PAK vs BAN: ಪಾಕ್ ವಿರುದ್ಧ 565 ರನ್ ಪೇರಿಸಿದ ಬಾಂಗ್ಲಾದೇಶ್
Pakistan vs Bangladesh, 1st Test: ಪಾಕಿಸ್ತಾನ್ ವಿರುದ್ಧ 565 ರನ್ ಕಲೆಹಾಕುವ ಮೂಲಕ ಬಾಂಗ್ಲಾದೇಶ್ ತಂಡವು ಟೆಸ್ಟ್ ಕ್ರಿಕೆಟ್ನಲ್ಲಿ ತನ್ನ ಮೂರನೇ ಅತ್ಯಧಿಕ ರನ್ ಪೇರಿಸಿದೆ. ಇದಕ್ಕೂ ಮುನ್ನ ಶ್ರೀಲಂಕಾ ವಿರುದ್ಧ 638 ಹಾಗೂ ನ್ಯೂಝಿಲೆಂಡ್ ವಿರುದ್ಧ 595 ರನ್ಗಳನ್ನು ಬಾರಿಸಿತ್ತು. ಇದೀಗ ಪಾಕ್ನಲ್ಲೇ ಪಾಕಿಸ್ತಾನ್ ವಿರುದ್ಧ 565 ರನ್ಗಳನ್ನು ಸಿಡಿಸಿ ಭರ್ಜರಿ ಪ್ರದರ್ಶನ ನೀಡಿದೆ.
ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಪಾಕಿಸ್ತಾನ್ ವಿರುದ್ಧದ ಮೊದಲ ಟೆಸ್ಟ್ನ ಪ್ರಥಮ ಇನಿಂಗ್ಸ್ನಲ್ಲಿ ಬಾಂಗ್ಲಾದೇಶ್ ತಂಡ 565 ರನ್ ಬಾರಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಪ್ರಥಮ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ್ ಪರ ಸೌದ್ ಶಕೀಲ್ (141) ಹಾಗೂ ಮೊಹಮ್ಮದ್ ರಿಝ್ವಾನ್ (171) ಭರ್ಜರಿ ಶತಕ ಸಿಡಿಸಿದ್ದರು.
ಇಬ್ಬರು ಬ್ಯಾಟರ್ಗಳ ಭರ್ಜರಿ ಶತಕಗಳೊಂದಿಗೆ 6 ವಿಕೆಟ್ ನಷ್ಟಕ್ಕೆ 448 ರನ್ ಬಾರಿಸಿದ ಪಾಕಿಸ್ತಾನ್ ತಂಡವು ಡಿಕ್ಲೇರ್ ಘೋಷಿಸಿತು. ಈ ಬೃಹತ್ ಮೊತ್ತಕ್ಕೆ ಪ್ರತ್ಯುತ್ತರವಾಗಿ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ್ ತಂಡಕ್ಕೆ ಶಾದ್ಮನ್ ಇಸ್ಲಾಂ (93) ಉತ್ತಮ ಆರಂಭ ಒದಗಿಸಿದ್ದರು. ಆ ಬಳಿಕ ಬಂದ ಮೊಮಿನುಲ್ ಹಕ್ 50 ರನ್ಗಳ ಕೊಡುಗೆ ನೀಡಿದರು.
ಇನ್ನು 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅನುಭವಿ ಆಟಗಾರ ಮುಶ್ಫಿಕುರ್ ರಹೀಮ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಪಾಕ್ ಬೌಲರ್ಗಳನ್ನು ದಿಟ್ಟವಾಗಿಯೇ ಎದುರಿಸಿದ ಮುಶ್ಫಿಕುರ್ ರಹೀಮ್ 341 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 22 ಫೋರ್ಗಳೊಂದಿಗೆ 191 ರನ್ ಬಾರಿಸಿದರು.
ಆ ಬಳಿಕ ಬಂದ ಲಿಟ್ಟನ್ ದಾಸ್ 56 ರನ್ ಸಿಡಿಸಿದರೆ, ಮೆಹಿದಿ ಹಸನ್ ಮಿರಾಝ್ 77 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಬಾಂಗ್ಲಾದೇಶ್ ತಂಡವು 565 ರನ್ಗಳನ್ನು ಕಲೆಹಾಕಿ ಆಲೌಟ್ ಆಗಿದೆ. ವಿಶೇಷ ಎಂದರೆ ಇದು ಪಾಕಿಸ್ತಾನ್ ವಿರುದ್ಧ ಬಾಂಗ್ಲಾ ತಂಡವು ಟೆಸ್ಟ್ನಲ್ಲಿ ಪೇರಿಸಿದ ಅತ್ಯಧಿಕ ಮೊತ್ತವಾಗಿದೆ.
ಇನ್ನು 117 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಪಾಕಿಸ್ತಾನ್ ತಂಡವು 4ನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 23 ರನ್ ಕಲೆಹಾಕಿದೆ. ಇನ್ನು ಕೇವಲ ಒಂದು ದಿನದಾಟ ಮಾತ್ರ ಉಳಿದಿದ್ದು, ಅಲ್ಪ ಮೊತ್ತಕ್ಕೆ ಪಾಕ್ ತಂಡವನ್ನು ಆಲೌಟ್ ಮಾಡಿದರೆ ಬಾಂಗ್ಲಾದೇಶ್ ತಂಡವು ಈ ಪಂದ್ಯವನ್ನು ಗೆಲ್ಲಬಹುದು. ಇಲ್ಲದಿದ್ದರೆ ಈ ಮ್ಯಾಚ್ ಡ್ರಾನಲ್ಲಿ ಅಂತ್ಯವಾಗಲಿದೆ.
ಪಾಕಿಸ್ತಾನ್ ಪ್ಲೇಯಿಂಗ್ 11: ಅಬ್ದುಲ್ಲಾ ಶಫೀಕ್ , ಸೈಮ್ ಅಯ್ಯೂಬ್ , ಶಾನ್ ಮಸೂದ್ (ನಾಯಕ) , ಬಾಬರ್ ಆಝಂ, ಸೌದ್ ಶಕೀಲ್ , ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್) , ಅಘಾ ಸಲ್ಮಾನ್ , ಶಾಹೀನ್ ಅಫ್ರಿದಿ , ನಸೀಮ್ ಶಾ , ಖುರ್ರಂ ಶಹಜಾದ್ , ಮೊಹಮ್ಮದ್ ಅಲಿ.
ಇದನ್ನೂ ಓದಿ: MS Dhoni: ಧೋನಿಯನ್ನು ಬ್ಯಾನ್ ಮಾಡಬೇಕಿತ್ತು: ವೀರೇಂದ್ರ ಸೆಹ್ವಾಗ್
ಬಾಂಗ್ಲಾದೇಶ್ ಪ್ಲೇಯಿಂಗ್ 11: ನಜ್ಮುಲ್ ಹುಸೇನ್ ಶಾಂಟೊ (ನಾಯಕ) , ಶದ್ಮನ್ ಇಸ್ಲಾಂ , ಜಾಕಿರ್ ಹಸನ್ , ಮೊಮಿನುಲ್ ಹಕ್ , ಮುಶ್ಫಿಕರ್ ರಹೀಮ್ , ಶಾಕಿಬ್ ಅಲ್ ಹಸನ್ , ಲಿಟ್ಟನ್ ದಾಸ್ (ವಿಕೆಟ್ ಕೀಪರ್) , ಮೆಹಿದಿ ಹಸನ್ ಮಿರಾಜ್ , ಶೋರಿಫುಲ್ ಇಸ್ಲಾಂ , ಹಸನ್ ಮಹಮೂದ್ , ನಹಿದ್ ರಾಣಾ.