿಂಚುವುದು ಮಾತ್ರವಲ್ಲದೆ, ನಾಯಕನಾಗಿಯೂ ಚೊಚ್ಚಲ ಸರಣಿಯಲ್ಲಿ ತಂಡವನ್ನು ಮುನ್ನಡೆಸಬೇಕಾಗಿದೆ
ವೈಭವ್‌ಗೆ ನಾಯಕತ್ವ ನೀಡಿದ್ಯಾಕೆ?
ನಿಯಮಿತ ನಾಯಕ ಆಯುಷ್ ಮ್ಹಾತ್ರೆ ಗಾಯಗೊಂಡ ಕಾರಣ ಎಡಗೈ ಬ್ಯಾಟ್ಸ್‌ಮನ್ ವೈಭವ್‌ಗೆ ಈ ಜವಾಬ್ದಾರಿ ನೀಡಲಾಗಿದೆ. ಮ್ಹಾತ್ರೆ ಇತ್ತೀಚೆಗೆ ಅಂಡರ್ -19 ಏಷ್ಯಾಕಪ್‌ನಲ್ಲಿ ತಂಡವನ್ನು ಮುನ್ನಡೆಸಿದ್ದರು. ಆದಾಗ್ಯೂ, ಅವರು ಗಾಯದಿಂದ ಬಳಲುತ್ತಿದ್ದು ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ಪುನರ್ವಸತಿ ಪಡೆಯಲಿದ್ದಾರೆ. ಹೀಗಾಗಿ ಅವರು ಈ ಸರಣಿಯನ್ನು ತಪ್ಪಿಸಿಕೊಳ್ಳಲಿದ್ದಾರೆ. ಏತನ್ಮಧ್ಯೆ, ತಂಡದ ಉಪನಾಯಕ ವಿಹಾನ್ ಮಲ್ಹೋತ್ರಾ ಕೂಡ ಗಾಯದಿಂದ ಬಳಲುತ್ತಿದ್ದು, ಆಯುಷ್ ಅವರಂತೆಯೇ ಸಿಒಇಗೆ ಹಾಜರಾಗಲಿದ್ದಾರೆ. ಆ ನಂತರ ಇಬ್ಬರೂ ವಿಶ್ವಕಪ್ ತಂಡವನ್ನು ಸೇರುತ್ತಾರೆ.
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡ
ವೈಭವ್ ಸೂರ್ಯವಂಶಿ (ನಾಯಕ), ಆರನ್ ಜಾರ್ಜ್ (ಉಪನಾಯಕ), ವೇದಾಂತ್ ತ್ರಿವೇದಿ, ಅಭಿಗ್ಯಾನ್ ಕುಂಡು (ವಿಕೆಟ್ ಕೀಪರ್), ಹರ್ವಂಶ್ ಸಿಂಗ್ (ವಿಕೆಟ್ ಕೀಪರ್), ಆರ್.ಎಸ್. ಅಂಬ್ರಿಸ್, ಕನಿಷ್ಕ್ ಚೌಹಾಣ್, ಖಿಲನ್ ಎ. ಪಟೇಲ್, ಮೊಹಮ್ಮದ್ ಅನನ್, ಹೆನಿಲ್ ಪಟೇಲ್, ಡಿ. ದೀಪೇಶ್, ಕಿಶನ್ ಕುಮಾರ್ ಸಿಂಗ್, ಉಧವ್ ಮೋಹನ್, ಯುವರಾಜ್ ಗೋಹಿಲ್, ರಾಹುಲ್ ಕುಮಾರ್.
U19 World Cup: ಅಂಡರ್-19 ವಿಶ್ವಕಪ್ಗೆ 15 ಸದಸ್ಯರ ಭಾರತ ತಂಡ ಪ್ರಕಟ
ಭಾರತ-ದಕ್ಷಿಣ ಆಫ್ರಿಕಾ ಸರಣಿ ವೇಳಾಪಟ್ಟಿ
- ಜನವರಿ 3: ಮೊದಲ ಏಕದಿನ ಪಂದ್ಯ, ವಿಲ್ಲೋಮೂರ್ ಪಾರ್ಕ್ (ಬೆನೋನಿ)
- ಜನವರಿ 5: 2ನೇ ಏಕದಿನ ಪಂದ್ಯ, ವಿಲೋಮೂರ್ ಪಾರ್ಕ್ (ಬೆನೋನಿ)
- ಜನವರಿ 7: 3ನೇ ಏಕದಿನ ಪಂದ್ಯ, ವಿಲೋಮೂರ್ ಪಾರ್ಕ್ (ಬೆನೋನಿ)
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
