ಈ ಊರಲ್ಲಿ ಚಾಡಿ ಹೇಳಿದ್ರೆ, ವದಂತಿ ಹಬ್ಬಿಸಿದ್ರೆ 5 ಸಾವಿರ ರೂ. ದಂಡ ಫಿಕ್ಸ್!: ಕಾರಣ ಇಲ್ಲಿದೆ
ಛತ್ತೀಸ್‌ಗಢದ ಬಾಲೋದ್ ಜಿಲ್ಲೆಯ ಮೆಡಕಿ ಗ್ರಾಮದಲ್ಲಿ ಸುಳ್ಳು ಸುದ್ದಿ ಅಥವಾ ವದಂತಿ ಹಬ್ಬಿಸಿದರೆ 5,000 ರೂ. ದಂಡ ವಿಧಿಸುವ ವಿನೂತನ ನಿಯಮ ಜಾರಿಗೆ ತರಲಾಗಿದೆ. ಗ್ರಾಮಸಭೆಯಲ್ಲಿ ಕೈಗೊಂಡ ಈ ನಿರ್ಧಾರ, ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಮತ್ತು ಘರ್ಷಣೆಗಳನ್ನು ತಡೆಯಲು ಸಹಕಾರಿಯಾಗಿದೆ. ಮಾಹಿತಿ ನೀಡಿದವರಿಗೆ 501 ರೂ. ಬಹುಮಾನವೂ ಇದೆ.
ಬಾಲೋದ್, ಫೆಬ್ರವರಿ 24: ಛತ್ತೀಸ್‌ಗಢದ ಬಾಲೋದ್ ಜಿಲ್ಲೆಯ ಮೆಡಕಿ ಗ್ರಾಮವು ಸುಳ್ಳು ಸುದ್ದಿ ಮತ್ತು ವದಂತಿಗಳ ಹಾವಳಿಯನ್ನು ತಡೆಯಲು ಮಾದರಿ ನಿರ್ಧಾರ ಕೈಗೊಂಡಿದೆ. ಗ್ರಾಮಸಭೆಯಲ್ಲಿ ಫೆಬ್ರವರಿ 19ರಂದು ಕೈಗೊಂಡ ನಿರ್ಣಯದ ಪ್ರಕಾರ, ಸಾರ್ವಜನಿಕ ಸ್ಥಳಗಳಲ್ಲಿ, ಸಾಮಾಜಿಕ ಅಥವಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ವದಂತಿ ಹಬ್ಬಿಸಿದರೆ 5,000 ರೂ. ದಂಡ ವಿಧಿಸಲಾಗುತ್ತದೆ. ವೈಯಕ್ತಿಕ ಗೌರವಕ್ಕೆ ಧಕ್ಕೆ ತರುವಂತಹ ಹೇಳಿಕೆಗಳಿಗೂ ಈ ನಿಯಮ ಅನ್ವಯಿಸುತ್ತದೆ. ಈ ನಿಯಮ ಜಾರಿಗೆ ಬರಲು ಪ್ರಮುಖ ಕಾರಣವೆಂದರೆ ಸಣ್ಣಪುಟ್ಟ ವಿಚಾರಗಳಿಗೂ ಗಾಳಿಸುದ್ದಿಗಳು ಹಬ್ಬಿ ಗ್ರಾಮದಲ್ಲಿ ದೊಡ್ಡ ಜಗಳಗಳು ನಡೆಯುತ್ತಿರೋದು ಎನ್ನಲಾಗಿದೆ. ವಿಶೇಷವಾಗಿ ವಾಟ್ಸಾಪ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳ ಮೂಲಕ ಹರಡುವ ಸುಳ್ಳು ಸುದ್ದಿಗಳು ಗ್ರಾಮಸ್ಥರ ನಡುವೆ ವೈಷಮ್ಯ ಸೃಷ್ಟಿಸುತ್ತಿದ್ದವು. ಗ್ರಾಮದ ಹಿರಿಯರು ಮತ್ತು ಪಂಚಾಯತ್ ಸದಸ್ಯರು ಒಟ್ಟಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಈ ನಿರ್ಧಾರಕ್ಕೆ ಬಂದಿದ್ದಾರೆ. ಗ್ರಾಮದ ಪ್ರವೇಶದ್ವಾರ ಹಾಗೂ ಪ್ರಮುಖ ಸ್ಥಳಗಳಲ್ಲಿ ಈ ನಿಯಮದ ಕುರಿತು ಬೋರ್ಡ್‌ಗಳನ್ನು ಹಾಕಲಾಗಿದೆ. ವದಂತಿ ಹಬ್ಬಿಸುವವರ ಬಗ್ಗೆ ಮಾಹಿತಿ ನೀಡಿದವರಿಗೆ 501 ರೂ. ಬಹುಮಾನ ನೀಡಿ, ಅವರ ಹೆಸರನ್ನು ಗೌಪ್ಯವಾಗಿ ಇಡಲಾಗುತ್ತದೆ. ದಂಡದಿಂದ ಸಂಗ್ರಹವಾದ ಹಣವನ್ನು ಗ್ರಾಮದ ಅಭಿವೃದ್ಧಿ ಮತ್ತು ಬಡವರ ಸಹಾಯಕ್ಕೆ ಬಳಸಲಾಗುತ್ತದೆ ಎನ್ನಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

